ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ | ಸತ್ಯರೂಪಿ ಸೌಂದರ್ಯಕಾರಕ...

Last Updated 19 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬಸವಣ್ಣನವರು ಪರಶಿವನ ನಿಷ್ಫಲರೂಪವನ್ನು ‘ಬಯಲು’ ಎಂದು ಕರೆದಿದ್ದಾರೆ. ಇದು ಎಲ್ಲವನ್ನೂ ಗರ್ಭೀಕರಿಸಿಕೊಂಡು ಅವ್ಯಕ್ತ ಸ್ಥಿತಿಯಲ್ಲಿರುವ ಬಯಲು. ಬಯಲುಸ್ವರೂಪನಾದ ಆ ಪರಶಿವನು ಲೀಲೆಗಾಗಿ ತನ್ನಲ್ಲಿ ಅವಿನಾಭಾವ ಸಂಬಂಧದಿಂದ ಇರುವ ಶಕ್ತಿಯ ಮುಂದುಗೊಂಡು ಸಕಲ ಜೀವ-ಜಗತ್ತುಗಳ ಸೃಷ್ಟಿಗೆ ಕಾರಣನಾಗುತ್ತಾನೆ. ಸಾಕಾರದ ಮೂಲಕವೇ ನಿರಾಕಾರ ಪರಶಿವನ ಅನುಭೂತಿ ಸಾಧ್ಯವೆಂದು ಅವರು ನಂಬಿದ್ದರು. ಅವರು ತಮ್ಮ ಉಪಸನಾ ಮಾರ್ಗದಲ್ಲಿ ಕಂಡ ಪರಮಾತ್ಮನನ್ನು ತಮ್ಮ ವಚನದಲ್ಲಿ ಹೀಗೆ ವರ್ಣಿಸಿದ್ದಾರೆ:

ಹೊನ್ನ ಹಾವುಗೆಯ ಮೆಟ್ಟಿದವನ, ಮಿಡಿಮುಟ್ಟಿದ ಕೆಂಜೆಡೆಯವನ
ಮೈಯಲ್ಲಿ ವಿಭೂತಿಯ ಧರಿಸಿದವನ, ಕರದಲ್ಲಿ ಕಪಾಲವ ಹಿಡಿದವನ
ಅರ್ಧನಾರಿಯಾದವನ, ಬಾಣನ ಬಾಗಿಲ ಕಾಯ್ದವನ
ನಂಬಿಗೆ ಕುಂಟಣಿಯಾದವನ, ಚೋಳಂಗೆ ಹೊನ್ನಮಳೆ ಕರೆದವನ
ಮಾಡಿದ ಪೂಜೆಯಲೊಪ್ಪುವನ, ಕೂಡಲಸಂಗಯ್ಯನೆಂಬುವನ

ಪರಶಿವನು ಬಂಗಾರದ ಪಾದುಕೆಗಳನ್ನು ಧರಿಸಿದ್ದಾನೆ. ಅವನ ಕೂದಲು ಜಡೆಗಟ್ಟಿ ಕೆಂಪಾಗಿದೆ. ಮಾವಿನ ಮಿಡಿಯ ಸೊನೆ ತಾಗಿದರೆ ಕೂದಲು ಹೇಗೆ ಒಪ್ಪಗೊಳಿಸಲು ಸಾಧ್ಯವಾಗುವುದಿಲ್ಲವೊ ಆ ಪ್ರಮಾಣದಲ್ಲಿ ಅವನ ಕೂದಲು ಜಡೆಗಟ್ಟಿದೆ. ಮೈಗೆಲ್ಲ ವಿಭೂತಿ ಹಚ್ಚಿಕೊಂಡಿದ್ದಾನೆ. ಕೈಯಲ್ಲಿ ಭಿಕ್ಷಾಪಾತ್ರೆಯ ರೀತಿಯಲ್ಲಿ ಕಪಾಲವನ್ನು, ಎಂದರೆ ತಲೆಬುರುಡೆಯನ್ನು ಹಿಡಿದಿದ್ದಾನೆ. ತನ್ನ ಮಡದಿ ಉಮೆಯನ್ನು ತನ್ನದೇ ದೇಹದ ಭಾಗವಾಗಿಸಿಕೊಂಡು ತನ್ಮೂಲಕ ತನ್ನ ಅರ್ಧ ಶರೀರವನ್ನು ಹೆಣ್ಣಿನ ದೇಹವನ್ನಾಗಿ ಮಾಡಿಕೊಂಡಿದ್ದಾನೆ.

ಬಾಣಾಸುರನೆಂಬ ಶಿವಭಕ್ತನಾದ ಅಸುರೇಶ್ವರ ಮೂರು ಪಟ್ಟಣಗಳನ್ನು ಸೃಷ್ಟಿಸಿಕೊಂಡು ಅವು ರಭಸವಾಗಿ ಸುತ್ತುತ್ತಿರುವಂತೆ ಮಾಡಿರುತ್ತಾನೆ. ಇದರಿಂದ ದೇವತೆಗಳಿಗೆ ತೊಂದರೆಯಾದಾಗ ಶಿವನು ಆತನ ಅರಮನೆಯ ದ್ವಾರದಲ್ಲಿ ಕಾದು ಅವನಿಂದ ಸೃಷ್ಟಿಯಾದ ಪಟ್ಟಣಗಳನ್ನು ಸಂಹಾರ ಮಾಡಿದ ಕಥೆ ಪ್ರಸಿದ್ಧ.

ನಂಬಿಯಣ್ಣನೆಂಬ ಶಿವಭಕ್ತ ತನ್ನ ಪೂರ್ವಜನ್ಮದ ಪ್ರಿಯತಮೆ ಸಂಕಲಿ ಎಂಬ ಹೂಮಾರುವಾಕೆಯನ್ನು ವಿವಾಹವಾಗುವ ಪ್ರಸಂಗದಲ್ಲಿ ಶಿವನನ್ನೇ ಮಧ್ಯವರ್ತಿಯಾಗಿ ಉಪಯೋಗಿಸಿಕೊಳ್ಳುತ್ತಾನೆ. ಚೋಳರಾಜನು ಪ್ರಕಾಂಡ ಶಿವಭಕ್ತನಾಗಿರುತ್ತಾನೆ. ನಿತ್ಯವೂ ಶಿವನಿಗೆ ಮೃಷ್ಟಾನ್ನ ಭೋಜನವನ್ನು ನೈವೇದ್ಯ ಮಾಡುತ್ತಿರುತ್ತಾನೆ. ಆತನ ಮೇಲೆ ಕೃಪೆತೋರಿದ ಶಿವನು ಸಂಪತ್ತಿನ ಸಮೃದ್ಧಿ ಉಂಟಾಗುವಂತೆ ಮಾಡಿರುತ್ತಾನೆ.

ಹೀಗೆ ಈಶ್ವರನು ತನ್ನ ಭಕ್ತರಿಗೆ ಕೃಪೆತೋರುವುದರಲ್ಲಿ ಎಲ್ಲ ದೇವರಿಗಿಂತಲೂ ಮುಂದಿದ್ದಾನೆ. ಆತನಿಗೆ ಪೂಜೆಯ ವಿಚಾರದಲ್ಲಿಯೂ ಯಾವ ತಕರಾರುಗಳಿಲ್ಲ. ಭಕ್ತಿಯಿಂದ ಮಾಡಿದ ಎಲ್ಲ ಬಗೆಯ ಪೂಜೆಗಳನ್ನೂ ಆತ ಸ್ವೀಕರಿಸುತ್ತಾನೆ. ಆ ಪರಶಿವನನ್ನು ಬಸವಣ್ಣನವರು ಕೂಡಲಸಂಗಯ್ಯನ ರೂಪದಲ್ಲಿ ಕಾಣುತ್ತಾರೆ. ಸತ್ಯರೂಪಿಯೂ, ನಿಜಸೌಂದರ್ಯಕಾರನೂ ಆಗಿರುವ ಶಿವನು ಎಲ್ಲರಿಗೂ ಮಂಗಳವನ್ನುಂಟು ಮಾಡುವ ಸಂಕಲ್ಪನಿಷ್ಟನಾಗಿರುವುದರಿಂದ ಶರಣರು ಕೇವಲ ಆತನನ್ನು ಮಾತ್ರ ಭಜಿಸಬೇಕೆಂದು ಹಂಬಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT