ಮಂಗಳವಾರ, ಏಪ್ರಿಲ್ 7, 2020
19 °C
ರಾತ್ರಿ ಇಡೀ ಜಾಗರಣಾ ಮಹೋತ್ಸವ, ಶಿವನ ಭಜನೆ

ದೇವನಗರಿಯಲ್ಲಿ ಶಿವ ಧ್ಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶಿವರಾತ್ರಿ ಅಂಗವಾಗಿ ದೇವನಗರಿಯಲ್ಲಿ ಇಡೀ ರಾತ್ರಿ ಶಿವನ ಧ್ಯಾನ, ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗೆಯಿಂದಲೇ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಲವು ದೇವಾಲಯಗಳನ್ನು ಪೆಂಡಾಲ್‌ಗಳಿಂದ ಅಲಂಕರಿಸಲಾಗಿತ್ತು. ಭಕ್ತರ ದಂಡು ದರ್ಶನ ಪಡೆಯಲು ಸಾಲು ಹಿಡಿದು ನಿಂತಿತ್ತು. ಬಿಲ್ವ ಪತ್ರೆ, ಪುಷ್ಪ, ಕ್ಷೀರದೊಂದಿಗೆ ಬಂದಿದ್ದ ಭಕ್ತರು ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಭಕ್ತರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ನಗರದ ಅಶೋಕ ರೈಲ್ವೆ ಗೇಟ್‌ ಬಳಿಯ ಲಿಂಗೇಶ್ವರ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಬೆಳಿಗ್ಗೆಯಿಂದಲೇ ನಿಂತು ದರ್ಶನ ಪಡೆದರು. ‌ಮಹಿಳಾ ತಂಡಗಳಿಂದ ಭಜನೆ ನಡೆದವು. ರಾತ್ರಿ ಇಡೀ ದೇವರ ದರ್ಶನ ಪಡೆದರು. ಭಕ್ತರಿಗೆ ಕೇಸರಿಬಾತ್, ಉಗ್ಗಿಯನ್ನು ನೀಡಲಾಯಿತು. ದೇವಾಲಯದ ಎದುರು ಶಾಮಿಯಾನ ಹಾಕಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ನಗರದ ಹೊಂಡದ ಸರ್ಕಲ್‌ ಬಳಿಯ ಪಾತಾಳ ಲಿಂಗೇಶ್ವರ ದೇವಸ್ಥಾನದಲ್ಲೂ ಅಪಾರ ಪ್ರಮಾಣದಲ್ಲಿ ಭಕ್ತರು ಬಂದು ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಮಂದಿರದ ಶಿವನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಇಲ್ಲಿನ ಎಸ್‌ಕೆಪಿ ರಸ್ತೆಯಲ್ಲಿರುವ ಮಾರ್ಕಂಡೇಯ ಸ್ವಾಮಿ ದೇವಾಲಯದಲ್ಲಿ  ಬೆಳಿಗ್ಗೆ ಮತ್ತು ಸಂಜೆ ವಿಶೇಷ ರುದ್ರಾಭಿಷೇಕ, ಕ್ಷೀರಾಭಿಷೇಕ ನಡೆದವು. ಆನಂತರ ಶಿವ ಅಷ್ಟೋತ್ತರ ನಾಮದಿಂದ ತಿಲಾರ್ಚನೆ ಮಾಡಲಾಯಿತು. ಆನಂತರ ಮಹಾಮಂಗಳಾರತಿ ಮಾಡಲಾಯಿತು.

ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬೃಹತ್ ಶಿವನ ಮೂರ್ತಿ ಮುಂಭಾಗ ಸಂಗೀತ ಕಾರ್ಯಕ್ರಮ, ವಿಶೇಷ ಉಪನ್ಯಾಸ ಮತ್ತು ವೀರಗಾಸೆ ನಡೆದವು. ಮಹಾರಾಜ ಪೇಟೆಯಲ್ಲಿರುವ ವಿಠ್ಠಲ ರಕುಮಾಯಿ ದೇವಾಲಯದಲ್ಲಿ ಮಹಿಳಾ ಮಂಡಳಿಯಿಂದ ಭಜನೆ, ಹರಿಪಾಠ, ಕೀರ್ತನೆ ನಡೆದವು.

ದೇವರಾಜ ಅರಸು ಬಡಾವಣೆಯಲ್ಲಿರುವ ದೇವರಾಜ ಅರಸು ಮೈದಾನದಲ್ಲಿ ಗ್ರೀನ್ ಇಂಡಿಯಾ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಇದೇ ಪ್ರಥಮ ಬಾರಿಗೆ ಗಂಗಾಭಿಷೇಕ ಮತ್ತು ಜಾಗರಣಾ ಮಹೋತ್ಸವ ನಡೆದವು. ಕ್ಷೀರಾಭಿಷೇಕ, ಭಸ್ಮಾಭಿಷೇಕ, ತಿಲಕಾಭಿಷೇಕ, ನವರತ್ನಾಭಿಷೇಕ, ತುಪ್ಪದ ಅಭಿಷೇಕ ಹಾಗೂ ಬಿಲ್ವಾರ್ಚನೆ ಮಾಡಲಾಯಿತು.

ವಿದ್ಯಾನಗರದ ಶಿವ–ಪಾರ್ವತಿ– ಗಣಪತಿ ದೇವಸ್ಥಾನ, ವಿನೋಬನಗರದ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನ, ಕನ್ಯಕಾಪರಮೇಶ್ವರಿ ದೇವಸ್ಥಾನ, ನಿಜಲಿಂಗಪ್ಪ ಬಡಾವಣೆಯ ಗಣಪತಿ, ಶಾರದಾಂಬಾ ಚಂದ್ರಮೌಳೀಶ್ವರ ದೇವಸ್ಥಾನ, ಕೆ.ಟಿ.ಜೆ. ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ ಹಳೇ ಬೆತೂರು ರಸ್ತೆಯ ಬನಶಂಕರಿ ದೇವಸ್ಥಾನಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)