ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ ಮಾಚಿದೇವ: ಅಕ್ಷರವಿರುವುದು ಹೊಟ್ಟೆಪಾಡಿಗೆ ಅಲ್ಲವೆಂದು ಸಾರಿದ ಅನುಭಾವಿ

Last Updated 31 ಜನವರಿ 2020, 2:15 IST
ಅಕ್ಷರ ಗಾತ್ರ

ಲೌಕಿಕದ ಬದುಕಿಗಾಗಿ ಬಟ್ಟೆಗಳನ್ನು ತೊಳೆಯುತ್ತಿದ್ದವನು ಮಡಿವಾಳ ಮಾಚಿದೇವ; ಅಂತರಂಗವನ್ನು ತೊಳೆಯುವ, ತನ್ಮೂಲಕ ನಿಜ ಅರಿವನ್ನು ಪಡೆಯುವ ಮಾರ್ಗದ ಕುರಿತು ಅವನಿಗೆ ಸಾಮಾಜಿಕ ಕಳಕಳಿಯಿತ್ತು...

ಬಸವಣ್ಣನವರಿಂದ ರಚಿತವಾದ ಅನುಭವಮಂಟಪದಲ್ಲಿ ಹಿರಿಯ ಅನುಭವಿಯಾಗಿದ್ದವನು ಮಡಿವಾಳ ಮಾಚಿದೇವ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಈತನ ಜನ್ಮಸ್ಥಳ. ಬಸವಣ್ಣವರ ವ್ಯಕ್ತಿತ್ವದಿಂದ ಆಕರ್ಷಿತನಾದ ಈತನು ಕಲ್ಯಾಣಕ್ಕೆ ಬಂದು ಜಂಗಮರ ಬಟ್ಟೆಗಳನ್ನು ಶುಚಿಗೊಳಿಸುವ ಕಾಯಕವನ್ನು ಕೈಗೊಂಡನು. ಕಲಿದೇವರದೇವಾ ಎನ್ನುವುದು ಈತನ ವಚನಾಂಕಿತ. ಇದುವರೆಗೆ ಈತನ 346 ವಚನಗಳು ಉಪಲಬ್ದವಾಗಿವೆ. ಇವನ ಬಸವಸ್ತ್ರೋತದ ವಚನಗಳು ಅತ್ಯಂತ ಜನಪ್ರಿಯವಾಗಿವೆ. ಕಲ್ಯಾಣಕ್ರಾಂತಿಯ ವೇಳೆಯಲ್ಲಿ ವಚನಸಾಹಿತ್ಯದ ರಕ್ಷಣೆಗಾಗಿ ಬಿಜ್ಜಳನ ಸೈನಿಕರೊಂದಿಗೆ ವೀರತನದಿಂದ ಹೋರಾಡಿದನೆಂದು ಖ್ಯಾತಿ ಪಡೆದಿದ್ದಾನೆ.

ಕಾಲಲ್ಲಿ ಕೂರಲಗ ಮೊನೆಯಲ್ಲಿರಿಸಿಕೊಂಡು

ಸತ್ತುಹೋದವರ ಸಾಮರ್ಥಿಕೆಯ ಹೊಗಳಿ

ಹೊಟ್ಟೆಯ ಹೊರೆವ ಕವಿಗಳು ಕೋಟ್ಯಾನುಕೋಟಿ

ಅರ್ಥವುಳ್ಳವರ ಅಗ್ಗಳಿಕೆಯ ಹೊಗಳುವ

ಕವಿಗಳು ಕೋಟ್ಯಾನುಕೋಟಿ

ಲಿಂಗವ ಹೊಗಳಿ ಹೊಗಳಿ ಅಂಗದ ಸೂತಕ ಹಿಂಗಿಸಿ

ಜಂಗಮದ ದಾಸೋಹದಿಂದ ಸರ್ವಾಂಗಲಿಂಗಿಯಾದ

ಭಕ್ತನಂಗಳವೆನಗೆ ವಾರಣಾಸಿ, ಗಾಯತ್ರಿ

ಮಲಪ್ರಹರಿಯಿಂದಧಿಕವಯ್ಯಾ ಕಲಿದೇವರದೇವಯ್ಯ

ಹಿಂದಿನ ಕಾಲದಿಂದಲೂ ಅಕ್ಷರಸ್ಥರಾದವರು ತಮ್ಮ ಹೊಟ್ಟೆಪಾಡಿಗಾಗಿಯೇ ಪ್ರತಿಭೆಯನ್ನು ಬಳಸಿಕೊಳ್ಳುತ್ತಿದ್ದರು. ಪ್ರಭುತ್ವವನ್ನು ಹೊಗಳಿ, ಸಂತೋಷಪಡಿಸಿ ಅದರಿಂದ ಲಾಭದಾಯಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಅಥವಾ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆಯುವ ಪ್ರವೃತ್ತಿಯನ್ನು ಇಂದಿನ ಸಾಹಿತಿಗಳಲ್ಲಿಯೂ ನೋಡುತ್ತೇವೆ. ಇಂತಹ ಸ್ವಭಾವವನ್ನು ಉಲ್ಲೇಖಿಸಿ ಮಾಚಿದೇವನು ಈ ವಚನವನ್ನು ರಚಿಸಿದ್ದಾನೆ.

ಲೌಕಿಕದ ಬದುಕಿಗಾಗಿ ಬಟ್ಟೆಗಳನ್ನು ತೊಳೆಯುತ್ತಿದ್ದ ಆತನಿಗೆ ಅಂತರಂಗವನ್ನು ತೊಳೆಯುವ, ತನ್ಮೂಲಕ ನಿಜ ಅರಿವನ್ನು ಪಡೆಯುವ ಮಾರ್ಗದ ಕುರಿತು ಸಾಮಾಜಿಕ ಕಳಕಳಿಯಿತ್ತು. ’ಕೂರಲಗು’ ಎಂದರೆ ಚೂಪಾದ ಕತ್ತಿ. ಕಾಲಿಗೆ ಕತ್ತಿ ಕಟ್ಟಿಕೊಂಡು ಹೋರಾಡುವ ವೀರರು ಸೈನ್ಯದಲ್ಲಿರುತ್ತಿದ್ದರು. ಅಂತಹ ವೀರರು ಅಥವಾ ರಾಜರು ತೀರಿಕೊಂಡಾಗ ಅವರ ಗುಣಗಾನ ಮಾಡಿ ತನ್ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಕವಿಗಳು ಬೇಕಾದಷ್ಟಿದ್ದಾರೆ. ’ಅರ್ಥವುಳ್ಳವರು’ ಎಂದರೆ ಶ್ರೀಮಂತರು. ’ಅಗ್ಗಳಿಕೆ’ ಎಂದರೆ ಹೆಚ್ಚುಗಾರಿಕೆ ಅಥವಾ ಶ್ರೇಷ್ಠತನ. ದುಡ್ಡಿರುವವರನ್ನು ಹೊಗಳುವ ಕವಿಗಳು ಕೂಡ ಸಂಖ್ಯೆಯಲ್ಲಿ ಬಹಳವಾಗಿದ್ದಾರೆ. ಆದರೆ ಈ ರೀತಿಯ ಸಾಕ್ಷರತೆ ಅಥವಾ ಬರವಣಿಗೆಯ ಶಕ್ತಿಯ ಕುರಿತು ಮಾಚಿದೇವ ತುಂಬಾ ಕುಪಿತನಾಗಿದ್ದ. ಹೊಗಳುವ ಶಕ್ತಿಯನ್ನು ಅಥವಾ ಸ್ತುತಿಸುವ ಸಾಮರ್ಥ್ಯವನ್ನು ಬಳಸಿ ಬರೆಯಬೇಕಾದದ್ದು ದೇವರನ್ನು ಕುರಿತು ಎಂಬುದು ಆತನ ಅಭಿಮತ.

ಲಿಂಗವನ್ನು, ಅಂದರೆ ದೇವರನ್ನು ಹೊಗಳಿದರೆ ಅಥವಾ ಪೂಜಿಸಿದರೆ ಅರ್ಥಾತ್ ಭಗವದ್ ಧ್ಯಾನದಿಂದ ದೇಹದ ಸೂತಕ ಕಳೆಯುತ್ತದೆ ಎಂಬ ನಂಬಿಕೆ ಪ್ರಚಲಿತವಿದ್ದ ಕಾರಣ ಮಾಚಿದೇವನು ಅಂತಹ ಭಕ್ತರ ಮನೆಯಂಗಳವು ತನಗೆ ಸರ್ವಶ್ರೇಷ್ಠವಾದ, ಪೂಜನೀಯವಾದ ಸ್ಥಳವಾಗಿದೆ ಎನ್ನುತ್ತಾನೆ. ದೇವರನ್ನು ಧ್ಯಾನಿಸುವುದರ ಜೊತೆಗೆ ಜಂಗಮರಿಗೆ ದಾಸೋಹವನ್ನು ಏರ್ಪಡಿಸುವ ಮೂಲಕ ಸರ್ವಾಂಗಲಿಂಗಿ, ಅಂದರೆ ತನು-ಮನವೆಲ್ಲ ಶಿವಮಯವಾದ ಪುಣ್ಯಜೀವಿಗಳು ವಾಸಿಸುವ ಮನೆ ಮತ್ತು ಪರಿಸರವು ಅತ್ಯಂತ ಪವಿತ್ರವಾದ ಸ್ಥಳವಾಗಿರುತ್ತದೆ. ಅದು ತನಗೆ ಕಾಶಿಗಿಂತಲೂ ಗಂಗೆಗಿಂತಲೂ ಗಾಯತ್ರೀಮಂತ್ರಕ್ಕಿಂತಲೂ ಹೆಚ್ಚಿನ ಪುಣ್ಯತಮವಾದದ್ದು ಎಂದು ಹೇಳುತ್ತಾನೆ. ’ಮಲಪ್ರಹರಿ’ ಎಂದರೆ ಪಾಪನಿವಾರಿಣಿ ಅಥವಾ ಗಂಗೆ. ಆ ಕಾಲದ ಪಾಪ-ಪುಣ್ಯದ ಕುರಿತಾದ ನಂಬಿಕೆಯನ್ನು ಹೀಗೆ ಗಟ್ಟಿಧ್ವನಿಯಲ್ಲಿ ವಿರೋಧಿಸುವ ಮತ್ತು ಶಿವಭಕ್ತಿಯ ಮಹತ್ವವನ್ನು ಸಾರುವ ಮೂಲಕ ತನ್ನ ಸಮಕಾಲೀನರಲ್ಲಿಯೇ ಜ್ಞಾನಿಯೆನಿಸಿಕೊಂಡವನು ಮಾಚಿದೇವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT