ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಬುದ್ಧಿ ಭಾವ ಸಮಾಗಮ ಆಚಾರ್ಯ ರಾಮಾನುಜ

Last Updated 22 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸನಾತನ ಭಾರತದ ಅಧ್ಯಾತ್ಮ ತತ್ತ್ವ ಮತ್ತು ಭಕ್ತಿಪಂಥಗಳ ರೂವಾರಿಗಳಾದ ಆಚಾರ್ಯತ್ರಯರು ಉದಿಸಿದ್ದು ದಕ್ಷಿಣಭಾರತದಲ್ಲಿ. ಎಂಟನೆಯ ಶತಮಾನದಿಂದ ಹನ್ನೆರಡನೆಯ ಶತಮಾನಗಳ ಕಾಲಘಟ್ಟದ ದಕ್ಷಿಣ ಭಾರತದಲ್ಲಿ ಜ್ಞಾನಾನುಸಂಧಾನ ಮತ್ತು ಭಕ್ತಿಮಾರ್ಗಗಳಿಗೆ ಬೇಕಾದ ಸಾಮಾಜಿಕ ಮತ್ತು ರಾಜಕೀಯ ವಾತಾವರಣ ಹುಲುಸಾಗಿ ಇದ್ದುದೂ ಇದಕ್ಕೆ ಕಾರಣವಿರಬಹುದು. ದಕ್ಷಿಣದ ಭಾರತದಲ್ಲೂ ಕರ್ನಾಟಕದ ಭಾಗ್ಯ ಇನ್ನೂ ಹಿರಿದು. ಏಕೆಂದರೆ ಕರ್ನಾಟಕವು ಆಚಾರ್ಯತ್ರಯರ ಕಾರ್ಯಭೂಮಿಯಾಗಿ ಧನ್ಯವಾಗಿದೆ.

ಭಾರತದಲ್ಲಿ ಎಂಟರಿಂದ ಹದಿಮೂರನೆಯ ಶತಮಾನದ ಕಾಲವೆಂದರೆ ಮಾನವನ ಭಾವನಾತ್ಮಕ ಮತ್ತು ಬೌದ್ಧಿಕ ವಿಕಾಸದಲ್ಲಿ ಹೊಸದೇ ಅಧ್ಯಾಯಗಳು ಶುರುವಾದ ಕಾಲ. ಬುದ್ಧಿಯನ್ನು ತಾತ್ತ್ವಿಕ ಚಿಂತನೆಯ ಶೃಂಗಕ್ಕೆ ಮತ್ತು ಭಾವನೆಗಳನ್ನು ಭಕ್ತಿಯ ಉನ್ನತಿಗೆ ಏರಿಸುವ ಕೆಲಸಗಳು ಕ್ರಾಂತಿಯಂತೆ ಭಾರತೀಯ ಸಮಾಜದಲ್ಲಿ ಆರಂಭವಾದ ಕಾಲವದು. ಈ ಕಾಲಭಾಗವೇ ಶಂಕರರು ರಾಮಾನುಜರು ಮತ್ತು ಮಧ್ವರ ಕಾಲವೂ ಹೌದು. ಭಕ್ತಿಯ ವಿಚಾರಕ್ಕೆ ಬಂದಾಗ ರಾಮಾನುಜರ ಕೊಡುಗೆಗಳು ಸಾವಿರ ವರ್ಷಗಳ ಬಳಿಕ ಇವತ್ತಿಗೂ ಗಮನಸೆಳೆಯುವಂಥವು. ರಾಮಾನುಜರು ಪ್ರವರ್ತಿಸಿದ ಪರಂಪರೆಯ ಮುಂದಿನ ಭಾಗವೋ ಎಂಬಂತೆ ಹದಿನೈದು ಹದಿನಾರನೇ ಶತಮಾನದ ಹೊತ್ತಿಗೆಲ್ಲ ಉತ್ತರ ಭಾರತದಲ್ಲೂ ಭಕ್ತಿಪಂಥ ಮಹಾಪ್ರವಾಹವಾಗಿ ಹರಿಯಿತು.

ಆಚಾರ್ಯತ್ರಯರಲ್ಲಿ ಎರಡನೆಯವರಾದ ಆಚಾರ್ಯ ರಾಮಾನುಜರು ಜನಿಸಿದ್ದು ಹನ್ನೊಂದನೆಯ ಶತಮಾನದ ಎರಡನೆಯ ದಶಕದಲ್ಲಿ, ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ. ಮುಂದೆ ಕರ್ನಾಟಕದ ಹೊಯ್ಸಳರ ಬಿಟ್ಟಿದೇವನಿಗೆ ಶ್ರೀವೈಷ್ಣವ ದೀಕ್ಷೆಯಿತ್ತು ಮುಂದೆ ಆತನೇ ವಿಷ್ಣುವರ್ಧನನೆಂಬ ಹೆಸರಿನಿಂದ ಖ್ಯಾತನಾಗಿ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ನಿರ್ಮಿಸುವಲ್ಲಿ ಆಚಾರ್ಯರೇ ಪ್ರೇರಕರಾದರು. ಬಹಳಕಾಲದಿಂದ ಲುಪ್ತವಾಗಿದ್ದ ಮೇಲುಕೋಟೆಯ ಚೆಲುವನಾರಾಯಣಸ್ವಾಮಿಯ ಲೋಹವಿಗ್ರಹವನ್ನು ಪುನಃ ಊರ್ಜಿತಗೊಳಿಸಿದವರು ರಾಮಾನುಜರೆಂಬ ಐತಿಹ್ಯವಿದೆ. ಸದ್ಭಾವ ಮತ್ತು ಭಗವದ್ಭಕ್ತಿಯ ಅರಿವು ಹೊತ್ತಿಸುವಲ್ಲಿ ರಾಮಾನುಜರ ಕೊಡುಗೆ ಅನನ್ಯವಾದ್ದು. ಪಾಂಡಿತ್ಯ, ಭಕ್ತಿ, ಮಾನವ ಕಲ್ಯಾಣ ಮತ್ತು ಸಮಾಜಪ್ರೇಮದ ಮೂರ್ತರೂಪದಂತೆ ಆಚಾರ್ಯರು ಪೂರ್ಣ ನೂರಿಪ್ಪತ್ತು ಸಂವತ್ಸರಗಳ ತುಂಬುಜೀವನ ನಡೆಸಿದವರು.

ಆ ಕಾಲದ ಭಾರತೀಯ ಸನಾತನ ಪರಂಪರೆಯಲ್ಲಿ ಪ್ರಬಲವಾಗಿದ್ದ ಕರ್ಮಠತೆಯನ್ನು ಪ್ರಶ್ನಿಸುವುದು, ಅದನ್ನು ಸುಧಾರಿಸುವುದು ಅಥವಾ ಬದಲಾವಣೆಗಳನ್ನು ತರುವುದು ಯಾವೊಬ್ಬ ಆಚಾರ್ಯರಿಗೂ ಸುಲಭವೇನಾಗಿರಲಿಲ್ಲ. ಅದರಲ್ಲೂ ಭಕ್ತಿಯ ರಸಮಾರ್ಗವನ್ನು ಅಧ್ಯಾತ್ಮದ ರಹದಾರಿಯಾಗಿ ಪ್ರತಿಷ್ಠಾಪಿಸುವುದು ಕಷ್ಟಾತಿಕಷ್ಟದ ಕೆಲಸವಾಗಿತ್ತೆನ್ನಬಹುದು. ತನ್ನ ಸುತ್ತಲಿನ ವಾತಾವರಣದ ಕೊಳೆಯನ್ನು ಕಲಕಿ ಅತ್ಯಂತ ಅವಶ್ಯವಾದ ಹೊಸದೊಂದು ಜೀವನ ಮಾರ್ಗವನ್ನು ಪ್ರತಿಷ್ಠಾಪಿಸಲು ಬಲುದೊಡ್ಡಮಟ್ಟದ ಶಕ್ತಿ ಬೇಕಾಗುತ್ತದೆ. ಅದು ರಾಮಾನುಜಚಾರ್ಯರಲ್ಲಿತ್ತು. ಅವರ ಜೀವನವನ್ನು ನೋಡಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ.

ಉಪಾಸನೆಗೆ ಮತ್ತು ಭಕ್ತಿಗೆ ಯಾವುದನ್ನು ಉಪಾಸಿಸುವೆವೋ ಅಥವಾ ಭಜಿಸುವೆವೋ ಅದರ ಗುಣಗಳು ಮುಖ್ಯ. ಹಾಗಾಗಿಯೇ ಭಕ್ತಿಯ ಪಾರಮ್ಯವನ್ನು ಹೇಳಿದ ರಾಮಾನುಜರ ಸಿದ್ಧಾಂತದಲ್ಲಿ ಬ್ರಹ್ಮವು ಗುಣಗಳಿಂದ ಕೂಡಿದೆ, ಮತ್ತು ಅದರಿಂದಾಗಿಯೇ ಭಕ್ತಿಗೆ ಒದಗುತ್ತದೆ. ಗುಣವಿಶೇಷಗಳಿಂದ ಕೂಡಿದ ಬ್ರಹ್ಮವನ್ನು ಪ್ರತಿಪಾದಿಸಿದ್ದರಿಂದಲೇ ರಾಮಾನುಜರ ಸಿದ್ಧಾಂತವು ವಿಶಿಷ್ಟಾದ್ವೈತವೆನಿಸಿಕೊಳ್ಳುತ್ತದೆ.

ವೇದಾರ್ಥಸಂಗ್ರಹ, ಗೀತಾಭಾಷ್ಯ ಮತ್ತು ಬ್ರಹ್ಮಸೂತ್ರಗಳಿಗೆ ಬರೆದ ಶ್ರೀಭಾಷ್ಯ - ಇವುಗಳು ಆಚಾರ್ಯರ ನಿಶಿತಮತಿತ್ವ ಮತ್ತು ತಿಳಿವಿನ ಉನ್ನತಿಯನ್ನು ಅರುಹುತ್ತವೆ. ಇವೆಲ್ಲಕಿಂತ ಹೆಚ್ಚಾಗಿ ತಾವು ಪ್ರತಿಪಾದಿಸಿದ ಆದರ್ಶಗಳನ್ನು ಅವರು ಬದುಕಿದ ರೀತಿ ಇದೆಯಲ್ಲ, ಅದು ಪಂಡಿತ ಪಾಮರರಿಬ್ಬರಿಗೂ ಅನುಕರಣೀಯವಾದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT