ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಶಿವರಾತ್ರಿ: ಜಗವೆಲ್ಲಾ ಶಿವಮಯವು

ಹುಬ್ಬಳ್ಳಿ–ಧಾರವಾಡ ಮೆಟ್ರೊ
ಅಕ್ಷರ ಗಾತ್ರ

ಶಂಭೋಶಂಕರ, ಭೋಲೇನಾಥ, ಪರಮಾತ್ಮ, ಪರಮೇಶ್ವರ, ಈಶ್ವರ, ಸಾಂಬಸದಾಶಿವ, ನಾಗಾಭರಣ ಎಂಬಿತ್ಯಾದಿಯಾಗಿ ಭಕ್ತರಿಂದ ಅಭಿದಾನಗಳನ್ನು ಪಡೆದ ಶಿವನನ್ನು ಆರಾಧಿಸುವ ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ದಿನ ಉಪವಾಸ, ಶಿವಧ್ಯಾನ, ಶಿವಭಜನೆ, ಶಿವಸ್ತುತಿ, ಜಾಗರಣೆ, ಸಂಗೀತ ಪಾರಾಯಣ ಮಾಡಿ, 4 ಯಾಮಗಳಲ್ಲಿ ಶಿವಪೂಜೆ ನೆರವೇರಿಸುವುದು ಸಂಪ್ರದಾಯ. ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಮಹಾ ಶಿವರಾತ್ರಿ ಈ ಬಾರಿ ಫೆ. 21ರಂದು ಶುಕ್ರವಾರ ಬಂದಿದೆ. ಈ ಹಿನ್ನೆಲೆಯಲ್ಲಿ ಅವಳಿನಗರಗಳೂ ಸೇರಿ ಜಿಲ್ಲೆಯಲ್ಲಿರುವ ಪ್ರಮುಖ ಶಿವದೇಗುಲಗಳ, ಶಿವರಾತ್ರಿ ಆಚರಿಸುವ ತಾಣಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ...

ಅಗಸ್ತ್ಯಮುನಿ ತಪಗೈದ ‘ದಕ್ಷಿಣ ಕಾಶಿ’

ಮಲೆನಾಡ ಸೆರಗು ಧಾರವಾಡದ ಗುಪ್ತಗಾಮಿನಿ ಶಾಲ್ಮಲಾ ನದಿ ತಟದ ತಂಪಿನಲ್ಲಿ ‘ದಕ್ಷಿಣ ಕಾಶಿ’ ಎಂದೇ ಹೆಸರಾಗಿರುವ ಸೋಮೇಶ್ವರ ದೇವಸ್ಥಾನ ನೆಲೆಗೊಂಡಿದೆ. ಧಾರವಾಡ– ಕಲಘಟಗಿ ರಸ್ತೆಯಲ್ಲಿ ಸುಮಾರು 3 ಕಿ.ಮೀ ದೂರ ಕ್ರಮಿಸಿದರೆ ನಮಗೆ ದೇವಸ್ಥಾನ ಗೋಚರಿಸುತ್ತದೆ.

ಈ ದೇಗುಲ ಪೌರಾಣಿಕ ಹಿನ್ನೆಲೆ ಹೊಂದಿದ್ದು, ಅಗಸ್ತ್ಯ ಮಹರ್ಷಿ ತಪ ಗೈದ ತಪೋಭೂಮಿಯಾಗಿದೆ. ಅಗಸ್ತ್ಯ ಮಹರ್ಷಿ ಹಾಗೂ ಅವರ ಪತ್ನಿ ಲೋಪಮುದ್ರಾ ತೀರ್ಥಯಾತ್ರೆಗೆ ಸೋಮೇಶ್ವರಕ್ಕೆ ಬಂದಿದ್ದರಂತೆ. ಮರುದಿನ ಮಹಾಶಿವರಾತ್ರಿ, ಅಂದು ಕಾಶಿ ವಿಶ್ವನಾಥನ ದರ್ಶನ ಮಾಡುವ ಹಂಬಲ ಅವರಿಗೆ ಉಂಟಾಯಿತಂತೆ. ಒಂದೇ ದಿನದಲ್ಲಿ ಅಷ್ಟೊಂದು ದೂರ ಕ್ರಮಿಸುವುದು ಅಸಾಧ್ಯ ಎಂದರಿತ ಲೋಪಾಮುದ್ರಾ ಚಿಂತಾಕ್ರಾಂತಳಾದಾಗ ಅಗಸ್ತ್ಯ ಶಾಲ್ಮಲಾ ನದಿಯಲ್ಲಿ ಸ್ನಾನ ಮಾಡಿ, ಪರಮೇಶ್ವರನ ಧ್ಯಾನಕ್ಕೆ ಕುಳಿತರಂತೆ. ಆಗ, ಪೃಥ್ವಿಯಿಂದ ಈಶ್ವರಲಿಂಗ ಉದ್ಭವಿಸಿ, ಆ ಋಷಿ ದಂಪತಿಗೆ ಅದೇ ಸ್ಥಳದಲ್ಲಿ ಕಾಶಿ ವಿಶ್ವನಾಥನ ದರ್ಶನವಾಯಿತಂತೆ. ಅಂದಿನಿಂದ ಈ ಸ್ಥಳಕ್ಕೆ ‘ದಕ್ಷಿಣ ಕಾಶಿ’ ಎಂಬ ಹೆಸರು ಬಂತು. ಶಿವರಾತ್ರಿಯಂದು ಕಾಶಿಗೆ ಹೋಗಲು ಆಗದವರು ಸೋಮೇಶ್ವರ ದೇವಸ್ಥಾನದಲ್ಲಿನ ಉದ್ಭವ ಲಿಂಗಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ, ಕಾಶಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಸೋಮೇಶ್ವರ ದೇವಸ್ಥಾನದಲ್ಲಿರುವ ಈಶ್ವರ ಲಿಂಗಕ್ಕೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಪುಷ್ಪಾಭಿಷೇಕ, ಪಂಚಾಮೃತ ಅಭಿಷೇಕ, ಭಸ್ಮಾಭಿಷೇಕ ಮಾಡದೇ ಗುಪ್ತಗಾಮಿನಿ ಶಾಲ್ಮಲೆಯ ತಣ್ಣೀರಿನ ಅಭಿಷೇಕ ಮಾಡುವುದೇ ವಿಶೇಷ. ಶಿವರಾತ್ರಿಯಂದು ರಾತ್ರಿ ಸರಿಯಾಗಿ 12.05ಕ್ಕೆ ಶಿವಲಿಂಗಕ್ಕೆ ತಣ್ಣೀರ ಅಭಿಷೇಕ ಮಾಡಿದ ಬಳಿಕ ಶಿವ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಜಕಣಿಬಾವಿ ತುಂಗಭದ್ರೇಶ್ವರ ದೇವಸ್ಥಾನ

ಧಾರವಾಡದ ಜಕಣಿಬಾವಿ ಆವರಣದಲ್ಲಿರುವ ತುಂಗ ಭದ್ರೇಶ್ವರ ದೇವಸ್ಥಾನವನ್ನು 4ನೇ ಶತಮಾನದಲ್ಲಿ ಜಕಣಾಚಾರ್ಯರು ನಿರ್ಮಿಸಿದ್ದಾರೆ ಎಂಬ ಪ್ರತೀತಿ ಇದೆ. ತುಂಗಭದ್ರೇಶ್ವರ ದೇವಾಲಯದಲ್ಲಿ ಸಾಲಿಗ್ರಾಮ ಶಿಲೆಯ ಮೂಲಲಿಂಗವನ್ನು ಪೂಜಿಸುವುದು ವಿಶೇಷ. ಈ ದೇಗುಲದ ವಾಸ್ತುಶೈಲಿ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ.

ಕೆಲಗೇರಿಯ ಕಲ್ಮೇಶ್ವರ ದೇಗುಲ

ಒಂದು ಶತಮಾನದ ಹಿಂದೆ ತಾಲ್ಲೂಕಿನ ಕೆಲಗೇರಿಯಲ್ಲಿ ಗ್ರಾಮದ ಹಿರಿಯರಿಂದ ನಿರ್ಮಾಣವಾದ ಕಲ್ಮೇಶ್ವರ ದೇವಸ್ಥಾನವನ್ನು 2013ರಲ್ಲಿ ಜೀರ್ಣೋದ್ಧಾರ ಮಾಡಿದ್ದು, ಗ್ರಾಮದ ಭಕ್ತರ ಅಪೇಕ್ಷೆಯಂತೆ ದೇವಸ್ಥಾನದ ಗೋಪುರವನ್ನು ಶಿವಲಿಂಗ ಮಾದರಿಯಲ್ಲಿ ನಿರ್ಮಿಸಲಾಗಿದೆ. ಕೆಲಗೇರಿ ಕೆರೆಯ ತಟದಲ್ಲಿರುವುದರಿಂದ ಈ ದೇಗುಲದ ಕಳೆ ಮತ್ತಷ್ಟು ಹೆಚ್ಚಿದೆ.

ಭೋಲೇನಾಥನಿಗೆ ಹತ್ತಾರು ಆಲಯಗಳು

ಧಾರವಾಡ ನಗರದಲ್ಲಿರುವ ಜಯನಗರ ಈಶ್ವರ ದೇವಸ್ಥಾನ, ಕೊಪ್ಪದಕೇರಿಯ ಶಿವಾಲಯ, ಶ್ರೀನಗರದ ಶಿವಾಲಯ, ಶಿವಗಿರಿಯ ಶಿವದೇಗುಲ, ಬ್ರಹ್ಮಲಿಂಗೇಶ್ವರ ದೇವಾಲಯ, ಸೈದಾಪುರದ ಕಲ್ಮೇಶ್ವರ ದೇವಾಲಯ, ಮಂಗಳವಾರಪೇಟೆಯ ನಗರೇಶ್ವರ ದೇವಸ್ಥಾನ, ಮಹಾಂತನಗರದ ಈಶ್ವರ ದೇವಸ್ಥಾನ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಧಾರವಾಡ ತಾಲ್ಲೂಕಿನ ಉಪ್ಪಿನ ಬೆಟಗೇರಿ, ಶಿವಳ್ಳಿ, ಹೆಬ್ಬಳ್ಳಿ, ಅಮ್ಮಿನಬಾವಿ, ಮರೇವಾಡ, ಮತ್ತಿತರ ಗ್ರಾಮಗಳಲ್ಲಿ ಶಿವ ದೇಗುಲಗಳಿವೆ.

ಹುಬ್ಬಳ್ಳಿಯಲ್ಲಿ 35 ಅಡಿ ಎತ್ತರದ ಶಿವಮೂರ್ತಿ

ಹುಬ್ಬಳ್ಳಿಯ ಗೋಕುಲ ರಸ್ತೆಯ ಶಿವಪುರ ಉದ್ಯಾನದಲ್ಲಿ 2008ರಲ್ಲಿ ನಿರ್ಮಿಸಿರುವ ಬೃಹತ್ ಶಿವನ ಮೂರ್ತಿ ದೂರದಿಂದಲೇ ಗಮನ ಸೆಳೆಯುತ್ತದೆ. ಈ ಮೂರ್ತಿ ನಿರ್ಮಿಸಲು ಸುರೇಶ್ ಶೇಟ್ ಕುಟುಂಬದವರು ಹಾಗೂ ಶಿವಪುರ ಕಾಲೊನಿ ನಿವಾಸಿಗಳು ಸಹಕರಿಸಿದ್ದಾರೆ. 15 ಅಡಿ ಎತ್ತರದ ಪೀಠದ ಮೇಲೆ 35 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಿಸಲಾಗಿದೆ.

ಇಲ್ಲಿ ಶಿವನ ಮೂರ್ತಿ ಎದುರಿಗೆ ನಂದಿ ಹಾಗೂ ಶಿವಲಿಂಗದ ಮಧ್ಯದಲ್ಲಿ ಇಡುಗುಂಜಿಯ ಗಣಪತಿ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ವಿಗ್ರಹವನ್ನು ಶಿವಮೊಗ್ಗ ಮೂಲದ ನಾರಾಯಣ ರಾವ್ ನಿರ್ಮಿಸಿದ್ದಾರೆ. ಸಿಮೆಂಟ್ ಹಾಗೂ ಸ್ಟೀಲ್‌ನಿಂದ ನಿರ್ಮಿಸಿರುವ ಈ ಶಿವನ ಮೂರ್ತಿ ರಾಜ್ಯದಲ್ಲೇ ನಾಲ್ಕನೇ ಅತಿ ಎತ್ತರದ ಶಿವನ ಮೂರ್ತಿಯಾಗಿದೆ.

ಉದಯಗಿರಿಯಲ್ಲಿ ವರ್ಧಂತಿ ಜಾತ್ರೆ

ಸತ್ತೂರಿನ ಉದಯಗಿರಿಯಲ್ಲಿರುವ ಮಹೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಶಿವರಾತ್ರಿಯ ಹಿಂದಿನ ದಿನ ದೇವತಾಮೂರ್ತಿಗಳ ಪ್ರಾಣಪ್ರತಿಷ್ಠಾಪನೆಯ ವರ್ಧಂತಿ ಜಾತ್ರಾ ಮಹೋತ್ಸವ ಆಚರಿಸಲಾಗುತ್ತದೆ. ಉದಯಗಿರಿ (ಕೆ.ಎಚ್.ಬಿ. ಕಾಲೊನಿ) ಹೆಸರಿಗೆ ತಕ್ಕಂತೆ ಅವಳಿ ನಗರದಲ್ಲಿ ಮೊದಲು ಸೂರ್ಯೋದಯ ಕಾಣುವ ಅತೀ ಎತ್ತರದಲ್ಲಿರುವ ಪ್ರದೇಶ. 2011ರಲ್ಲಿ ಇಲ್ಲಿನ ಈಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ, ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಜರುಗಿಸಲಾಗಿದೆ. ಪ್ರತಿ ವರ್ಷ ಫೆ. 20ರಿಂದ ಮಾರ್ಚ್ 10ರವರೆಗೆ ಪ್ರತಿದಿನ ಸೂರ್ಯಾಸ್ತದ ವೇಳೆ ಸೂರ್ಯನ ಕಿರಣಗಳು ನೇರವಾಗಿ ಮಹೇಶ್ವರ ಲಿಂಗವನ್ನು ಸ್ಪರ್ಶಿಸುವುದು ಈ ದೇಗುಲದ ವಿಶೇಷ.

ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ

ಹುಬ್ಬಳ್ಳಿಯ ಸ್ಟೇಷನ್‌ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನ ನಗರದ ಪ್ರಾಚೀನ ಶಿವದೇವಾಲಯಗಳ ಪೈಕಿ ಒಂದಾಗಿದೆ. ಈ ದೇಗುಲವನ್ನು ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿರುವ ಉಲ್ಲೇಖವಿದೆ. ಸಿದ್ಧಾರೂಢರು ಪ್ರತಿದಿನ ನಗರ ಪ್ರದಕ್ಷಿಣೆ ಕೈಗೊಂಡಾಗ ಈ ದೇಗುಲಕ್ಕೆ ಬಂದು ಕೆಲಕಾಲ ಶಿವಧ್ಯಾನದಲ್ಲಿ ನಿರತರಾಗುತ್ತಿದ್ದರು. ವರನಟ ಡಾ.ರಾಜಕುಮಾರ್ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಕಾಲದಲ್ಲಿ ಇದೇ ದೇಗುಲದ ಛತ್ರದಲ್ಲಿ ಉಳಿದುಕೊಳ್ಳುತ್ತಿದ್ದರು. ಈಚೆಗಷ್ಟೇ ಈ ದೇಗುಲದಲ್ಲಿರುವ ಶಿವಲಿಂಗಕ್ಕೆ ಭಕ್ತರ ಸಹಯೋಗದಲ್ಲಿ ₹ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 20 ಕೆ.ಜಿ ಬೆಳ್ಳಿಯ ಕವಚವನ್ನು ಸಮರ್ಪಿಸಲಾಗಿದೆ. ಶಿವರಾತ್ರಿ ಅಂಗವಾಗಿ ಫೆ. 21 ಹಾಗೂ 23ರಂದು ಈ ದೇಗುಲದಲ್ಲಿ ಹಲವು ಧಾರ್ಮಿಕ ವಿಧಿವಿಧಾನಗಳು ನೆರವೇರಲಿದ್ದು, ಫೆ. 22ರಂದು ಯಾವುದೇ ಸೇವಾ ಕಾರ್ಯಗಳು ಇರುವುದಿಲ್ಲ.

ಸಿದ್ಧಾರೂಢನ ಸನ್ನಿಧಿಯಲ್ಲಿ ಆಚರಣೆಗಳು

ಹುಬ್ಬಳ್ಳಿ ಸಿದ್ಧಾರೂಢರ ಮಠದ ಶಿವರಾತ್ರಿ ಜಾತ್ರೆ ಈ ಭಾಗದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದೆ. ಫೆ. 16ರಿಂದಲೇ ಮಠದಲ್ಲಿ ಶಿವರಾತ್ರಿ ಆಚರಣೆಗಳು ಆರಂಭವಾಗಿದ್ದು, ಫೆ. 22ರವರೆಗೆ ಮುಂದುವರಿಯಲಿವೆ. ಜಾತ್ರೋತ್ಸವದ ಅಂಗವಾಗಿ ಮಹಾಜಾಗರಣೆ, ಪಲ್ಲಕ್ಕಿ ಮೆರವಣಿಗೆ, ಭಸ್ಮಸ್ನಾನ, ಕೌದಿ ಪೂಜೆ, ಸಂಗೀತೋತ್ಸವ, ಪುರಾಣ ಪಠಣ, ಹರಗುರುಚರ ಮೂರ್ತಿಗಳಿಂದ ಪ್ರತಿನಿತ್ಯ ಪ್ರವಚನ, ವಿಶೇಷ ಪೂಜೆ, ಅಭಿಷೇಕ, ಹೋಮ–ಹವನಗಳು ನೆರವೇರಲಿವೆ.
ಫೆ. 22ರಂದು ಮಹಾರಥೋತ್ಸವ ನೆರವೇರಲಿದೆ. ಸ್ಥಳೀಯರು, ಅಕ್ಕಪಕ್ಕದ ಜಿಲ್ಲೆಗಳ ಭಕ್ತರಷ್ಟೇ ಅಲ್ಲದೆ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶದಿಂದಲೂ ಬರುವ ಭಕ್ತರೂ ಪಾಲ್ಗೊಳ್ಳುತ್ತಾರೆ.

ಮೂರುಸಾವಿರ ಮಠದಲ್ಲಿ ಸಾಮರಸ್ಯ

ಹುಬ್ಬಳ್ಳಿಯ ಮೂರುಸಾವಿರಮಠದಲ್ಲಿ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತವೆ. ಸ್ಥಳೀಯರಷ್ಟೇ ಅಲ್ಲದೆ, ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಬರುವ ಸಾವಿರಾರು ಭಕ್ತರು ಗುರುಸಿದ್ಧೇಶ್ವರನ ಗದ್ದುಗೆಗೆ ನಮಿಸಿ, ಅಜ್ಜನವರ ಆಶೀವಾರ್ದ ಪಡೆಯುತ್ತಾರೆ. ಶರಣ ಸಂಪ್ರದಾಯದ ಈ ಘನ ಮಠದಲ್ಲಿ ಜಾತಿ ಭೇದವಿಲ್ಲದೆ ಹಿಂದೂ, ಮುಸ್ಲಿಮರು ಮಾತ್ರವಲ್ಲದೆ, ಎಲ್ಲ ಧರ್ಮಿಯರೂ ಶಿವರಾತ್ರಿ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಮಾರ್ವಾಡಿ ಜನಾಂಗದವರು ಶಿವರಾತ್ರಿಯ ದಿನ ಇಡೀ ರಾತ್ರಿ ಅಜ್ಜನ ಸನ್ನಿಧಿಯಲ್ಲಿ ಜಾಗರಣೆ ಮಾಡುತ್ತಾರೆ.

ಉಣಕಲ್‌ ಕ್ರಾಸ್‌ನಲ್ಲಿ ರಾಮಲಿಂಗೇಶ್ವರ ಜಾತ್ರೆ

ಹುಬ್ಬಳ್ಳಿಯ ಉಣಕಲ್‌ ಕ್ರಾಸ್‌ನಲ್ಲಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಫೆ. 16ರಿಂದಲೇ ಕಾರ್ಯಕ್ರಮಗಳು ಆರಂಭವಾಗಿದ್ದು, ಫೆ. 21ರಂದು ವಿಶೇಷ ಪೂಜೆ, ಆಚರಣೆಗಳು, 22ರಂದು ಸಂಜೆ 5.30ಕ್ಕೆ ಮಹಾರಥೋತ್ಸವ, 23ರಂದು ಕಡುಬಿನ ಕಾಳಗ ನಡೆಯಲಿವೆ. ಜಾತ್ರೆಯ ಅಂಗವಾಗಿ ಧಾರ್ಮಿಕ ಪ್ರವಚನ, ಸಂಗೀತೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ವಾಣಿಜ್ಯ ನಗರಿಯಲ್ಲಿ ಹಲವು ಶಿವದೇಗುಲ

ಹುಬ್ಬಳ್ಳಿಯ ಸಾಯಿನಗರ, ಶಿರಡಿನಗರ, ವಿಶ್ವೇಶ್ವರನಗರ, ಅಶೋಕನಗರ, ಕೇಶ್ವಾಪುರ, ಗಣೇಶಪೇಟೆ, ದೀವಟಿ ಓಣಿ, ದಾಜಿಬಾನಪೇಟೆ, ಬಮ್ಮಾಪುರ ಓಣಿ, ಮಂಜುನಾಥ ನಗರದ ಚೇತನಾ ಕಾಲೊನಿ, ವಿದ್ಯಾನಗರ, ಸಿದ್ಧೇಶ್ವರ ಪಾರ್ಕ್‌... ಹೀಗೆ ವಿವಿಧೆಡೆ ಇರುವ ಶಿವ ದೇವಾಲಯಗಳಲ್ಲಿ ಶಿವರಾತ್ರಿಯ ಸಂಭ್ರಮಾಚರಣೆ ನಡೆಯಲಿದೆ. ಬರೀ ಶಿವ ದೇವಾಲಯ ಮಾತ್ರವಲ್ಲದೇ, ನಾಗಶೆಟ್ಟಿಕೊಪ್ಪದ ಶಾಂಡಿಲ್ಯಾಶ್ರಮ, ಗೋಕುಲ ರಸ್ತೆಯ ಚಿನ್ಮಯ ಮಿಷನ್‌, ದೇಶಪಾಂಡೆ ನಗರದ ರಾಧಾಕೃಷ್ಣ ದೇವಾಲಯ, ಉಣಕಲ್‌ನಲ್ಲಿರುವ ಸಿದ್ಧಪ್ಪಜ್ಜನ ಗದ್ದುಗೆ, ದುರ್ಗದ ಬೈಲ್‌ನಲ್ಲಿರುವ ದತ್ತಾತ್ರೇಯ ಮಂದಿರ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರಗಳಲ್ಲಿ ಗದ್ದುಗೆ ಪೂಜೆ, ವಿಶೇಷ ಅಲಂಕಾರ, ದ್ವಾದಶ ಜ್ಯೋತಿರ್ಲಿಂಗ ದರ್ಶನ ಸೇರಿ ಶಿವರಾತ್ರಿಯ ವಿಶೇಷ ಆಚರಣೆಗಳು ನಡೆಯಲಿವೆ.

ಅಣ್ಣಿಗೇರಿಯ ಅಮೃತೇಶ್ವರ

ಅಣ್ಣಿಗೇರಿಯ ಆರಾಧ್ಯದೈವ ಅಮೃತೇಶ್ವರನ ಮಹಿಮೆಗಳನ್ನು ಅನೇಕ ಶಿಲಾಶಾಸನಗಳು ಸಾರಿ ಹೇಳುತ್ತವೆ. ಪಟ್ಟಣದ ಜನರು ಹೆಣ್ಣು ಹುಟ್ಟಿದರೆ ಅಮೃತವ್ವ, ಗಂಡು ಹುಟ್ಟಿದರೆ ಅಮೃತಪ್ಪ ಎಂದು ಹೆಸರಿಡುವಷ್ಟು ಅಮೃತೇಶ್ವರನನ್ನು ಆರಾಧಿಸುತ್ತಾರೆ.ಅಣ್ಣಿಗೇರಿ ಮೂಲತಃ ‘ಅನ್ನಗಿರಿ’ ಎಂದು ಹೆಸರಾಗಿತ್ತು. ಈ ಸುಕ್ಷೇತ್ರದಲ್ಲಿ ಶಂಕರ ಲಿಂಗರೂಪದಲ್ಲಿ ಭೂಗರ್ಭದಲ್ಲಿದ್ದನು. ಒಮ್ಮೆ ಬ್ರಹ್ಮ ಸಮಸ್ತ ದೇವತೆಗಳೊಂದಿಗೆ ಈ ಕ್ಷೇತ್ರಕ್ಕೆ ಬಂದು ಶಿವಾರಾಧನೆ ಮಾಡಿದನು. ಆಗ ಲಿಂಗ ಭೂಮಿಯಿಂದ ಹೊರಹೊಮ್ಮಿತು. ಬ್ರಹ್ಮ ಸಪ್ತರ್ಷಿಗಳನ್ನು ಕರೆಯಿಸಿ ವಿಧ್ಯುಕ್ತವಾಗಿ ಲಿಂಗ ಪ್ರತಿಷ್ಠಾಪನೆ ಮಾಡಿದ. ನಂತರ ಬ್ರಹ್ಮ ಅನ್ನಸಂತರ್ಪಣೆಯ ಸಂಕಲ್ಪ ಮಾಡಿದಾಗ ಅನ್ನದ ಗಿರಿಯೇ ಅಲ್ಲಿ ನಿರ್ಮಾಣವಾಯಿತು. ಇದೇ ಕಾರಣಕ್ಕೆ ಈ ಕ್ಷೇತ್ರಕ್ಕೆ ‘ಅನ್ನಗಿರಿ’ ಎಂಬ ಹೆಸರು ಬಂತು. ಅದುವೇ ಕಾಲಾನಂತರ ಅಣ್ಣಿಗೇರಿ ಎಂದು ಹೆಸರಾಯಿತು. ಉದ್ಭವ ಲಿಂಗಕ್ಕೆ ಅಮೃತಾಭಿಷೇಕ ಮಾಡಿದ್ದರಿಂದ ಈ ಲಿಂಗಕ್ಕೆ ಅಮೃತೇಶ್ವರ ಎಂದು ಹೆಸರಿಸಲಾಯಿತು ಎಂಬ ನಂಬಿಕೆ ಈ ಭಾಗದ ಭಕ್ತರದ್ದಾಗಿದೆ. ಶಿವರಾತ್ರಿಯಂದು ಅಣ್ಣಿಗೇರಿಯ ಅಮೃತೇಶ್ವರ, ಗದುಗಿನ ತ್ರಿಕೂಟೇಶ್ವರ, ಹೊಂಬಳದ ಶಂಕರಲಿಂಗ ಈ ಮೂರು ಲಿಂಗಗಳ ದರ್ಶನ ಪಡೆದರೆ ಪುಣ್ಯ ಪ್ರಾಪ್ತವಾಗತ್ತದೆ ಎಂಬುದು ಪ್ರತೀತಿ.

ಕುಂದಗೋಳದ ಶಂಭುಲಿಂಗೇಶ್ವರ

ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಶಂಭುಲಿಂಗೇಶ್ವರ ದೇವಸ್ಥಾನವನ್ನು ಜಕಣಾಚಾರಿ ನಿರ್ಮಿಸಿದ್ದಾರೆ ಎಂಬ ಪ್ರತೀತಿ ಇದೆ. ಇಲ್ಲಿ ಶೃಂಗೇರಿ ಶಂಕರಾಚಾರ್ಯ ಮಠದ ಕ್ಯಾಲೆಂಡರ್ ಪ್ರಕಾರ ಶಿವರಾತ್ರಿ ಆಚರಿಸಲಾಗುತ್ತದೆ. ‘ಈ ದೇವಸ್ಥಾನದೊಳಗೆ ಇರುವ ಶಂಭುಲಿಂಗೇಶ್ವರ ಮೂರ್ತಿ ಕೆಂಪು ಸಾಲಿಗ್ರಾಮದ ಪೀಠದ ಮೇಲಿರುವುದರಿಂದ ಇದು ಕಾಶಿ ವಿಶ್ವೇಶ್ವರನ ಸಮಾನ ಮೂರ್ತಿಯಾಗಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಹೇಳಿದ್ದರು ಎಂಬುದು ವಿಶೇಷ. ಕೆಂಪು ಸಾಲಿಗ್ರಾಮ ಇವುದರಿಂದ ಭಕ್ತರ ಬಯಕೆಗಳು ಶೀಘ್ರವಾಗಿ ಈಡೇರುತ್ತವೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.

ಅಳ್ನಾವರದ ಕಲ್ಮೇಶ್ವರ

ಸ್ಥಳ ಪುರಾಣದ ಪ್ರಕಾರ, ಅಳ್ನಾವರದ ಕಲ್ಮೇಶ್ವರ ದೇವಸ್ಥಾನ ಕದಂಬರ ಕಾಲದಲ್ಲಿ ನಿರ್ಮಾಣವಾಯಿತು ಎಂಬ ಐತಿಹ್ಯವಿದೆ. ಕಾಲಾನಂತರ ಹಲವು ಜೈನ ಮುನಿಗಳು ಇಲ್ಲಿ ತಪಸ್ಸು ಮಾಡಿ, ಸಲ್ಲೇಖನ ವೃತದ ಮೂಲಕ ಪ್ರಾಣತ್ಯಾಗ ಮಾಡಿದರೆಂಬ ಉಲ್ಲೇಖವಿದೆ. ಮೂಲತಃ ಸುಂದರ ವಾಸ್ತುಶಿಲ್ಪ ಹೊಂದಿದ್ದ ಈ ದೇಗುಲ ಸಂಪೂರ್ಣ ನಶಿಸಿದ್ದರಿಂದ ಗ್ರಾಮಸ್ಥರು ಮರುನಿರ್ಮಾಣ ಮಾಡಿದ್ದಾರೆ.

ಗುಡಗೇರಿಯ ಪರ್ವತೇಶ್ವರ

ಗುಡಗೇರಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ 18 ಅಂಕಣದ ಕಲ್ಲಿನ ಗುಡಿ ಪರ್ವತೇಶ್ವರ ದೇವಸ್ಥಾನ. ಈ ದೇವಾಲಯ ಐತಿಹಾಸಿಕ ತಾಣವಾಗಿದ್ದು ಮೊದಲು ಗರ್ಭಗುಡಿಯನ್ನು ಕಲ್ಲಿ
ನಿಂದ, ಪ್ರಾಂಗಣವನ್ನು ಕಟ್ಟಿಗೆಯಿಂದ ನಿರ್ಮಿಸಲಾಗಿತ್ತು. ಕಾಲಾನಂತರ ಶಿಥಿಲಗೊಂಡ ದೇವಸ್ಥಾನವನ್ನು ಗ್ರಾಮಸ್ಥರು ಮುಜರಾಯಿ ಇಲಾಖೆ ನೆರವಿನಿಂದ 1996ರಲ್ಲಿ ಜೀರ್ಣೋದ್ಧಾರ ಮಾಡಿದ್ದು, 1999ರಿಂದ ಈಚೆಗೆ ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯಂದು ಪರ್ವತೇಶ್ವರ ರಥೋತ್ಸವ ನಡೆಸಲಾಗುತ್ತಿದೆ.

ಶಿವರಾತ್ರಿ ಹಿನ್ನೆಲೆ

ಶಿವಪುರಾಣದ ಉಲ್ಲೇಖದಂತೆ– ಬ್ರಹ್ಮ ಹಾಗೂ ವಿಷ್ಣುವಿನ ಶ್ರೇಷ್ಠತೆಯ ವಾಗ್ವಾದ ಶಮನಗೊಳಿಸಲು ಶಿವ, ಅನಂತ– ಅನಾದಿ ಅಗ್ನಿಕಂಬದ ರೂಪ ತಾಳಿ, ಅವರಿಬ್ಬರ ಗರ್ವಭಂಗ ಮಾಡಿ ಲಿಂಗರೂಪದಲ್ಲಿ ನೆಲೆಗೊಳ್ಳುತ್ತಾನೆ. ಅಂದಿನಿಂದ ಶಿವರಾತ್ರಿ ಆಚರಣೆ ಆರಂಭವಾಯಿತು. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ವಿಶೇಷ ಅನುಗ್ರಹ ನೀಡುವುದಾಗಿ ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ.

‘ಶಿವ ರುದ್ರತಾಂಡವವಾಡಿದ್ದು, ಶಿವ– ಪಾರ್ವತಿಯರ ಕಲ್ಯಾಣವಾದದ್ದು, ಶಿವ ಹಾಲಾಹಲ ವಿಷವನ್ನು ಸೇವಿಸಿ ಲೋಕ ರಕ್ಷಣೆ ಮಾಡಿದ್ದು, ಜಲಪ್ರಳಯದಿಂದ ಭೂಲೋಕವನ್ನು ರಕ್ಷಿಸಿದ್ದು ಶಿವರಾತ್ರಿಯ ದಿನ. ಅಂದು ಶಿವ, ಪಾರ್ವತಿಯ ಜತೆ ಭೂ– ಸಂಚಾರ ಮಾಡುತ್ತಾನೆ. ಎಲ್ಲ ಸ್ಥಾವರ ಜಂಗಮ– ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ತಮೋಗುಣದ ಪ್ರತೀಕವಾಗಿರುವ ರಾತ್ರಿಯಲ್ಲಿ ಪ್ರಜ್ಞಾಪೂರ್ವಕವಾಗಿ ಜಾಗರಣೆ ಮಾಡಿದರೆ ಜ್ಞಾನ, ಜ್ಯೋತಿ ಸ್ವರೂಪ ಶಿವನನ್ನು ಒಲಿಸಿಕೊಳ್ಳಬಹುದು’ ಎಂಬ ನಂಬಿಕೆ ಆಸ್ತಿಕರಲ್ಲಿದೆ.

ಶಿವಪೂಜೆ ಮಾಡುವುದು ಹೇಗೆ?

ಶಾಸ್ತ್ರಗಳ ಉಲ್ಲೇಖದಂತೆ ಲಯಸ್ವರೂಪನಾದ ಶಿವನ ಪೂಜೆ ಮತ್ತು ಅಭಿಷೇಕದಲ್ಲಿ ಉತ್ಪತ್ತಿ (ಸೃಷ್ಟಿ) ಪ್ರತೀಕವಾಗಿರುವ ಅರಿಸಿನ, ಕುಂಕುಮ, ಸ್ಥಿತಿ ಸ್ವರೂಪವಾಗಿರುವ ಹಾಲು, ತುಪ್ಪ, ಜೇನುತುಪ್ಪ, ಹಣ್ಣು, ಪಂಚಾಮೃತಗಳನ್ನು ಉಪಯೋಗಿಸುವಂತಿಲ್ಲ. ಲಯ ಸ್ವರೂಪವಾದ ಭಸ್ಮ, ನಿಷ್ಕಾಮ ಕರ್ಮ ಸಂಕೇತವಾದ ಶ್ವೇತ ಅಕ್ಷತೆ, ವೈರಾಗ್ಯ ಸಂಕೇತಿಸುವ ಶ್ವೇತ ಪುಷ್ಪಗಳಾದ ಧೋತ್ರಾ, ಶ್ವೇತಕಮಲ, ಶ್ವೇತಕಣ್ಹೇರ, ಚಮೇಲಿ, ಮಂದಾರ, ನಾಗಸಂಪಿಗೆ, ಪುನ್ನಾಗ, ನಾಗಕೇಶ, ಜೂಯಿ, ಜಾಜಿ, ಮಲ್ಲಿಗೆ ಹೂವುಗಳನ್ನು ಮಾತ್ರ ಶಿವನಿಗೆ ಅರ್ಪಿಸಬೇಕು. ಮಹಾಶಿವರಾತ್ರಿಯಂದು ಮಾತ್ರ ಕೇದಗೆ ಹೂವನ್ನು ಅರ್ಪಿಸಬಹುದು.

ವೈಜ್ಞಾನಿಕ ನೆಲೆಯಲ್ಲಿ ಶಿವರಾತ್ರಿ

ಶಿವರಾತ್ರಿ ಆಚರಣೆ ವೇಳೆ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತದೆ. ಶಿವರಾತ್ರಿಯಂದು ಚಳಿ ಉತ್ತುಂಗದಲ್ಲಿರುತ್ತದೆ. ಈ ವ್ಯತ್ಯಯದಿಂದ ನಮ್ಮಲ್ಲಿ ಉಸಿರಾಟದ ತೊಂದರೆ, ನೆಗಡಿ, ಕೆಮ್ಮು, ಶೀತ ಕಂಡುಬರುತ್ತವೆ. ಈ ಸಂದರ್ಭದಲ್ಲಿ ಉಪವಾಸ ದೇಹವನ್ನು ಸಮತೋಲಿತಗೊಳಿಸುತ್ತದೆ. ಜಾಗರಣೆ ದೇಹದ ಉಷ್ಣ ಹೆಚ್ಚಿಸುತ್ತದೆ. ಶಿವಲಿಂಗಕ್ಕೆ ಅರ್ಪಿಸುವ ಬಿಲ್ವ ಪತ್ರೆ ಹೊರಸೂಸುವ ಆಮ್ಲಜನಕ ಉಸಿರಾಟದ ತೊಂದರೆ ನಿವಾರಿಸುತ್ತದೆ. ಲಿಂಗಾಷ್ಟಕ–ಓಂಕಾರ ಪಠಣ, ಸಹಸ್ರ ನಾಮಾರ್ಚನೆ, ರುದ್ರ ನಮಕ – ಚಮಕಗಳ ಉಚ್ಚಾರ ಹಾಗೂ ಶಿವಸ್ತುತಿಯಿಂದ ಶ್ವಾಸಕಾಂಗ ವ್ಯೂಹಕ್ಕೆ ವ್ಯಾಯಾಮ ದೊರೆತು ಉಸಿರಾಟ ಕ್ರಿಯೆ ಸುಲಭಗೊಳ್ಳುತ್ತದೆ. ಗುರುತ್ವ ಶಕ್ತಿ ಇರುವ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಹೊರಹೊಮ್ಮುವ ಶಕ್ತಿ ತರಂಗಗಳಿಂದ ದೇಹಕ್ಕೆ ನವೋಲ್ಲಾಸ ಲಭಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT