ಭಾನುವಾರ, ಜುಲೈ 3, 2022
27 °C

ವೇದವ್ಯಾಸರ ಶಿವಪುರಾಣಸಾರ: ವಿಷ್ಣುವಿಗೆ ಶಾಪಕೊಟ್ಟ ನಾರದ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶಿವನ ಮಾಯೆಯಿಂದ ಮನ್ಮಥನ ಸುಳಿಗೆ ಸಿಲುಕಿದ್ದ ನಾರದ ಶಿವಗಣರಿಬ್ಬರಿಗೆ ಶಾಪವನ್ನಿತ್ತ ನಂತರ ತನ್ನ ಮುಖವನ್ನು ಮತ್ತೊಮ್ಮೆ ನೀರಿನಲ್ಲಿ ನೋಡಿ ಕುಪಿತನಾದ. ಶಿವನ ಇಚ್ಛೆಯಂತೆ ಹೀಗೆಲ್ಲಾ ನಡೆಯಿತು ಎಂಬ ಸತ್ಯ ಅರಿಯದೆ, ವಿಷ್ಣು ತನಗೆ ಮೋಸ ಮಾಡಿದನೆಂದು ಭಾವಿಸಿದ. ಮಿತಿಮೀರಿದ ಕೋಪದಿಂದ ವಿಷ್ಣುಲೋಕಕ್ಕೆ ಹೊರಟ. ನಾರದನ ಮುಖ ಬೆಂಕಿಯಂತೆ ಉರಿಯುತ್ತಿತ್ತು. ಕೋಪಾವಿಷ್ಟನಾಗಿ ಉರಿಗೋಪದಿಂದ ವೈಕುಂಠಕ್ಕೆ ಬಂದ. ಶಿವನ ಇಚ್ಛೆಯಂತೆ ತನಗೆ ಹೀಗಾಗಿದೆ ಎಂಬ ಜ್ಞಾನವಿಲ್ಲದೆ, ಭಂಡಪುಂಡ ಮಾತುಗಳನ್ನು ವಿಷ್ಣುವಿನ ವಿರುದ್ಧ ಆಡಿದ.

‘ಎಲೈ ಹರಿಯೇ, ನೀನು ಬಹಳ ಕೆಟ್ಟವನು. ಮೋಸಗಾರ. ಪ್ರಪಂಚವನ್ನೇ ಮರುಳುಗೊಳಿಸಿರುವ ಮಾಯಾವಿ. ಇನ್ನೊಬ್ಬರ ಏಳಿಗೆಯನ್ನು ನೀನು ಸಹಿಸಲಾರೆ. ಮಹಾಕೃತ್ರಿಮಿ. ನಿನ್ನ ಹೃದಯವು ಶುದ್ಧವಾಗಿಲ್ಲ. ಹಿಂದೆ ಸಮುದ್ರಮಂಥನ ಸಂದರ್ಭದಲ್ಲಿ ಮೋಹಿನಿಯ ವೇಷವನ್ನು ಧರಿಸಿ ದಾನವರಿಗೆ ಮೋಸ ಮಾಡಿದೆ. ರಾಕ್ಷಸರಿಗೆ ಕುಡಿಯಲು ವಾರುಣಿ(ಮದ್ಯ)ಯನ್ನು ಕೊಟ್ಟೆಯಲ್ಲದೆ, ಅಮೃತವನ್ನು ಕೊಡಲಿಲ್ಲ. ಶಿವ ಸರಿಯಾದ ಸಮಯಕ್ಕೆ ಬಂದು ಕಾರ್ಕೋಟಕ ವಿಷ ಕುಡಿಯದೆ ಇದ್ದಿದ್ದರೆ, ನಿನ್ನ ಮಾಯೆಯಿಂದ ವಿಶ್ವವೆಲ್ಲಾ ನಾಶವಾಗಿಬಿಡುತ್ತಿತ್ತು. ನೀನು ಮಾಡಿದ ಮೋಸ ಗೊತ್ತಾದರೂ, ನೆಪಮಾತ್ರಕ್ಕೆ ಶಿವ ಸುಮ್ಮನಿದ್ದ. ಮುಂದೆಯೂ ಶಿವ ಸುಮ್ಮನಿರುತ್ತಾನೆಂದುಕೊಳ್ಳಬೇಡ. ನೀನು ತಪ್ಪು ಮಾಡಿದ್ದು ಶಿವನಿಗೆ ಗೊತ್ತಾದರೆ, ನಿನಗೆ ತಕ್ಕ ಶಾಸ್ತಿ ಮಾಡುವುದು ನಿಶ್ಚಿತ. ಹೀಗಿದ್ದರೂ ನೀನು ಉದ್ದಟತನ ಮುಂದುವರೆಸಿದ್ದೀಯಾ. ನಿನ್ನ ವಂಚನೆಯ ರೂಪ ಎಲ್ಲೆಡೆ ತೋರಿಸುತ್ತಿದ್ದೀಯಾ’ ಎಂದು ಬೈಗುಳಗಳ ಸುರಿಮಳೆಗರೆದ. ಇಷ್ಟು ಸಾಲದೆಂಬಂತೆ ಮತ್ತಷ್ಟು ಘನಘೋರ ಮಾತುಗಳನ್ನು ವಿಷ್ಣು ವಿರುದ್ಧ ಆಡಿದ.

‘ಎಲೈ ವಿಷ್ಣುವೇ, ನಿನಗೆ ದುರ್ನಡತೆಯೇ ಹಿತವಾಗಿಬಿಟ್ಟಿದೆ. ನೀನು ಸಾಧುಸ್ವಭಾವದವನಲ್ಲ. ಗೋಮುಖ ವ್ಯಾಘ್ರನಾದ ನಿನ್ನನ್ನು ಶಿವ ಸ್ವತಂತ್ರನನ್ನಾಗಿ ಮಾಡಿದ್ದು, ನಿನ್ನ ಲಂಗುಲಗಾಮಿಲ್ಲದ ಸ್ವೇಚ್ಛಾಚಾರಕ್ಕೆ ಕಾರಣವಾಗಿದೆ. ಪರಮಾತ್ಮನಾದ ಶಿವನು ನಿನಗೆ ಸರಿಯಾದ ಶಾಸ್ತಿ ಮಾಡದೆ ಬಿಟ್ಟಿದ್ದರಿಂದ ನಿನಗೆ ತೋಚಿದಂತೆ ವರ್ತಿಸುತ್ತಿರುವೆ. ನಿನ್ನ ಈ ಕೆಟ್ಟ ನಡತೆಯನ್ನು ಕಂಡು ಶಿವ ನಿತ್ಯ ಪಶ್ಚಾತ್ತಾಪ ಪಡುತ್ತಿದ್ದಾನೆ. ಆದುದರಿಂದಲೇ ತನ್ನ ಬಾಯಿಂದ ಹೊರಬಿದ್ದ ವೇದಗಳೇ ಪ್ರಮಾಣವೆಂದು ಪ್ರತಿಪಾದಿಸಿದ್ದಾನೆ. ವೇದದಲ್ಲಿ ಗುರುವೇ ಎಲ್ಲರಿಗಿಂತಲೂ ಶ್ರೇಷ್ಠನೆಂದು ಶಿವ ಹೇಳಿದ್ದಾನೆ. ಗುರುಸಮಾನನಾದ ನಾನು, ನಿನ್ನನ್ನೀಗ ಶಿಕ್ಷೆಗೀಡುಮಾಡುವೆ. ಎಂದೆಂದಿಗೂ ಇನ್ನಾರಿಗೂ ನನಗೆ ಮಾಡಿದಂತಹ ಮೋಸದ ಕೆಲಸ ಮಾಡದಂತೆ ಬುದ್ಧಿ ಕಲಿಸುವೆ’ ಎಂದು ವಿಷ್ಣು ವಿರುದ್ಧ ಕಿಡಿಕಾರಿದ.

‘ನನ್ನಂಥ ಕೋಪಿಷ್ಠನೊಬ್ಬನನ್ನು ಎದುರು ಹಾಕಿಕೊಳ್ಳದೆ, ಇದುವರೆಗೆ ನನ್ನಂಥ ವ್ಯಕ್ತಿಯೊಂದಿಗೆ ವ್ಯವಹರಿಸದೇ ಇದ್ದುದರಿಂದ ನೀನು ನಿರ್ಭಯವಾಗಿದ್ದೆ. ಆದರೆ ಈಗ ನನ್ನ ಕೈಗೆ ಸಿಕ್ಕಿ ಹಾಕಿಕೊಂಡಿದ್ದೀಯಾ, ಈಗಲೇ ನೀ ಮಾಡಿದ ಮೋಸಕ್ಕೆ ತಕ್ಕ ಫಲವನ್ನು ಅನುಭವಿಸುವೆ’ ಎಂದು ಶಿವಮಾಯೆಯಿಂದ ಮೋಹಿತನಾಗಿದ್ದ ನಾರದ, ವಿವೇಕವಿಲ್ಲದೆ ಏನೇನೋ ಬಡಬಡಿಸಿ ಬಿಟ್ಟ. ಹರಿಯ ಬಗ್ಗೆ ಹೀನಾಯವಾಗಿ ಮಾತಾಡಿದ್ದಲ್ಲದೆ, ಕೋಪದಿಂದ ಮುಂದೆ ಆಗಬಹುದಾದ ಪರಿಣಾಮ ಅರಿಯದೆ, ಬ್ರಹ್ಮತೇಜಸ್ಸಿನ ಹೆಮ್ಮೆಯಿಂದ ವಿಷ್ಣುವನ್ನು ಶಪಿಸಿಬಿಟ್ಟ.

‘ಒಂದು ಹೆಣ್ಣಿಗಾಗಿ ಎಲ್ಲರನ್ನೂ ಮರುಳುಗೊಳಿಸುವ ನೀನು, ಶ್ರೀಮತಿ ಸ್ವಯಂವರದಲ್ಲಿ ಮೂಗು ತೂರಿಸಿ ನನ್ನನ್ನು ದುಃಖಿತನನ್ನಾಗಿ ಮಾಡಿರುವೆ. ನನಗೆ ಮೋಸ ಮಾಡುವಾಗ, ನೀನು ಯಾವ ಸ್ವರೂಪವನ್ನು ತಳೆದು ಅನುಕರಣೆ ಮಾಡಿದೆಯೋ, ಆ ರೂಪದಿಂದಲೇ ನೀನು ಮನುಷ್ಯನಾಗಿ ಹುಟ್ಟಿ, ಹೆಂಡತಿ ಕಳೆದುಕೊಂಡ ದುಃಖವನ್ನು ಅನುಭವಿಸು. ಹಾಗೆ, ನನ್ನ ಮುಖವನ್ನು ಯಾವ ಪ್ರಾಣಿಯ ಮುಖದಂತೆ ಮಾಡಿದೆಯೋ ಆ ಕಪಿಗಳು ನಿನ್ನ ಬಂಟರಾಗಲಿ, ಅವರ ಸಹಾಯ ಬೇಡುವ ಕರ್ಮ ನಿನಗೆ ಬರಲಿ. ಮತ್ತೊಬ್ಬರನ್ನು ಸಂಕಟಪಡಿಸುವುದೇ ನಿನ್ನ ದುರುದ್ದೇಶವಾಗಿವುದರಿಂದ ಸ್ತ್ರೀವಿಯೋಗದಿಂದುಂಟಾದ ದುಃಖವನ್ನು ಅನುಭವಿಸು. ಸಾಮಾನ್ಯ ಮನುಷ್ಯನಂತೆ ಅಜ್ಞಾನದಿಂದ, ತಿಳಿವಳಿಕೆಯಿಲ್ಲದೆ ತೊಳಲುತ್ತಾ ದುಃಖಪಡು’ ಎಂದು ನಾರದ ಶಾಪವಿತ್ತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು