ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ದೇವತೆಗಳ ನಿಂದಿಸಿ ದುರ್ಬಲನಾದ ತಾರಕ

ಅಕ್ಷರ ಗಾತ್ರ

ವಿಷ್ಣು ಮತ್ತು ತಾರಕಾಸುರನ ನಡುವೆ ಯುದ್ಧ ನಡೆಯುತ್ತಿದ್ದಾಗ ಷಣ್ಮುಖನ ಬಳಿ ಬಂದ ಬ್ರಹ್ಮ ‘ಇವರಿಬ್ಬರು ಯುದ್ಧ ಮಾಡುತ್ತಿರುವುದು ವ್ಯರ್ಥ. ನಾನು ವಿಷ್ಣುವಿನಿಂದ ಮರಣವಾಗದಂತೆ ತಾರಕನಿಗೆ ವರವನ್ನು ಕೊಟ್ಟಿರುವೆ. ಶಿವಪುತ್ರನಾದ ನಿನ್ನಿಂದ ಮಾತ್ರ ಪಾಪಿಯಾದ ತಾರಕಾಸುರನನ್ನು ಕೊಲ್ಲಲು ಸಾಧ್ಯ. ನೀನು ಹುಟ್ಟಿರುವುದೇ ತಾರಕನ ಸಂಹರಿಸಲು. ಶಿವಸುತನ ಹೊರತು ಬೇರಾರಿಂದಲೂ ಮರಣ ಬಾರದಂತೆ ತಾರಕನಿಗೆ ನಾನು ವರ ನೀಡಿದ್ದರಿಂದ ಇಂದ್ರ, ವಿಷ್ಣು ಮೊದಲಾದ ದೇವತೆಗಳು ನಿನ್ನ ನೇತೃತ್ವದಲ್ಲಿ ಯುದ್ಧಕ್ಕೆ ಬಂದಿದ್ದಾರೆ. ನೀನಿಲ್ಲದಿದ್ದರೆ ಅವರ್ಯಾರೂ ತಾರಕನೊಂದಿಗೆ ಕಾದಾಡಲು ಬರುತ್ತಿರಲಿಲ್ಲ. ನೀನೇನು ಬಾಲಕನಲ್ಲ, ಸರ್ವೇಶ್ವರನಾದ ಸ್ವಾಮಿ. ಈಗ ನೀನು ಮೂರು ಲೋಕವನ್ನೂ ಜಯಿಸಿ, ಗಹಗಹಿಸುತ್ತಿರುವ ಆ ದೈತ್ಯನನ್ನು ಕೊಂದು ಮೂರು ಲೋಕದವರನ್ನೂ ಸುಖಿಗಳನ್ನಾಗಿ ಮಾಡು’ ಎಂದು ಕೋರಿದ.

ಬ್ರಹ್ಮನ ಮಾತಿನಿಂದ ಷಣ್ಮುಖನು ಪ್ರಸನ್ನವದನನಾಗಿ ‘ನಿನ್ನ ಇಷ್ಟದಂತೆಯೇ ಆಗಲಿ’ ಎಂದು ಹೇಳಿ, ವಿಮಾನದಿಂದ ಇಳಿದು ಕಾಲುನಡಿಗೆಯಲ್ಲೇ ರಣಾಂಗಣಕ್ಕೆ ಹೊರಟ. ಉರಿಯುವ ಬೆಂಕಿಯಂತಿದ್ದ ಅತಿ ಪ್ರಕಾಶಮಾನವಾದ ಶಕ್ತ್ಯಾಯುಧವನ್ನು ಕೈಯಲ್ಲಿ ಹಿಡಿದು ಬರುತ್ತಿದ್ದ ಶಿವಕುಮಾರ, ಅಪಾರವಾದ ತೇಜಸ್ಸಿನಿಂದ ಬೆಳಗುತ್ತಿದ್ದ. ಆತದೇವತೆಗಳಕಣ್ಣಿಗೆ ಸುಂದರ-ಮುಗ್ದ ಬಾಲಕನಂತೆ ಕಾಣುತ್ತಿದ್ದರೆ, ರಾಕ್ಷಸರಿಗೆ ಅತಿ ಭಯಂಕರನಾಗಿ ಕಾಣುತ್ತಿದ್ದ. ಬಾಲಕನಾಗಿದ್ದರೂ ಯುದ್ಧಕ್ಕೆ ಹೆದರದೆ, ತನ್ನೆದುರಾಗಿ ಬರುತ್ತಿರುವ ಬಾಲಸುಬ್ರಹ್ಮಣ್ಯನನ್ನು ನೋಡಿ ತಾರಕಾಸುರ ಅಪಹಾಸ್ಯ ಮಾಡಿ ನಗುತ್ತಾ ದೈತ್ಯರಿಗೆ ‘ಹೇಡಿ ದೇವತೆಗಳು ನನ್ನ ಎದುರಿಸುವ ಧೈರ್ಯವಿಲ್ಲದೆ, ಸಣ್ಣ ಹುಡುಗನನ್ನು ಮುಂದೆ ಬಿಟ್ಟಿದ್ದಾರ’ ಅಂತ ಹೇಳಿ ಗಹಗಹಿಸಿದ.

ನಂತರ ಬಾಲಸುಬ್ರಹ್ಮಣ್ಯನ ನೇತೃತ್ವದಲ್ಲಿ ದೇವತೆಗಳು ನಿಂತಿರುವುದನ್ನು ಕಂಡು ಮತ್ತಷ್ಟು ಅಟ್ಟಹಾಸದಿಂದ ನಗುತ್ತಾ, ದೇವತೆಗಳೆಲ್ಲರನ್ನು ಕ್ಷುಲ್ಲಕವಾಗಿ ನಿಂದಿಸತೊಡಗಿದ. ‘ಎಲೈ ದೇವತೆಗಳಿರಾ, ಯಃಕಶ್ಚಿತ್ ಬಾಲಕನನ್ನು ನನ್ನೊಡನೆ ಯುದ್ಧ ಮಾಡಲು ತಂದು ನಿಲ್ಲಿಸಿರುವಿರಲ್ಲಾ, ನಿಮಗೆ ನಾಚಿಕೆಯಾಗುವುದಿಲ್ಲವೇ? ವಿಷ್ಣು ಮತ್ತು ಶಿವ ಇಬ್ಬರೂ ವೇದಮಾರ್ಗಕ್ಕೆ ವಿರುದ್ಧವಾದ ಕೆಲಸ ಮಾಡಿದ್ದಾರೆ. ಅದರಲ್ಲು ವಿಷ್ಣು ಮೋಸಮಾಡುವವನು. ಮೋಸದಿಂದ ಬಲಿಯನ್ನು ನಿಗ್ರಹಿಸಿದ. ಮಧುಕೈಟಭರೆಂಬ ಅಸುರರನ್ನು ಧೂರ್ತತನದಿಂದ ಕೊಂದ. ದೇವಾಸುರರಿಗೆ ಅಮೃತವನ್ನು ಹಂಚುವಾಗ ಮೋಹಿನಿ ರೂಪ ಧರಿಸಿ ಪಂಕ್ತಿಭೇದ ಮಾಡಿ ವೇದಕ್ಕೆ ವಿರುದ್ಧವಾದ ಕೆಲಸ ಮಾಡಿದ. ಇನ್ನೂ ವಿಷ್ಣುವಿನ ಹಿರಿಯ ಅಣ್ಣನಾದ ಇಂದ್ರ ತನ್ನ ತಂಗಿಯ ಮಗ ಹಾಗೂ ಗುರುವೂ ಆದ ವಿಶ್ವರೂಪನೆಂಬ ಬ್ರಾಹ್ಮಣನ ತಲೆ ಕತ್ತರಿಸಿದ್ದಾನೆ. ವೀರಭದ್ರನೂ ದಕ್ಷಯಜ್ಞದಲ್ಲಿ ಅನೇಕ ಬ್ರಾಹ್ಮಣರನ್ನು ಕೊಂದು ಬ್ರಹ್ಮಹತ್ಯಾದೋಷವನ್ನು ಹೊತ್ತಿದ್ದಾನೆ. ಇಂಥವರು ನನ್ನನ್ನೇನು ಮಾಡಲಾರರು’ ಅಂತ ಹೀನಾಯವಾಗಿ ಮೂದಲಿಸಿದ.

ತಾರಕ ದೇವತೆಗಳನ್ನು ನಿಂದೆಮಾಡಿ ತನ್ನ ಪುಣ್ಯದ ಫಲವನ್ನೆಲ್ಲಾ ಕಳೆದುಕೊಂಡು ದುರ್ಬಲನಾದ. ಯುದ್ಧದಲ್ಲಿ ಇಂದ್ರನ ವಜ್ರಾಯುಧದ ಏಟಿಗೆ ತಾರಕ ಕೆಳಗುರುಳಿದ. ನಂತರ ತಾರಕ ತನ್ನ ಶಕ್ತ್ಯಾಯುಧದಿಂದ ಹೊಡೆದು ಇಂದ್ರನನ್ನು ಕೆಳಗುರುಳಿದ. ಈ ಸಂದರ್ಭದಲ್ಲಿ ತಾರಕ ಕೆಳಬಿದ್ದ ಇಂದ್ರನಿಗೆ ವಜ್ರಾಯುಧದಿಂದ ಹೊಡೆದು ಮಹಾಪಾಪ ಮಾಡಿದ. ಇದರಿಂದ ತಾರಕಾಸುರನ ಶಕ್ತಿ ಮತ್ತಷ್ಟು ಕುಸಿಯಿತು. ಇಂದ್ರನ ರಕ್ಷಣೆಗೆ ವಿಷ್ಣು ಚಕ್ರಾಯುಧ ಪ್ರಯೋಗಿಸಿದ್ದರಿಂದ ತಾರಕ ಕೆಳಗುರುಳಿದ. ಮೇಲೆದ್ದ ತಾರಕ ಶಾಕ್ತ್ಯಾಯುಧದಿಂದ ವಿಷ್ಣುವಿಗೆ ಹೊಡೆದು ಕೆಳಗೆ ಬೀಳಿಸಿದ. ಕೆಳ ಬಿದ್ದ ವಿಷ್ಣುವಿಗೆ ಹೊಡೆಯಲು ಮುನ್ನುಗ್ಗುತ್ತಿದ್ದ ತಾರಕನ ಮೇಲೆ ವೀರಭದ್ರ ತ್ರಿಶೂಲದಿಂದ ತಿವಿದ. ಇದರಿಂದ ಕೆಳಬಿದ್ದ ತಾರಕ, ಮತ್ತೆ ಎದ್ದು ತನ್ನ ಶಕ್ತ್ಯಾಯುಧದಿಂದ ವೀರಭದ್ರನ ಎದೆಗೆ ಪ್ರಹಾರ ಮಾಡಿದ. ಕೋಪೋದ್ರಿಕ್ತನಾದ ವೀರಭದ್ರ ‘ಕಾಲ’ ಎಂಬ ತ್ರಿಶೂಲ ಪ್ರಯೋಗಿಸಲು ಮುಂದಾದಾಗ, ಷಣ್ಮುಖ ಮಧ್ಯಪ್ರವೇಶಿಸಿ ವೀರಭದ್ರನನ್ನು ತಡೆದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT