ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ತಾರಕನ ಸಂಹರಿಸಿದ ಸ್ಕಂದ

ಅಕ್ಷರ ಗಾತ್ರ

ಶತ್ರುನಿಷೂದನಾದ ಶಿವಕುಮಾರನು ವೀರಭದ್ರನನ್ನು ತಡೆದ ನಂತರ, ತಾನೇತಾರಕನವಧೆಮಾಡಲು ದೊಡ್ಡ ಸೈನ್ಯದೊಡನೆ ಗರ್ಜಿಸುತ್ತಾ ಮುನ್ನುಗ್ಗಿದ. ಆ ಸಮಯದಲ್ಲಿ ದೇವತೆಗಳು, ಪ್ರಮಥಗಣಗಳು, ಋಷಿಗಳೆಲ್ಲ ‘ಕುಮಾರನಿಗೆ ಜಯವಾಗಲಿ’ ಎಂದು ಹೇಳುತ್ತಾ ಸ್ತೋತ್ರ ಮಾಡಿದರು. ತಾರಕನಿಗೂ ಕುಮಾರನಿಗೂ ಅತಿ ಭಯಂಕರವಾದ ಯುದ್ಧ ನಡೆಯಿತು. ಮಹಾಪರಾಕ್ರಮಿಗಳಾದ ವೀರರಿಬ್ಬರೂ ಶಕ್ತ್ಯಾಯುಧವನ್ನು ಹಿಡಿದು ಯುದ್ಧ ಮಾಡುತ್ತಿದ್ದರು. ಶಕ್ತ್ಯಾಯುಧದಿಂದ ಹೊಡೆದಾಡುತ್ತಿದ್ದರು. ತಮ್ಮ ಮೇಲೆ ಬೀಳುತ್ತಿದ್ದ ಏಟುಗಳನ್ನು ಪರಸ್ಪರ ತಪ್ಪಿಸಿಕೊಳ್ಳುತ್ತಾ ಕೆರಳಿದ ಸಿಂಹಗಳಂತೆ ಭಯಂಕರವಾಗಿ ಯುದ್ಧ ಮಾಡುತ್ತಿದ್ದರು. ವೈತಾಲಿಕ, ಖೇಚರಕ ಪ್ರಾಪತ ಮುಂತಾದ ಮಂತ್ರಗಳನ್ನು ಉಚ್ಚರಿಸುತ್ತಾ, ನಾನಾವರಸೆಗಳನ್ನು ತೋರುತ್ತಾ ಶಕ್ತ್ಯಾಯುಧವನ್ನು ಪ್ರಯೋಗಿಸುತ್ತಿದ್ದರು. ಯುದ್ಧವಿಶಾರದರಾದ ಅವರಿಬ್ಬರೂ ತಮ್ಮ ಅಪ್ರತಿಮ ಪರಾಕ್ರಮವನ್ನು ತೋರಿಸುತ್ತಿದ್ದರು.

ತಲೆ, ಕುತ್ತಿಗೆ, ತೊಡೆ, ಮಂಡಿ, ಸೊಂಟ, ಎದೆ, ಬೆನ್ನು ಮುಂತಾದ ಸ್ಥಳಗಳಿಗೆ ಗುರಿಯಿಟ್ಟು ಶಕ್ತ್ಯಾಯುಧದಿಂದ ಹೊಡೆದಾಡುತ್ತಿದ್ದರು. ಒಬ್ಬರನ್ನೊಬ್ಬರು ಕೊಲ್ಲಬೇಕೆಂಬ ಆಕಾಂಕ್ಷೆಯಿಂದ ವೀರನಾದವನ್ನು ಮಾಡುತ್ತಾ ಯುದ್ಧ ಮಾಡುವಾಗ ದೇವತೆಗಳೂ ಗಂರ್ಧವರೂ ಕಿನ್ನರರೂ ಆತಂಕದಿಂದ ನೋಡುತ್ತಿದ್ದರು. ಆ ಸಮಯದಲ್ಲಿ ಆಕಾಶದಲ್ಲಿ ಅಶರೀರವಾಣಿ ದೇವತೆಗಳನ್ನು ಸಮಾಧಾನ ಮಾಡಿತು. ‘ತಾರಕಾಸುರನನ್ನು ಕುಮಾರನು ಕೊಲ್ಲುವನು. ನೀವೇನೂ ದುಃಖ ಪಡಬೇಡಿರಿ, ಸುಖವಾಗಿರಿ, ನಿಮಗಾಗಿಯೇ ಶಂಕರನು ಪುತ್ರರೂಪದಿಂದ ಹುಟ್ಟಿರುವನು’ ಎಂದು ಹೇಳಿತು. ಆಕಾಶವಾಣಿ ಕೇಳಿ ದೇವತೆಗಳು ಸಮಾಧಾನ ತಾಳಿದರೆ, ಕುಮಾರನು ಮತ್ತಷ್ಟು ಉತ್ಸಾಹದಿಂದ ತಾರಕಾಸುರನನ್ನು ವಧೆಮಾಡಲು ಪ್ರಮಥಗಳೊಡನೆ ನುಗ್ಗಿ ತನ್ನ ಶಕ್ತ್ಯಾಯುಧದಿಂದತಾರಕನಎದೆಗೆ ಗುರಿಯಿಟ್ಟು ಬಲವಾಗಿ ಹೊಡೆದ. ಅದರ ಏಟನ್ನು ಲೆಕ್ಕಿಸದೆ ದೈತ್ಯಶ್ರೇಷ್ಠನಾದ ತಾರಕನು ಕೋಪಗೊಂಡು ತನ್ನ ಶಕ್ತ್ಯಾಯುಧದಿಂದ ಕುಮಾರನಿಗೆ ತನ್ನ ಆಯುಧದಿಂದ ಹೊಡೆದನು.

ತಾರಕನಶಕ್ತ್ಯಾಯುಧದ ಏಟಿನಿಂದ ಷಣ್ಮುಖನು ಮೂರ್ಛಿತನಾದ. ಸ್ವಲ್ಪ ಹೊತ್ತಿನಲ್ಲಿಯೇ ಚೇತರಿಸಿಕೊಂಡು ಎದ್ದು, ಮದಿಸಿದ ಸಿಂಹದಂತೆ ಅತಿ ಕೋಪದಿಂದ ತನ್ನ ಶಕ್ತ್ಯಾಯುಧದಿಂದ ತಾರಕನನ್ನು ಬಲವಾಗಿ ಹೊಡೆದ. ಇದನ್ನು ಕಂಡು ಮಹರ್ಷಿಗಳೆಲ್ಲರೂ ಕುಮಾರನ ಶೌರ್ಯವನ್ನು ಹೊಗಳಿದರು. ಯುದ್ಧವನ್ನು ನೋಡಲು ಬಂದ ದೇವ-ಗಂಧರ್ವ-ಕಿನ್ನರರೆಲ್ಲರೂ ಯುದ್ಧವನ್ನು ವಿಸ್ಮಯದಿಂದ ನೆಟ್ಟದೃಷ್ಟಿಯಿಂದ ನೋಡುತ್ತಿದ್ದರು. ಆ ಸಮಯದಲ್ಲಿ ವಾಯುವು ಸುಳಿದಾಡಲು ಸಮರ್ಥನಾಗಿ ನಿಶ್ಚಲನಾದ ಸೂರ್ಯನು ಪ್ರಭಾಹೀನನಾದ. ಪರ್ವತ, ವನ, ಮುಂತಾದ ಭೂ ಮೇಲ್ಮೈನ ಎಲ್ಲ ವಸ್ತುಗಳು ನಡುಗಿದವು. ಭಯಭೀತವಾದ ಪರ್ವತಗಳನ್ನು ನೋಡಿ ‘ಎಲೈ ಪರ್ವತಗಳೇ, ನೀವು ಚಿಂತೆಯನ್ನು ಮಾಡಬೇಡಿರಿ. ಈಗ ನೀವು ನೋಡುತ್ತಿರುವಂತೆಯೇ, ಪಾಪಿ ತಾರಕನನ್ನು ಕೊಲ್ಲುವೆ’ ಎಂದು ಸಮಾಧಾನ ಪಡಿಸಿದ. ಗಿರಿಜೆಯನ್ನೂ ಶಂಭುವನ್ನೂ ಸ್ಮರಿಸಿ ಶಕ್ತ್ಯಾಯುಧವನ್ನು ಕೈಗೆ ತೆಗೆದುಕೊಂಡನು. ಶಂಭುಸುತ ಅತ್ಯಂತ ಪ್ರಕಾಶಿಸುತ್ತಿದ್ದ ಶಕ್ತ್ಯಾಯುಧದಿಂದ ತಾರಕನಿಗೆ ಬಲವಾಗಿ ಹೊಡೆದಾಗ ಲೋಕಕಂಟಕನಾದತಾರಕನಶರೀರವು ಜರ್ಜರಿತವಾಗಿ ಕೆಳಗೆ ಬಿದ್ದಿತು. ಎಲ್ಲರೂ ನೋಡುತ್ತಿರುವಂತೆಯೇ, ಕುಮಾರನು ನೀಚನಾದ ತಾರಕನನ್ನು ಸಂಹಾರ ಮಾಡಿದ. ದೇವತೆಗಳೆಲ್ಲರೂ ಉಳಿದ ರಾಕ್ಷಸರನ್ನು ಕೊಂದುಹಾಕಿದರು. ಕೆಲ ರಾಕ್ಷಸರು ಹೆದರಿ ಓಡಿದರು.

ಮಗ ಜಯಶೀಲನಾದನೆಂಬ ವಿಷಯವನ್ನು ತಿಳಿದು ಶಿವನು ಪಾರ್ವತಿಯೊಡನೆ ಅಲ್ಲಿಗೆ ಬಂದ. ವಿಜಯಶಾಲಿಯಾದ ಕುಮಾರನನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಿಸಿದ. ಪಾರ್ವತಿಯೂ ಸಹ ಸ್ಕಂದನನ್ನು ತೊಡೆಯ ಮೇಲೆ ಕೂರಿಸಿಕೊಂಡು ವಾತ್ಸಲ್ಯದಿಂದ ಮುದ್ದಿಸಿದಳು. ಹಿಮವಂತನು ತನ್ನ ಪುತ್ರಮಿತ್ರ-ಬಂಧುಬಳಗದವರೊಡನೆ ಬಂದು ಪಾರ್ವತಿ–ಪರಮೇಶ್ವರನ್ನೂ ಷಣ್ಮುಗನನ್ನೂ ಹೊಗಳಿದ. ಗೀತವಾದ್ಯಗಳಿಂದ ದೇವತೆಗಳು, ಪ್ರಮಥಗಣಗಳು, ಮುನಿಗಳು, ಸಿದ್ಧರು, ಚಾರಣರು ಅಂಜಲಿಬದ್ಧರಾಗಿ ಸ್ತೋತ್ರಮಾಡಿದರು. ಬ್ರಹ್ಮ-ವಿಷ್ಣು ಸಹ ಅವರೊಡನೆ ಸೇರಿ ಕುಮಾರನನ್ನು ಬಹುವಿಧವಾಗಿ ಸ್ತುತಿಸಿದರು. ನಂತರ ಈಶ್ವರನು ಜಗನ್ಮಾತೆಯಾದ ಪಾರ್ವತಿಯೊಡನೆಯೂ ತನ್ನ ಗಣಗಳೊಡನೆ ಕೂಡಿ ಕೈಲಾಸಪರ್ವತಕ್ಕೆ ತೆರಳಿದನು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT