ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ| ಬದುಕೇ ಒಂದು ಹೋರಾಟ

Last Updated 10 ಡಿಸೆಂಬರ್ 2021, 19:42 IST
ಅಕ್ಷರ ಗಾತ್ರ

ಬದುಕು ಅಂದರೇನೆ ಹೋರಾಟ. ಈ ಭೂಮಿಗೆ ಬರುವಾಗಲೂ ಜೀವಕ್ಕಾಗಿ ಹೋರಾಟ ನಡೆಸುತ್ತೇವೆ. ಈ ಭೂಮಿಯಿಂದ ಹೋಗು ವಾಗಲೂ ಮೃತ್ಯು ಜೊತೆ ಹೋರಾಡಿಯೇ ಹೊರಡುತ್ತೇವೆ. ಹುಟ್ಟಿನೊಂದಿಗೆ ಜಯಿಸಿ ಬರುವ ನಾವು, ಸಾವಿನೊಂದಿಗೆ ಸೋತು ನಿರ್ಗಮಿಸುತ್ತೇವೆ. ಅಂದರೆ ಒಂದು ಜೀವದ ಹುಟ್ಟು ಜಯವಾದರೆ, ಸಾವು ಆ ಜೀವದ ಸೋಲು. ನಮ್ಮ ಜನ್ಮ ಜಾತಕವೇ ಹೀಗಿರುವಾಗ, ನಮಗೆ ಹೋರಾಟದ ಬದುಕು ಬೇಡ, ನಿರಾಳವಾದ ಬದುಕು ಬೇಕೆಂದು ಹಂಬಲಿಸುವುದು ಮೂರ್ಖತನ. ಭಗವಂತನ ಸೃಷ್ಟಿಸೂತ್ರದಲ್ಲಿ ಭೂಮಿ ಮೇಲೆ ಹುಟ್ಟಿದ ಪ್ರತಿ ಜೀವಿಯೂ ಬದುಕಿಗಾಗಿ ನಿತ್ಯ ಹೋರಾಡಲೇ ಬೇಕು. ಒಂದು ಕ್ಷಣ ಬದುಕಿನ ಹೋರಾಟ ನಿಲ್ಲಿಸಿದಾಕ್ಷಣವೇ ಮೃತ್ಯು ಬಾಯ್ತೆರೆದು ನಿಲ್ಲುತ್ತದೆ.

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ ಅಂತ ಈಗ ಆಧುನಿಕ ವಿಜ್ಞಾನ ಹೇಳುವ ಸೂತ್ರವನ್ನು, ಸಾವಿರಾರು ವರ್ಷಗಳ ಹಿಂದೆಯೆ, ನಮ್ಮ ಹಿಂದೂ ಧರ್ಮದ ಕರ್ಮಫಲಸೂತ್ರದಲ್ಲಿ ಹೇಳಲಾಗಿದೆ. ಮನುಷ್ಯ ತಾನು ಮಾಡಿದ ಕರ್ಮದ ಫಲವನ್ನ ಅನುಭವಿಸಲೇಬೇಕು ಅನ್ನುವುದರಲ್ಲೇ ಬದುಕಿನ ಸತ್ಯ ಅನಾವರಣಗೊಳ್ಳುತ್ತದೆ. ಭಗವಂತನ ಭೌತಿಕ ಮತ್ತು ಭೌಗೋಳಿಕ ಸೂತ್ರದಂತೆ ನಾವು ಮಾಡುವ ಒಳ್ಳೆಯ ಕೆಲಸಕ್ಕೆ ಪ್ರತಿಫಲವಾಗಿ ಒಳ್ಳೆಯದೇ ಸಿಗುತ್ತದೆ. ನಾವು ಕೆಟ್ಟದ್ದು ಮಾಡಿ ಒಳ್ಳೆಯದನ್ನು ಬಯಸಿದರೆ ಸಿಗಲಾರದು. ಬೇವು ನೆಟ್ಟು ಮಾವು ಬಯಸಿದಂತಾಗುತ್ತದಷ್ಟೆ. ಭಗವಂತನ ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ನೀಡುವ ಸತ್ಯ ಅರಿಯದ ಜನ ನಾನಾ ಕುತಂತ್ರಗಳನ್ನು ಮಾಡಿ, ತಕ್ಕ ಪ್ರತಿಫಲವನ್ನು ಪಡೆಯುತ್ತಿದ್ದಾರೆ. ಮಾಡಿದ ಪಾಪದ ಫಲವನ್ನು ಇಹದಲ್ಲೇ ಅನುಭವಿಸುತ್ತಿದ್ದಾರೆ.

ಶ್ರಮವರಿತ ಜೀವನವೇ ಪಾವನ ಅನ್ನೋ ಮಾತಿದೆ. ಇದು ಅಕ್ಷರಶಃ ಸತ್ಯ. ನಾವು ಶ್ರಮಪಟ್ಟಷ್ಟು ನಮ್ಮ ದೇಹ ಆರೋಗ್ಯವಾಗಿರುತ್ತದೆ. ವಿಶ್ರಮಿಸಿದಷ್ಟು ದೇಹ ರೋಗದ ಗೂಡಾಗುತ್ತದೆ. ನಾವು ಎಷ್ಟು ಕಷ್ಟಪಡುತ್ತೇವೋ ಅಷ್ಟೇ ಸುಖ ಅನುಭವಿಸುತ್ತೇವೆ. ಇಲ್ಲಿ ಸುಖ ಅಂದರೆ, ಹಣವಲ್ಲ. ಜೀವನದ ತೃಪ್ತಿ. ಹಣವನ್ನ ಭಗವಂತ ಸೃಷ್ಟಿಸಿದ್ದಲ್ಲ, ಅದು ಮನುಷ್ಯ ಸೃಷ್ಟಿಸಿದ ಕೃತ್ರಿಮ ಸಾಧನ. ಭಗವಂತನ ದೃಷ್ಟಿಯಲ್ಲಿ ಹಣಕ್ಕೆ ಆದ್ಯತೆ ಇಲ್ಲ, ಗುಣವನ್ನಷ್ಟೆ ಆದರಿಸುತ್ತಾನೆ. ಅದು ನಾವು ಮಾಡುವ ಒಳ್ಳೆಯ ಕಾಯಕದಲ್ಲಿ. ಮಂತ್ರಕ್ಕೆ ಹೇಗೆ ಕಾಯಿ ಉದುರುವುದಿಲ್ಲವೋ ಹಾಗೇ ಹಣದಿಂದ ಯಾವ ಕೆಲಸವೂ ಆಗುವುದಿಲ್ಲ. ಹಣ ಸಹ ಮನುಷ್ಯ ನಿರ್ಮಿಸಿದ ಇಟ್ಟಿಗೆ-ಕಬ್ಬಿಣ-ಗಾರೆಯಂತೆ ಒಂದು ಸಾಧನವಷ್ಟೆ. ಇಟ್ಟಿಗೆ-ಕಬ್ಬಿಣ-ಗಾರೆಯನ್ನು ಶ್ರಮಪಟ್ಟು ಕಟ್ಟಿದಾಗಲೇ ಕಟ್ಟಡ ನಿರ್ಮಾಣವಾಗುವುದು. ಇಲ್ಲಿ ಹಣ ಅನ್ನುವುದು ಗೌಣ. ಶ್ರಮವಷ್ಟೇ ಮನುಷ್ಯನ ಗುಣ ಮೌಲ್ಯ ಅಳೆಯುವ ಮಾಪನ.

ಮನುಷ್ಯರಲ್ಲಿ ನೈಜಕ್ಕಿಂತಲೂ ಕೃತ್ರಿಮಕ್ಕೆ ಹೆಚ್ಚು ಆದ್ಯತೆ. ಹೀಗಾಗಿ ಹಣವಂತರಷ್ಟೆ ಈ ಜಗತ್ತಿನ ಸಾಧಕರು ಅಂದುಕೊಳ್ಳುತ್ತಾರೆ. ಭಗವಂತನ ದೃಷ್ಟಿ ಯಲ್ಲಿ ಶ್ರಮಿಕನಷ್ಟೇ ಸಾಧಕ. ಕಷ್ಟಪಡದೆ ಯಾವ ಸಾಧನೆಯನ್ನೂ ಮಾಡಲಾಗುವುದಿಲ್ಲ. ಪರಿಶ್ರಮದಿಂದಲೇ ನಮ್ಮ ನಾಗರಿಕ ಜಗತ್ತು ರೂಪುಗೊಂಡಿದೆ. ಶ್ರಮವಿಲ್ಲದೆ ಒಂದು ಹುಲ್ಲುಕಡ್ಡಿಯೂ ಈ ಭೂಮಿ ಮೇಲೆ ಬೆಳೆಯಲಾರದು.

ಜಗತ್ತಿನಲ್ಲಿರುವ ಎಲ್ಲಾ ಪ್ರಾಣಿ-ಪಕ್ಷಿಗಳು ಹೊಟ್ಟೆಪಾಡಿಗಾಗಿ ನಿತ್ಯ ಹೋರಾಟ ನಡೆಸುತ್ತಿದ್ದರೆ, ಮನುಷ್ಯ ಮಾತ್ರ ಹೊಟ್ಟೆಪಾಡಿಗಲ್ಲದೆ ತನ್ನ ಷೋಕಿಗಾಗಿಯೂ ಹೋರಾಟ ನಡೆಸುತ್ತಾನೆ. ಸ್ವಾರ್ಥಸುಖಕ್ಕೆ ಅಮಾಯಕರ ಬಲಿ ಕೊಡಲೆಂದೇ ಕಾಂಚಾಣಮೃಗವನ್ನು ಸಾಕಿಕೊಂಡಿದ್ದಾನೆ. ಕಾಂಚಾಣ ಮೃಗ ಇದ್ದರೆ, ಎಲ್ಲ ರನ್ನೂ ಎದುರಿಸಬಹುದು, ಎಲ್ಲವನ್ನೂ ಕಬಳಿಸಬಹುದೆಂದು ಭಾವಿಸಿದ್ದಾನೆ. ‘ತಾನೊಂದು ಬಗೆದರೆ, ದೈವ ಒಂದು ಬಗೆಯುತ್ತದೆ’ ಅನ್ನೋ ಜೀವನದ ಸತ್ಯ ಅರಿಯದೆ ಸೃಷ್ಟಿಗೆ ವಿರುದ್ಧವಾದ ಸುಖ ಬಯಸುತ್ತಿದ್ದಾನೆ. ತಾನೇ ಸೃಷ್ಟಿಸಿಕೊಂಡ ವಿಕೃತ ಬದುಕಿನೊಂದಿಗೆ ಬಂಧಿಯಾಗಿ ಪರಿತಪಿಸುತ್ತಿರುವ ಮಾನವರಿಗೆ ಜ್ಞಾನೋದಯ ವಾದಾಗ ‘ಸಚ್ಚಿದಾನಂದ’ದ ದರ್ಶನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT