ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಣಂ: ಹಬ್ಬವೊಂದು; ಹಲವು ಭಾವ

Last Updated 30 ಆಗಸ್ಟ್ 2020, 18:52 IST
ಅಕ್ಷರ ಗಾತ್ರ

ಜಲಾಶಯಗಳಿರುವ ಊರುಗಳಲ್ಲಿ ಸಿಂಗಾರಗೊಂಡ ದೋಣಿಗಳ ಸ್ಪರ್ಧೆ ಶುರುವಾಯಿತೆಂದರೆ, ಬೀದಿಯಲ್ಲಿ ಹುಲಿವೇಷಧಾರಿಗಳು ವಾದ್ಯಗಳ ಲಯಕ್ಕೆ ತಕ್ಕ ಹೆಜ್ಜೆ ಹಾಕಿದರೆಂದರೆ, ಶ್ವೇತವಸ್ತ್ರಧಾರಿ ಮಹಿಳೆಯರ ನೃತ್ಯ ಪ್ರಕಾರಗಳ ಸೌರಭ ಸೂಸಿತೆಂದರೆ, ಬಣ್ಣ–ಬಣ್ಣದ ಹೂಗಳ ರಂಗೋಲಿಗಳು ಸುಗಂಧ ಬೀರಿದವೆಂದರೆ ಕೇರಳದಲ್ಲಿ ಓಣಂ ಹಬ್ಬ ಆರಂಭಗೊಂಡಿತೆಂದೇ ಅರ್ಥ.

ಪ್ರಜೆಗಳನ್ನು ಭೇಟಿಯಾಗಲು ವರ್ಷದಲ್ಲಿ ಒಂದು ಬಾರಿ ಮಹಾಬಲಿ (ಮಾವೇಲಿ) ನಾಡಿಗೆ ಭೇಟಿ ಕೊಡುತ್ತಾನೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ನಡೆಯುವ ಓಣಂ ಹಬ್ಬಕ್ಕೆ ಸಂಸ್ಕೃತಿ, ಕಲೆ, ಕ್ರೀಡೆ ಮುಂತಾದ ಹತ್ತಾರು ಮುಖಗಳಿವೆ. ಹಲವು ಭಾವಗಳೂ ಇವೆ. ಓಣಂ 10 ದಿನಗಳ ಹಬ್ಬ. ಹೊರಜಗತ್ತಿಗೆ ಒಂದು ದಿನದ ಆಚರಣೆ, ಹೂವಿನ ರಂಗೋಲಿ ಮತ್ತು ಭರ್ಜರಿ ಭೋಜನದ ಕಲ್ಪನೆಗೆ ಈ ಹಬ್ಬ ಸೀಮಿತ. ಆದರೆ ಕೇರಳದಲ್ಲಿ ಅಥವಾ ಪ್ರಪಂಚದ ನಾನಾ ಮೂಲೆಗಳಲ್ಲಿರುವ ಮಲಯಾಳಿಗಳ ಮನೆ–ಮನದಲ್ಲಿ ಹಬ್ಬದ ವ್ಯಾಪ್ತಿ ದೊಡ್ಡದು.

ಆಷಾಢದ ಆಲಸ್ಯ ಕರಗಿ ಶ್ರಾವಣದಲ್ಲಿ ವಾಣಿಜ್ಯ ಚಟುವಟಿಕೆ ಆರಂಭಗೊಳ್ಳುವ ಸಂದರ್ಭದಲ್ಲಿ ಓಣಂ ಆಚರಿಸಲಾಗುತ್ತದೆ. ಶ್ರಾವಣದ ಪರ್ಯಾಯ ಪದ ಸಾವಣವು ಅಪಭ್ರಂಶಗೊಂಡು ಓಣಂ ಆಗಿರಬೇಕು ಎಂಬುದು ಭಾಷಾಶಾಸ್ತ್ರದ ವಿವರಣೆ. ದೋಣಿಯಾಟ (ವಳ್ಳಂ ಕಳಿ), ಹುಲಿವೇಷ (ಪುಲಿಕ್ಕಳಿ/ಕಡುವಕ್ಕಳಿ), ನೃತ್ಯ ಪ್ರಕಾರಗಳಾದ ತಿರುವಾದಿರ, ಕುಮ್ಮಾಟ್ಟಿಕ್ಕಳಿ, ತುಂಬಿ ತುಳ್ಳಲ್, ಓಣಂ ಕಳಿ ಮತ್ತಿತರ ಕಲಾಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಓಣಕಾಳ್ಚ (ಹೊಲದೊಡೆಯನಿಗೆ ಗೇಣಿದಾರ ಸಲ್ಲಿಸುವ ಕಾಣಿಕೆ)ದಂಥ ಸಾಮಾಜಿಕ ಆಯಾಮವೂ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಧಾರ್ಮಿಕ ಭಾವವೂ ಈ ಹಬ್ಬದಲ್ಲಿ ಅಡಗಿದೆ. ವೈವಿಧ್ಯಮಯ ಆಹಾರಪದಾರ್ಥಗಳ ಭೋಜನವೂ (ಓಣಸದ್ಯ) ಓಣಂನ ಸವಿ ಹೆಚ್ಚಿಸಿದೆ.

ಓಣಂ ಹಬ್ಬಕ್ಕೆ ಮಹಾಬಲಿ ಜೊತೆ ಮಾತ್ರವಲ್ಲ; ಪರಶುರಾಮ, ಬುದ್ಧನ ಜೊತೆಗೂ ಸಂಬಂಧವಿದೆ. ವಾಮನನು ತುಳಿದು ಪಾತಾಳಕ್ಕೆ ತಳ್ಳಿದ ಸಂದರ್ಭದಲ್ಲಿ ಪ್ರಜಾವತ್ಸಲನಾದ ಮಹಾಬಲಿಯು ಪ್ರತಿ ವರ್ಷ ನಾಡಿಗೆ ಭೇಟಿ ನೀಡಲು ಅವಕಾಶ ಕೋರಿದ ಕಥೆಯಂತೆಯೇ ‍ಪರಶುರಾಮನ ಕಥೆಯೂ. ವರುಣನಿಂದ ಕೇರಳವನ್ನು ರಕ್ಷಿಸಿ ಬ್ರಾಹ್ಮಣರಿಗೆ ದಾನ ಮಾಡಿದ ಪರಶುರಾಮ ಒಮ್ಮೆ ಅವರೊಂದಿಗೆ ವಿರಸಗೊಂಡ. ಕ್ಷಮೆ ಕೇಳಿದ ಬ್ರಾಹ್ಮಣರಿಗೆ, ವರ್ಷದಲ್ಲಿ ಒಂದು ಬಾರಿ ತೃಕ್ಕಾಕ್ಕರದಲ್ಲಿ (ಕೊಚ್ಚಿ) ಪ್ರತ್ಯಕ್ಷನಾಗುವೆ ಎಂದು ಭರವಸೆ ನೀಡಿದ. ಬುದ್ಧನು ಜ್ಞಾನೋದಯದ ನಂತರ ಶ್ರಾವಣಮಾಸದಲ್ಲಿ ಶ್ರವಣಪದ ಪ್ರವೇಶಿಸಿದ್ದ ಎಂಬ ಪ್ರತೀತಿ ಇದೆ. ಕೇರಳದಲ್ಲಿ ಬೌದ್ಧಧರ್ಮ ಗಟ್ಟಿಯಾಗಿ ನೆಲೆನಿಂತಿದ್ದ ಕಾಲದಲ್ಲಿ ಓಣಂ ಜೊತೆ ಇದನ್ನು ಕೂಡ ತಳುಕು ಹಾಕಲಾಯಿತು ಎಂದು ಹೇಳಲಾಗುತ್ತದೆ.

ಅತ್ತಂನಿಂದ ಚದಯಂ ವರೆಗಿನ ಸಂಭ್ರಮ

ಓಣಂ 10 ದಿನಗಳ ಹಬ್ಬವಾದರೂ ಕೊನೆಯ ನಾಲ್ಕುದಿನಗಳು ಮುಖ್ಯ. ಮಲಯಾಳಿಗಳು ‘ಪೊನ್ನಿನ್ ಚಿಙ ಮಾಸಂ’ (ಹೊನ್ನಿನ ಶ್ರಾವಣ) ಎಂದೇ ಖುಷಿಯಿಂದ ಹೇಳುವ ಶ್ರಾವಣದ ಆರಂಭದ ‘ಅತ್ತಂ‘ (ಹಸ್ತ) ನಕ್ಷತ್ರದಿಂದ ಆಚರಣೆಗಳು ಶುರುವಾಗುತ್ತವೆ. ಹೂವಿನ ರಂಗೋಲಿ, ದೋಣಿಯಾಟ, ಬಗೆಬಗೆಯ ನೃತ್ಯ, ಕ್ರೀಡಾಚಟುವಟಿಕೆ, ಓಣಂ ಹಾಡುಗಳು, ಓಣಂ ಗಾದೆಗಳು, ಹುಲಿವೇಷ ಮುಂತಾದ ಬಗೆಬಗೆಯ ಸಂಭ್ರಮ ತುಳುಕುತ್ತದೆ. ಒಂಬತ್ತನೇ ದಿನ ಉತ್ರಾಡಂ (ಉತ್ತರಾಷಾಢ ನಕ್ಷತ್ರ) ಅಥವಾ ಒಂದನೇ ಓಣಂ, 10ನೇ ದಿನ ತಿರುವೋಣಂ (ಶ್ರವಣ ನಕ್ಷತ್ರ–ಹಬ್ಬದ ಪ್ರಮುಖ ದಿನ) ಅಥವಾ ಎರಡನೇ ಓಣಂ. ಅಲ್ಲಿಗೆ ಹಬ್ಬದ ಆಚರಣೆಗಳು ಮುಗಿಯುತ್ತವೆ. ಕ್ರಮವಾಗಿ ಅವಿಟ್ಟಂ ಮತ್ತು ಚದಯಂ ಎಂದು ಕರೆಯಲಾಗುವ ಮೂರನೇ ಹಾಗೂ ನಾಲ್ಕನೇ ಓಣಂಗೆ ಹೆಚ್ಚು ಪ್ರಾಧಾನ್ಯವಿಲ್ಲ.

ಎರಡು ವರ್ಷ ಅತಿವೃಷ್ಟಿಯಿಂದ ಕಳೆಗುಂದಿದ್ದ ಓಣಂಗೆ ಈ ಬಾರಿ ವೈರಾಣುವಿನ ಹೊಡೆತ. ಓಣಂ ಸಂದರ್ಭದ ಪ್ರಮುಖ ಜಾತ್ರೆ ನಡೆಯುವ ಕೊಚ್ಚಿಯ ತೃಕ್ಕಾಕ್ಕರ ಭಗವತಿ ದೇವಾಲಯ, ಅತ್ತಚ್ಚಮಯಂ ಮೂಲಕ ಹಬ್ಬಕ್ಕೆ ಸೊಬಗು ನೀಡುವ ತೃಪ್ಪೂಣಿತ್ತುರ ದೇವಾಲಯ ಮತ್ತು ನಾಡಹಬ್ಬಕ್ಕೆ ‘ರಾಜಕಳೆ’ ತುಂಬುವ ಕೊಚ್ಚಿ ರಾಜಮನೆತನದ ಉತ್ಸವ ಈ ಬಾರಿ ಔಪಚಾರಿಕ ಮಾತ್ರ. ಆದರೆ ಮನದಾಳದ ಸಂಭ್ರಮಕ್ಕೆ ಎಣೆಯುಂಟೇ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT