ಶನಿವಾರ, ಜನವರಿ 18, 2020
21 °C
ದೇವರ ತಾಣ

ಆರೋಗ್ಯಮಾತೆಯ ಕ್ಷೇತ್ರವೀಗ ಕಿರು ಬೆಸಿಲಿಕಾ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ ಜಿಲ್ಲೆ ಹರಿಹರದ ಆರೋಗ್ಯಮಾತೆಯ ಪುಣ್ಯಕ್ಷೇತ್ರಕ್ಕೀಗ ಕಿರು ಬೆಸಿಲಿಕಾದ ಸ್ಥಾನಮಾನ. ಅದರ ನಿಮಿತ್ತ ಜನವರಿ 15ರಂದು ವಿವಿಧ ಧರ್ಮಗುರುಗಳ ಸಮ್ಮುಖದಲ್ಲಿ ಆಚರಣೆ.

ಭಾರತದಲ್ಲಿ ‘ಬೆಸಿಲಿಕಾ’ ಹಂತಕ್ಕೇರಿರುವ ಚರ್ಚ್‌ಗಳು 25; ರಾಜ್ಯದಲ್ಲಿ ಕೇವಲ ಮೂರು. ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ, ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್‌ ಬೆಸಿಲಿಕಾ; ಈಗ ಹರಿಹರದ ಆರೋಗ್ಯಮಾತೆ ಚರ್ಚ್‌ಗೆ ಗೌರವ.

ಹರಿಹರದ ಕಿರು ಬೆಸಿಲಿಕಾದ ಚರಿತ್ರೆಗೆ 18ನೇ ಶತಮಾನದಿಂದ ದಾಖಲೆಗಳಿವೆ. 1992ರಲ್ಲಿ ಆರೋಗ್ಯಮಾತೆ ದೇವಾಲಯ ತಲೆ ಎತ್ತಿದ್ದು. 2012ರಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ವ್ಯಾಪ್ತಿಗೆ ಸೇರಿತು.

‘ಬೆಸಿಲಿಕಾ ಹಂತಕ್ಕೆ ಚರ್ಚ್‌ ಒಂದನ್ನು ಏರಿಸುವುದು ಸುದೀರ್ಘ ಪ್ರಕ್ರಿಯೆ. ನೂರಾರು ವರ್ಷಗಳಿಂದ ಪಳೆಯುಳಿಕೆಗಳನ್ನು ಪೂಜೆಗೆ ಅರ್ಹವಾಗಿರುವಂತೆ ಕಾಪಾಡಿಕೊಂಡಿರಬೇಕು. ಪುರಾವೆಗಳು ಇರಬೇಕು. ಮೊದಲಿಗೆ ಶಿವಮೊಗ್ಗದ ಧರ್ಮಾಧ್ಯಕ್ಷ ಫ್ರಾನ್ಸಿಸ್‌ ಸೆರಾವೊ ಬೆಸಿಲಿಕಾ ಹಂತಕ್ಕೆ ಸೂಕ್ತ ಎಂದು ಸೂಚಿಸಿದರು. ರಾಜ್ಯದ ಧರ್ಮಾಧ್ಯಕ್ಷರ ಪರಿಶೀಲನೆಯ ನಂತರ ಭಾರತೀಯ ಧರ್ಮಾಧ್ಯಕ್ಷ ಮಂಡಳಿಯ ಗಮನಕ್ಕೆ ಹೋಯಿತು. ಕೊನೆಗೆ ರೋಮ್‌ಗೆ ಮೂಲ ದಾಖಲೆಗಳನ್ನು ಸಲ್ಲಿಸಿದೆವು. ಅದು ಕೂಲಂಕಷವಾಗಿ ಪರಿಶೀಲಿಸಿತು. ತಂಡವೊಂದನ್ನು ಇಲ್ಲಿಗೆ ಕಳುಹಿಸಿ ಗುಟ್ಟಾಗಿ ದಾಖಲೆಗಳೆಲ್ಲ ಸರಿಯಾಗಿವೆಯೇ ಎಂದು ಅವಲೋಕಿಸಿತು. ವ್ಯಾಟಿಕನ್‌ ಸಿಟಿ ಪೋಪ್‌ಗಳ ರಾಯಭಾರಿ ಕಚೇರಿಗೆ ನಾನೂ ಖುದ್ದು ಹೋಗಿ, ಕೆಲವು ಪ್ರಶ್ನೆಗಳನ್ನು ಎದುರಿಸಿ ಬಂದೆ. ಎಲ್ಲವನ್ನೂ ಒರೆಗೆಹಚ್ಚಿ ನೋಡಿದ ಮೇಲೆ ಬೆಸಿಲಿಕಾ ಹಂತಕ್ಕೆ ಏರಲು ಅರ್ಹ ಎಂದು ವಿಶ್ವಗುರು ಫ್ರಾನ್ಸಿಸ್‌ 2019ರ ಸೆಪ್ಟೆಂಬರ್ 18ರಂದು ಸಮ್ಮತಿಸಿದರು’ ಎಂದು ಹರಿಹರ ಚರ್ಚ್‌ನ ಧರ್ಮಗುರು ಫಾದರ್ ಡಾ. ಆಂಥೋನಿ ಪೀಟರ್ ಬೆಳಕು ಚೆಲ್ಲಿದರು.

ಬ್ರಾಹ್ಮಣಭಕ್ತನೊಬ್ಬ ತುಂಗಾನದಿಯಲ್ಲಿ ಸ್ನಾನಕ್ಕೆ ಇಳಿದಾಗ ಪ್ರವಾಹಕ್ಕೆ ಸಿಲುಕಿದ. ಇನ್ನೇನು ಆತ ಮುಳುಗಬೇಕು ಎನ್ನುವಾಗ ಕೈಗೆ ಮಾತೆ ಮರಿಯಾಳ ಚಿಕ್ಕ ಪ್ರತಿಮೆ ಸಿಕ್ಕಿತು. ಅದೇ ಬ್ರಾಹ್ಮಣನನ್ನು ಸುರಕ್ಷಿತವಾಗಿ ದಡ ಮುಟ್ಟಿಸಿತು. ಪ್ರತಿಮೆಯನ್ನು ಅವನು ಮನೆಗೆ ತೆಗೆದುಕೊಂಡು ಹೋದ. ಕಾಯಿಲೆಗೆ ತುತ್ತಾಗಿದ್ದ ಅವನ ಪತ್ನಿ, ಮಕ್ಕಳೂ ಚೇತರಿಸಿಕೊಂಡರು. ಪ್ರತಿಮೆಯನ್ನು ‘ಸತ್ಯಮ್ಮ’ ಎಂದು ಕರೆದರು. ಮನೆಯನ್ನೇ ಮಾತೆಗೆ ಸಮರ್ಪಿಸಿದರು. ಮರಣಾನಂತರ ಆ ಬ್ರಾಹ್ಮಣನನ್ನು ಅದೇ ಸ್ಥಳದಲ್ಲಿ ಸಮಾಧಿ ಮಾಡಲಾಯಿತು. ತುಂಗಭದ್ರಾ ನದಿದಂಡೆಯ ಒಂದು ಸ್ಥಳದಲ್ಲಿ ಅದೇ ಚಿಕ್ಕ ದೇವಾಲಯವಾಗಿ ಮಾರ್ಪಟ್ಟಿತು ಎನ್ನುವುದು ಪ್ರತೀತಿ.

ಬಗೆಬಗೆಯ ಕಾಯಿಲೆಗಳಿಂದ ಬಳಲುವ ಭಕ್ತರು ಆರೋಗ್ಯಮಾತೆಯಲ್ಲಿ ಮೊರೆಯಿಡುವುದು ರೂಢಿ. ಪ್ರಾರ್ಥನೆಯಿಂದ ಗುಣಮುಖರಾದವರಿಗೆ ಈಗ ಸಂಭ್ರಮ. 

ವಿವಿಧ ಧರ್ಮಗುರುಗಳ ಸಾಕ್ಷಿ
ಜನವರಿ 15ರಂದು ಬೆಳಿಗ್ಗೆ 9ಕ್ಕೆ ಶಿವಮೊಗ್ಗದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ವಿವಿಧ ಧರ್ಮಗುರುಗಳ ಜತೆ ಆಚರಣೆ ಪ್ರಾರಂಭಿಸುವರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಭಾರತೀಯ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಮಂಡಳಿಯ ಅಧ್ಯಕ್ಷ ಫಿಲಿಪ್ ನೇರಿ ಪೆರಾವೊ, ಬೆಂಗಳೂರಿನ ಮಹಾ ಧರ್ಮಾಧ್ಯಕ್ಷ ಪೀಟರ್ ಮಚಾದೊ, ಶಿವಮೂರ್ತಿ ಮುರುಘಾ ಶರಣರು, ದಾವಣಗೆರೆಯ ಇಸ್ಲಾಮಿಕ್ ಧರ್ಮಗುರು ಮೌಲಾನಾ ಬಿ.ಎ. ಇಬ್ರಾಹಿಂ ಸಖಾಫಿ ಎಲ್ಲರೂ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಆರೋಗ್ಯಮಾತೆಗೆ ಹರಕೆ ಹೊರುವ, ಉರುಳು ಸೇವೆ ಮಾಡುವ ವಿವಿಧ ಧರ್ಮೀಯರು ಅಂದು ಪಾಲ್ಗೊಳ್ಳಲಿದ್ದಾರೆ.


ಫಾ. ಆಂಥೋನಿ ಪೀಟರ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು