ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಗೂ ದೀಕ್ಷೆ ನೀಡಿದ್ದ ಪಂಚಾಕ್ಷರಿ ಮಠ

ಪಂಚಾಕ್ಷರಿ ಸ್ವಾಮಿ ಹಾಗೂ ಹುಲಿಯ ಗದ್ದುಗೆ ವಿಶೇಷ ಪೂಜೆ
ಅಕ್ಷರ ಗಾತ್ರ

ಲಿಂಗಸುಗೂರು: ವೀರಶೈವ ಪರಂಪರೆಯ ಬಹುತೇಕ ಮಠ ಮಾನ್ಯಗಳು ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ. ಆ ಪೈಕಿ ಕ್ರೂರ ಪ್ರಾಣಿಗಳಿಗೂ ದೀಕ್ಷೆ ಕೊಟ್ಟು ಸಾಕ್ಷಾತ್ಕಾರಗೊಳಿಸಿದ ಪಂಚಾಕ್ಷರಿ ಮಠ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ಅಂತರದಲ್ಲಿರುವ ಕಸಬಾಲಿಂಗಸುಗೂರ ಗ್ರಾಮದಲ್ಲಿರುವ ಪಂಚಾಕ್ಷರಿ ಮಠ ಓಂ ನಮಃ ಶಿವಾಯ ಎಂಬ ಐದು ಅಕ್ಷರಗಳ ಪಂಚಾಕ್ಷರ ಮಂತ್ರದ ನೆನಪನ್ನು ತಂದುಕೊಡುತ್ತದೆ. ಪಂಚಾಕ್ಷರಿ ಮಂತ್ರದ ಸಿದ್ಧಿಯಿಂದಲೆ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಮಠ ಮಾನ್ಯಗಳಲ್ಲಿ ಕಾಣಸಿಗದ ಐತಿಹಾಸಿಕ ಕುರುಹುಗಳು ಸಾಕ್ಷಿಕರಿಸುತ್ತವೆ.

16ನೇ ಶತಮಾನದ ಪೂರ್ವದಲ್ಲಿ ಸಿದ್ಧರಾಮಯ್ಯ ಸ್ವಾಮಿಯವರು ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಮಠಕ್ಕೆ ಪರಂಪರೆ ಆಧರಿಸಿ ಸಾಕಷ್ಟು ಸ್ವಾಮಿಗಳು ಬಂದು ಹೋಗಿದ್ದಾರೆ. ಪಂಚಾಕ್ಷರಿ ಸ್ವಾಮಿಗಳ ಕಾಲಘಟ್ಟದಲ್ಲಿ ನಡೆದಿರುವ ಮೈಸೂರು ಚಾಮುಂಡೇಶ್ವರಿ ದೇವಸ್ಥಾನದ ಬಾಗಿಲು ತೆರೆದಾಗ ಮುಮ್ಮಡಿ ಕೃಷ್ಣರಾಜ ಒಡೆಯರ ಗೌರವಿಸಿ ಖಡ್ಗಗಳನ್ನು ಗುರು ಕಾಣಿಕೆಯಾಗಿ ಇಲ್ಲಿನ ಮಠಕ್ಕೆ ನೀಡಿದ್ದರು. ಅವುಗಳನ್ನು ಇಂದಿಗೂ ಪೂಜಿಸಲಾಗುತ್ತಿದೆ.

ಹುಲಿಯ ಮೇಲೆ ಸವಾರಿ ಮಾಡಿದ ರಾಜಾ ಬಾಗಸವಾರ, ಮಲೈ ಮಹಾದೇಶ್ವರ, ಅಯ್ಯಪ್ಪಸ್ವಾಮಿ (ಮಣಿಕಂಠ), ಬೀರಲಿಂಗರು ಕುರಿಗಳ ಜೊತೆ ಹುಲಿಯನ್ನು ಮೇಯಿಸುತ್ತಿದ್ದರು ಎಂಬಿತ್ಯಾದಿ ಮಾಹಿತಿ ಇತಿಹಾಸದ ಪುಟಗಳಿಂದ ತಿಳಿದಿದ್ದೇವೆ. ಆದರೆ, ಪಂಚಾಕ್ಷರಿ ಮಠಕ್ಕೆ ಹುಲಿಯೊಂದು ತುಂಬಾ ಸ್ವಾಮಿನಿಷ್ಠೆಯನ್ನು ಹೊಂದಿತ್ತು. ಅಂತಹ ಹುಲಿರಾಯನ ಕರ್ತೃ ಗದ್ದುಗೆ ಇಂದಿಗೂ ಕಾಣಬಹುದಾಗಿದೆ.

ಪಂಚಾಕ್ಷರಿ ಸ್ವಾಮಿಗಳು ಮಠಕ್ಕೆ ಹುಲಿ ಬಂದು ಘರ್ಜಿಸಿದಾಗ ಭಯಭೀತರಾಗಿದ್ದ ಭಕ್ತರಿಗೆ ಧೈರ್ಯ ತುಂಬಿ ಮಂತ್ರಾಕ್ಷತೆಯಿಂದ ಹುಲಿಗೆ ಆಶೀರ್ವದಿಸಿದರು. ಘರ್ಜಿಸುತ್ತಿದ್ದ ಹುಲಿ ಮಠದ ಮುಂಭಾಗದಲ್ಲಿ ಕಾಲಹರಣ ಮಾಡುತ್ತ ಗುರುವಿನ ಆಜ್ಞೆಗಳನ್ನು ಪಾಲಿಸುತ್ತ ಬಂದಿತ್ತು. ಹುಲಿಯ ಸಾವಿನ ನಂತರ ಹುಲಿಯ ಸ್ವಾಮಿತ್ವ ಗುಣ ಮೆಚ್ಚಿದ ಭಕ್ತರು, ಸ್ವಾಮಿಗಳು ಧಾರ್ಮಿಕ ವಿಧಿ ವಿಧಾನಗಳಡಿ ಅಂತ್ಯಕ್ರಿಯೆ ನೆರವೇರಿಸಿದರು ಎಂಬುದು ಐತಿಹ್ಯ.

‘ಪೈಶಾಚಿಕ ಅಟ್ಟಹಾಸದಿಂದ ಮುಚ್ಚಿದ್ದ ಚಾಮುಂಡೇಶ್ವರಿ ದೇವಿಯ ದೇಗುಲದ ಬಾಗಿಲು ತೆರೆಯಿಸಿದರು ಎಂಬುದಕ್ಕೆ ಅಲ್ಲಿನ ಬಹುತೇಕ ಸಾಂಪ್ರಾದಾಯಿಕ ಆಚರಣೆಗಳಲ್ಲಿ ಪಂಚಾಕ್ಷರಿ ಸ್ವಾಮೀಜಿ ಹೆಸರಲ್ಲಿ ಬಹುಪರಾಕ ಹಾಕುತ್ತಾರೆ. ಯೋಗ ಸಿದ್ಧಿಯಿಂದ ತಯಾರಿಸಿದ ನವಗ್ರಹ ತಾಮ್ರದ ಪತ್ರೆಯಲ್ಲಿ ತೊಳೆದ ನೀರು ಸೇವನೆ ಮಾಡಿದರೆ ರೋಗಗಳು ನಿವಾರಣೆ ಆಗುತ್ತವೆ’ ಎಂಬುದನ್ನು ರಾಜಶೇಖರಗೌಡ, ಅಮರೇಗೌಡ, ಮುದಕಪ್ಪ ಹೇಳುತ್ತಾರೆ.

‘ಗ್ರಾಮದಲ್ಲಿನ ಪಂಚಾಕ್ಷರಿ ಮಠ, ವಿಜಯಮಹಾಂತೇಶ್ವರ, ಹಿರೇಮಠ, ಚಿನ್ನದಕಂತಿ ಹಿರೇಮಠ, ಕಲ್ಮಠ, ಹೊಸಗುರು ಮಠ, ಕಪ್ಪರಮಠ, ತೋಂಟದಾರ್ಯ ಮಠಗಳು ಇಂದಿಗೂ ಅಸ್ಥಿತ್ವದಲ್ಲಿವೆ. ಒಂದೊಂದು ಮಠಕ್ಕೆ ಒಂದೊಂದು ರೀತಿಯ ಶ್ರೇಷ್ಠತೆ ಹೊಂದಿವೆ’ ಎಂಬುದು ಶಂಭುಲಿಂಗ ಫೂಲಭಾವಿ ಅವರ ಮಾತು.

‘ಸಧ್ಯ ಮಠದ ವಂಶಜರಾದ ಮಹಾಂತಯ್ಯ ಪಂಚಾಕ್ಷರಿ ಮಠ ಅವರ ತೋಟದ ಜಮೀನು (ಚೌಕಿ)ಯಲ್ಲಿಯೆ ಪಂಚಾಕ್ಷರಿ ಸ್ವಾಮಿಗಳ ಕರ್ತೃ ಗದ್ದುಗೆ ಹಾಗೂ ಅನತಿ ದೂರದಲ್ಲಿ ಹುಲಿಯ ಕರ್ತೃಗದ್ದುಗೆ ಇದೆ. ಹುಣ್ಣಿಮೆ, ಅಮವಾಸ್ಯೆ, ವಿಶೇಷ ದಿನಗಳಲ್ಲಿ ಇವುಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ’ ಎಂದು ಡಾ. ಶಶಿಕಾಂತ ಕಾಡ್ಲೂರು, ಮಲ್ಲಯ್ಯ, ಸಂಗಣ್ಣ, ನಂದಪ್ಪ, ಅಮರಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT