ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಧರ್ಮನಿಂದನೆ ಮಹಾಪಾಪ

ಅಕ್ಷರ ಗಾತ್ರ

ಮನುಷ್ಯನ ಅನಾಗರಿಕತೆ, ಅಮಾನುಷತನಗಳನ್ನು ನಿಗ್ರಹಿಸಲುಜಗತ್ತಿನ ಎಲ್ಲಾ ಧರ್ಮ-ಸಂಸ್ಕೃತಿಗಳಲ್ಲಿ ಅಸ್ತಿತ್ವಕ್ಕೆ ಬಂದ ಅಮೂಲ್ಯ ಸಾತ್ವಿಕ ಮಾರ್ಗಗಳು. ಧರ್ಮಗಳು ಜಗತ್ತಿಗೆ ಬಾರದಿದ್ದರೆ, ಅದನ್ನು ಜನ ಭಯ-ಭಕ್ತಿಯಿಂದ ಅನುಸರಿಸದಿದ್ದರೆ ಮನುಷ್ಯ ಕಾಡಿನ ಮೃಗದಂತೆಯೇ ವರ್ತಿಸುತ್ತಿದ್ದ. ಮನುಷ್ಯನನ್ನು ಸದ್ವರ್ತನೆಯಲ್ಲಿ ಬೆಳೆಸಿ-ಪೋಷಿಸಿದ ಜಗತ್ತಿನ ಎಲ್ಲಾ ಧರ್ಮಗಳಿಗೆ ಮನುಷ್ಯರಾದವರೆಲ್ಲ ಕೃತಜ್ಞರಾಗಿರಬೇಕು.

ಪರಧರ್ಮ ಧೂಷಣೆಯನ್ನು ಯಾರೂ ಮಾಡಬಾರದು. ಎಲ್ಲಾ ಧರ್ಮಗಳನ್ನು ಗೌರವಿಸಬೇಕು-ಪ್ರೀತಿಸಬೇಕು-ಆರಾಧಿಸಬೇಕು. ಅದಲ್ಲಿರುವ ಒಳಿತನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಧರ್ಮ ಎಂದರೆ ಪವಿತ್ರವಾದುದು. ಅವು ಭಗವಂತನೆಡೆಗೆ ಮುನ್ನಡೆಸುವ ಸಾತ್ವಿಕ ಪಥಗಳು. ಪರಧರ್ಮವನ್ನು ನಿಂದಿಸುವುದು ಭಗವಂತನನ್ನು ನಿಂದಿಸಿದಷ್ಟೆ ಮಹಾಪಾಪ. ನಮ್ಮ ತಾಯಿ ನಮಗೆ ದೇವರು, ಪರರ ತಾಯಿ ನಮಗೆ ದೇವರಲ್ಲ ಅಂತ ಭಾವಿಸೋದು ಎಷ್ಟು ತಪ್ಪೋ, ಹಾಗೆ ನಮ್ಮ ಧರ್ಮದ ದೇವರು ಮಾತ್ರ ದೇವರು, ಬೇರೆ ಧರ್ಮದ ದೇವರು ದೇವರೇ ಅಂತ ದೂಷಿಸೋದು ಅಷ್ಟೇ ತಪ್ಪು. ಸರ್ವ ತಾಯಂದಿರನ್ನು ನಮ್ಮ ತಾಯಿಯಂತೆ ಗೌರವಿಸುವಂತೆ, ಸರ್ವಧರ್ಮಗಳನ್ನು ಅಷ್ಟೇ ಗೌರವಯುತವಾಗಿ ನೋಡಬೇಕು.

ಇದಕ್ಕಾಗಿ ಜಾತಿ-ಧರ್ಮದ ಸಂಕುಚಿತ ಸಂಕೋಲೆಯಿಂದ ಹೊರ ಬರಲು ಜನರು ಮನಸ್ಸು ಮಾಡಬೇಕು. ನಾಗರಿಕತೆ ಎಂದರೆ, ಮನುಷ್ಯ-ಮನುಷ್ಯನಂತೆ ನೋಡುವುದು. ಧಾರ್ಮಿಕತೆ ಎಂದರೆ, ಪ್ರತಿ ಜೀವಿಯಲ್ಲೂ ಸಮಾನ ಜೀವಾತ್ಮವನ್ನು ಕಂಡು ಗೌರವಿಸುವುದು. ಆಧ್ಯಾತ್ಮಿಕತೆ ಎಂದರೆ ಸಕಲ ಜೀವರಾಶಿಗಳ ಆತ್ಮದ ಮನಸ್ಸಿನೊಳಗೆ ಇಳಿದು ತನ್ನಂತೆ ಪರಿಭಾವಿಸಿ ಪೋಷಿಸುವುದು.

ಭಾರತದೇಶ ಹಲವು ಧರ್ಮಗಳ ಬೀಡು, ಹಲವು ಜನಾಂಗಗಳ ನೆಲೆವೀಡು. ಇಲ್ಲಿರುವಷ್ಟು ಧರ್ಮಗಳು, ಜನಾಂಗಗಳು ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಭಾರತ ಎಂದರೆ ಅದೊಂದು ಪುಟ್ಟ ಪ್ರಪಂಚ. ಒಂದು ಭಾಷೆ, ಒಂದು ಧರ್ಮ, ಒಂದು ಜನಾಂಗ ಎಂಬ ಜಾಗತಿಕ ಪರಿಕಲ್ಪನೆ ಇಲ್ಲದೆ, ಕೋಟ್ಯಂತರ ಜನರು ಒಂದು ದೇಶವಾಗಿ ಬದುಕಬಹುದೇ ಎಂದು ಬೆರಗಿನಿಂದ ಜಗತ್ತಿನ ಎಲ್ಲಾ ದೇಶಗಳು ನೋಡುತ್ತಿವೆ. ಇಂಥ ಭಾರತಕ್ಕೆ ಕಳಂಕ ತರುವ ಕೆಲಸವನ್ನು ಯಾರೂ ಮಾಡಬಾರದು.

ಸರ್ವ ಧರ್ಮ-ಸರ್ವ ಜನಾಂಗ ನೆಮ್ಮದಿಯ ನೆಲೆಯಲ್ಲಿ, ಭ್ರಾತೃತ್ವದ ನೆರಳಲ್ಲಿ ಜನರೆಲ್ಲಾ ಬಾಳಬಹುದು. ಇಂಥ ಪವಾಡ ಭಾರತದ ಪವಿತ್ರ ಭೂಮಿಯಲ್ಲಿ ಮಾತ್ರ ಸಾಧ್ಯ. ಮಾನವತೆಯ ದೃಷ್ಟಿಕೋನಕ್ಕೆ ಹೊಂದಿಸಿಕೊಳ್ಳಲಾರದ ಧರ್ಮಾಂಧರು ಇತ್ತೀಚೆಗೆ ಹೆಚ್ಚಾಗುತ್ತಿದ್ದಾರೆ. ವಿವೇಕ-ವಿವೇಚನೆಯಿಂದ ಧರ್ಮವನ್ನು ನೋಡುವ ಬುದ್ಧಿವಂತ ಜನ ಕಡಿಮೆಯಾಗುತ್ತಿದ್ದಾರೆ. ಪರ ಧರ್ಮಗಳನ್ನು ದ್ವೇಷಿಸುವ, ಸ್ವಧರ್ಮದ ಆತ್ಮರತಿಯಲ್ಲಿ ತೊಡಗುವ ಸಂಕುಚಿತ ಜನರ ಅತಿರೇಕ ಭಾವಗಳಿಗೆ ಇತರೆ ಭಾರತೀಯರು ಮನಸ್ಸು ಕೊಡುತ್ತಾ ಹೋದರೆ ಕೋಮುವಾದ ಬಲವಾಗುತ್ತದೆ. ಆಗಒಂದು ಧರ್ಮ, ಒಂದು ಭಾಷೆ, ಒಂದೇ ಜನಾಂಗವಿಲ್ಲದೆ ಯಾವ ದೇಶವೂ ಬದುಕಲಾರದು ಎಂದಾಗುತ್ತದೆ.

ಹಲವು ಧರ್ಮ, ಹಲವು ಭಾಷೆ ಭಿನ್ನ-ಭಿನ್ನ ಜನಾಂಗ ಇದ್ದಾಗ್ಯೂ ಭಾರತ ಒಂದು ದೇಶವಾಗಿ ಬಾಳಬಹುದೆಂಬ ಮಾನವತಾವಾದ ಗೆಲ್ಲಬೇಕಾದರೆ ಮನುಷ್ಯ-ಮನುಷ್ಯರ ನಡುವೆ ವಿಶ್ವಾಸದ ಸೇತುವೆ ನಿರ್ಮಿಸಬೇಕು. ಧರ್ಮಾಂಧತೆ, ಅರಾಜಕತೆ, ಭ್ರಷ್ಟಾಚಾರ, ಬಡತನಗಳನ್ನು ತೊಲಗಿಸಲು ನಾವೆಲ್ಲಾ ಶ್ರಮಿಸದಿದ್ದರೆ ಭವಿಷ್ಯದ ಭಾರತ ವಿನಾಶಕ್ಕೆ ಸಿಲುಕುವ ಅಪಾಯವಿದೆ. ಇಂಥ ದುಃಸ್ಥಿತಿ ಬಾರದಂತೆ ವಿಘ್ನವಿನಾಶಕನೂ, ಸದ್ಬುದ್ಧಿ-ಸದ್ಕ್ರಿಯಾಕಾರಕ ಸಚ್ಚಿದಾನಂದ ಸ್ವರೂಪನಾದ ಗಣಪತಿಯೂ ಎಲ್ಲರಿಗೂ ವಿವೇಕ ನೀಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT