ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಣ್ಣೇ ಮುಚ್ಚೆ ಕಾಡೆ ಗೂಡೇ...’

Last Updated 24 ಜನವರಿ 2020, 19:34 IST
ಅಕ್ಷರ ಗಾತ್ರ

ಅಧ್ಯಾತ್ಮ ಎನ್ನುವುದು ಒಂದು ಎಚ್ಚರು. ಈ ಎಚ್ಚರು ಜೀವನದುದ್ದಕ್ಕೂ ಇರಬೇಕಾದ್ದೇ ಹೊರತು ಜೀವನದ ಕೊನೆಯದ್ಯಾವುದೋ ಹಂತದಲ್ಲಿ ಹೊತ್ತಿಕೊಳ್ಳಬೇಕಾದ ಏಕಾಏಕಿ ಧಗೆಯಲ್ಲ, ಸಾಧಿಸಬೇಕಾದ ಹೊಸದೇ ಒಂದು ಸಂಗತಿಯೂ ಅದಲ್ಲ. ಆದರೆ ಈ ಎಚ್ಚರು ಮಸುಕಾಗದಂತೆ ಮುತುವರ್ಜಿಯಿಂದ ಕಾಯ್ದುಕೊಳ್ಳಬೇಕಾದ್ದು ಅತ್ಯಗತ್ಯ. ಜೀವನದ ನೈಜ ಸ್ವರೂಪದ ಕುರಿತಾದ ನಮ್ಮ ಜಾಗ್ರತಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ನಮ್ಮಲ್ಲಿ ಎಷ್ಟೆಲ್ಲ ವಿಧಾನಗಳಿವೆ! ವೇದಾಂತಾದಿ ಶಾಸ್ತ್ರಗಳು, ಉಪಾಸನಾ ವಿಧಿಗಳು, ಮುಂತಾದ ಹಲವಾರು ಗಂಭೀರ ಮಾರ್ಗಗಳ ಹೊರತಾಗಿ ಜನಸಾಮಾನ್ಯರು ತಮ್ಮ ದಿನದಿನದ ಜೀವನದಲ್ಲಿ ಗಹನ ತತ್ತ್ವಗಳನ್ನು ಹೊಮ್ಮಿಸುವ ತಮ್ಮದೇ ಸಾಹಿತ್ಯವನ್ನು ಮತ್ತು ವ್ಯವಹಾರಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ಸಾಹಿತ್ಯವನ್ನು ಕ್ರಿಯೆಯ ಜೊತೆ ಜೋಡಿಸಿಕೊಂಡು ಕ್ರಿಯೆಯನ್ನು ರಸವತ್ತಾಗಿಸುವುದು ನಮ್ಮ ಪೂರ್ವಿಕರು ಹಮ್ಮಿಕೊಂಡಿದ್ದ ಒಂದು ಪದ್ಧತಿ. ಭಾರೀ ವಜನಿನ ರಾಗಿ ಬೀಸುವ ಕಲ್ಲಿನೆದುರಿಗೆ ಕುಳಿತು ಶ್ರಮಿಸುವಾಗ, ಒನಕೆಯಿಂದ ತುಷ ಬಿಡಿಸುವಾಗ, ನೀರೆತ್ತಿ ಗಿಡಗಳಿಗೆ ಸುರಿಯುವಾಗ ಹಳ್ಳಿಗರು ಹುಟ್ಟಿಸಿದ ಹಾಡನ್ನೇ ನಾವಿವತ್ತು ಜಾನಪದ ಸಾಹಿತ್ಯವನ್ನಾಗಿ ನೋಡುತ್ತಿಲ್ಲವೇ? ಆ ಹಾಡುಗಳಿಗೆ ಶ್ರಮದ ತೀವ್ರತೆಯನ್ನು ತೇಯುವ ಸಾಮರ್ಥ್ಯವಿದೆ ಎನ್ನುವುದು ಒಂದು ಮುಖ. ಅದಕ್ಕೆ ಹೊರತಾಗಿ ಆ ಹಾಡುಗಳಲ್ಲಿ ಅಲ್ಲಿಲ್ಲಿ ಇಣುಕುತ್ತಿದ್ದ ಜೀವನದ ಒಳಹೊಳಹುಗಳು ಸಾಮಾನ್ಯ ಜನತೆಯ ದಿನಜೀವನದ ಅಧ್ಯಾತ್ಮಪ್ರಜ್ಞೆಯನ್ನೂ ಅರುಹುತ್ತವೆ. ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ - ಎಂದು ಅಮಾಯಕತೆ ತೋರುವ ಜಾನಪದರು ತಮ್ಮ ಸುತ್ತಲಿನ ಸಜೀವ ಮತ್ತು ನಿರ್ಜೀವ ಸಂಗತಿಗಳಿಗೆ ಧನ್ಯವಾದ ಅರ್ಪಿಸಿ ವೈಶ್ವಿಕರಾಗಿ ಬೆಳೆಯುತ್ತಾರೆ. ಅಧ್ಯಾತ್ಮವೆಂಬುದು ಬದುಕನ್ನು ಹೊಕ್ಕಾಗ ಸಹಜವಾಗೇ ದಕ್ಕುವ ದೃಷ್ಟಿಯಿದು.

ತೊಂಬತ್ತರದ ದಶಕದ ಮಕ್ಕಳು ಆಡುತ್ತಿದ್ದ ಕಣ್ಣಾಮುಚ್ಚಾಲೆಯಾಟದ ಒಂದು ಹಾಡನ್ನು ಗಮನಿಸಿ. ನಿಜವೆಂದರೆ ಆಟಕ್ಕೇನೂ ಹಾಡು ಬೇಕಿಲ್ಲ. ಆದರೆ ಹಾಡಿನೊಡನಾಟದಲ್ಲಿ ಆಟಕ್ಕೆ ಮೆತ್ತಿಕೊಳ್ಳುವ ಅಂದ ಬೇರೆಯದೇ ಲೋಕದ್ದು. ಕಣ್ಣಾಮುಚ್ಚಾಲೆಯಾಟದಲ್ಲಿ ‘ಕಣ್ಣೇ ಮುಚ್ಚೆ, ಕಾಡೇ ಗೂಡೇ, ಉದ್ದಿನ ಮೂಟೆ ಉರುಳೇ ಹೋಯ್ತು, ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ, ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ...’ ಅನ್ನುವ ಹಾಡೊಂದು ಬೆಸೆದುಕೊಂಡಿದೆ. ಬದುಕಿ ಬಾಳಿದ ಮನುಷ್ಯನೊಬ್ಬ ಕಣ್ಮುಚ್ಚಿದಾಗ ಸೇರಲೇಬೇಕಾದ ಬೆಂಗಾಡೆಂಬ ಗೂಡು, ಸತ್ತಾಗ ಉರುಳಿ ಸರಿಯುವ ಉದ್ದಿನಮೂಟೆಯಂಥಾ ಜಡಶರೀರ ಮತ್ತು ಬಂಧಿಯಾಗಿದ್ದ ಜೀವಾತ್ಮನೆಂಬ ಹಕ್ಕಿ ಈ ಜಗತ್ತಿನಿಂದ ಕಳಚಿಕೊಳ್ಳುವ ಅನಿವಾರ್ಯ ಚಿತ್ರಣವನ್ನು ಮಕ್ಕಳಾಟದ ಈ ಹಾಡು ಕಟ್ಟಿಕೊಡುತ್ತದೆ. ನಿಮ್ಮಯ ಹಕ್ಕಿಯ ಕುರಿತು ಎಚ್ಚರದ ಮಾತನ್ನೂ ಹೇಳುತ್ತದೆ. ಜೀವನದ ಅಶ್ವತ್ಥತೆಯ ಕುರಿತಾಗಿ ಎಚ್ಚರವನ್ನು ಬೆಳೆಸುವ ಈ ಅತಿಸಾಮಾನ್ಯ ಪದ್ಯವು ದಿನಜೀವನದಲ್ಲಿ ಸಿಗುವ ಅಧ್ಯಾತ್ಮದ ಹೊಳಹಲ್ಲದೆ ಇನ್ನೇನು!

ತನ್ನ ಹೊರಗಿನ ಸಜೀವ ಮತ್ತು ನಿರ್ಜೀವ ಜಗತ್ತು ತನ್ನಷ್ಟೇ ಮುಖ್ಯವೂ, ಸ್ಪಂದನೀಯವೂ ಆಗಿ ಭಾಸವಾಗುವ ಎತ್ತರವನ್ನು ಸಾಧಿಸಿದವರೆಲ್ಲ ಅಧ್ಯಾತ್ಮ ಸಾಧಕರೇ. ತಾನು ಬೆಳೆವ ಕಾಳುಗಳಲ್ಲಿ, ತಾನುಣ್ಣುವ ಅನ್ನದಲ್ಲಿ, ತಾನು ಸುಖಿಸುವ ಹಬ್ಬಗಳಲ್ಲಿ ಮಾತುಬಾರದ ಜೀವಿಗಳಿಗೂ ಪಾಲಿದೆ ಅನ್ನುವ ಪ್ರಜ್ಞೆಯಿಟ್ಟುಕೊಂಡು ಹಂಚಿ ಬದುಕುವ ಎಲ್ಲ ವ್ಯಕ್ತಿಗಳದ್ದೂ ಬದುಕಿಗಿಳಿದ ಅಧ್ಯಾತ್ಮವೇ. ಅಷ್ಟಕ್ಕೂ, ಬದುಕಿಗಿಳಿಯದಿದ್ದರೆ ಅಧ್ಯಾತ್ಮವೇನು, ಯಾವ ಒಳಿತಿನ ಸಂಗತಿಯೇ ಆದರೂ ಕನ್ನಡಿಯ ಗಂಟಿನಂತೆ ನಿರರ್ಥಕವಷ್ಟೆ. ಎಚ್ಚರು ಬದುಕಿಗಿಳಿಯಬೇಕು, ಇಳಿದು ಬೆಳಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT