ಗುರುವಾರ , ಆಗಸ್ಟ್ 5, 2021
24 °C

ಶ್ರಾವಣದ ಸಂಭ್ರಮ

ನವೀನ್‌ ಎಚ್‌.ವಿ. Updated:

ಅಕ್ಷರ ಗಾತ್ರ : | |

ಮಂಗಳ ಕಳಸ

ನಮ್ಮ ದೇಶದ ಜ್ಞಾನಪರಂಪರೆ ಕೇವಲ ವೇದ, ಶಾಸ್ತ್ರಗಳ ಪುಸ್ತಕಗಳಲ್ಲಷ್ಟೇ ಅಡಕವಾಗದೆ ನಮ್ಮ ಹಬ್ಬ, ವ್ರತ, ಪರ್ವ, ಉತ್ಸವ ಇನ್ನಿತರ ಜನರ ನಿತ್ಯ ಆಚರಣೆಗಳ ನಡುವೆ ಜೀವಂತವಾಗಿರುವುದನ್ನು ನೋಡಬಹುದು. ನಮ್ಮ ಸಂಸ್ಕೃತಿಯಲ್ಲಿ ಹಬ್ಬ ಆಚರಣೆಗಳು ಜೀವನದ ವಿಶೇಷ ಸಂಭ್ರಮ ಸಂದರ್ಭಗಳು. ನಿತ್ಯದ ವ್ಯಾವಹಾರಿಕ ಬದುಕಿನ ನಡುವೆಯೇ ನಮ್ಮ ಜೀವನ, ಸಮಾಜ, ಪ್ರಕೃತಿಗಳ ಸೌಂದರ್ಯವನ್ನು ಕಾಣಿಸುವ ಆಚರಣೆಗಳು ನಮ್ಮ ದೇಶದಲ್ಲಿ ವಿಪುಲವಾಗಿವೆ. 

ವರ್ಷದಲ್ಲಿನ ಹನ್ನೆರಡು ಮಾಸಗಳಲ್ಲೂ ಹಬ್ಬ, ವ್ರತ, ಆಚರಣೆಗಳಿದ್ದರೂ ಶ್ರಾವಣಮಾಸದಲ್ಲಿನ ಹಬ್ಬಗಳ ಸಂಭ್ರಮವು ಹಿರಿದಾದದ್ದು. ಏಕೆಂದರೆ ಶ್ರಾವಣದ ಹೊತ್ತಿಗೆ ಭೂದೇವಿಯು ಮುಂಗಾರು ಮಳೆಯಲ್ಲಿ ತನ್ನ ಅಭ್ಯಂಜನ ಮುಗಿಸಿ, ಹಸುರನ್ನು ಹೊದ್ದು ನಿಂತಿದ್ದರೆ, ಪ್ರಕೃತಿಮಾತೆಯು ಸೇವಂತಿಗೆ, ಮಲ್ಲಿಗೆ, ನೈದಿಲೆಯಂತಹ ಅಸಂಖ್ಯ ಹೂಗಳನ್ನು ಅರಳಿಸಿ ನಿಂತು ಭೂದೇವಿಯ ಬೆಡಗನ್ನು ಇನ್ನಷ್ಟು ಹೆಚ್ಚಿಸಿರುತ್ತಾಳೆ. ಆದ್ದರಿಂದ ಇದು ಕೇವಲ ಮಾನವರಷ್ಟೇ ಸಂಭ್ರಮಿಸುವ ಮಾಸವಲ್ಲದೆ, ಇಡೀ ಪ್ರಕೃತಿಯೇ ನಮ್ಮ ಜೊತೆ ಆನಂದದಿಂದ ಪಾಲ್ಗೊಳ್ಳುತ್ತದೆ.

ಇಂತಹ ಶ್ರಾವಣ ಮಾಸದಲ್ಲಿನ ವಾರದ ಪ್ರತಿದಿವಸವೂ ಒಂದಿಲ್ಲೊಂದು ಆಚರಣೆಗೆ ನಿಬದ್ಧವಾಗಿರುತ್ತದೆ: ಭಾನುವಾರ ಸೂರ್ಯೋಪಾಸನೆಗೆ ಮೀಸಲಿದ್ದು ಭಾಸ್ಕರನನ್ನು ಪೂಜಿಸಿದರೆ, ಸೋಮವಾರ ಅಭಿಷೇಕಾದಿಗಳಿಂದ ಶಿವನ ವಿಶೇಷ ಉಪಾಸನೆ ಮಾಡಲಾಗುತ್ತದೆ; ಮಂಗಳವಾರ ಮದುವೆಯಾದ ಹೆಣ್ಣುಮಕ್ಕಳು ಮದುಬೆಯಾದ ಮೊದಲ ಐದು ವರ್ಷ ಆಚರಿಸುವ ಮಂಗಳಗೌರೀವ್ರತ, ಬುಧವಾರ ಬುದ್ಧಿಯ ಅಭಿಮಾನಿಯಾದ ಬುಧನನ್ನು ಅರ್ಚಿಸಿದರೆ, ಗುರುವಾರ ಬೃಹಸ್ಪತಿಯನ್ನು ಆರಾಧಿಸುವ ದಿನ; ಇನ್ನು ಶ್ರಾವಣ ಶುಕ್ರವಾರ ಮಹಾಲಕ್ಷ್ಮೀ ದೇವಿಯನ್ನು ವಿವಿಧ ರೂಪದಿಂದ ಅರ್ಚಿಸಿದರೆ, ಶ್ರಾವಣ ಶನಿವಾರ ವಿಷ್ಣುವಿನ ಅವತಾರಗಳಷ್ಟೇ ಅಲ್ಲದೆ ಆಂಜನೇಯ ಮುಂತಾದ ದೇವರ ವಿಶೇಷ ಪೂಜೆಯ ಆಚರಣೆಗೆ ಮೀಸಲಾಗಿರುತ್ತದೆ.

ಶ್ರಾವಣದ ಪ್ರತಿ ದಿವಸಕ್ಕೂ (ತಿಥಿಗೂ) ನಿರ್ದಿಷ್ಟವಾದ ಪೂಜೆ, ವ್ರತಗಳು ತಳುಕು ಹಾಕಿಕೊಂಡಿವೆ: ಶ್ರಾವಣದ ಆರಂಭವನ್ನು ತಿಳಿಸುವ ಮೊದಲ ಹಬ್ಬ ಭೀಮನ ಅಮಾವಾಸ್ಯೆ (ಇದನ್ನು ‘ನಾಗರ ಅಮಾವಾಸ್ಯೆ‘ ಎಂದು ಕರೆಯುತ್ತಾರೆ), ಶ್ರಾವಣದ ನಾಲ್ಕನೆಯ ದಿವಸ ನಾಗಚತುರ್ಥಿ, ಐದನೇ ದಿವಸ ಸಂಭ್ರಮದ ನಾಗರಪಂಚಮಿ, ಆರನೇ ದಿವಸ ಶಿರಿಯಾಳ ಷಷ್ಠಿ, ಸಪ್ತಮಿ ಜಲಾಭಿಮಾನೀದೇವತೆಯಾದ ಶೀತಗೌರೀವ್ರತ, ಅಷ್ಟಮಿ ದುರ್ಗಾದೇವತೆಯ ಪವಿತ್ರಾರೋಹಣ, ನವಮಿ ಕುಮಾರಿವ್ರತವಾದರೆ, ದಶಮಿ ಆಶಾದೇವಿಯ ವ್ರತದ ನಿಯಮವಿದೆ. ಇನ್ನು ಶ್ರಾವಣ ಪೂರ್ಣಿಮೆ ಅಣ್ಣ–ತಂಗಿಯರ ಬೆಸುಗೆಯ ಸಂಕೇತವಾದ ರಕ್ಷಾಬಂಧನವಾದರೆ. ಶ್ರಾವಣ ಕೃಷ್ಣಪಕ್ಷದ ಅಷ್ಟಮಿ ಕೃಷ್ಣನ ಆರಾಧನೆಗೆ ಮೀಸಲಾಗಿರುವ ‘ಗೋಕುಲಾಷ್ಟಮಿ‘. ಇನ್ನು ಕಡೆಯದಾಗಿ ಬರುವ ಅಮಾವಾಸ್ಯೆ ಬೆನಕನ ಅಮಾವಾಸ್ಯೆಯಂದೇ ಜನಜನಿತವಾಗಿದೆ. ಇನ್ನು ಕರ್ನಾಟಕದಲ್ಲಷ್ಟೇ ವಿಶಿಷ್ಟ ಆಚರಣೆಯಾಗಿ ಬೆಳೆದುಬಂದಿರುವ ‘ವರಮಹಾಲಕ್ಷ್ಮೀಹಬ್ಬ‘ ಶ್ರಾವಣದ ಎರಡನೇ ಶುಕ್ರವಾರದಂದು ಆಚರಿಸಲ್ಪಡುತ್ತದೆ.

ಇಷ್ಟು ಹಬ್ಬಗಳು ಸಾಲಾಗಿ ಬಂದರು ಎಲ್ಲ ಕಡೆಯ ಆಚರಣೆಗಳು ಒಂದೇ ರೀತಿಯಲ್ಲಿರುವುದಿಲ್ಲ. ಕುಟುಂಬದಿಂದ ಕುಟುಂಬಕ್ಕೆ, ಸಮಾಜದಿಂದ ಸಮಾಜಕ್ಕೆ, ಅಲ್ಲಿನ ಪರಿಸರಕ್ಕೆ ತಕ್ಕಂತೆ ಅದರ ಆಚರಣೆಗಳು, ಅರ್ಪಿಸುವ ಹೂ, ನೈವೇದ್ಯ, ಭಕ್ಷ್ಯಗಳು ಅಲ್ಲಿನ ಪರಿಸರಕ್ಕೆ ಪೂರಕವಾಗಿರುವಂತೆ ಪರಂಪರೆಯಲ್ಲಿ ನಡೆದುಬಂದಿದೆ.

ಇಂದಿನ ಕರೋನದಂತಹ ಕ್ಷೋಭೆಯ ಸಂದರ್ಭಗಳಲ್ಲಿ ಆರೋಗ್ಯ, ಹಣಕಾಸು ಇನ್ನಿತರ ಸೌಕರ್ಯಗಳು ಬಿಗಿಯಿರುವಾಗ ಈ ಸಂಭ್ರಮ ಪಡುವ ಹಬ್ಬಗಳು ಏತಕ್ಕಾಗಿ ಬರುತ್ತವೋ ಎಂದು ಎಷ್ಟೋ ಜನರಿಗೆ ಅನಿಸುತ್ತದೆ. ಆದರೆ ಈ ಹಬ್ಬಗಳ ಅಂತರಾರ್ಥವನ್ನು ಅವುಗಳು ಬೋಧಿಸುವ ಮೌಲ್ಯವನ್ನು ಅರಿತುಕೊಂಡರೆ ಬಾಹ್ಯ ಆಚರಣೆಗಳು ‘ಗೌಣ‘ವೆನಿಸಿ, ಈ ಆಚರಣೆಗಳು ತಂದುಕೊಡುವ ಶಾಂತಿ, ನೆಮ್ಮದಿಯನ್ನು ತಂದುಕೊಡುತ್ತವೆ; ಇವು ನಮಗೆ ಕೊಡಮಾಡುವ ಮನುಷ್ಯಪ್ರೀತಿಯ ಆನಂದ ಕೆಲಕಾಲವಾದರೂ ದೊರೆತು ಕಷ್ಟಕಾರ್ಪಣ್ಯಗಳನ್ನು ಕ್ಷಣಹೊತ್ತು ಮರೆಯುವುದೇ ಆಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು