ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಮನೋಬಲಕ್ಕೆ ಧರ್ಮವೇ ಮದ್ದು

ಅಕ್ಷರ ಗಾತ್ರ

ನಾವು ಅಂದುಕೊಂಡಷ್ಟು ಜಗತ್ತು ಸುರಕ್ಷಿತ ತಾಣವಲ್ಲ. ಇಲ್ಲಿ ಹುಟ್ಟಿದ ಪ್ರತಿ ಜೀವಿಯೂ ಬದುಕಿಗಾಗಿ ನಿತ್ಯ ಹೋರಾಟ ಮಾಡಲೇಬೇಕು. ಇದಕ್ಕಾಗಿ ಶತ್ರುವನ್ನು ಪ್ರತಿರೋಧಿಸುವ ಶಕ್ತಿಯನ್ನು ಪಡೆದುಕೊಳ್ಳಲೇಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಗಂಡಾಂತರ ಎರಗುತ್ತದೆ. ಇಂಥ ಆಪತ್ತಿನ ಜಗತ್ತಿನಿಂದ ಸುರಕ್ಷಿತವಾಗಿರಲೆಂದೇ ಬುದ್ಧಿವಂತ ಮಾನವ ಕಾಡು ಕಡಿದು, ನಾಡು ಸೃಷ್ಟಿಸಿದ್ದಾನೆ. ದೇಹಕ್ಕೆ ಅನ್ನ, ಮನಸ್ಸಿಗೆ ನೆಮ್ಮದಿ ಸಿಗಲು ನಾಡಿನೊಳಗೆ ಆಹಾರ-ಮನೋರಂಜನೆ ಉತ್ಪಾದಿಸುತ್ತಿದ್ದಾನೆ. ಇಂಥ ಮಿತಿಯಲ್ಲಿದ್ದಿದ್ದರೆ ಮನುಷ್ಯ ಜಗತ್ತಿನಲ್ಲೇ ಅತ್ಯಂತ ಸುಖಿಯಾಗಿರುತ್ತಿದ್ದ. ಆದರೆ ಅವನ ಮನಸ್ಸಿನೊಳಗೆ ಹುಟ್ಟಿದ ದ್ವೇಷಾಸೂಯೆಗಳು-ಮೈಗಳ್ಳತನಗಳು ಆಜನ್ಮ ದುಃಖಿಯಾಗಿರುವಂತೆ ಮಾಡಿವೆ.

ಮೈಗಳ್ಳತನದಿಂದ ದೇಹ ರೋಗಪೀಡಿತವಾಗುವಂತೆ, ದ್ವೇಷಾಸೂಯೆಗಳಿಂದ ಮನಸ್ಸು ರೋಗಗ್ರಸ್ತವಾಗುತ್ತದೆ. ದೇಹದ ರೋಗಾಣುಗಳು ಕ್ರಿಮಿಗಳ ರೂಪದಲ್ಲಿದ್ದರೆ, ಮನಸ್ಸಿನ ರೋಗಾಣುಗಳು ಸ್ವಾರ್ಥದ ರೂಪದಲ್ಲಿರುತ್ತವೆ. ದೇಹಕ್ಕೆ ಬಾಧಿಸುವ ಕ್ರಿಮಿಗಳು ಹೇಗೆ ಕಣ್ಣಿಗೆ ಕಾಣುವುದಿಲ್ಲವೋ, ಹಾಗೇ ಮನಸ್ಸಿನ ರೋಗದ ಕ್ರಿಮಿಗಳು ಸಹ ಬರಿಗಣ್ಣಿಗೆ ಕಾಣುವುದಿಲ್ಲ. ದೈಹಿಕ ಕ್ರಿಮಿಗಳನ್ನು ಸೂಕ್ಷ್ಮದರ್ಶಕದಿಂದ ನೋಡಿದಂತೆ, ಮಾನಸಿಕ ಬಾಧೆಯ ಕ್ರಿಮಿಗಳನ್ನು ನೋಡಲು ಅತ್ಯಂತ ಸೂಕ್ಷ್ಮವಾದ ‘ಬುದ್ಧಿದರ್ಶಕ’ ಬೇಕು. ಅದಿಲ್ಲದಿದ್ದರೆ ಮಾನವನ ಮಾನಸಿಕ ರೋಗಾಣುವನ್ನು ಕಂಡುಹಿಡಿಯಲು ಸಾಧ್ಯವಿಲ್ಲ.

ಮನುಷ್ಯನ ಸರ್ವನಾಶಕ್ಕೆ ಮಾನಸಿಕ ರೋಗಕ್ಕಿಂತ ದೊಡ್ಡರೋಗ ಮತ್ತೊಂದಿಲ್ಲ. ಏಕೆಂದರೆ, ದೈಹಿಕ ರೋಗಕ್ಕಿಂತ ಮಾನಸಿಕ ರೋಗ ಅತ್ಯಂತ ಅಪಾಯ. ಅದನ್ನು ಸ್ವಲ್ಪ ಸಡಿಲಬಿಟ್ಟರೂ ಮನುಷ್ಯರಿಂದ ಮನುಷ್ಯರಿಗೆ ಬಹಳ ಬೇಗ ಹರಡಿ ಇಡೀ ಮನುಕುಲವನ್ನೇ ಆಪೋಷಣ ತೆಗೆದುಕೊಂಡುಬಿಡುತ್ತದೆ. ಗಾಳಿಗಿಂತ ವದಂತಿಗೆ ವೇಗ ಹೆಚ್ಚಿರುವುದರಿಂದ, ದೈಹಿಕರೋಗಕ್ಕಿಂತ ಮಾನಸಿಕ ರೋಗಗಳು ಮಾನವರನ್ನು ಹೆಚ್ಚು ಬಲಿ ಪಡೆಯುತ್ತವೆ. ದೇಹದಿಂದ ದೇಹಕ್ಕೆ ಹರಡುವ ಸಾಂಕ್ರಾಮಿಕ ಕ್ರಿಮಿಗಳು ಕಾಲದಿಂದ ಕಾಲಕ್ಕೆ ರೂಪಾಂತರ ಹೊಂದುವಂತೆ, ಮಾನಸಿಕ ಸಾಂಕ್ರಾಮಿಕ ಕ್ರಿಮಿಗಳು ಸಹ ಕಾಲದಿಂದ ಕಾಲಕ್ಕೆ ರೂಪಾಂತರವಾಗುತ್ತಲೇ ಇವೆ.

ದೈಹಿಕ ರೋಗಾಣುಗಳು ಅಡುಗೆಮನೆಯಿಂದ ಹುಟ್ಟುವಂತೆ, ಮಾನಸಿಕ ರೋಗಾಣುಗಳು ಸಹ ಮನೆ ಅಂಗಳದಿಂದಲೇ ಹುಟ್ಟುತ್ತವೆ. ಅವು ಅಣ್ಣ-ತಮ್ಮಂದಿರ ಕದನದಿಂದ ಗಡಿಯಾಚೆಯ ಯುದ್ಧದವರೆಗೂ ವ್ಯಾಪಿಸುತ್ತವೆ. ಕೊರೊನಾ ವೈರಸ್‍ನಂತೆ ಕೋಮುವಾದ ಸಹ ನಾನಾ ರೂಪ ತಾಳಿ ದೇಹ ದೇಹವಿರಲಿ ದೇಶದೇಶವನ್ನೆ ಹಾಳುಗೆಡವುತ್ತವೆ. ಮನುಷ್ಯ ಎಂಥ ಅಲ್ಪಮತಿ ಎಂದರೆ, ಕೋಮುವ್ಯಾಧಿ ಕ್ರಿಮಿಗಳಿಗಿಂತ ಕೊರೊನಾ ರೋಗಾಣು ಭಯಾನಕ ಅಂದುಕೊಂಡಿದ್ದಾನೆ. ಮನುಷ್ಯ ಹುಟ್ಟಿದಾಗಿನಿಂದ ತನ್ನ ಮನೋರೋಗದ ಅಪಾಯ ಅರಿಯದೆ ತಪ್ಪು ಮಾಡಿದ್ದಾನೆ.

ದೈಹಿಕರೋಗ ಹುಟ್ಟುವುದಕ್ಕಿಂತ ಮೊದಲೇ ಮಾನಸಿಕರೋಗ ಹುಟ್ಟಿದ್ದರೂ, ಅದರ ನಿರ್ಮೂಲನೆಗೆ ಮನುಷ್ಯ ಆದ್ಯತೆ ಕೊಟ್ಟಿಲ್ಲ. ಆದರೆ ಇದರ ಅಪಾಯ ಅರಿತ ಧರ್ಮಗುರುಗಳು ಮಾನಸಿಕ ಚಿಕಿತ್ಸಕರಾಗಿ ಮನುಷ್ಯನಿಗೆ ವಿವೇಕದ ಪರಿಧಿಯಲ್ಲಿ ಬದುಕುವಂತೆ ಧಾರ್ಮಿಕ ಚೌಕಟ್ಟು ಹಾಕಿಕೊಟ್ಟರು. ದುರದೃಷ್ಟಕ್ಕೆ ಧರ್ಮಗುರುಗಳೇ ರೂಪಿಸಿದ ‘ಧರ್ಮ’ ಎಂಬ ಮದ್ದು ಅಡ್ಡ ಪರಿಣಾಮ ಬೀರಿ, ಮಾನವರಲ್ಲಿ ಮತ್ತಷ್ಟು ಕೋಮುವಾದ ಉಲ್ಬಣಗೊಳ್ಳುವಂತೆ ಮಾಡುತ್ತಿದೆ.

ಮನುಷ್ಯನ ಮಾನಸಿಕ ಆರೋಗ್ಯಕ್ಕೆ ಪೂರಕವಾಗಲೆಂದು ಕಂಡುಹಿಡಿದ ಧರ್ಮ ಎಂಬ ಮದ್ದು ಚೆನ್ನಾಗೇ ಇದೆ. ಆದರೆ ಅದನ್ನು ಬಳಸುವ ಮಾನವರ ಮನಸ್ಸು ಪರಿಶುದ್ದವಾಗಿರಬೇಕು. ಇಲ್ಲದಿದ್ದರೆ ಶ್ರೀಕೃಷ್ಣನ ಧರ್ಮಸೂತ್ರ ಅರಿಯದ ಯಾದವರು ತಮ್ಮೊಳಗೆ ಕಿತ್ತಾಡಿ ನಾಶವಾದಂತೆ, ಸ್ವಾರ್ಥಿಗಳು ಕೋಮುಜಾಡ್ಯವನ್ನು ಅಂಟಿಸಿಕೊಂಡು ನಾಶವಾಗುತ್ತಾರೆ. ಆತ್ಮಶುದ್ಧಿ ಇಲ್ಲದೆ ಮನೋಬಲ ಸಿದ್ಧಿಸುವುದಿಲ್ಲ. ಇದಕ್ಕಾಗಿ ವೇದಶಾಸ್ತ್ರ ಕಲಿಯುವ ಮುನ್ನ ಪುರಾಣಪುಣ್ಯಕಥೆಗಳನ್ನು ಕೇಳಿ ಮನಸ್ಸನ್ನು ಶುದ್ಧೀಕರಿಸಬೇಕು. ಇಂಥ ಪರಿಶುದ್ಧ ಮನಸ್ಸಿನಿಂದ ‘ಧರ್ಮಸಾಕ್ಷಾತ್ಕಾರ’ವಾದರೆ ಅಡ್ಡಪರಿಣಾಮವಿಲ್ಲದೆ ‘ಸಚ್ಚಿದಾನಂದ’ಭಾವ ಎಲ್ಲೆಡೆ ಸ್ಫುರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT