ಮಂಗಳವಾರ, ಜನವರಿ 28, 2020
29 °C
2012ರಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಕುರಿತು ಪ್ರಜಾವಾಣಿ ಲೇಖನ

ದಲಿತರಿಗೆ ಸ್ಥಾನಮಾನ, ಸಮಾಜ ಸೇವೆ, ವಿದ್ಯಾ ದಾನ: ಉಡುಪಿಯ 'ಸುದ್ದಿ ಸ್ವಾಮೀಜಿ'

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Pejawar Swamiji

[ಇದು 2012ರ ಜನವರಿ 15ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಸಂದರ್ಶನ ಆಧಾರಿತ ಲೇಖನ]

ಮಡೆ ಸ್ನಾನ, ಪಂಕ್ತಿ ಭೇದ, ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ, ವಿಶೇಷ ಆರ್ಥಿಕ ವಲಯ ರಚನೆ, ಅಸ್ಪೃಶ್ಯತೆ, ರಾಜ್ಯ, ರಾಷ್ಟ್ರ ರಾಜಕಾರಣ ಇತ್ಯಾದಿ ಯಾವುದೇ ವಿಷಯ ಇರಲಿ, ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಾ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ಹೇಳಿಕೆಗಳಿಂದ ಚರ್ಚೆ, ವಿವಾದಗಳಿಗೆ ಗ್ರಾಸವಾಗುವ  ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರ; ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ. ಹಾಗಂತ ಅವರಾಡುವ ಮಾತುಗಳು ಬೆಂಕಿಯುಂಡೆಗಳಲ್ಲ. ತೀಕ್ಷ್ಣ ವಾಗ್ಬಾಣಗಳೂ ಅಲ್ಲ. ಕೀರಲು ದನಿಯಲ್ಲಿ ಗಂಟಲಿನಾಳದಿಂದ ಹೊರಡುವ ಮಾತುಗಳೇ ಸ್ವಾಮೀಜಿಯವರನ್ನು ಸದಾ ಸುದ್ದಿಯಲ್ಲಿಟ್ಟಿವೆ.

ಸಾಮಾಜಿಕ ಕಾಳಜಿ, ಮತೀಯ ಸಾಮರಸ್ಯ, ದಲಿತರಿಗೆ ಸಾಮಾಜಿಕ ಸ್ಥಾನಮಾನ ಇತ್ಯಾದಿ ವಿಷಯಗಳನ್ನು ಸಮರ್ಥವಾಗಿ ಪ್ರತಿಪಾದಿಸುವ ವಿಶ್ವೇಶತೀರ್ಥರು ಸಂಪ್ರದಾಯವಾದಿಗಳಿಗೆ ಕ್ರಾಂತಿಕಾರಿಯಂತೆ, ಕ್ರಾಂತಿಕಾರಿಗಳಿಗೆ ಸಂಪ್ರದಾಯವಾದಿಗಳಂತೆ ಕಾಣುತ್ತಾರೆ. ಸಾಮಾನ್ಯವಾಗಿ ಅವರಾಡುವ ಮಾತಿನ ಕೊನೆಯ ಒಂದು ಪದ ಅಥವಾ ದ್ವಂದ್ವದ ನಿಲುವು (ಅವರೇ ಹೇಳಿಕೊಂಡಂತೆ ಮಾಧ್ವ ಮತಸ್ಥರಾಗಿದ್ದರಿಂದ 'ದ್ವಂದ್ವಾಚಾರ್ಯ'ರೂ ಹೌದು) ವಿವಾದಕ್ಕೆ ಎಡೆಮಾಡಿಕೊಡುತ್ತದೆ

ಗುಬ್ಬಚ್ಚಿಯಂತಹ ದೇಹದ 81 ವರ್ಷ (2012) ವಯಸ್ಸಿನ ಸ್ವಾಮೀಜಿ ಸದಾ ಲವಲವಿಕೆಯಿಂದ ಇರುತ್ತಾರೆ. ಹೋದಲ್ಲಿ, ಬಂದಲ್ಲಿ, ಕುಳಿತಲ್ಲಿ, ನಿಂತಲ್ಲಿ ಸುದ್ದಿ ಮಾಡುತ್ತಲೇ ಇರುತ್ತಾರೆ.

'ಸಮಾಜವೆಂಬ ಸರೋವರದ ಮೀನುಗಳೇ ಮಠಾಧಿಪತಿಗಳು. ನೀರು ಬಿಟ್ಟು ಮೀನು ಬದುಕದು, ಮೀನಿಲ್ಲದೆ ನೀರು ಸ್ವಚ್ಛವಾಗದು' ಇದು ಶ್ರೀಗಳ ಧೋರಣೆ. ಸದಾಕಾಲ ಸುದ್ದಿಯಲ್ಲಿರಬೇಕು ಎನ್ನುವ ಉದ್ದೇಶದಿಂದಲೇ ವಿವಾದಾಸ್ಪದ ಹೇಳಿಕೆ ನೀಡುತ್ತಾರೇನೋ ಎನ್ನುವ ರೀತಿಯಲ್ಲಿ ಮಾತನಾಡುವ ಸ್ವಾಮೀಜಿ ಅವರನ್ನು ಈ ಕುರಿತು ಪ್ರಶ್ನಿಸಿದರೆ 'ಸುದ್ದಿಯಲ್ಲಿರಬೇಕು ಎನ್ನುವುದು ನಮ್ಮ ಧೋರಣೆ ಅಲ್ಲ. ಇರುವ ವಿಚಾರವನ್ನು ಹೇಳಿದಾಗ ಅದು ಕೆಲವರಿಗೆ ವಿವಾದಂತೆ ಕಾಣುತ್ತದೆ, ಏನು ಮಾಡೋಣ?' ಎಂದು ಪ್ರಶ್ನಿಸುತ್ತಾರೆ.

ತಮ್ಮ ಬಗ್ಗೆ ಬರುವ ಟೀಕೆಗಳಿಂದ ಅವರು ವಿಚಲಿತರಾಗುವುದಿಲ್ಲ. ಬದಲಿಗೆ ಮತ್ತೆ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. 'ಜನರು ನಮ್ಮ ಬಗ್ಗೆ ತಪ್ಪು ತಿಳಿವಳಿಕೆ ಬೆಳೆಸಿಕೊಂಡಾಗ ಆ ಬಗ್ಗೆ ನಾವು ಸ್ಪಷ್ಟೀಕರಣ ಕೊಡಲೇಬೇಕಾಗುತ್ತದೆ. ಪ್ರಚಾರದ ಬೆನ್ನುಹತ್ತಿ ನಾವೇನೂ ಹೋಗುವುದಿಲ್ಲ. ಮಾಡುವ ಕೆಲಸವೇ ಪ್ರಚಾರ ಕೊಡುತ್ತದೆ. ಆದರೆ ಕೆಲವರು ನಾವು ಮಾಡುವ ಕೆಲಸಗಳಿಗೆ ವೃಥಾ ಆರೋಪ ಹೊರಿಸುತ್ತಾರೆ. ಏನು ಮಾಡೋಣ? ಇನ್ನು ಬುದ್ಧಿಜೀವಿಗಳನ್ನಂತೂ ಸರಿಪಡಿಸಲು ಸಾಧ್ಯವಿಲ್ಲ, ಅವರ ಟೀಕೆಗಳನ್ನು ನಿರ್ಲಕ್ಷಿಸುವುದೇ ಸರಿ' ಎಂಬುದು ಸ್ವಾಮೀಜಿ ಅವರ ನಿಲುವು.

ಆದಾಗ್ಯೂ ಮಾಧ್ಯಮಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಸ್ವಾಮೀಜಿ ಇತ್ತೀಚೆಗೆ ಕುಕ್ಕೆ ಕ್ಷೇತ್ರದಲ್ಲಿ ನಡೆಯುವ 'ಮಡೆ ಸ್ನಾನದ ವಿಚಾರ' ಕುರಿತು ಮಾತನಾಡುತ್ತ 'ಮುಸ್ಲಿಮರ ಇಫ್ತಾರ್ ಕೂಟಗಳಲ್ಲಿ ಒಂದೇ ತಟ್ಟೆಯಲ್ಲಿ ಹಲವರು ಊಟ ಮಾಡುತ್ತಾರೆ. ಇದು ಎಂಜಲಲ್ಲವೇ?' ಎಂದು ಹೇಳಿದ್ದು ಸುದ್ದಿ ಮಾಡಿತು. ಈ ಹಿಂದೆ ಅವರು 'ಹರಿಜನರಿಗೆ ವೈಷ್ಣವ ದೀಕ್ಷೆ ನೀಡುವುದಾಗಿ' ಹೇಳಿದ ಮಾತು ಬುದ್ಧಿಜೀವಿಗಳಿಗೆ ಸಿಟ್ಟು ತರಿಸಿತ್ತು.

ದಲಿತರ ಕೇರಿಗೆ ಅವರ ಭೇಟಿ ಬೂಟಾಟಿಕೆಯದು ಎಂಬ ಟೀಕೆಗೆ ಕಾರಣವಾಗಿತ್ತು. ಬಹಳ ಸಲ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಅವರು ನೀಡುವ ಹೇಳಿಕೆಗಳು (ಉದಾಹರಣೆಗೆ 'ಮಡೆ ಸ್ನಾನ ನಿಷೇಧದಿಂದ ಲಾಭವೂ ಇಲ್ಲ ಹಾನಿಯೂ ಇಲ್ಲ') ಸಹಜವಾಗಿಯೇ ಆಡಿದ ಮಾತುಗಳಂತೆ ಕಂಡರೂ ಅವು ವಿವಾದದ ಸ್ವರೂಪ ಪಡೆದು ಕಟು ಟೀಕೆಗಳಿಗೆ ಗುರಿಯಾಗಿವೆ. ಅದೇನೇ ಇರಲಿ ಪಾದಪೂಜೆ, ಭಿಕ್ಷೆ, ಮಡಿ, ಮೈಲಿಗೆ, ಆಚಾರಗಳಿಗೆ ಸೀಮಿತವಾಗದೆ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದು ಪೇಜಾವರ ಶ್ರೀಗಳ ವಿಶೇಷ.

ಪೇಜಾವರ ಮಠದ 32ನೆಯ ಯತಿಗಳಾಗಿ ಪೀಠ ಅಲಂಕರಿಸಿದ ವಿಶ್ವೇಶ ತೀರ್ಥರು ಅಷ್ಟಮಠಗಳ ಅತಿ ಹಿರಿಯ ಯತಿಗಳು. ಅವರು ಜನಿಸಿದ್ದು  ಏ.27, 1931. ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ರಾಮಕುಂಜದ ನಾರಾಯಣಾಚಾರ್ಯ ಮತ್ತು  ಕಮಲಮ್ಮ ದಂಪತಿಯ ಮಕ್ಕಳಲ್ಲಿ ಎರಡನೆಯವರು. ಮಗುವಿಗೆ ತಂದೆ ತಾಯಿ ಇಟ್ಟ ಹೆಸರು ವೆಂಕಟರಮಣ.

ವೆಂಕಟರಮಣನಿಗೆ 6 ವರ್ಷ ತುಂಬಿದಾಗ ಅವನ ಸಾತ್ವಿಕ ವ್ಯಕ್ತಿತ್ವವನ್ನು ಕಂಡು ಮೆಚ್ಚಿದ ಆಗಿನ ಪೇಜಾವರ ಮಠಾಧೀಶ ವಿಶ್ವಮಾನ್ಯತೀರ್ಥರು ಹಂಪಿಯ ಚಕ್ರತೀರ್ಥದಲ್ಲಿ (1938) ಸನ್ಯಾಸ ದೀಕ್ಷೆ ನೀಡಿದರು. ವೆಂಕಟರಮಣ ವಿಶ್ವೇಶ ತೀರ್ಥರಾದರು. ಬಾಲ ಯತಿಯ ಮೊದಲ ವಿದ್ಯಾಭ್ಯಾಸ ಉಡುಪಿಯಲ್ಲಿ ನಡೆಯಿತು.

ವಿದ್ಯಾಭ್ಯಾಸ ಮುಗಿದ ಕೂಡಲೇ ಅವರು ಕಂಡ ಕನಸು ಗುರುಕುಲ ಸ್ಥಾಪನೆ. 1952ರಲ್ಲಿ ಅವರ ಮೊದಲ ಪರ್ಯಾಯ. 1956ರಲ್ಲಿ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪನೆ. ಆಗಲೇ ಅವರು ಮಾಧ್ವ ಸಮಾಜದ ಹೆಮ್ಮೆಯ ಕುರುಹಾಗಿ 'ಅಖಿಲ ಭಾರತ ಮಾಧ್ವ ಮಹಾಮಂಡಳಿ' ಸ್ಥಾಪನೆ ಮಾಡಿ ಮೈಸೂರು ಮಹಾರಾಜರ ಅಧ್ಯಕ್ಷತೆಯಲ್ಲಿ ಪ್ರಥಮ ಸಮ್ಮೇಳನ ನಡೆಸಿದರು. ಆದರೆ ಈ ಮಂಡಳಿ ಮುಂದುವರಿಯಲಿಲ್ಲ. 1968ರ ಪರ್ಯಾಯದ ಅವಧಿಯಲ್ಲಿ ವಿಶ್ವಹಿಂದೂ ಪರಿಷತ್ತಿನ ಪ್ರಾಂತೀಯ ಸಮ್ಮೇಳನ ನಡೆಸಿದರು.

ಸಮ್ಮೇಳನದಲ್ಲಿ ಎಲ್ಲ ಸಂಪ್ರದಾಯಗಳ ಯತಿಗಳನ್ನೂ ಒಂದೇ ವೇದಿಕೆಗೆ ಕರೆತಂದದ್ದು ಅವರ ಹೆಗ್ಗಳಿಕೆ. ಸ್ವಾಮೀಜಿ ತಮ್ಮ 40ರ ಹರೆಯದಲ್ಲಿ (1970ರಲ್ಲಿ) ಬೆಂಗಳೂರಿನ ಮಲ್ಲೇಶ್ವರದ ದಲಿತ ಕೇರಿಗೆ ಭೇಟಿ ನೀಡಿದ್ದರು.

ದಲಿತರನ್ನು  ಹಿಂದೂ ಸಮಾಜದ ಬಾಂಧವರನ್ನಾಗಿ ಪರಿಗಣಿಸುವ ನಿಟ್ಟಿನಲ್ಲಿ ವಿಶ್ವೇಶ ತೀರ್ಥರು ಇಟ್ಟ ಹೆಜ್ಜೆಯೇ ವಿವಾದಕ್ಕೆ ಕಾರಣವಾಯಿತು. ಬಳಿಕ ಅವರು ಸುಮ್ಮನಾದರು. ಮತ್ತೆ 40 ವರ್ಷಗಳ ಬಳಿಕ 2010ರಲ್ಲಿ ಮೈಸೂರಿನಲ್ಲಿ ಹರಿಜನ ಕಾಲೋನಿಗೆ ಭೇಟಿ ನೀಡಿ ಸುದ್ದಿಯಾದರು. ಮಾದಾರಶ್ರೀಗಳಿಗೆ ವಿಪ್ರರಿಂದ ಪೂಜೆ ಮಾಡಿಸಿದರು. 'ಹರಿಜನರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ' ಎಂದು ಹೇಳಿ ಮತ್ತೆ ವಿವಾದಕ್ಕೆ ಕಾರಣರಾದರು. 'ಬಾಲ್ಯದಲ್ಲಿ  ನಾನು ಕೆರೆಯಲ್ಲಿ ಮುಳುಗುತ್ತಿದ್ದಾಗ ದಲಿತನೊಬ್ಬ ಮೇಲಕ್ಕೆತ್ತಿ ರಕ್ಷಿಸಿದ್ದೇ ದಲಿತರ ಬಗ್ಗೆ ಕಾಳಜಿ ವಹಿಸಲು ಕಾರಣ' ಎಂದು ಸ್ವಾಮೀಜಿ ಎಲ್ಲೆಡೆ ಹೇಳಿಕೊಂಡಿದ್ದಾರೆ.

1974ರಲ್ಲಿ ಆಂಧ್ರದ ಹಂಸಲದಿವಿಯಲ್ಲಿ ಚಂಡಮಾರುತದಿಂದ ನಿರ್ವಸಿತರಾದ ಜನರಿಗಾಗಿ 150 ಮನೆಗಳನ್ನು ಕಟ್ಟಿಸಿಕೊಟ್ಟರು. 1975ರಲ್ಲಿ ಗುಲ್ಬರ್ಗದಲ್ಲಿ ಕ್ಷಾಮ ಬಂದಾಗ ಸರ್ಕಾರಕ್ಕಿಂತ ಮೊದಲು ಗಂಜಿ ಕೇಂದ್ರ ತೆರೆದು ಜನರಿಗೆ ಸಾಂತ್ವನ ಹೇಳಿದರು. ಮಹಾರಾಷ್ಟ್ರದ ಲಾತೂರಿನಲ್ಲಿ  ಭೂಕಂಪ ಸಂತ್ರಸ್ತರಿಗೆ ಪುನರ್ವಸತಿಯನ್ನು ನಿರ್ಮಿಸಿದರು.

2009ರಲ್ಲಿ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ನಂತರ ಅಲ್ಲಿಗೆ ಧಾವಿಸಿದ ಸ್ವಾಮೀಜಿ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದರು. ನೊಂದ ಜನರ ಸೇವೆಗಳಿಗಾಗಿಯೇ 'ಜನತಾ ಕಲ್ಯಾಣ ನಿಧಿ'ಯೊಂದನ್ನು ಸ್ವಾಮೀಜಿ ಸ್ಥಾಪಿಸಿದ್ದಾರೆ. ಬೆಂಗಳೂರಿನ ಶ್ರೀಕೃಷ್ಣ ಸೇವಾಶ್ರಮ 50 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ. ಬಡವರಿಗೆ ಉಚಿತ ವೈದ್ಯಕೀಯ ಸೇವೆ, ಅನಾಥ ಮಕ್ಕಳನ್ನು ಪೋಷಿಸುವ ಶ್ರೀಕೃಷ್ಣ ಸೇವಾಧಾಮ, ಉಡುಪಿಯಲ್ಲಿ ಬುದ್ಧಿಮಾಂದ್ಯ ಮಕ್ಕಳ ಕೇಂದ್ರ, ಹಲವೆಡೆ ಗೋಸಂರಕ್ಷಣಾ ಕೇಂದ್ರಗಳನ್ನು ಅವರು ಸ್ಥಾಪಿಸಿದ್ದಾರೆ.

ವೈದಿಕ ಶಿಕ್ಷಣದ ಜೊತೆಗೆ ಲೌಕಿಕ ವಿದ್ಯಾಭ್ಯಾಸಕ್ಕೂ ಅನುವು ಮಾಡಿಕೊಟ್ಟಿರುವ ವಿಶ್ವೇಶ ತೀರ್ಥರು ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳ ಪದವಿ ಕಾಲೇಜುಗಳ ಜೊತೆಗೆ ಆಯುರ್ವೇದ ವಿದ್ಯಾಲಯವನ್ನೂ  ನಡೆಸುತ್ತಿದ್ದಾರೆ. ಹುಟ್ಟೂರು ರಾಮಕುಂಜದಲ್ಲಿ ಪ್ರಾಥಮಿಕ ಹಂತದಿಂದ ಪದವಿಪೂರ್ವ ತರಗತಿಗಳವರೆಗಿನ ವಿದ್ಯಾಸಂಸ್ಥೆ ಇದೆ.

ಅವರ ಮಾರ್ಗದರ್ಶನದಲ್ಲಿ ಹಲವು ಶಾಲಾ, ಕಾಲೇಜುಗಳು ನಡೆಯುತ್ತಿವೆ. ಬದರಿಯಲ್ಲಿ ಅನಂತ ಮಠ ನಿರ್ಮಾಣ, ಹರಿದ್ವಾರದಲ್ಲಿ ಮಧ್ವಾಶ್ರಮ. ಇದೇ ಮಾದರಿಯಲ್ಲಿ ರಾಮೇಶ್ವರ, ವೃಂದಾವನ, ಜಗನ್ನಾಥ ಪುರಿ, ಕಾಶಿ ಕ್ಷೇತ್ರಗಳಲ್ಲೂ ಯಾತ್ರಿಕರ ವಸತಿ ಗೃಹ ನಿರ್ಮಾಣ. ಇದಲ್ಲದೇ ಭುವನೇಶ್ವರ, ನಾಗಪುರ, ಚೆನ್ನೈ, ಬೆಂಗಳೂರು, ಮೈಸೂರು, ಹಾಸನ ಮೊದಲಾದ ನಗರಗಳಲ್ಲಿ ದೇವಾಲಯಗಳನ್ನು ಸ್ಥಾಪಿಸಿದ್ದಾರೆ.

ಜಪ, ತಪಾನುಷ್ಠಾನಗಳಿಂದ ವೈಯಕ್ತಿಕ ಸಾಧನೆಗಳಿಗೆ ಹೆಚ್ಚು ಒತ್ತು ನೀಡಿರುವ ಮಠ ಮಾನ್ಯಗಳ ಬಿಗಿಪಟ್ಟನ್ನು ಸಡಿಲಿಸಿದವರು ವಿಶ್ವೇಶ ತೀರ್ಥರು. 'ಸಮಾಜದಲ್ಲಿ ನೊಂದವರ ಸೇವೆ ಮುಖ್ಯವೇ ಹೊರತು ಗ್ರಂಥ ರಚನೆಯಲ್ಲ ಎನ್ನುವ ಸ್ವಾಮೀಜಿಗಳೂ 'ಸಾಂಬ ವಿಜಯ' ಎಂಬ ಸಂಸ್ಕೃತ ಕಾವ್ಯ ರಚಿಸಿದ್ದಾರೆ.

'ಮಠಾಧಿಪತಿಗಳು ರಾಷ್ಟ್ರದ ನಾಗರಿಕರಾದುದರಿಂದ ಅವರಿಗೂ ಉಳಿದವರಂತೆ ರಾಜಕೀಯ ಹಕ್ಕುಗಳಿವೆ' ಎನ್ನುವ ಸ್ವಾಮೀಜಿ 1977ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಧೋರಣೆಯನ್ನು ವಿರೋಧಿಸಿ ಪತ್ರ ಬರೆದಿದ್ದರು.

1991ರಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ವಿಮುಕ್ತಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಉ.ಪ್ರ.ದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಬಿಜೆಪಿಯ 'ಬೆಂಕಿ ಚೆಂಡು' ಖ್ಯಾತಿಯ ಉಮಾಭಾರತಿ ಸ್ವಾಮೀಜಿಗಳ ಶಿಷ್ಯೆಯಾಗಿದ್ದೇ ಆ ಸಂದರ್ಭದಲ್ಲಿ.

ಕೈಗಾರಿಕಾ ಕ್ರಾಂತಿಯ ನೆಪದಲ್ಲಿ ಪರಿಸರ ನಾಶವಾಗುವ ಯೋಜನೆಗಳನ್ನು ವಿರೋಧಿಸುವ ಸಾರ್ವಜನಿಕ ಹೋರಾಟಗಳ ಮುಂಚೂಣಿಯಲ್ಲಿ ಸ್ವಾಮೀಜಿ ನಿಂತಿದ್ದಾರೆ. ಈ ಹಿಂದೆ ಮಂಗಳೂರಿನ ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್) ರಚನೆ, ಉಡುಪಿ-ನಂದಿಕೂರಿನ  ಉಷ್ಣಸ್ಥಾವರದಿಂದ ಆಗುವ ಪರಿಸರ ಮಾಲಿನ್ಯ ವಿರೋಧಿಸಿ ಪ್ರತಿಭಟನೆ, ಉಪವಾಸದಂತಹ 'ಅಸ್ತ್ರ'ಗಳನ್ನು  ಸರ್ಕಾರದ ವಿರುದ್ಧ ಪ್ರಯೋಗಿಸಿದ್ದಾರೆ.

ಆದರೆ ಬಹುತೇಕ ಸಂದರ್ಭಗಳಲ್ಲಿ ಅವರು ಸರ್ಕಾರದ ನಿಲುವಿನ ಬಗ್ಗೆ 'ಮೃದು ಧೋರಣೆ' ತಾಳುತ್ತಾರೆ ಎಂಬ ಆರೋಪ ಅವರ ಮೇಲಿದೆ. ಯಾವುದೇ ವಿಷಯದಲ್ಲಿ ದೃಢ ನಿಲುವು ತಾಳದೇ ಇರುವುದು ಕೂಡ ಅವರ ಋಣಾತ್ಮಕ ಅಂಶ ಎಂಬುದು ಅವರ ಮೇಲಿರುವ ಆರೋಪ. ಸದಾ ಸಂಚಾರಿಗಳಾಗಿರುವ ವಿಶ್ವೇಶ ತೀರ್ಥರಿಗೆ ರಾಜ್ಯ, ರಾಷ್ಟ್ರಮಟ್ಟದ ರಾಜಕಾರಣ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ತೀವ್ರ ಆಸಕ್ತಿಯಿದೆ. ಸಮಾಜದ ಆಗುಹೋಗುಗಳ ಬಗ್ಗೆಯೂ ಮಠಾಧಿಪತಿಗಳು ಸ್ಪಂದಿಸಬೇಕು. ಏಕಾಂತ ನನ್ನ ಸ್ವಭಾವಕ್ಕೆ ಒಗ್ಗದು. ಸಮಾಜದ ಮಧ್ಯೆ ಇದ್ದು ಸನ್ಯಾಸಿಯಾಗಿ ಬದುಕುವುದು ನನ್ನ ಆಶಯ ಎನ್ನುತ್ತಾರೆ.

ಅಷ್ಟ ಮಠಗಳ ಯತಿಗಳ ಪೈಕಿ ಕ್ರಾಂತಿಕಾರಿಯಂತಿರುವ ಶ್ರೀಗಳು ವಿದೇಶ ಪ್ರವಾಸ ಮಾಡಿ ಬಂದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರಿಗೆ ತಮ್ಮ ಪರ್ಯಾಯದ ಅವಧಿಯಲ್ಲಿ ಶ್ರೀ ಕೃಷ್ಣನನ್ನು ಮುಟ್ಟಿ ಪೂಜಿಸಲು ಒಪ್ಪಿಗೆ ನೀಡಲಿಲ್ಲ. ಅಷ್ಟ ಮಠಗಳ ವ್ಯಾಪ್ತಿಯಲ್ಲಿರುವ ಕೆಲವು ಮಠಗಳು ಅವರ ಎಲ್ಲಾ ಮಾತುಗಳನ್ನು ಪಾಲಿಸುವುದಿಲ್ಲ. ಆದರೆ ವಿಶ್ವೇಶ ತೀರ್ಥರು ಆ ಬಗ್ಗೆ ಬೇಸರಿಸದೇ 'ಇದು ಮಠದ ವಿಷಯ, ಆಯಾ ಮಠಗಳಿಗೆ ಅವರದೇ ಆದ ಸಂಪ್ರದಾಯ, ಸ್ವಾತಂತ್ರ್ಯವಿದೆ' ಎನ್ನುತ್ತಾರೆ. ಅಷ್ಟಮಠಗಳ ನಡುವೆ ತಾತ್ವಿಕ ಭಿನ್ನಾಭಿಪ್ರಾಯವಿದೆ ಎನ್ನುವುದನ್ನು ಅವರು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು