ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ- 37: ಶಿವಪೂಜೆಗೆ ನಿಶೀಥ ಕಾಲ

Last Updated 4 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಶಿವಪದವನ್ನು ಕೊಡುವ ಗಾಯತ್ರಿಯನ್ನು ಸಾವಿರದ ನೂರೆಂಟು ಬಾರಿ ಪ್ರಾತಃಕಾಲದಲ್ಲಿ ಜಪಿಸಬೇಕು. ‘ಗಾಯತ್ರಿ’ ಎಂದರೆ ‘ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್’ ಎಂಬ ‘ರುದ್ರಗಾಯತ್ರಿ’. ಜೊತೆಗೆ ವೇದಮಂತ್ರ–ಸೂಕ್ತಿಗಳನ್ನು ನಿಯಮದಿಂದ ಜಪಿಸಬೇಕು. ದಶಾರ್ಣಮಂತ್ರವನ್ನು ತೊಂಬತ್ತೊಂಬತ್ತು ಬಾರಿ ಜಪಿಸಬೇಕು. ಇದಕ್ಕಿಂತ ಹೆಚ್ಚಾಗಿ ಹತ್ತುಸಾವಿರ ಬಾರಿಯಾಗಲೀ, ಸಾವಿರದ ತೊಂಬತ್ತೊಂಬತ್ತು ಬಾರಿಯಾಗಲೀ ಜಪಿಸಿ, ನಿತ್ಯವೂ ವೇದಪಾರಾಯಣ ಮಾಡಿದರೆ ಶಿವಲೋಕವು ಲಭಿಸುವುದು. ಇನ್ನು ಮಿಕ್ಕ ಮಂತ್ರಗಳನ್ನು ಅಕ್ಷರವೊಂದಕ್ಕೆ ಲಕ್ಷದಂತೆ ಜಪಿಸಬೇಕು. ಒಂದೇ ಅಕ್ಷರವುಳ್ಳ ಮಂತ್ರಗಳನ್ನು ಕೋಟಿ ಬಾರಿ ಜಪಿಸಬೇಕು. ಸಾಧ್ಯವಾಗದಿದ್ದರೆ ಸಾವಿರ ಬಾರಿಯಾದರೂ ಭಕ್ತಿಪೂರ್ವಕವಾಗಿ ಜಪಿಸಬೇಕು. ಹೀಗೆ ತನ್ನ ಶಕ್ತಿಗನುಸಾರವಾಗಿ ಯಾರು ಮಾಡುವರೋ ಅವರು ಶಿವಲೋಕವನ್ನು ಪಡೆಯುವರು.

ಈಶ್ವರಿಗೆ ಪ್ರಿಯವಾದ ‘ಓಂ’ ಎಂಬ ಒಂದೇ ಮಂತ್ರವನ್ನು ನಿತ್ಯವೂ ಸಹಸ್ರ ಬಾರಿ ಜಪಿಸಿದರೆ ಶಿವನ ಆಜ್ಞೆಯಿಂದ ಸಕಲ ಇಷ್ಟಾರ್ಥಗಳೂ ನೆರವೇರುವುದು. ಹೂದೋಟನಿರ್ಮಾಣ, ಶಿವದೇವಾಲಯವನ್ನು ಶುದ್ಧಗೊಳಿಸುವುದು ಮುಂತಾದವುಗಳನ್ನು ಶಿವಕಾರ್ಯಾರ್ಥವಾಗಿ ಅಥವಾ ಶಿವಪ್ರೀತಿಗಾಗಿ ಮಾಡಿದರೂ ಶಿವಪದವು ಲಭಿಸುವುದು. ಶಿವಕ್ಷೇತ್ರದಲ್ಲಿ ನಿತ್ಯವೂ ಭಕ್ತಿಯಿಂದ ವಾಸವನ್ನು ಮಾಡಬೇಕು. ಶಿವಕ್ಷೇತ್ರವಾಸವು ತಿಳಿವಳಿಕೆಯುಳ್ಳವರಿಗೂ, ತಿಳಿವಳಿಕೆ ಇಲ್ಲದವರಿಗೂ ಭೋಗ ಮತ್ತು ಮುಕ್ತಿಯನ್ನು ಕೊಡುವುದು. ಆದುದರಿಂದ ಶಿವಕ್ಷೇತ್ರದಲ್ಲಿ ಮರಣಪರ್ಯಂತ ವಾಸ ಮಾಡಿದರೆ ಬಹಳ ಒಳ್ಳೆಯದು.

ಸಾಮಾನ್ಯ ಜನ ಪ್ರತಿಷ್ಠಾಪಿಸಿದ ಲಿಂಗದ ಸುತ್ತಲೂ ನೂರು ಮೊಳಗಳಷ್ಟು ಪ್ರದೇಶ ಪುಣ್ಯಸ್ಥಳವಾಗಿರುತ್ತದೆ. ಋಷಿಸ್ಥಾಪಿತ ಲಿಂಗದ ಸುತ್ತಲೂ ಇರುವ ಸಾವಿರ ಹಸ್ತಪ್ರಮಾಣದಷ್ಟು ಪ್ರದೇಶ ಪುಣ್ಯಸ್ಥಳವಾದರೆ, ದೇವಪ್ರತಿಷ್ಠಿತವಾದ ಲಿಂಗದ ಸುತ್ತ ಹತ್ತು ಸಾವಿರ ಹಸ್ತ ಪ್ರಮಾಣಗಳಷ್ಟು ಪ್ರದೇಶ ಪವಿತ್ರವಾಗಿರುತ್ತದೆ. ಉದ್ಭವಲಿಂಗವುಳ್ಳ ಕ್ಷೇತ್ರದಲ್ಲಿ ಸಾವಿರ ಧನುಸ್ಸಿನಷ್ಟು ವಿಸ್ತಾರವಾದ ಪ್ರದೇಶವು ಪವಿತ್ರವಾಗಿರುತ್ತದೆ. ಪುಣ್ಯಕ್ಷೇತ್ರದಲ್ಲಿರುವ ಬಾವಿ, ಕಲ್ಯಾಣಿ, ಸರೋವರ ಮುಂತಾದುವುಗಳನ್ನು ಶಿವಗಂಗೆ ಎಂದು ತಿಳಿಯಬೇಕು. ಶಿವಗಂಗೆಗಳಲ್ಲಿ ಸ್ನಾನ, ದಾನ, ಜಪಗಳನ್ನು ಮಾಡಿದರೆ ಶಿವಪದವನ್ನು ಪಡೆಯುವರು. ಶಿವಕ್ಷೇತ್ರಕ್ಕೆ ಹೋಗಿ ಮರಣದವರೆಗೂ ಅಲ್ಲಿಯೇ ವಾಸಿಸಬೇಕು. ಶಿವಕ್ಷೇತ್ರದಲ್ಲಿ ಮೃತರಾದ ನಂತರ ದಹನಮಾಡಬೇಕು. ಮೃತರಿಗೆ ಹತ್ತು ದಿನಗಳಲ್ಲಿ ಮಾಡುವ ನಿತ್ಯಕ್ರಿಯೆ, ಮಾಸಿಕ, ಹನ್ನೆರಡನೆಯ ದಿನದಲ್ಲಿ ಮಾಡುವ ಸಪಿಂಡೀಕರಣ ಮತ್ತು ವರ್ಷಾಂತದಲ್ಲಿ ಶ್ರಾದ್ಧಗಳನ್ನು ಮಾಡಿದರೆ ಮೃತವ್ಯಕ್ತಿ ಸಕಲ ಪಾಪಗಳಿಂದ ಮುಕ್ತನಾಗಿ ಶಿವಲೋಕವನ್ನು ಸೇರುವನು. ಶಿವಕ್ಷೇತ್ರದಲ್ಲಿ ಮರಣಪರ್ಯಂತದವರೆಗೆ ವಾಸ ಮಾಡಲಾಗದಿದ್ದರೆ, ಏಳು ರಾತ್ರಿಯಾಗಲೀ, ಐದು ರಾತ್ರಿಯಾಗಲೀ, ಮೂರು ರಾತ್ರಿಯಾಗಲೀ ಕೊನೆಗೆ ಒಂದು ರಾತ್ರಿಯಾಗಲೀ ವಾಸಮಾಡಿದರೂ ಶಿವಲೋಕ ಲಭಿಸುವುದು.

ಫಲಾಪೇಕ್ಷೆಯಿಂದ ಶಿವಪೂಜೆಯನ್ನು ಮಾಡಿದರೆ ಆ ಕೂಡಲೇ ಬೇಕಾದಂತಹ ಫಲವನ್ನು ಪಡೆಯುವರು. ಫಲೇಚ್ಛೆಯಿಲ್ಲದೆ ಮಾಡಿದರೆ ಸಾಕ್ಷಾತ್ ಶಿವಲೋಕವೇ ಲಭಿಸುವುದು. ಪ್ರಾತಃಕಾಲ, ಮಧ್ಯಾಹ್ನ, ಸಾಯಂಕಾಲ ಈ ಮೂರು ಕಾಲಗಳಲ್ಲೂ ಶಿವನನ್ನು ಭಕ್ತಿಯಿಂದ ಪೂಜಿಸಬೇಕು. ಪ್ರಾತಃಕಾಲದಲ್ಲಿ ನಿತ್ಯಕರ್ಮವಿಧಿಯನ್ನು ನಿರ್ವಹಿಸುವುದಕ್ಕೆ ಶ್ರೇಷ್ಠವಾಗಿರುತ್ತದೆ. ಮಧ್ಯಾಹ್ನ ಕಾಲವು ಕಾಮ್ಯಕರ್ಮಕ್ಕೂ, ಸಾಯಂಕಾಲ ಮತ್ತು ರಾತ್ರಿಕಾಲಗಳು ಶಾಂತಿಕರ್ಮಕ್ಕೂ ಪ್ರಶಸ್ತವಾದವು. ಮಧ್ಯರಾತ್ರಿಯ ಎರಡು ಯಾಮಗಳಿಗೆ ‘ನಿಶೀಥ’ವೆಂದು ಹೆಸರು. ಮಧ್ಯರಾತ್ರಿಯ 12 ಗಂಟೆ 26 ನಿಮಿಷದಿಂದ 1 ಗಂಟೆ 15 ನಿಮಿಷದವರೆಗಿನ ಸರಿ ಸುಮಾರು 49 ನಿಮಿಷಗಳು ನಿಶೀಥದ ಕಾಲಾವಧಿಯಾಗಿರುತ್ತದೆ. ಈ ಕಾಲದಲ್ಲೇ ಶಿವನು ಲಿಂಗರೂಪದಲ್ಲಿ ಬ್ರಹ್ಮ-ವಿಷ್ಣು ಯುದ್ಧ ಸಂದರ್ಭದಲ್ಲಿ ಬಂದಿದ್ದು. ಹೀಗಾಗಿ ಈ ನಿಶೀಥಕಾಲವು ಶಿವಪೂಜೆಗೆ ಪ್ರಶಸ್ತವಾದುದು. ಮಹಾಶಿವರಾತ್ರಿಯಂದು ‘ನಿಶೀಥ’ ಕಾಲದಲ್ಲಿ ಶಿವನನ್ನು ಪೂಜಿಸಿದರೆ ಇಷ್ಟ ಸಿದ್ಧಿಯು ಸಿಗುವುದು. ಕಲಿಯುಗದಲ್ಲಿ ಕರ್ಮದಿಂದಲೇ ಫಲಸಿದ್ಧಿಯು ವಿಶೇಷವಾಗಿ ಆಗುವುದು. ಪಾಪವನ್ನು ಆಚರಿಸದೆ ಒಳ್ಳೆಯ ಆಚಾರವುಳ್ಳವನಾಗಿ ಯಾವುದಾದರೂ ತನಗೆ ಯೋಗ್ಯವಾದ ಕರ್ಮವನ್ನು ಆಚರಿಸಿದರೆ ಅದಕ್ಕೆ ತಕ್ಕ ಫಲವನ್ನು ಪಡೆಯಬಹುದು. ಹೀಗೆ ಸೂತಮುನಿಯು ಶಿವಪ್ರತಿಷ್ಠಾಪನೆಯ ವಿಧಾನ, ಅದರ ಪೂಜಾ ಕ್ರಮ ಮತ್ತು ಫಲಗಳನ್ನು ಋಷಿಮುನಿಗಳಿಗೆ ತಿಳಿಸುವುದರೊಂದಿಗೆ ಶ್ರೀಶಿವಮಹಾಪುರಾಣದ ವಿದ್ಯೇಶ್ವರಸಂಹಿತೆಯ ಹನ್ನೊಂದನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT