ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಹಿಮವಂತನ ಮನೆಗೆ ಬಂದ ಶಿವ

Last Updated 30 ಅಕ್ಟೋಬರ್ 2022, 20:00 IST
ಅಕ್ಷರ ಗಾತ್ರ

ಶಿವನ ಮದುವೆ ದಿಬ್ಬಣವನ್ನು ನೋಡಿ ಹಿಮವಂತ ಆಶ್ಚರ್ಯಗೊಳ್ಳುತ್ತಾನೆ. ಶಿವನ ಮುಂದೆ ಬರುತ್ತಿದ್ದ ಅತಿ ದೊಡ್ಡ ದೇವಸೇನೆಯನ್ನು ನೋಡಿ ಧನ್ಯನಾದೆ ಎಂದುಕೊಳ್ಳುತ್ತಾನೆ. ದೇವತೆಗಳೂ ಹಿಮವಂತನ ಪರಿವಾರವನ್ನು ಮತ್ತು ಆದರಾತಿಥ್ಯವನ್ನು ನೋಡಿ ತುಂಬಾ ಹರ್ಷಿಸುತ್ತಾರೆ.

ಹೀಗೆ ಪರ್ವತಗಳ ಸೇನೆ ಮತ್ತು ದೇವತೆಗಳ ಸೇನೆ ಪರಸ್ಪರ ಸೇರಿದಾಗ, ಪೂರ್ವ ಮತ್ತು ಪಶ್ಚಿಮ ಸಾಗರಗಳೆರಡೂ ಸೇರಿದಂತೆ ಶೋಭಿಸುತ್ತಿದ್ದವು. ಎದುರಿನಲ್ಲಿ ಬರುತ್ತಿರುವ ಸದಾಶಿವನನ್ನು ನೋಡಿ ಹಿಮಾಲಯ ಭಕ್ತಿಯಿಂದ ನಮಸ್ಕರಿಸಿದ. ಶಿವ ನಂದಿಯನ್ನೇರಿ, ಪ್ರಸನ್ನಮುಖ ಮುದ್ರೆಯಿಂದ ಕಂಗೊಳಿಸುತ್ತಿದ್ದ. ಅನೇಕ ಆಭರಣಗಳನ್ನಲಂಕರಿಸಿಕೊಂಡಿದ್ದ ತೇಜಸ್ವಿಯಾದ ಅಂಗಗಳು ಪ್ರಕಾಶಮಾನವಾಗಿ ದಶ ದಿಕ್ಕುಗಳನ್ನು ಬೆಳಗುತ್ತಿದ್ದವು. ಶಿವನು ಸೂಕ್ಷ್ಮವಾದ ಮತ್ತು ನಯವೂ ಆದ ರೇಶಿಮೆ ಬಟ್ಟೆ ಧರಿಸಿ, ಮಂದಹಾಸವನ್ನು ಬೀರುತ್ತಿದ್ದ. ಅವನ ಕಿರೀಟಕ್ಕೆ ಸುಂದರವಾದ ರತ್ನಗಳನ್ನು ಅಳವಡಿಸಲಾಗಿತ್ತು. ಸುತ್ತಿಕೊಂಡಿದ್ದ ಸರ್ಪಗಳೆಲ್ಲವೂ ಆಭರಣಗಳಾಗಿ, ಅವನ ಶರೀರಕಾಂತಿಯು ಅದ್ಭುತವಾಗಿ ಬೆಳಗುತ್ತಿತ್ತು. ದೇವನಾಯಕರು ಚಾಮರಗಳನ್ನು ಹಿಡಿದು ಅವನಿಗೆ ಬೀಸುತ್ತಿದ್ದರು. ಶಿವನ ಬಲಭಾಗದಲ್ಲಿ ಇದ್ದ ವಿಷ್ಣು ಗರುಡನ ಮೇಲೆ ಕುಳಿತಿದ್ದರೆ, ಎಡಭಾಗದಲ್ಲಿ ಬ್ರಹ್ಮ ಮತ್ತವನ ಪರಿವಾರವಿತ್ತು. ಹಿಂಭಾಗದಲ್ಲಿ ಇಂದ್ರ, ಇಂದ್ರನ ಹಿಂದೆ ಇತರೆ ದೇವತೆಗಳು ಇದ್ದರು.

ಹರಿ, ಬ್ರಹ್ಮ ಮೊದಲಾದವರು ಶಿವನನ್ನು ಅನೇಕ ವಿಧವಾಗಿ ಸ್ತುತಿಸುತ್ತಿದ್ದರು. ‘ಶಿವನು ಲೋಕಕ್ಕೆ ಸುಖವನ್ನುಂಟುಮಾಡುವವನು. ನಿರ್ಗುಣನಾದ ಪರಬ್ರಹ್ಮನು. ಆದರೂ ತನ್ನ ಲೀಲೆಯಿಂದಲೇ ಭಕ್ತಾನುಗ್ರಹಕ್ಕಾಗಿ ಶರೀರವನ್ನು ಧರಿಸುವ ಜಗದೊಡೆಯ. ಸರ್ವರಿಗೂ ಅವರವರ ಇಷ್ಟಾರ್ಥಗಳನ್ನು ಕರುಣಿಸುವವನು. ವಸ್ತುತಃ ನಿರ್ಗುಣನಾದ ಶಿವ ತನ್ನ ಮಾಯೆಯಿಂದ ಸಗುಣಸ್ವರೂಪನಾಗುವನು. ಈಶ್ವರರೂಪನಾದ ಅವನು ಭಕ್ತಾಧೀನನು. ದಯಾಮಯನು. ಪ್ರಕೃತಿ ಮತ್ತು ಪುರುಷರಿಗಿಂತಲೂ ಅವನು ಭಿನ್ನನು, ಸರ್ವಶ್ರೇಷ್ಠನು, ಜ್ಞಾನಸ್ವರೂಪನು, ಆನಂದಸ್ವರೂಪನು, ಪ್ರಕಾಶಸ್ವರೂಪನು’ ಅಂತ ಸ್ತುತಿಸುತ್ತಿದ್ದರು.

ಈ ರೀತಿ ಒಂದೆಡೆ ಇರುವ ತ್ರಿಮೂರ್ತಿಗಳನ್ನು ನೋಡಿ ಹಿಮವಂತ ಸಂತೋಷದಿಂದ ಹಿಗ್ಗಿದ. ತನ್ನ ಪರಿವಾರದೊಡನೆ ಶಿವನ ಬಳಿ ಬಂದು ಭಕ್ತಿಯಿಂದ ನಮಸ್ಕರಿಸಿದ. ಶಿವನ ಅಪ್ಪಣೆಯಂತೆ ಹಿಮವಂತ ನಗರಾಭಿಮುಖವಾಗಿ ಮುಂಚೂಣಿಯಲ್ಲಿ ಹೊರಟ. ಹರಿ ಬ್ರಹ್ಮ ಮುನಿಗಳು ಮತ್ತು ದೇವತೆಗಳು ಮೊದಲಾದವರು ಅವನನ್ನು ಹಿಂಬಾಲಿಸಿದರು. ಹಿಮವಂತ ತಾನು ಕಟ್ಟಿಸಿದ ಸುಂದರವಾದ ಮಂದಿರದಲ್ಲಿ ದೇವತೆಗಳು ಮೊದಲಾದವರು ತಂಗಲು ವ್ಯವಸ್ಥೆ ಮಾಡಿದ. ನಂತರ ಬ್ರಹ್ಮವೇದಿಕೆ ಇರುವಲ್ಲಿಗೆ ಬಂದು, ಸುಂದರವಾದ ಚೌಕವೊಂದನ್ನು ನಿರ್ಮಿಸಿದ. ಅದನ್ನು ತೋರಣಗಳಿಂದ ಅಲಂಕರಿಸಿ, ಸ್ನಾನಾದಿಗಳನ್ನು ಮಾಡಿ ವಿವಾಹಮುಹೂರ್ತದ ಪರೀಕ್ಷೆಯನ್ನು ಮಾಡಿಸಿದ. ನಂತರ ಶಿವನಿಗೆ ವರಪೂಜೆಗೆ ಆಮಂತ್ರಣ ಕಳುಹಿಸಿದ.

ಶಿವ ತನ್ನ ಮದುವೆ ದಿಬ್ಬಣದೊಂದಿಗೆ ಹಿಮವಂತನ ಅರಮನೆ ಪ್ರವೇಶಿಸಿದ. ಹಿಮವಂತ ಸಂತಸದಿಂದ ಶಿವನ ಪರಿವಾರವನ್ನು ಬರಮಾಡಿಕೊಂಡು ವರಪೂಜೆಗೆ ಸಿದ್ದನಾದ. ಅದೇ ಸಮಯದಲ್ಲಿ ಮೇನಾದೇವಿಯು ವರನಾದ ಶಿವನನ್ನು ನೋಡಲಿಚ್ಛಿಸಿ, ನಾರದನನ್ನು ತನ್ನ ಬಳಿಗೆ ಬರುವಂತೆ ಹೇಳಿ ಕಳುಹಿಸಿದಳು. ಮೇನಾದೇವಿಯು ನಾರದನಿಗೆ ನಮಸ್ಕರಿಸಿ, ಶಿವನ ಸುಂದರರೂಪವನ್ನು ನೋಡುವ ಕುತೂಹಲ ವ್ಯಕ್ತಪಡಿಸಿದಳು.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ನಲವತ್ತೆರಡನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT