ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಕೃತು ಸಂವತ್ಸರ: ದ್ವಾದಶ ರಾಶಿಗಳ ಫಲ

Last Updated 1 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಪ್ಲವ ಸಂವತ್ಸರ ಕಳೆದು, ‘ಶುಭಕೃತು’ ನಾಮ ಸಂವತ್ಸರ ಆರಂಭವಾಗುತ್ತಿದೆ. ಹೆಸರೇ ಸೂಚಿಸುವಂತೆ ಈ ಸಂವತ್ಸರ ಅಧಿಕಾಂಶ ಶುಭವನ್ನೇ ಹೊತ್ತು ತರಲಿದೆ. ಪ್ರತಿ ವರ್ಷವೂ ಚೈತ್ರ ಶುಕ್ಲ ಪಾಡ್ಯಮಿಯಂದು ಯುಗಾದಿ ಹಬ್ಬವನ್ನು ಸಡಗರ–ಸಂಭ್ರಮದಿಂದ ಆಚರಿಸುವ ದಿನ. ಈ ಬಾರಿ ಏಪ್ರಿಲ್ 2 ಶನಿವಾರ ಚಾಂದ್ರಮಾನ ಯುಗಾದಿ. ನಿಸರ್ಗದಲ್ಲಿ ಹೇಗೆ ಕಾಲಗಳು, ಋತುಗಳು ಬದಲಾಗಿ ಪರಿವರ್ತನೆ ಹೊಂದುವುದೋ ಹಾಗೆ ಅದಕ್ಕೆ ಹೊಂದಿಕೊಂಡು ಬರುವ ಸುಖ–ದುಃಖಗಳನ್ನೂ ನಗುಮೊಗದಿಂದ ಸ್ವೀಕರಿಸಿ ಹೊಸ ಜೀವನ ಪ್ರಾರಂಭಿಸಿ ಎನ್ನುವುದೇ ಈ ಹಬ್ಬದ ಸಂದೇಶ.

ದ್ವಾದಶ ರಾಶಿಗಳ ಫಲ: ಯುಗಾದಿಯ ದಿನ ಸೂರ್ಯೋದಯವು 6 ಗಂಟೆ 19 ನಿಮಿಷಕ್ಕೆ ಆಗುವುದರಿಂದ, ಮೀನ ಲಗ್ನ, ಮೀನ ರಾಶಿ, ರೇವತಿ ನಕ್ಷತ್ರದಲ್ಲಿ ಈ ವರ್ಷ ಪ್ರಾರಂಭವಾಗುತ್ತಿದೆ. ಈ ಸಂವತ್ಸರ ಆರಂಭವಾದ 15–20 ದಿನಗಳಲ್ಲೇ ಪ್ರಧಾನ ಗ್ರಹಗಳಾದ ಗುರು, ಶನಿ, ರಾಹು-ಕೇತು ಗ್ರಹಗಳ ಸ್ಥಾನ ಪಲ್ಲಟವಾಗುವುದರಿಂದ ಪಲ್ಲಟದ ನಂತರದ ಫಲವನ್ನೇ ಹೇಳಲಾಗಿದೆ.

ಗುರು, ರಾಹು–ಕೇತು ಗ್ರಹಗಳು 13-4-2022ರಂದು ಸ್ಥಾನ ಪಲ್ಲಟವಾಗುವುವು. ಗುರುಗ್ರಹವು ಮೀನ ರಾಶಿಗೆ, ರಾಹು ಮೇಷಕ್ಕೂ, ಕೇತು ಗ್ರಹವು ತುಲಾ ರಾಶಿಗೂ ಚಲಿಸುವುದು. ಶನಿಗ್ರಹವು 29-4-2022ರಂದು ಕುಂಭರಾಶಿಯನ್ನು ಪ್ರವೇಶಿಸುವುದು.

ಮೇಷ: ಮಿಶ್ರ ಫಲದಾಯಕ. ಈ ರಾಶಿಯ ದ್ವಾದಶದಲ್ಲಿ ಈ ವರ್ಷ ಗುರು ಸಂಚಾರವಿರುವುದಿಂದ ಖರ್ಚು ಹೆಚ್ಚು. ದಾನಧರ್ಮಗಳಿಗೆ, ಶುಭ ಕಾರ್ಯಗಳಿಗೆ ಹಣ ವ್ಯಯ. ಅಧಿಕ ತಿರುಗಾಟ, ಕೆಲಸ ಕಾರ್ಯಗಳಲ್ಲಿ ಅಡಚಣೆ. ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ. ಆದರೆ ಗುರುವಿನ ದುಷ್ಫಲವನ್ನು ಲಾಭದ ಶನಿ ತಕ್ಕಮಟ್ಟಿಗೆ ತಡೆಯುವುದು. ಉದ್ಯೋಗದಲ್ಲಿ ಬದಲಾವಣೆಯ ಯೋಗ. ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ಸ್ಥಿತಿ ಪ್ರಗತಿ, ಕುಟುಂಬದಲ್ಲಿ ಸೌಖ್ಯ, ಬಂಧುಮಿತ್ರರಿಂದ ಸಹಾಯ. ರಾಹು ರಾಶಿಯಲ್ಲೇ ಇದ್ದು ಮನಸ್ಸಿಗೆ ನಾನಾ ರೀತಿಯ ಚಿಂತೆ. ದೇವತಾಕಾರ್ಯಗಳಿಂದ ನೆಮ್ಮದಿ. ಕಬ್ಬಿಣ, ಲೋಹಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಗುರುವಿನ ಆರಾಧನೆ ಅತ್ಯಗತ್ಯ.

ವೃಷಭ: ಶುಭಫಲ. ಗುರು ಲಾಭದಲ್ಲಿರುವುದರಿಂದ ಉತ್ತಮ ಸಮಯ. ಯಶಸ್ಸು, ವೃದ್ಧಿ, ತೇಜಸ್ಸು, ಸರ್ವತ್ರ ವಿಜಯ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ರಾಜಕಾರಣಿಗಳಿಗೂ ಜಯ. ದಶಮದ ಶನಿಯಿಂದ ಅಧಿಕಾರದಲ್ಲಿ ಬಡ್ತಿ; ವ್ಯಾಪಾರ ವೃದ್ಧಿ. ರೈತರಿಗೆ ಶುಭ. ಕಡಲೆಕಾಯಿ ಹಾಗೂ ಕಬ್ಬು ಬೆಳೆಗಾರರಿಗೆ ಲಾಭ. ದ್ವಾದಶದ ರಾಹುವಿನಿಂದ ನಿದ್ರಾಹೀನತೆ, ಅಧಿಕ ಖರ್ಚು. ಆರೋಗ್ಯದಲ್ಲಿ ಎಚ್ಚರ ಅಗತ್ಯ. ವಾಹನ ವಿಷಯದಲ್ಲಿ ಜಾಗ್ರತೆಯಿರಲಿ. ಉಪನಯನ, ವಿವಾಹ ಮುಂತಾದ ಶುಭಕಾರ್ಯಗಳು ನಡೆಯಲಿವೆ. ವಕೀಲರಿಗೆ, ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ. ದುರ್ಗಾರಾಧನೆಯಿಂದ ಅಧಿಕ ಫಲ.

ಮಿಥುನ: ಮಧ್ಯಮ ಫಲ. ಕರ್ಮದ ಗುರು, ಭಾಗ್ಯದ ಶನಿಯಿಂದ ಶುಭಫಲ. ಉದ್ಯೋಗದಲ್ಲಿ ಪ್ರಗತಿ, ಪದೋನ್ನತಿ, ಹೊಸ ಜವಾಬ್ದಾರಿ, ನಿರೀಕ್ಷಿಸುತ್ತಿದ್ದ ವೇತನ ಬಡ್ತಿ ಪ್ರಾಪ್ತಿ. ಮನೆಯಲ್ಲಿ ಶುಭಕಾರ್ಯ. ನವಮದ ಶನಿ ಸಂಚಾರದಿಂದ ಆರೋಗ್ಯದಲ್ಲಿ ಗಮನವಿರಲಿ. ದೂರ ಪ್ರಯಾಣ, ಉದ್ಯೋಗದಲ್ಲಿ ಬದಲಾವಣೆ. ಮನಸ್ಸಿಗೆ ಅಶಾಂತಿ, ನಿಧಾನ ಪ್ರಗತಿ. ಧಾರ್ಮಿಕ ಸಿದ್ಧಿ, ಯೋಗಶಾಸ್ತ್ರಗಳಲ್ಲಿ ಪರಿಣತಿ. ಲಾಭದ ರಾಹುವಿನಿಂದ ವಿದೇಶ ಪ್ರಯಾಣಯೋಗ. ಭೂಮಿಲಾಭದ ಸಾಧ್ಯತೆ. ವ್ಯಾಪಾರದಲ್ಲಿ ಲಾಭ. ಆರೋಗ್ಯದಲ್ಲಿ ಚೇತರಿಕೆ. ಆದರೆ ಪಂಚಮದ ಕೇತುವಿನಿಂದ ಮಕ್ಕಳ ವಿಚಾರದಲ್ಲಿ ಜಾಗ್ರತೆ ಅಗತ್ಯ. ರಾಜಕಾರಣಿಗಳಿಗೆ ಸಾಮಾನ್ಯ ಫಲ. ವಿದ್ಯಾರ್ಥಿಗಳಿಗೆ ಮಧ್ಯಮ ಫಲ. ವಿಷ್ಣುವಿನ ಆರಾಧನೆಯಿಂದ ಅನುಕೂಲಕರ.

ಕರ್ಕಾಟಕ: ಮಿಶ್ರ ಫಲ. ನವಮ ಭಾವದ ಗುರುವಿನಿಂದ ಭಾಗ್ಯೋದಯ, ಸಂತಸ, ಶುಭ ಫಲಗಳು. ಧನಲಾಭ, ಧರ್ಮಾಚರಣೆ; ಮನೆಯಲ್ಲಿ ಮಂಗಳಕಾರ್ಯ. ಇಚ್ಛಿಸಿದ ಕಾರ್ಯದಲ್ಲಿ ಜಯ, ತೀರ್ಥಕ್ಷೇತ್ರ ಭೇಟಿ. ಅಷ್ಟಮ ಭಾವದ ಶನಿಯಿಂದ ಆರೋಗ್ಯದಲ್ಲಿ ಏರುಪೇರು, ಧನಹಾನಿ, ಶತ್ರುಗಳಿಂದ ತೊಂದರೆ, ಮನೆಯಲ್ಲಿ ಅಶಾಂತಿಯ ವಾತಾವರಣ, ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ದಶಮ ಭಾವದ ರಾಹುವಿನಿಂದ ರಾಜಕಾರಣಿಗಳಿಗೆ ತೊಂದರೆ. ಉದ್ಯೋಗದಲ್ಲಿ ವಿಘ್ನ. ಕೋರ್ಟ್ ಕೇಸ್ ಇದ್ದಲ್ಲಿ ವಿಳಂಬ. ಭೂಸಂಬಂಧಿತ ಕಾರ್ಯದಲ್ಲಿ ವಿಘ್ನ. ರೈತಾಪಿ ವರ್ಗಕ್ಕೂ ವಿದ್ಯಾರ್ಥಿಗಳಿಗೂ ಶುಭ. ಸಂಕಷ್ಟ ಗಣಪತಿಯನ್ನು ಆರಾಧಿಸಿ.

ಸಿಂಹ: ಮಿಶ್ರ ಫಲ. ಅಷ್ಟಮದ ಗುರುವಿನಿಂದ ಚೋರ ಭಯ, ಅಗ್ನಿಭೀತಿ. ಅನಾರೋಗ್ಯ ಸಮಸ್ಯೆ, ಅಧಿಕಾರಿಗಳಿಂದ ಕಿರಿಕಿರಿ, ಮೋಸ ಹೋಗುವ ಭಯ. ಸಪ್ತಮದ ಶನಿಯಿಂದ ರೋಗ, ದುಃಖ, ವಿವಾಹಾದಿ ಕಾರ್ಯಗಳಲ್ಲಿ ವಿಳಂಬ, ಧನಹಾನಿ, ಉದ್ಯೋಗದಲ್ಲಿ ತೊಂದರೆ, ಸಂಬಂಧಿಕರೊಡನೆ ಮನಸ್ತಾಪ. ನವಮದ ರಾಹುವಿನಿಂದ ಮನೆಯಲ್ಲಿ ಅನೇಕ ತೊಂದರೆ. ತೇಜೋಹಾನಿ, ಮನೋವ್ಯಥೆ. ಆದರೂ ಆತ್ಮವಿಶ್ವಾಸವಿರಲಿ. ರಾತ್ರಿ ಕಳೆದ ನಂತರ ಹಗಲು ಬರಲೇಬೇಕು; ಹಾಗಾಗಿ ಸದ್ಗುರುಗಳ ಹಾಗೂ ಹಿರಿಯರ ಆಶೀರ್ವಾದದಿಂದ ಕಷ್ಟಗಳ ಪ್ರಮಾಣ ವರ್ಷದ ಅಂತ್ಯದ ಹೊತ್ತಿಗೆ ಕಡಿಮೆಯಾಗುವುದು. ಉಮಾಮಹೇಶ್ವರನನ್ನು ಆರಾಧಿಸಿ.

ಕನ್ಯಾ: ಗುರುಬಲವಿದೆ. ಬಹುತೇಕ ಶುಭಫಲವಿದೆ. ವಿವಾಹದ ಅಪೇಕ್ಷಿಗಳಿಗೆ ಕಂಕಣಬಲವಿದೆ. ಇಚ್ಛಿಸಿದ ಕಾರ್ಯದಲ್ಲಿ ಜಯ, ವ್ಯಾಪಾರದಲ್ಲಿ ಲಾಭ, ಗೌರವ ಲಭ್ಯ. ಅರ್ಧಕ್ಕೆ ನಿಂತ ಕಾರ್ಯಗಳು ಪೂರ್ಣಗೊಳ್ಳಲಿವೆ. ಪಂಚಮ ಶನಿಯ ಬಿಡುಗಡೆಯಿಂದ ಆರೋಗ್ಯದಲ್ಲಿ ಸುಧಾರಣೆ. ಧನ-ಧಾನ್ಯಾಭಿವೃದ್ಧಿ, ಬಂಧು ಬಳಗದವರೊಡನೆ ಸಂತಸ, ಕೃಷಿಯಲ್ಲಿ ಅಭಿವೃದ್ಧಿ, ಸೇವಕವರ್ಗದಿಂದ ಸಹಾಯ ಲಭ್ಯ. ಧಾರ್ಮಿಕ ಕ್ಷೇತ್ರ ಭೇಟಿ. ಆದರೆ ಅಷ್ಟಮ ರಾಹುವಿನಿಂದ ತೊಂದರೆಗಳೂ ಎದುರಾಗುವುವು. ಅನಾರೋಗ್ಯ, ಧನಹಾನಿ, ದುಃಖ, ಮಾನಸಿಕ ಕ್ಷೋಭೆ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯಕಲಹ, ಬಂಧುವೈರ, ಕೃಷಿಕರಿಗೆ ಲಾಭ. ದುರ್ಗಾಸಪ್ತಶತಿಯ ಪಾರಾಯಣದಿಂದ ಅನುಕೂಲ.

ತುಲಾ: ಗುರುಬಲವಿಲ್ಲ. ಪಂಚಮ ಶನಿ, ಆರರ ಗುರು ಸ್ವಲ್ಪ ವ್ಯತಿರಿಕ್ತ ಫಲಗಳನ್ನು ಕೊಡುತ್ತಾರೆ. ಆದರೆ ಆರರ ಅಧಿಪತಿ ಆರರಲ್ಲೇ ಇರುವುದು ಸಮಾಧಾನ. ವೃಥಾ ಪ್ರಯಾಣ, ಅನಾರೋಗ್ಯ, ವ್ಯಾಪಾರದಲ್ಲಿ ನಷ್ಟ. ವಿದ್ಯಾಭ್ಯಾಸದಲ್ಲಿ ಏರುಪೇರು, ವ್ಯಾಪಾರದಲ್ಲಿ ಅಲ್ಪ ಲಾಭ. ವ್ಯವಸಾಯದಲ್ಲಿ ಕಡಿಮೆ ಲಾಭ. ಪಂಚಮದ ಶನಿಯಿಂದ ಮನಸ್ಸಿಗೆ ಖೇದ, ಕಲಹ, ಉದ್ಯೋಗದಲ್ಲಿ ಬಡ್ತಿ ವಿಳಂಬ, ಅಪಜಯ, ಧನಹಾನಿ. ಆದರೆ ಶನಿ ತುಲಾರಾಶಿಗೆ ಯೋಗಕಾರಕನಾಗಿರುವುದರಿಂದ ಶನಿಯ ಬಾಧೆಗಳು ಅಷ್ಟು ಬಾಧಿಸುವುದಿಲ್ಲ. ಸಪ್ತಮದ ರಾಹುವಿನಿಂದ ದಾಂಪತ್ಯ ವಿರಸ, ಸ್ನೇಹಿತರೊಡನೆ ವಿರೋಧ, ಅಸಮಾಧಾನ. ಕಬ್ಬಿಣ ವ್ಯಾಪಾರಿಗಳಿಗೆ ಶುಭ. ರೈತರಿಗೆ ಭೂಮಿ ವಿಚಾರದಲ್ಲಿ ಕಲಹಗಳಿದ್ದರೆ ಇತ್ಯರ್ಥವಾಗುವುದು. ಗುರುಹಿರಿಯರ ಆಶೀರ್ವಾದದಿಂದ ಮತ್ತು ಕುಲದೇವತಾ ಅನುಗ್ರಹದಿಂದ ವರ್ಷದ ಅಂತ್ಯದಲ್ಲಿ ನೆಮ್ಮದಿ ಸಿಗಲಿದೆ. ಆಂಜನೇಯನನ್ನು ಆರಾಧಿಸಿ.

ವೃಶ್ಚಿಕ: ಆಶಾದಾಯಕ ಫಲ. ಗುರುಬಲವಿದೆ. ಸಂತಾನಸುಖವಿದ್ದು ಭಾಗ್ಯೋದಯವಾಗುತ್ತದೆ. ಕಾರ್ಯ ದಲ್ಲಿ ಜಯ, ಸಜ್ಜನರ ಸಹವಾಸ, ಸರ್ವರಿಂದ ಮನ್ನಣೆ, ಕೀರ್ತಿ, ಗೌರವ ಗಳಿಕೆ. ಮನೆಯಲ್ಲಿ ಶುಭಕಾರ್ಯ, ರಾಜಕಾರಣಿಗಳಿಗೆ ಶುಭಸಮಯ. ಚತುರ್ಥದ ಶನಿಯಿಂದ ಆರೋಗ್ಯದಲ್ಲಿ ಏರುಪೇರು, ಆಸ್ತಿನಾಶ, ಸಹೋದರರಲ್ಲಿ ವಾಗ್ವಾದ, ಮನೆಯಲ್ಲಿ ಅಶಾಂತಿ ವಾತಾವರಣ. ಷಷ್ಠ ಭಾವದ ರಾಹುವಿನಿಂದ ಶುಭಫಲ. ಧನ-ಧಾನ್ಯಾಭಿವೃದ್ಧಿ, ಕೃಷಿಯಲ್ಲಿ ಅಭಿವೃದ್ಧಿ, ಬಂಧುಮಿತ್ರರ ಸಹಾಯ. ಮಕ್ಕಳ ವಿಷಯದಲ್ಲಿ ಎಚ್ಚರ. ಶತ್ರುಧ್ವಂಸ. ಕೋರ್ಟ್ ಕೇಸಿದ್ದರೆ ಜಯ. ಬಾಲಾ ತ್ರಿಪುರಸುಂದರಿಯ ಆರಾಧನೆಯಿಂದ ಅನುಕೂಲ.

ಧನುಸ್ಸು: ಸಾಧಾರಣ ಫಲ. ಸುಖಭಾವದ ಗುರುವಿನಿಂದ ಸಂತಸದ ಸಮಯ. ಕುಟುಂಬಸೌಖ್ಯ, ಸಮಾಜದಲ್ಲಿ ಮನ್ನಣೆ, ಕೀರ್ತಿ–ಪ್ರಶಸ್ತಿಗಳು ಪ್ರಾಪ್ತಿ. ರಾಜಕಾರಣದಲ್ಲಿ ಉನ್ನತ ಸ್ಥಾನದ ಲಾಭ. ಆರ್ಥಿಕ ಸ್ಥಿತಿ ಉತ್ತಮ. ತೃತೀಯ ಶನಿಯಿಂದ ಯತ್ನಿಸಿದ ಕಾರ್ಯದಲ್ಲಿ ಜಯ, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ, ಗೃಹನಿರ್ಮಾಣ ಯೋಗ. ಪಂಚಮದ ರಾಹುವಿನಿಂದ ಮಕ್ಕಳಿಗೆ ದೃಷ್ಟಿದೋಷ, ಅನಾರೋಗ್ಯ ಸಮಸ್ಯೆ ಕಾಡಲಿದೆ. ಮನಸ್ಸಿಗೆ ಸಂತಾಪ, ದುಃಖ, ಬಂಧುವರ್ಗದಲ್ಲಿ ಕಲಹ. ದತ್ತಾತ್ರೇಯನ ಆರಾಧನೆಯಿಂದ ಅಶುಭಫಲದ ತೀವ್ರತೆ ಕಡಿಮೆಯಾಗುವುದು.

ಮಕರ: ಶುಭಾಶುಭ ಫಲ. ರಾಶ್ಯಾಧಿಪತಿಯೂ ಶನಿಯಾಗಿ, ಸಂವತ್ಸರಾಧಿಪತಿಯೂ ಶನಿಯೂ ಆಗಿರುವನು. ತೃತೀಯದ ಗುರು ಅಧಿಕ ದುಃಖ, ಧನಹಾನಿ, ಭೂಮಿ ಸಂಬಂಧಿತ ಕಾರ್ಯಗಳಲ್ಲಿ ವಿಳಂಬ. ಮಾನಸಿಕ ಒತ್ತಡ. ದ್ವಿತೀಯದ ಶನಿಯಿಂದ ವೃಥಾ ತಿರುಗಾಟ, ಅಧೈರ್ಯ, ಹಣದ ಮುಗ್ಗಟ್ಟು. ಚತುರ್ಥದ ರಾಹುವಿನಿಂದ ಕುಟುಂಬದಲ್ಲಿ ಅಸಮಾಧಾನ, ಆರೋಗ್ಯದ ಕಡೆ ಗಮನವಿರಲಿ. ಆದರೆ ಭಾಗ್ಯಸ್ಥಾನ ನೋಡುತ್ತಿರುವ ಗುರುವಿನಿಂದ ನೆಮ್ಮದಿ. ಮಕರ ರಾಶ್ಯಾಧಿಪತಿಯೂ ಶನಿಯೇ ಆಗಿರುವುದರಿಂದ ಶನಿಯ ಬಾಧೆಗಳ ತೀವ್ರತೆ ಕಡಿಮೆಯಿರುವುದು. ಹನುಮಾನ್ ಚಾಲೀಸ್ ಪಠಣದಿಂದ ಶುಭ.

ಕುಂಭ: ಮಿಶ್ರಫಲ. ದ್ವಿತೀಯ ಗುರುವಿನಿಂದ ಗುರುಬಲವಿದ್ದು, ಸಮೃದ್ಧಿ, ಸೌಭಗ್ಯವೃದ್ಧಿ. ಕೀರ್ತಿಗೌರವ, ಸನ್ಮಾನ. ಶುಭಕಾರ್ಯಗಳು ಕೈಗೂಡುವುವು. ವ್ಯಾಪಾರದಲ್ಲಿ ಅಭಿವೃದ್ಧಿ. ಶನಿಯು ರಾಶಿಯಲ್ಲೇ ಇದ್ದು ಸೋಮಾರಿತನ, ಕಾರ್ಯದಲ್ಲಿ ವಿಳಂಬ, ಕೋಪ, ಚಿಂತೆ ಕಾಡುವುದು. ಸಂಗಾತಿಯ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ. ಸ್ವಂತ ಉದ್ಯಮಿಗಳಿಗೆ ಲಾಭ. ಶನಿಯು ಸ್ವಸ್ಥಾನದಲ್ಲೇ ಇರುವುದರಿಂದ ಶನಿಯ ಬಾಧೆ ತೀವ್ರತರವಾಗಿ ಬಾಧಿಸುವುದಿಲ್ಲ. ತೃತೀಯ ರಾಹುವಿನಿಂದ ಕಾರ್ಯಗಳಲ್ಲಿ ಮುನ್ನುಗ್ಗುವ ಧೈರ್ಯ, ಕಾರ್ಯದಲ್ಲಿ ಜಯ, ಸಂತಸದ ವಾತಾವರಣ, ಧರ್ಮಕಾರ್ಯದಲ್ಲಿ ಆಸಕ್ತಿ, ದಾನ ಧರ್ಮಗಳಿಗೆ ವೆಚ್ಚ, ಉದ್ಯಮಿಗಳಿಗೆ ಲಾಭ. ಹನುಮಂತನನ್ನು ಸ್ಮರಿಸಿ.

ಮೀನ: ಮಿಶ್ರಫಲ. ಜನ್ಮಗುರುಃ ನರೋ ದುಃಖಂ – ಎಂಬ ಮಾತಿನಂತೆ ದುಃಖವೂ ಕಾಡುವುದು. ಆದರೆ ಜನ್ಮದ ಗುರು ಬಲಿಷ್ಠನಾಗಿರುವುದರಿಂದ ನೆಮ್ಮದಿ, ಕಷ್ಟ ನಷ್ಟಗಳಿಂದ ಪಾರಾಗುವ ಸಮಯ. ಸ್ಥಿರಾಸ್ತಿ ಯೋಗ, ಸರ್ಕಾರಿ ನೌಕರಿ ಲಾಭ, ಆಸ್ತಿಕಲಹ ಇತ್ಯರ್ಥ. ರಾಜಕಾರಣಿಗಳಿಗೆ ಶುಭ ಸಮಯ. ದ್ವಾದಶದ ಶನಿಯಿಂದ ವಾಹನಗಳೆಡೆ ಎಚ್ಚರ ಅಗತ್ಯ. ವೃಥಾ ತಿರುಗಾಟ. ಧನವ್ಯಯ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಪ್ರಗತಿ. ದ್ವಿತೀಯದ ರಾಹುವಿನಿಂದ ವೃಥಾ ವಾಗ್ವಾದ, ತೇಜೋ ಹಾನಿ, ವೈರತ್ವ. ಮಕ್ಕಳಿಗೆ, ಉದ್ಯೋಗಸ್ಥರಿಗೆ ಶುಭ ಸಮಯ. ವಿದೇಶ ಪ್ರಯಾಣಯೋಗ. ನಡೆಯುತ್ತಿರುವ ದಶೆ ಚೆನ್ನಾಗಿದ್ದರೆ ಅಶುಭ ಫಲದ ತೀವ್ರತೆ ಕಡಿಮೆಯಿರುವುದು. ಗುರುಹಿರಿಯರ ಆಶೀರ್ವಾದದ ಜೊತೆಗೆ ಕುಲದೇವತಾ ಅನುಗ್ರಹದಿಂದ ಆದಾಯಕ್ಕೆ ಕೊರತೆಯಿರುವುದಿಲ್ಲ. ಗುರುವನ್ನು ಆರಾಧಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT