ಭಾನುವಾರ, ಸೆಪ್ಟೆಂಬರ್ 26, 2021
21 °C
ಆಚಾರ –ವಿಚಾರ

ಧರ್ಮವೇ ಜಯವೆಂಬ ದಿವ್ಯಮಂತ್ರ

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

Prajavani

ಮಜ್ಜಿಗೆ ಕಡೆಯುತ್ತಾ ಅಮ್ಮ ಹಾಡುತ್ತಿದ್ದ ‘ಧರ್ಮವೇ ಜಯವೆಂಬ ದಿವ್ಯಮಂತ್ರ| ಮರ್ಮವನರಿತು ಮಾಡಲಿಬೇಕು ತಂತ್ರ|’ – ಪುರಂದರದಾಸರ ಕೀರ್ತನೆಯ ನಾದಲಹರಿ ಮನೆ ತುಂಬ ಮಾರ್ದನಿಸುತ್ತಿದ್ದಂತೆ ನಮ್ಮ ಮನಸ್ಸಿನಲ್ಲೂ ಈ ಕೀರ್ತನೆ ಮಂತ್ರದಂತೇ ಅನುರಣಿಸುತ್ತಿತ್ತು.

ಹಾಡಾಗಿಯಷ್ಟೇ ಉಳಿದಿದ್ದ ಕೀರ್ತನೆ ಮತ್ತೆ ಮತ್ತೆ ಕೇಳುವಾಗ ಅದು ಹೇಳ ಹೊರಟ ತತ್ತ್ವ ಅರ್ಥವಾಗತೊಡಗಿದಾಗ ‘ಧರ್ಮ’ ಶಬ್ದದ ಇನ್ನೊಂದು ಮಗ್ಗುಲೂ ಬಲವಾಗಿ ಬೆಳೆದದ್ದೂ ಕಂಡು ಬಂತು.

‘ಧರ್ಮ’ - ಈ ಸಂಸ್ಕೃತ ಪದಕ್ಕೇ ವ್ಯಾಪಕವಾದ ಅರ್ಥಗಳಿವೆ. ಅದಕ್ಕೇ ಸಮನಾರ್ಥಕ ಶಬ್ದ ಜಗತ್ತಿನ ಬೇರಾವುದೇ ಭಾಷೆಯಲ್ಲಿ ಇಲ್ಲವೆಂಬುದೇ ವಿದ್ವಾಂಸರ ಅಭಿಪ್ರಾಯ. ನ್ಯಾಯ, ಸೂಕ್ತವಾದ ನಡವಳಿಕೆ, ನೈತಿಕ ಆಚರಣೆ, ಇತರರಿಗೆ ನೆರವಾಗುವುದು, ದಾನ ನೀಡುವುದು, ಕರ್ತವ್ಯ, ಕಾನೂನು, ಚತುರ್ವಿಧ ಪುರುಷಾರ್ಥಗಳಲ್ಲಿ ಒಂದು, ಗುಣ, ಸ್ವಭಾವ, ದರ್ಶನ, ದತ್ತಿ, ಬಿಟ್ಟಿ, ಪುಕ್ಕಟೆ – ಹೀಗೆ ಹತ್ತಾರು ಶಬ್ದಗಳು ಧರ್ಮದ ಅರ್ಥವನ್ನೂ ರೂಹನ್ನೂ ಹಿರಿದಾಗಿಸುತ್ತಾ ಹೋಗಿದ್ದಷ್ಟೇ ಅಲ್ಲದೇ ಅದರೊಳಗೇ ನಮ್ಮ ಮನಸ್ಸನ್ನೂ ಪರಿಷ್ಕಾರ ಮಾಡುವಷ್ಟೂ ಅರ್ಥಗಳು ಸುಪ್ತವಾಗಿ ಹುದುಗಿವೆ ಎನ್ನುವುದೂ ಅಚ್ಚರಿ.

‘ಧರ್ಮ ಮಾಡಿ ತಾಯೀ...’ ಮನೆ ಬಾಗಿಲಿನಲ್ಲಿ ಭಿಕ್ಷೆ ಬೇಡುವವನ ಮಾತು. ಭಿಕ್ಷೆ ಬೇಡುತ್ತಾ ಮನೆ ಬಾಗಿಲಿಗೆ ಬಂದವನಿಗೆ ಧನ ದ್ರವ್ಯ ನೀಡುವುದು ಮನುಷ್ಯಧರ್ಮ. ಮೆಟ್ಟಿದಾಗ ಬುಸುಗುಟ್ಟುವುದು ಹಾವಿನ ಧರ್ಮ. ಪ್ರತಿ ಜೀವಕ್ಕೂ ಅದರದೇ ಜೀವದ ಮಿತಿಯಲ್ಲಿ ಧರ್ಮ ಆವರಿಸಿಕೊಂಡಿದೆ. ಆದರೆ ಯೋಚನೆಯ ಶಕ್ತಿ ಹೊತ್ತು ಹುಟ್ಟಿದ ಮನುಷ್ಯಧರ್ಮಕ್ಕೆ ಹತ್ತಾರು ಗುಣಗಳನ್ನು ಆರೋಪಿಸಿ ಆಚರಣೆಯಲ್ಲಿ ಶೂನ್ಯನಾದನಾದನೇನೋ! ಹಾಗೇ ತನ್ನ ಅಗತ್ಯಕ್ಕೆ ಬೇಕಾದ ಅರ್ಥವನ್ನು ಹಿಗ್ಗಿಸಿ ಬದುಕುವ ಸುಖವನ್ನು ಎಳೆದುಕೊಂಡಿರಬೇಕು.

ಆದರೆ ಸುಖ ಅನ್ನುವುದು ಎಳೆದಂತೆ ಹಿಗ್ಗುವ ವಸ್ತುವಲ್ಲ ಅಲ್ಲವೇ! ಸುಖ, ಅದು ಪ್ರತಿ ಕ್ಷಣಗಳಲ್ಲಿ ಹಂಚಿ ಹೋಗಿರುತ್ತದೆ. ಕರ್ತವ್ಯದಲ್ಲಿ, ನ್ಯಾಯದಲ್ಲಿ, ದಾನದಲ್ಲಿ, ಗುಣದಲ್ಲಿ ಧರ್ಮ ಗುಪ್ತಗಾಮಿನಿಯಾಗಿರುತ್ತದೆ. ದಾಸರು, ‘ವಿಷವಿಕ್ಕಿದವಗೆ ಷಡ್ರಸವನುಣಿಸಬೇಕು| ದ್ವೇಷ ಮಾಡಿದವನ ಪೋಷಿಸಲಿಬೇಕು|’ ಪ್ರತಿಕಾರವೇ ನಿತ್ಯಮಂತ್ರವಾಗಿರುವ ಈ ವಿಷಮ ಸ್ಥಿತಿಯಲ್ಲಿ ದಾಸರು ಅಮೃತದಂತಹ ನುಡಿಗಳನ್ನು ನೀಡಿ ಉದ್ಧರಿಸುವ ಮಾರ್ಗವನ್ನು ನಾವು ಅನುಸಂಧಾನ ಮಾಡಬೇಕು.

ಪಂಪನ ಆದಿಪುರಾಣದ ಮಾತೊಂದು, ‘ದಯೆ ದಾನಂ ತಪಂ ಶೀಲಂ ಎಂಬಿವೆ ಮೈಯ್ಯಾಗಿರೆ ಸಂದ ಧರ್ಮವೆ ವಲಂ ಪೊತ್ತೆತ್ತುಗುಂ ಮುಕ್ತಿ ಪರ‍್ಯವಸಾನಂಬರಂ’ – ಧರ್ಮಕ್ಕೆ ದೇಹ ಎಂಬುದಿಲ್ಲ. ದಯೆ, ದಾನ, ಶೀಲಗಳ ಮೂಲಕವೇ ಅದು ಸಾಕಾರವಾಗುವುದು ಎನ್ನುತ್ತದೆ. ಹಾಗಿದ್ದಲ್ಲಿ ಧರ್ಮಕ್ಕೆ ಮನದ ವಿಕಾರದ ದೇಹವನ್ನು ಆರೋಪಿಸುವುದು ತಪ್ಪಾಗುತ್ತದೆ. ನೂರು ಮತದ ಹೊಟ್ಟ ತೂರಿ ಸಮತೆಯ ಧರ್ಮ ನೆಲೆಗೊಳ್ಳುವತ್ತ ಹೆಜ್ಜೆ ಸಾಗಲೆನ್ನುವ ಸುಕನಸು ಈ ಹೊತ್ತಿನದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು