ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮಾಯಾಬಲೆಗೆ ಬಿದ್ದ ನಾರದ

ಅಕ್ಷರ ಗಾತ್ರ

ಸೃಷ್ಟಿಖಂಡದ ‘ನಾರದ ಮೋಹವರ್ಣನ’ ಎಂಬ ಮೂರನೆಯ ಅಧ್ಯಾಯದಲ್ಲಿ ಸೂತಮುನಿಯು ಗರ್ವಿತ ನಾರದನಿಗೆ ಪಾಠ ಕಲಿಸಿದ ಕತೆ ಹೇಳುತ್ತಾನೆ.

‘ವಿಷ್ಣುವಿನ ಮುಂದೆ ಜಂಭದ ಮಾತಾಡಿ, ಗರ್ವ ಮೆರೆದ ನಾರದ ಮಹರ್ಷಿ ವಿಶ್ವಸಂಚಾರ ಮಾಡಲು ಹೊರಟಿದ್ದ. ಈ ಸಂದರ್ಭದಲ್ಲಿ ಹರಿಯು ಶಿವನ ಇಚ್ಛೆಯಂತೆ ಒಂದು ಮಾಯಾಸೂತ್ರವನ್ನು ರೂಪಿಸಿದ. ನಾರದನು ಹೋಗುವ ದಾರಿಯಲ್ಲಿ ಒಂದು ಮಾಯಾನಗರಿ ನಿರ್ಮಿಸಿದ. ಅದು ನೂರು ಯೋಜನಗಳಷ್ಟು ವಿಸ್ತಾರವಾಗಿತ್ತು.

ಮಾಯಾನಗರವು ತನ್ನ ವಾಸವಾದ ವೈಕುಂಠಲೋಕಕ್ಕಿಂತಲೂ ಹೆಚ್ಚು ಸುಂದರವಾಗಿರುವಂತೆ ವಿಷ್ಣು ತನ್ನ ಮಾಯೆಯಿಂದ ಸೃಷ್ಟಿಸಿದ್ದ. ಆ ಮಾಯಾನಗರಿಯಲ್ಲಿ ಎಲ್ಲಿ ನೋಡಿದರೂ ನಾನಾ ವಿಧವಾದ ಆಕರ್ಷಕ ಪದಾರ್ಥಗಳು ಕಂಗೊಳಿಸುತ್ತಿದ್ದವು. ಅಲ್ಲಿ ಸ್ತ್ರೀಪುರುಷರು ಸ್ವಚ್ಛಂದವಾಗಿ ವಿಹರಿಸುತ್ತಿದ್ದರು. ಎಲ್ಲಾ ವರ್ಗದ ಜನರು ಅಲ್ಲಿ ವಾಸಿಸು ತ್ತಿದ್ದರು. ಮಾಯಾನಗರವನ್ನು ಶೀಲನಿಧಿ ಎಂಬ ಐಶ್ವರ್ಯವಂತ ದೊರೆ ಆಳುತ್ತಿದ್ದ. ಅವನ ಶ್ರೀಮತಿ ಎಂಬ ಮಗಳಿಗೆ ಸ್ವಯಂವರವನ್ನು ಮಾಡುವ ಸಿದ್ದತೆಯಲ್ಲಿ ತೊಡಗಿದ್ದ. ಶೀಲನಿಧಿ ಮಹಾರಾಜನ ಮಗಳನ್ನು ವರಿಸಬೇಕೆಂದು ಹಂಬಲಿಸಿ, ದಶದಿಕ್ಕುಗಳಿಂದ ನಾನಾ ಆಭರಣ ಭೂಷಿತರಾದ ರಾಜಕುಮಾರರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಇದರಿಂದ ಆ ನಗರದಲ್ಲಿ ವಿವಿಧ ದೇಶಗಳ ರಾಜಕುಮಾರರು ಮತ್ತವರ ಒಡ್ಡೋಲಗದವರು ತುಂಬಿಹೋಗಿದ್ದರು.

ಅಲಂಕಾರಭೂಷಿತವಾದ ನಗರದಲ್ಲಿ ನಡೆಯುತ್ತಿದ್ದ ಸ್ವಯಂವ ರದ ಸಂಭ್ರಮವನ್ನು ನೋಡಿದ ನಾರದ ಮೋಹಾವಿಷ್ಟನಾಗಿ ಮನ್ಮಥೋ
ದ್ರೇಕಿತನಾದ. ಮನದೊಳಗೆ ಏಳುತ್ತಿದ್ದ ತುಮುಲ ಮತ್ತು ಕುತೂಹಲ ಗಳನ್ನು ತಾಳಲಾರದೆ, ಅರಮನೆಯ ಒಳಗೆ ಹೋದ. ಮುನಿಶ್ರೇಷ್ಠನಾದ ನಾರದನು ಬಂದುದನ್ನು ಕಂಡು ರಾಜ ಶೀಲನಿಧಿಯು ಉತ್ತಮವಾದ ರತ್ನಸಿಂಹಾಸನವೊಂದರಲ್ಲಿ ಅವನನ್ನು ಕುಳ್ಳಿರಿಸಿ, ಪಾದಪೂಜೆ ಮಾಡಿದ. ನಂತರ, ಶೀಲನಿಧಿ ರಾಜ ತನ್ನ ಮಗಳು ಶ್ರೀಮತಿಯಿಂದಲೂ ನಾರದನ ಕಾಲುಗಳಿಗೆ ನಮಸ್ಕಾರ ಮಾಡಿಸಿದ. ರಾಜಕುಮಾರಿ ಶ್ರೀಮತಿಯನ್ನು ಕಂಡು ನಾರದಮುನಿ ವಿಸ್ಮಯಗೊಂಡು, ‘ಎಲೈ ರಾಜನೇ, ದೇವಕನ್ಯೆ ಯಂತೆ ಸುಂದರಿಯೂ, ಮಹಾಭಾಗ್ಯಶಾಲಿನಿಯೂ ಆದ ಈ ಕನ್ಯೆ ಯಾರು?’ ಎಂದು ಕೇಳಿದ.

ಆಗ ರಾಜ ಶೀಲನಿಧಿ ‘ಓ ಮುನೀಂದ್ರ! ಇವಳು ನನ್ನ ಮಗಳು. ಹೆಸರು ಶ್ರೀಮತಿ. ಇವಳು ಮದುವೆಯಾಗಲು ಈಗ ತಕ್ಕ ವಯಸ್ಸನ್ನು ಹೊಂದಿದ್ದಾಳೆ. ಆದುದರಿಂದ ಸರ್ವಲಕ್ಷಣಸಂಪನ್ನಳಾದ ಈಕೆಗೆ ಅನುರೂಪನಾದ ವರನನ್ನು ಆಯ್ಕೆ ಮಾಡಲು ಇಂದು ಸ್ವಯಂವರವನ್ನು ಕೈಗೊಂಡಿದ್ದೇನೆ. ಇವಳ ಜಾತಕಲಕ್ಷಣವನ್ನು ನೋಡಿ, ಈಕೆಯ ಭಾಗ್ಯವೆಂಥದು ಎಂಬುದನ್ನು ತಿಳಿಸಬೇಕು, ಎಂತಹ ವರನು ಇವಳಿಗೆ ದೊರೆಯುವನು ಎಂಬುದನ್ನೂ ಸಹ ಹೇಳಬೇಕು’ ಎಂದು ಕೋರುತ್ತಾನೆ.

ಹೀಗೆ ಶೀಲನಿಧಿ ಮಹಾರಾಜ ಕೇಳುವಾಗ ನಾರದ ಮೋಹದ ಮೋಡಿಯಲ್ಲಿ ತೇಲುತ್ತಿದ್ದ. ತ್ರಿಲೋಕಸುಂದರಿಯಾದ ರಾಜಕುಮಾರಿ ಶ್ರೀಮತಿಯನ್ನು ತಾನೇ ವರಿಸಬೇಕೆಂಬ ಬಯಕೆ ಹುಟ್ಟಿತು. ಕಾಮ ವಿಕಾರಗಳಿಗೆ ಸಿಲುಕಿದ ನಾರದ ರಾಜನಿಗೆ ಆಕೆ ವರಿಸುವ ವರನ ವಿವರವನ್ನು ಹೇಳಿದ. ನಾರದ ಹೇಳಿದ ವರನ ವಿವರಣೆ ಅವನದೇ ಆಗಿತ್ತು. ‘ಎಲೈ ರಾಜೇಂದ್ರ! ಒಳ್ಳೆಯ ಲಕ್ಷಣಗಳಿಂದ ಶೋಭಿತಳಾದ ನಿನ್ನ ಮಗಳು ಮಹಾಭಾಗ್ಯಶಾಲಿನಿ. ಲಕ್ಷ್ಮಿಯಂತೆ ಸುಗುಣಗಳಿಗೆ ನೆಲೆಯಾಗಿದ್ದಾಳೆ. ಆದ್ದರಿಂದ ಈಕೆ ಸಾಮಾನ್ಯರನ್ನು ವರಿಸಲಾರಳು. ಸರ್ವೇಶ್ವರನೂ, ಎಂದಿಗೂ ಸೋಲನ್ನೇ ಕಂಡರಿಯದ ಮಹಾ ಪರಾಕ್ರಮಶಾಲಿಯಾಗಿರುತ್ತಾನೆ. ಮನ್ಮಥನನ್ನು ಜಯಿಸಿದ ಮತ್ತು ಶಿವನಿಗೆ ಸಮಾನನೂ ಆದ ಸುರಶ್ರೇಷ್ಠನೊಬ್ಬ ಈಕೆ ಮದುವೆ ಯಾಗುತ್ತಾಳೆ’ ಎಂದು ತನ್ನ ವರ್ಣನೆಯನ್ನೇ ಹೇಳಿದ. ಆನಂತರ ರಾಜನನ್ನು ಬೀಳ್ಕೊಂಡು ಸ್ವೇಚ್ಛಾಗಾಮಿಯಾದ ನಾರದ ಅಲ್ಲಿಂದ ಹೊರಟುಹೋದ.

ದಾರಿಯಲ್ಲಿ ಹೋಗುವಾಗ ನಾರದಮುನಿಗೆ ರಾಜಕುಮಾರಿ ಶ್ರೀಮತಿಯ ಸುಂದರರೂಪವೇ ಕಾಡತೊಡಗಿತು. ಶಿವನ ಮಾಯೆಯಿಂದ ವಿಮೋಹಿತನಾಗಿದ್ದ ನಾರದನಿಗೆ ವಿರಹ ಉಕ್ಕಿ ವಿಹ್ವಲನಾದ. ಆಗ ನಾರದಮುನಿಯ ಮನದಲ್ಲಿ ‘ಹೇಗಾದರೂ ಇವಳನ್ನು ವರಿಸಬೇಕೆಂಬ ಉತ್ಕಟೇಚ್ಛೆ ಹೆಚ್ಚಾಯಿತು. ಸುಂದರರಾದ ರಾಜಕುಮಾರರು ನೆರೆದಿರುವ ಸ್ವಯಂವರದಲ್ಲಿ ತನ್ನೊಬ್ಬನನ್ನೇ ಆಕೆ ಆಯ್ಕೆ ಮಾಡುವುದು ಹೇಗೆ’ – ಎಂದು ಯೋಚಿಸತೊಡಗಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT