ಎಮ್ಮೆಗಳ ಅಲಂಕಾರಕ್ಕೆ ಕವಡೆ ಸರ, ಕೋಡು ಕೊಂಬುಗಳಿಗೆ ತುರಾಯಿಗಳು, ಹೊಸ ಹಗ್ಗಗಳು, ಕೋಡುಗಳಿಗೆ ಹೊಸ ಬಣ್ಣ ಬಳಿಯುವುದು ಆರಂಭವಾದರೆ ಬೆಳಗಾವಿಯಲ್ಲಿ ದೀವಳಿಗೆ ಬಂದಂತೆ.
ಬೆಳಗಾವಿ ಕುಂದಾಕ್ಕೆ ಹೆಸರಾದಂತೆ ಗೌಳಿಗರ ಕುಂದದ ಉತ್ಸಾಹಕ್ಕೂ ಹೆಸರಾಗಿದೆ. ಉತ್ತರ ಭಾರತದಿಂದ ಬಂದ ಯಾದವರು ಹಣಬರ ಸಮುದಾಯದವರು ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಮಲೆನಾಡಿನ ಸೆರಗಿನಂತಿರುವ ಈ ಊರಿನಲ್ಲಿ ಯಾದವರ ಶ್ರಮದಿಂದಲೇ ಪೇಡೆ, ಕುಂದಾ ಜನಪ್ರಿಯವಾಗಲು ಸಾಧ್ಯವಾಗಿದ್ದು.
ವರ್ಷವಿಡೀ ಹಾಲು ಕೊಟ್ಟು ಪೊರೆಯುವ ಎಮ್ಮೆಗಳಿಗೆ ಸಿಂಗಾರ ಮಾಡಿ, ದ್ವಾದಶಿಯಂದು ದೋಸೆ (ದ್ವಾಸಿ) ಮಾಡಿ ನೈವೇದ್ಯ ಹಿಡಿದು ಬಲಿಪಾಡ್ಯಮಿಯ ದಿನ ಎಮ್ಮೆಗಳ ಓಟ ಏರ್ಪಡಿಸಲಾಗುತ್ತದೆ.
ಇಲ್ಲಿನ ಕ್ಯಾಂಪ್ ಪ್ರದೇಶ, ಟಿಳಕವಾಡಿಯ ಗೌಳಿ ಗಲ್ಲಿ, ಗೊಂಧಳಿ ಗಲ್ಲಿ, ಕೋನವಾಳ ಗಲ್ಲಿ, ಚವಾಟ್ ಗಲ್ಲಿ, ಗಾಂಧಿ ನಗರ, ವಡಗಾವಿಯಲ್ಲಿ ನಡೆಯುವ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನಸೆಳೆಯುತ್ತದೆ. ಸರ್ಕಾರಿ ಸರ್ದಾರ್ಸ್ ಪ್ರೌಢಶಾಲೆ ಮೈದಾನದಲ್ಲಿ ನಡೆಯುವ ಸ್ಪರ್ಧೆಯಂತೂ ರೋಚಕ.
ಕೆಲ ಯುವಕರು ಬೈಕಿನ ಸೈಲೆನ್ಸರ್ ತೆಗೆದು ಕರ್ಕಶ ಶಬ್ದ ಮಾಡುತ್ತ ವೇಗವಾಗಿ ಬೈಕ್ ಓಡಿಸಿದರೆ ಎಮ್ಮೆಗಳು ಅವರನ್ನೇ ಹಿಂಬಾಲಿಸುತ್ತ ಓಡುವ ದೃಶ್ಯ ಎಂಥವರಲ್ಲೂ ರೋಮಾಂಚನ ಮೂಡಿಸುತ್ತದೆ.
ಎಮ್ಮೆಗಳ ಓಟದ ಸ್ಪರ್ಧೆ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗೈಯುವ ಮೂಲಕ ಎಮ್ಮೆಗಳನ್ನು ಹುರಿದುಂಬಿಸುತ್ತಾರೆ. ‘ಎಮ್ಮೆಗಳ ಫ್ಯಾಷನ್ ಷೋ’ ಅನ್ನು ತಮ್ಮ ಮೊಬೈಲ್, ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂಭ್ರಮದಲ್ಲಿ ಮಿಂದೇಳುತ್ತಾರೆ.
‘ಎಮ್ಮೆಗಳು ನಮಗೆ ವರ್ಷವಿಡೀ ಅನ್ನ ಹಾಕುತ್ತವೆ. ಪ್ರತಿವರ್ಷ ದೀಪಾವಳಿಯಲ್ಲಿ ಅವುಗಳನ್ನು ಅಲಂಕರಿಸಿ ಕುಟುಂಬಸ್ಥರೆಲ್ಲ ಪೂಜಿಸುತ್ತೇವೆ. ವಿವಿಧ ಬಡಾವಣೆಗಳಲ್ಲಿ ಓಡಿಸಿ ಸಂತಸಪಡುತ್ತೇವೆ. ಹಲವು ದಶಕಗಳಿಂದ ಈ ಆಚರಣೆ ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದು ಸ್ಥಳೀಯ ಪವನ ಗೌಳಿ ‘ಪ್ರಜಾವಾಣಿ’ಗೆ ತಿಳಿಸಿದರು.
ಉತ್ತರ–ದಕ್ಷಿಣದ ಸಂಗಮ: ಬಹುಭಾಷಾ ಸಂಸ್ಕೃತಿ ಹೊಂದಿರುವ ಬೆಳಗಾವಿಯಲ್ಲಿ ಗುಜರಾತಿಗಳು, ಬಂಗಾಳಿಗಳು, ಬಿಹಾರಿಗಳು ಸೇರಿದಂತೆ ಉತ್ತರ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ದೀಪಾವಳಿಯಲ್ಲಿ ಅವರು ಸ್ಥಳೀಯ ಧಾರ್ಮಿಕ ಪದ್ಧತಿ ಅನುಸರಿಸುವ ಜತೆಗೆ, ತಮ್ಮ ನಾಡಿನ ಸಂಸ್ಕೃತಿಯನ್ನೂ ಅನಾವರಣಗೊಳಿಸುತ್ತಾರೆ. ಉತ್ತರ–ದಕ್ಷಿಣದ ಸಂಗಮಕ್ಕೆ ಗಡಿನೆಲ ಸಾಕ್ಷಿಯಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.