ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಸಮತೋಲನದ ಗುಟ್ಟು

Last Updated 29 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಜಗತ್ತು ಎಂಬುದು ಜಂಜಡ. ಇದರಿಂದ ಮುಕ್ತಿ ಕೊಡು ಎಂಬುದು ಎಲ್ಲ ಭಕ್ತರ ಪ್ರಾರ್ಥನೆ. ಲೋಕದ ಜನನ-ಮರಣ ಚಕ್ರದಿಂದ ಬಿಡುಗಡೆ ಬೇಡುವವನು ಭಕ್ತ. ನಮ್ಮೆಲ್ಲ ಪ್ರಯತ್ನಗಳು ಈ ದ್ವಂದ್ವಗಳಿಂದ ಮುಕ್ತಿ ಪಡೆಯುವುದು, ಮತ್ತೆ ಈ ಗೊಂದಲಕ್ಕೆ ಒಳಗಾಗದಿರುವುದು ಎಂಬೆರಡು ಆಶಯಗಳನ್ನು ಹೊಂದಿವೆ. ಇದಕ್ಕೆ ಗುರು-ಹಿರಿಯರು ತೋರಿರುವ ಮಾರ್ಗ ಅಂತರೀಕ್ಷಣೆ, ಅಂತರಂಗದ ಪ್ರಯಾಣ, ಧ್ಯಾನ ಮತ್ತು ಮೌನ. ಆದರೆ ಜಗದ ಸಂತೆ ನಿತ್ಯವೂ ನಮ್ಮನ್ನು ಸೆಳೆಯುತ್ತಿರುವಾಗ ಈ ಬಗೆಯ ತಪಸ್ಸು ಸಾಧ್ಯವೆ?

ವಿಶೇಷ ಪ್ರಯತ್ನದಿಂದ ಮಾತ್ರ ಇಂದ್ರಿಯಗಳ ನಿಯಂತ್ರಣವನ್ನು ಸಾಧಿಸಬಹುದು. ಆದರೆ ಸದ್ಭಕ್ತರಿಗೆ ಈ ಪ್ರಪಂಚದ ಭಯ ಸತತ. ಶ್ರೀರಾಮಕೃಷ್ಣರ ಹದಿನಾರು ಮಂದಿ ಶಿಷ್ಯರಲ್ಲಿ ಒಬ್ಬರಾದ ಲಾಟು (ಮುಂದೆ ಸ್ವಾಮಿ ಅದ್ಭುತಾನಂದ) ಶ್ರೀರಾಮಕೃಷ್ಣರಲ್ಲಿ ಹೀಗೆ ಪ್ರಾರ್ಥಿಸಿಕೊಳ್ಳುತ್ತಾರೆ: ‘ಗುರುಗಳೇ ನನಗೆ ಮತ್ತೊಂದು ಜನ್ಮ ಉಂಟಾಗದಂತೆ ಆಶೀರ್ವದಿಸಿ. ನಾನು ಪ್ರಪಂಚದ ಬಂಧನಕ್ಕೆ ಒಳಗಾಗಿಬಿಡುತ್ತೇನೆಂಬ ಆತಂಕವಿದೆ.’ ಅದಕ್ಕೆ ಶ್ರೀ ರಾಮಕೃಷ್ಣರು ಉತ್ತರಿಸುತ್ತ: ‘ಅಷ್ಟೊಂದು ಹೆದರಿಕೆ ಏಕೆ? ನಿನಗೆ ಮುಕ್ತಿ ದೊರೆತರೂ ಬೇಕೆಂದಾಗ ನೀನು ಲೀಲೆಗೆ ಇಳಿದು (ಜನ್ಮತಾಳಿ) ಮತ್ತೆ ನಿತ್ಯಸ್ಥಿತಿಗೆ (ಮುಕ್ತಿ ಸ್ಥಿತಿ) ಏರಲು ಸಿದ್ಧನಿರಬೇಕು, ಶಕ್ತನಿರಬೇಕು. ಜನ್ಮ ತಾಳಿದರೆ ನೀನು ಬಂಧನಕ್ಕೆ ಒಳಗಾಗಿಬಿಡುವೆನೆಂಬ ಭಯ ಹೊಂದಿದ್ದರೆ ಅದು ಹೇಗೆ ನಿಜವಾದ ಮುಕ್ತಿ, ಶಾಶ್ವತ ಶಾಂತಿ ಮತ್ತು ವಿವೇಕ ಎನಿಸಿಕೊಂಡೀತು? ಸೀನಿದ ಮಾತ್ರಕ್ಕೆ ನಿನ್ನ ಮೂಗು ಬಿದ್ದು ಹೋಗುವಂತಾದರೆ ಅಂತಹ ಮೂಗನ್ನು ನೀನು ಎಷ್ಟು ಕಾಲ ಇಟ್ಟುಕೊಂಡರೇನು ಪ್ರಯೋಜನ? ನಿನಗೆ ಇದೊಂದು ಸವಾಲಾಗಬೇಕು. ನಾನು ಮತ್ತೆ ಹುಟ್ಟುವುದಿಲ್ಲ ಎಂದು ನೀನು ಹೇಳಬಾರದು. ನೀನೆಷ್ಟು ಬಾರಿ ಹುಟ್ಟಿದರೂ ಮಾಯೆಗೆ ಒಳಪಡುವುದಿಲ್ಲ ಎಂಬ ಆತ್ಮವಿಶ್ವಾಸ ನಿನ್ನದಾಗಿರಬೇಕು. ನಾನು, ನಿನಗೆ ಮರುಜನ್ಮವಿಲ್ಲ ಎಂಬ ವರ ಕೊಡುವುದಿಲ್ಲ ಆದರೆ ನನ್ನ ಮಾತು ಕೊಡುತ್ತೇನೆ, ನೀನು ಮತ್ತೆ ಹುಟ್ಟಿದರೂ ನೀನು ಮಾಯೆಯ ಮುಷ್ಟಿಯಲ್ಲಿ ಸಿಲುಕುವುದಿಲ್ಲ.’

ಮನುಷ್ಯರಲ್ಲಿ ಎರಡು ಬಗೆಯ ಭಯ; ಒಂದು ಸಾವಿನ ಭಯ, ಮತ್ತೊಂದು ಹುಟ್ಟಿನ ಭಯ. ಎರಡೂ ಬೇರೆಯಾದರೂ ಮೂಲದಲ್ಲಿ ಒಂದೇ. ಈಗ ಎಲ್ಲರಿಗೂ ಒತ್ತಾಯದ ಏಕಾಂತ, ‘ತಪೋವಾಸ’. ಈ ಸಂದರ್ಭದಲ್ಲಿ ಶ್ರೀರಾಮಕೃಷ್ಣರ ಮೇಲಿನ ಮಾತುಗಳನ್ನು ಮನನ ಮಾಡಿಕೊಳ್ಳಬೇಕು.

ಜಗತ್ತಿನಲ್ಲಿ ಇರಬೇಕು, ಅಂಟಿಕೊಳ್ಳಬಾರದು. ಹಾಗೇ ಜಗತ್ತಿಗೆ ಹೆದರಲೂ ಬಾರದು. ಈ ಮೌನದಲ್ಲಿ, ಏಕಾಂತದಲ್ಲಿ ನಮ್ಮ ಆಂತರಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುವತ್ತ ಗಮನ ಹರಿಸಬೇಕು. ಶ್ರೀರಾಮಕೃಷ್ಣರು ಕಾಮ-ಕಾಂಚನವನ್ನು ತ್ಯಜಿಸಿ ಎಂದರೂ ಪ್ರಪಂಚದಲ್ಲಿ ಬಾಳಲು ಅಂಜದಿರಿ ಎನ್ನುತ್ತಾರೆ. ಇದು ವಿರೋಧಾಭಾಸ ಎನಿಸಿದರೂ ಇದೇ ವಾಸ್ತವ. ಅಣ್ಣನವರು ‘ಹೆಳವನ ಮಾಡಯ್ಯ ತಂದೆ’ ಎಂದರೆ ಅಕ್ಕಮಹಾದೇವಿ, ‘ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ?’ ಎಂದರು. ಇವೆರಡೂ ವಿರುದ್ಧ ದನಿ ಎನಿಸಿದರೂ ಅಂತರಂಗದ ಕಳಕಳಿ ಒಂದೇ, ಅದೇ ಸಮತೋಲನ ಸಾಧಿಸಬೇಕು ಎಂಬ ಅಭೀಪ್ಸೆ.

ಹೊರಗಿನ ಪ್ರಪಂಚದ ಗದ್ದಲವನ್ನು ಈಗ ಅನಿವಾರ್ಯವೋ ಎಂಬಂತೆ ಕಡಿತಗೊಳಿಸಲಾಗಿದೆ. ಆದರೆ ಒಳಗಿನ ಗದ್ದಲ ಮಾತ್ರ ನಿಂತಿಲ್ಲ. ತೆರೆಯದ ಅಂಗಡಿಗಳತ್ತ ತಿರುಗದ ಬೀದಿಗಳತ್ತ ಇಂದ್ರಿಯಗಳು ಸೆಳೆಯುತ್ತಿವೆ. ಇವುಗಳಿಗೆ ಹೆಳವರಾಗೋಣ. ಆದರೆ ಬೇಕೆಂದಾಗ ಬೇಕಾದಷ್ಟು ಬಳಸಲು ಹಿಂಜರಿಯದೆ ಇರೋಣ. ಏಕೆಂದರೆ ಉದುರಿಹೋಗುವ ಮೂಗಿಗೆ ಹೆದರಿ ಬದುಕುವುದೆಷ್ಟು ದಿನ? ಗುಟ್ಟಿರುವುದು ಸಮತೋಲನದಲ್ಲಿ, ಸಮನ್ವಯದಲ್ಲಿ. ಅದನ್ನು ಸಾಧಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT