ಭಗವದ್ ರಾಮಾನುಜರು ಕ್ರಿ.ಶ. 1017ರಲ್ಲಿ ತಮಿಳುನಾಡಿನ ಶ್ರೀಪೆರುಂಬೂದೂರ್ ಕ್ಷೇತ್ರದಲ್ಲಿ ಶ್ರೀ ಆಸುರಿ ಕೇಶವ ಸೋಮಯಾಜಿ ಮತ್ತು ಶ್ರೀಮತಿ ಕಾಂತಿಮತಿಯವರ ಸುಪುತ್ರರಾಗಿ ಅವತರಿಸಿದರು. ಲೋಕದ ಜನರೆಲ್ಲ ಉಜ್ಜೀವನಗೊಳ್ಳಲೆಂಬ ಮಹತ್ತರವಾದ ಉದ್ದೇಶದಿಂದ ಭಕ್ತಿ–ಪ್ರಪತ್ತಿಗಳ ಮಹತ್ವವನ್ನು ಪ್ರಪಂಚದಲ್ಲಿ ಸಾರಿದ ಮಾಹಾಪುರುಷರಿವರು. ಅವರ ಅವತಾರದ ಶುಭದಿನದಂದು ಆ ಅವತಾರಪುರುಷರ ಪವಿತ್ರವಾದ ಸ್ಮರಣೆ ನಮ್ಮೆಲ್ಲರ ಕರ್ತವ್ಯ.

ಭಗವದ್ ರಾಮಾನುಜರದು ಪವಿತ್ರವಾದ ಜೀವನ. ವೈದಿಕ ಸದಾಚಾರನಿಷ್ಠರ ವಂಶದಲ್ಲಿ ಜನಿಸಿದ್ದರಿಂದ ಚಿಕ್ಕಂದಿನಿಂದಲೇ ಭಗವದ್ಭಕ್ತಿ ಅವರಲ್ಲಿ ಬೇರೂರಿತ್ತು. ಶಾಸ್ತ್ರಾಧ್ಯಯನವನ್ನೆಲ್ಲ ಮುಗಿಸಿ ಅವರು ಯಾದವಪ್ರಕಾಶರಲ್ಲಿ ಅದ್ವೈತ ವೇದಾಂತವನ್ನು ಅಧ್ಯಯನ ಮಾಡುತ್ತಿದ್ದರು. ಆಗ ಅನೇಕ ಸಮಯಗಳಲ್ಲಿ ಆಚಾರ್ಯರ ವಿವರಣೆಗಳು ಅವರಿಗೆ ಸರಿಯೆಂದು ತೋರುತ್ತಿರಲಿಲ್ಲ. ಪರಮಾತ್ಮನನ್ನು ಸಕಲ ಕಲ್ಯಾಣಗುಣಾಕರನೆಂದೂ ಕರುಣಾಮೂರ್ತಿಯೆಂದೂ ತಿಳಿದಿದ್ದ ಅವರಿಗೆ ಆಚಾರ್ಯರ ನಿರ್ಗುಣಪರವಾದ ವಾಕ್ಯಾರ್ಥಗಳು ಮನಸ್ಸಿಗೆ ಬಹಳ ನೋವನ್ನು ಉಂಟುಮಾಡುತ್ತಿತ್ತು. ಒಂದು ಸಂದರ್ಭದಲ್ಲಿ ಛಾಂದೋಗ್ಯ ಉಪನಿಷತ್ತಿನ ವಾಕ್ಯಕ್ಕೆ ಆಚಾರ್ಯರು ಮಾಡಿದ ವಿವರಣೆಯಿಂದ ಅವರ ಕಣ್ಣಿಲಲ್ಲಿ ಧಾರಾಕಾರವಾಗಿ ನೀರು ಸುರಿಯಲಾರಂಭಿಸಿತು. ಆಚಾರ್ಯರು ಏಕೆಂದು ಕೇಳಲಾಗಿ ರಾಮಾನುಜರು ತಮ್ಮ ಅಭಿಪ್ರಾಯವನ್ನು ತಿಳಿಸಲು ಆಚಾರ್ಯರು ಅವರಲ್ಲಿ ಬಹಳ ಕೋಪಗೊಂಡರು. ಅಂದಿನಿಂದ ಅವರಲ್ಲಿ ಭಿನ್ನಾಭಿಪ್ರಾಯಗಳು ಅಧಿಕವಾಗಿ ರಾಮಾನುಜರು ಕಾಂಚೀಪುರಕ್ಕೆ ಬಂದು ಅಲ್ಲಿ ನೆಲೆಸಿದರು. ಅಲ್ಲಿ ಅವರು ವರದರಾಜನಿಗೆ ತೀರ್ಥ ಕೈಂಕರ್ಯವನ್ನು ಮಾಡಿಕೊಂಡಿದ್ದರು. ಅಲ್ಲಿ ಅವರಿಗೆ ಪರಮಭಕ್ತರಾಗಿದ್ದ ಕಾಂಚೀಪೂರ್ಣರ ಸಂಬಂಧವೂ ದೊರಕಿತು. ಕಾಂಚೀಪೂರ್ಣರು ವರದರಾಜನೊಡನೆ ಮಾತಾಡುತ್ತಿದ್ದರೆಂದು ಐತಿಹ್ಯವಿದೆ. ಆಗಲೇ ಒಂದು ಸಮಯದಲ್ಲಿ, ಸುಪ್ರಸಿದ್ಧ ಆಚಾರ್ಯರಾಗಿದ್ದ ಯಾಮುನಾಚಾರ್ಯರು ರಾಮಾನುಜರನ್ನು ದೂರದಿಂದ ನೋಡಿ ಅವರ ತೇಜಸ್ಸಿನಿಂದ ಬಹಳ ಆಕರ್ಷಿತರಾಗಿ ಇವರೇ ಮುಂದೆ ನಮ್ಮ ಸಂಪ್ರದಾಯವನ್ನು ಮುಂದುವರಿಸಲು ತಕ್ಕ ಆಚಾರ್ಯರೆಂದು ಮನಸ್ಸಿನಲ್ಲಿ ನಿಷ್ಕರ್ಷಿಸಿದರು. ಆದರೆ ದೈವವಶದಿಂದ ಅವರ ಜೀವಿತಕಾಲದಲ್ಲಿ ಯಾಮುನರ ಮತ್ತು ರಾಮನುಜರ ಭೇಟಿಯಾಗಲಿಲ್ಲ. ರಾಮಾನುಜರು ಯಾಮುನಾಚಾರ್ಯರನ್ನು ಭೇಟಿಯಾಗಲು ಹೋಗುವಷ್ಟರಲ್ಲಿ ಯಾಮುನರು ಪರಮಪದವನ್ನು ಸೇರಿದ್ದರು. ಆಗ ರಾಮಾನುಜರು ತಾವು ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನವನ್ನು ರಚಿಸುವುದಾಗಿಯೂ, ವ್ಯಾಸರ ಮತ್ತು ಪರಾಶರರ ಗ್ರಂಥಗಳನ್ನು ಪ್ರಚಾರಮಾಡುವುದಾಗಿಯೂ ಪ್ರತಿಜ್ಞೆ ಕೊಂಡರು.

ನಂತರ ರಾಮಾನುಜರು ಮಹಾಪೂರ್ಣರಲ್ಲಿ ಅಧ್ಯಯನವನ್ನು ಮಾಡಿ ಕಾಂಚಿಯಲ್ಲಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು. ಅಂದಿನಿಂದ ತಮ್ಮ ಜೀವನವನ್ನು ವೇದಾಂತದರ್ಶನದ ಸ್ಥಾಪನೆಗೂ ಎಲ್ಲ ಚೇತನರ ಉದ್ಧಾರಕ್ಕೂ ಮುಡಿಪಿಟ್ಟರು. ಶ್ರೀರಂಗಕ್ಕೆ ಬಂದು ಅಲ್ಲಿ ಆಚಾರ್ಯಪಟ್ಟವನ್ನು ಅಲಂಕರಿಸಿದರು. ನಂತರ ‘ವೇದಾರ್ಥಸಂಗ್ರಹ’ವೆಂಬ ಮುಖ್ಯವಾದ ಶ್ರುತಿಗಳ ಅರ್ಥಪ್ರತಿಪಾದನೆ ಮಾಡುವ ಗ್ರಂಥವನ್ನೂ, ಬ್ರಹ್ಮಸೂತ್ರಗಳಿಗೆ ‘ಶ್ರೀಭಾಷ್ಯ’, ‘ವೇದಾಂತಸಾರ’, ವೇದಾಂತದೀಪವೆಂಬ ಮೂರು ಭಾಷ್ಯಗಳನ್ನೂ ರಚಿಸಿದರು. ಭಗವದ್ಗೀತೆಗೆ ಅದ್ಭುತವಾದ ಶ್ರೀಗೀತಾಭಾಷ್ಯವನ್ನು ರಚಿಸಿದರು. ನಂತರ ಶರಣಾಗತಿಗದ್ಯ, ‘ಶ್ರೀರಂಗಗದ್ಯ’ ಮತ್ತು ‘ವೈಕುಂಠಗದ್ಯ’ವೆಂಬ ಮೂರು ಗದ್ಯಗಳನ್ನು ರಚಿಸಿದರು. ಪ್ರತಿದಿನವೂ ಒಬ್ಬ ಶ್ರೀವೈಷ್ಣವನು ಹೇಗೆ ಭಗವದಾರಾಧನೆಯನ್ನು ಮಾಡಬೇಕೆಂಬುದನ್ನು ತಿಳಿಸಲು ‘ನಿತ್ಯಗ್ರಂಥ’ವನ್ನು ರಚಿಸಿದರು. ಹೀಗೆ ನವರತ್ನಗಳಂತೆ ಒಂಬತ್ತು ಗ್ರಂಥಗಳನ್ನು ರಚಿಸಿ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಪರಿಪೂರ್ಣವಾದ ಆಕಾರವನ್ನು ನೀಡಿ ದರ್ಶನಸ್ಥಾಪಕಾಚಾರ್ಯರೆಂದು ಪ್ರಸಿದ್ಧರಾದರು.

ಭಗವದ್ ರಾಮಾನುಜರು ತಮ್ಮೆಲ್ಲ ಗ್ರಂಥಗಳನ್ನೂ ಪುರ್ವಾಚಾರ್ಯರುಗಳ ಗ್ರಂಥಗಳ ಆಧಾರದಲ್ಲಿಯೇ ರಚಿಸಿರುವರೆಂದು ತಾವೇ ತಮ್ಮ ಗ್ರಂಥಗಳ ಆರಂಭದಲ್ಲಿ ತಿಳಿಸುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಯಾಮುನಾಚಾರ್ಯರ ‘ಸಿದ್ಧಿತ್ರಯ’, ‘ಗೀತಾರ್ಥಸಂಗ್ರಹ’ ಮೊದಲಾದ ಗ್ರಂಥಗಳ ಆಧಾರದಿಂದಲೇ ತಮ್ಮ ‘ಬ್ರಹ್ಮಸೂತ್ರ ಭಾಷ್ಯ’ ಮತ್ತು ‘ಗೀತಾಭಾಷ್ಯ’ವನ್ನು ರಚಿಸಿರುವರು. ಭಕ್ತಿಗೆ ಅತ್ಯಂತ ಪ್ರಾಧಾನ್ಯವನ್ನು ಕೊಟ್ಟು ಶ್ರುತಿಯ ಎಲ್ಲ ವಾಕ್ಯಗಳಿಗೂ ಮುಖ್ಯಾರ್ಥವನ್ನೇ ಸ್ವೀಕರಿಸಿ ಸಕಲಕಲ್ಯಾಣಗುಣಾಕರನಾದ ದೋಷಗಂಧದೂರನಾದ ಪರಬ್ರಹ್ಮನಾದ ಶ್ರೀಮನ್ನಾರಾಯಣನೇ ಪ್ರಾಪ್ಯನೂ ಪ್ರಾಪಕನೂ ಎಂದು ಸ್ಥಾಪಿಸಿದರು. ಶ್ರುತ್ಯುಕ್ತ ರೀತಿಯಲ್ಲಿ ಚೇತನ, ಅಚೇತನ ಮತ್ತು ಈಶ್ವರ ಎಂಬ ಮೂರು ತತ್ವಗಳನ್ನು ಸ್ವೀಕರಿಸಿ, ಚೇತನಾಚೇತನಗಳೆಲ್ಲ ಈಶ್ವರನಿಗೆ ಶರೀರವಾಗಿರುವುವು ಎಂದು ಭೇದ, ಅಭೇದ ಮತ್ತು ಘಟಕ ಶ್ರುತಿಗಳ ಪ್ರಾಮಾಣ್ಯದಿಂದ ಸ್ಥಾಪಿಸಿದರು. ಚೇತನಾಚೇತನ ಪದಾರ್ಥಗಳೆಲ್ಲ ಈಶ್ವರನ ಆಧಾರದಲ್ಲಿಯೇ ಇದ್ದು, ಅವನ ನಿಯಮನದಲ್ಲಿಯೇ ಇದ್ದು ಅವನಿಗೇ ಶೇಷಭೂತವಾಗಿರುವುವು ಎಂಬುದಾಗಿ ಅವು ಈಶ್ವರನ ಶರೀರವೆಂದು ಹೇಳಲ್ಪಡುವುವು ಮತ್ತು ಈಶ್ವರನು ಆತ್ಮನೆಂದು ಹೇಳಲ್ಪಡುವನು. ಇದುವೇ ಶರೀರಾತ್ಮ-ಭಾವ ಅಥವಾ ಶರೀರ-ಶರೀರಿಭಾವ ಎಂಬ ಈ ದರ್ಶನಕ್ಕೇ ಅಸಾಧಾರಣವಾದ ವಿಷಯ. ಚೇತನಾಚೇತನ ಪದಾರ್ಥಗಳು ಈಶ್ವರನಿಗೆ ಅಪೃಥಕ್ಸಿದ್ಧ (ಬೇರ್ಪಡಿಸಲಾಗದ) ವಿಶೇಷಣಗಳೆಂಬುದಾಗಿ ವಿಶಿಷ್ಟವಾದ ಪದಾರ್ಥವು ಒಂದೇ ಆಗುವುದರಿಂದ ‘ವಿಶಿಷ್ಟಾದ್ವೈತ’ ಎಂಬ ಹೆಸರು ಈ ದರ್ಶನಕ್ಕೆ ಹೊಂದುವುದು.

ಆ ಈಶ್ವರನು ಶ್ರೀಮನ್ನಾರಾಯಣನೇ ಎಂದೂ ಅವನನ್ನು ಪಡೆಯುವುದೇ ಪರಮಪುರುಷಾರ್ಥವೆಂದೂ ಮತ್ತು ಅವನನ್ನು ಪಡೆಯಲು ಭಕ್ತಿ–ಪ್ರಪತ್ತಿಗಳು ಉಪಾಯಗಳೆಂದೂ ಪ್ರಾಮಾಣಿಕವಾಗಿ ಸ್ಥಾಪಿಸಿದರು. ಪ್ರಪತ್ತಿಯೆಂಬ ಮಾರ್ಗವನ್ನು ಸಕಲರೂ ಯಾವ ಜಾತಿ, ಲಿಂಗ, ವಯಸ್ಸು, ಜ್ಞಾನ ಮೊದಲಾದ ಭೇದವಿಲ್ಲದೇ ಆಶ್ರಯಿಸಿ ಪರಮಾತ್ಮನ ಅನುಗ್ರಹವನ್ನು ಪಡೆದು ಪರಮಪುರುಷಾರ್ಥವನ್ನು ಹೊಂದಬಹುದು ಎಂದು ಪ್ರತಿಪಾದಿಸಿ ಮಾನವಲೋಕಕ್ಕೇ ಹಿತವನ್ನುಂಟುಮಾಡಿದರು. ಈ ಪರಮಾಚಾರ್ಯರನ್ನು ಅವರ ಅವತಾರದಿನದಂದು ಭಕ್ತಿಯಿಂದ ಸ್ಮರಿಸಿ ಎಲ್ಲರೂ ಅವರ ದಿವ್ಯವಾದ ಅನುಗ್ರಹಕ್ಕೆ ಪಾತ್ರರಾಗಿ ಧನ್ಯರಾಗೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.