ಶನಿವಾರ, ನವೆಂಬರ್ 23, 2019
17 °C

ಮನೆ ಎಂಬ ಗುಡಿ

Published:
Updated:
Prajavani

ಅಧ್ಯಾತ್ಮದ ಸಾಧನೆಗೆ ಸರಿಯಾದ ಸ್ಥಳ ಯಾವುದು – ಎಂಬ ಮಾತಿಗೆ ಈ ಹಿಂದೆ ‘ಕಾಡು’ ಎನ್ನುವ ಉತ್ತರ ದೊರಕುತ್ತಿತ್ತು. ಇಂದು ಅದಕ್ಕೆ ‘ಏಕಾಂತ’ ಎಂಬ ಉತ್ತರ ಬರಬಹುದು. ಆದರೆ ನಾವು ವಾಸಿಸುವ ಮನೆಯೇ ನಮ್ಮ ಎಲ್ಲ ಸಾಧನೆಗಳಿಗೂ ಮೂಲ. ಇದು ಅಧ್ಯಾತ್ಮಸಾಧನೆಗೂ ಸಲ್ಲುವ ಮಾತು...

ಊರು ಸುತ್ತಬೇಕು, ಊರೂರೊಳಗೇ ಸಿಗುವ ಲೋಕಾನುಭವವನ್ನು ಮನ ತುಂಬಿಕೊಳ್ಳಬೇಕು ಎಂದು ಊರು ಸುತ್ತುವ ಎಲ್ಲರೂ ಮನ ತುಂಬಿದೊಡನೆ, ಹೊರಟಷ್ಟೇ ರಭಸದಲ್ಲಿ ಬಂದು ಸೇರುವುದು ತಂತಮ್ಮ ಮನೆಯೆಂಬ ಗೂಡಿನೊಳಗೆ. ಮತ್ತೆ ಆ ಮನೆಯೊಳಗೇ ಇರುವ ತಮ್ಮದೇ ಆದ ಕೋಣೆಯ ಏಕಾಂತದ ಘಮದೊಳಗೆ. ಎಂತೆಂಥ ತಾರಾಹೋಟೆಲುಗಳಲ್ಲಿ ವಾಸ್ತವ್ಯ ಹೂಡಿ ಹೊತ್ತು ಕಳೆದು ಬಂದರೂ ದಿಂಬಿಗೆ ತಲೆಯಾನಿಸಿದೊಡನೇ ನಿರಾಳವಾಗುವ, ನೆಮ್ಮದಿಯ ನಿದ್ದೆ ಬರುವ ತೊಟ್ಟಿಲೇ ಮನೆ.

ನಾಲ್ಕು ಗೋಡೆ, ಒಂದು ಬಾಗಿಲು ಮತ್ತೊಂದು ಕಿಟಕಿ, ಮೇಲೊಂದು ಸೂರಿರುವ ಚೌಕಟ್ಟಿನ ಕಟ್ಟಡ ‘ಮನೆ’ ಆಗುವುದು ಮನುಷ್ಯನ ಪ್ರವೇಶದಿಂದ. ಅದೂ ಗಂಡು–ಹೆಣ್ಣು ಒಂದಾಗಿ ಬದುಕುವ ಯಾತ್ರೆಯಿಂದ. ಮನೆಯೊಳಗೆ ಯಾತ್ರೆಯ ನಡಿಗೆ ಸಂಪೂರ್ಣವಾಗುವುದು ಮನೆಯೊಳಗಿನ ಜನರ ನಡೆಯಿಂದ ನುಡಿಯಿಂದ. ನೇಸರನ ಎಳೆಬಿಸಿಲು ಎಳೆಎಳೆಯಾಗಿ ಕಿಟಕಿ ಬಾಗಿಲಿಂದ ಒಳ ಸೇರಬೇಕು, ಒಲೆ ಉರಿಯಬೇಕು, ಜಠರಾಗ್ನಿಗೆ ಹೊಸತೋಗರ ಸಿಗಬೇಕು. ಆ ಓಗರ ಶಕ್ತಿಯಾಗಿ ಮನುಷ್ಯನ ನರನಾಡಿಗಳಲ್ಲಿ ಬಯಕೆಯಾಗಿ ಹರಿದು ಕಾಡಬೇಕು. ಸೃಷ್ಟಿಯ ನಿರಂತರತೆ ಹೀಗೆ ಸಾಗಲು ಸೂರೊಂದು ಮನುಷ್ಯನ ಬಯಲನ್ನು ಮರೆಯಾಗಿಸಲು ಮನೆ ಎಂಬ ಅಪೂರ್ವ ಆಸರೆಯೊಳಗೆ ಬಂದಿಯಾಗಿಸಿದೆ. ಬಿಸಲು ಮಳೆ ಚಳಿ ಎಂಬ ಪ್ರಾಕೃತಿಕ ಚಲನೆಗಳಿಂದ ಮನೆ ನಮ್ಮನ್ನು ಕಾಪಿಡುವ ದೈವವೂ ಹೌದು. ಆದ್ದರಿಂದಲೇ ಮನೆಯನ್ನು ಗುಡಿಗೆ ಹೋಲಿಸುವುದು.

‘ಮನೆಯ ಮೆಯ್ಗೆ ಕಿಟಕಿ ಕಣ್ಣು; ಕವಿ ಕೊಟಡಿಯ ಜೀವನು’ ಎಂದವರು ಕುವೆಂಪು. ಮನೆಯೇ ಮಂತ್ರಾಲಯ ಮನಸ್ಸೇ ದೇವಾಲಯ ಎಂದವರೂ ನಾವೇ. ಬರಿಯ ಕಟ್ಟಡವಾಗಿಯೇ ಉಳಿಯುತ್ತಿದ್ದ ಕಟ್ಟೋಣಕ್ಕೆ ಭಾವ ತುಂಬಿದ್ದು ಮನುಷ್ಯನ ಸಾಂಸಾರಿಕ ಜೀವನ. ಸಂಸಾರ ನಡೆಯುವುದೇ ಪ್ರೀತಿಯಿಂದ. ಅಥವಾ ಒಮ್ಮೊಮ್ಮೆ ಅನಿವಾರ್ಯ ಸಹಿಸುವಿಕೆಯಿಂದ. ಇಲ್ಲಿ ‘ಸಹಿಸುವಿಕೆ’ ಎನ್ನುವುದು ಸುಂದರವಾದ ಸಾಂಸಾರಿಕ ಬದ್ಧತೆ. ಹಾಗಾಗಿ ಮನೆಯೆಂಬ ಗುಡಿಯ ಕಟ್ಟೋಣ ನಿಂತಿರುವುದೇ ಪ್ರೀತಿಯೆಂಬ ಲೇಪನವಿರುವ ಬದ್ಧತೆಯಿಂದ.

ಈ ಮನೆಯೆಂಬ ಗುಡಿಯೊಳಗೆ ಬದ್ಧತೆ ಮೂಲಮೂರ್ತಿ. ಪ್ರೀತಿ, ಉತ್ಸವಮೂರ್ತಿ. ಮನುಷ್ಯಪ್ರೀತಿಯ ತೇರು ಎಳೆದರೂ ಎಳೆಯದಿದ್ದರೂ ಸರಿ, ಮೂಲಮೂರ್ತಿಯಾದ ಬದ್ಧತೆ ಭಗ್ನವಾಗಬಾರದು. ಪ್ರೀತಿ, ಅನುರಕ್ತಿಯ ಸ್ಥಾಯಿಭಾವವಾದರೆ ಬದ್ಧತೆ, ವಿರಕ್ತಿಯ ಸ್ಥಾಯಿಭಾವ. ಹೊರಗೆ ಕಾಣುವ ಅನುರಕ್ತಿಯ ಒಳಗೆ ವಿರಕ್ತಿ ಇರುವುದೇ ಈ ನೆಲದ ಸಿದ್ಧಾಂತ. ದಾಸವರೇಣ್ಯ ಪುರಂದರರು ಹೇಳಿದ್ದೂ ಅದನ್ನೇ, ‘ಗೇರುಹಣ್ಣಿನಲ್ಲಿ ಬೀಜವಿದ್ದಂತೆ’ ಇರಬೇಕು ಎಂದು. ಅನುರಕ್ತಿ ಮತ್ತು ವಿರಕ್ತಿ ಒಟ್ಟಾಗಿ ಸಂಸಾರ ಹೂಡುವುದೇ ಮನೆಯೆಂಬ ಗುಡಿಯಲ್ಲಿ.

ಮರದ ಪೊರಟೆ, ಕಲ್ಲುಗಳ ಸಂದು, ಗುಹೆಗಳಿಂದ ಹೊರಟ ಮಾನವನ ‘ಮನೆ’ ಸಮಯ ಸರಿದಂತೇ ಅಂತಸ್ತು ಏರಿದಂತೆ ಬೃಹತ್ ಗಗನಚುಂಬಿ ಮನೆಗಳು, ಅರಮನೆಯಂಥ ಮನೆಯವರೆಗೂ ತಲುಪಿ ಮಾನವಸಮಾಜದ ವಿಕಾಸದ ಏರುವಿಕೆಯನ್ನು ದೃಢೀಕರಿಸಿದೆ. ಈ ಎಲ್ಲ ಮನೆಗಳು ಗುಡಿಗಳೇ! ಅಲ್ಲಿ ವಾಸಿಸುವ ಜೀವಗಳು ನಿರಾಳವಾಗಿ ಉಸಿರಾಡುತ್ತಿವೆ, ಬರಿಯ ಕಲ್ಲಿನ ಮೂರ್ತಿಗಳಾಗದೆ, ಕಲ್ಲಿನಲ್ಲೂ ದೈವ ನೋಡುವ ನಮ್ಮ ನೆಲದ ಅಮೃತತ್ವವನ್ನು ಹೀರಿಕೊಂಡು ಜೀವನ ನಡೆಸುತ್ತಿರುವವರಾಗಿದ್ದರೆ ಪ್ರತಿ ಮನೆಯೂ ಗುಡಿಯೇ.

ಅಪ್ಪ, ಅಮ್ಮ, ಮಕ್ಕಳು, ಅಜ್ಜಿ, ತಾತ ಸೇರಿದಂತೆ ಎಲ್ಲರೂ ಸಿಹಿ ಕಹಿಗಳ ಹೂರಣವನ್ನು ಪ್ರೀತಿ, ನಂಬಿಕೆ, ಬದ್ಧತೆ, ಸ್ವಲ್ಪ ಯಾಚನೆ, ಸ್ವಲ್ಪ ಯಾತನೆ – ಹೀಗೆಯೇ ನವರಸಗಳೂ, ಜೊತೆಗೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಸೋಲು, ಸಾವು, ನೋವು – ಎಲ್ಲವನ್ನೂ ಜೊತೆಗೆ ಅನುಭವಿಸುವ ಸಾಮಾಜಿಕ ವಿಳಾಸವಷ್ಟೆ ನಮ್ಮ ಮನೆಯಲ್ಲ; ಅದು ನಮ್ಮ ಆಧ್ಯಾತ್ಮಿಕ ಸಾಧನೆಗೆ ಒದಗುವ ತಪಸ್ಸಿನ ಕ್ಷೇತ್ರವೂ ಹೌದು.

ಇದನ್ನೂ ಓದಿ: ಹೆಣ್ಣಿನ ಹುಡುಕಾಟದಲ್ಲಿ ಅಧ್ಯಾತ್ಮ!

ಪ್ರತಿಕ್ರಿಯಿಸಿ (+)