ಸೋಮವಾರ, ಮೇ 17, 2021
31 °C

ಮಾತು - ಅರ್ಥ - ಅರಿವು

ಮಂಜುನಾಥ ಕೊಳ್ಳೇಗಾಲ Updated:

ಅಕ್ಷರ ಗಾತ್ರ : | |

Prajavani

ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತಃಪಿತರೌ ವಂದೇ ಪಾರ್ವತೀ ಪರಮೇಶ್ವರೌ

ಮಹಾಕವಿ ಕಾಲಿದಾಸನ ಈ ಸುಪ್ರಸಿದ್ಧ ಮಂಗಲಾಚರಣಶ್ಲೋಕವನ್ನು ಕೇಳದವರಾರು? ಮಾತು-ಅರ್ಥಗಳ ಸಂಯೋಗವನ್ನು ಜಗನ್ಮಾತಾಪಿತರಾದ ಪಾರ್ವತೀಪರಮೇಶ್ವರರ ದೈವೀಸಂಯೋಗಕ್ಕೆ ಹೋಲಿಸುವ ಮನೋಹರವಾದ ಶ್ಲೋಕವಿದು. ವಾಕ್ ಅರ್ಥಗಳಂತೆ ಒಂದಾಗಿರುವ ಪಾರ್ವತೀಪರಮೇಶ್ವರರನ್ನು ವಂದಿಸುವುದಾದರೂ ಏತಕ್ಕಾಗಿ? ವಾಗರ್ಥದ ಪ್ರಾಪ್ತಿಗಾಗಿ. ಈ ವಾಗರ್ಥವೆಂಬುದು ಬಿಡಿಬಿಡಿಯಾದ ವಾಕ್-ಅರ್ಥಗಳ ಒಟ್ಟು ರಾಶಿಯಲ್ಲ, ಅದರಿಂದ ಬೇರೆಯಾದದ್ದು, ಅವೆರಡರ ಸಂಯೋಗದಿಂದ ಹುಟ್ಟಿದ್ದು, ವಾಗರ್ಥವು ದೊರೆಯಬೇಕಾದರೆ ಮಾತು ಅರ್ಥಗಳ ನಡುವಣ ಸಂಯೋಗ, ಪರಿಪಾಕ ಬಹುಮುಖ್ಯ.

ಲೌಕಿಕ ಉದಾಹರಣೆಯನ್ನು ನೀಡುವುದಾದರೆ, ಅಕ್ಕಿಯೊಂದು ವಸ್ತು, ನೀರೊಂದು ವಸ್ತು. ಅವುಗಳನ್ನು ಬೆರೆಸಿಬಿಟ್ಟರೆ ಅನ್ನವಾಗುವುದಿಲ್ಲ. ಅವು ಬೆಂಕಿಯಮೇಲೆ ಹದವಾಗಿ ಬೇಯಬೇಕು, ಬೆಂದು ಬೆರೆಯಬೇಕು, ಗುಣ ಬೆಸೆಯಬೇಕು, ಆಗಷ್ಟೇ ಅನ್ನ. ಈ ಅನ್ನವು ಅಕ್ಕಿ-ನೀರುಗಳ ಸಂಯೋಗದಿಂದ ಹುಟ್ಟಿದ್ದು, ಆದರೆ ಅದು ಅಕ್ಕಿಯೂ ಅಲ್ಲ, ನೀರೂ ಅಲ್ಲ, ಅವೆರಡಕ್ಕಿಂತ ಬೇರೆಯಾದ್ದು. ಅನ್ನದಿಂದ ಅಕ್ಕಿಯನ್ನಾಗಲೀ ನೀರನ್ನಾಗಲೀ ಬೇರ್ಪಡಿಸಲಾರಿರಿ. ವಾಕ್ ಅರ್ಥಗಳು ಪರಸ್ಪರ ಮಥಿಸಿ, ಬೆಸೆದು ವಾಗರ್ಥವನ್ನು ಸೃಷ್ಟಿಸುವ ಪರಿ ಇದು - ಬೇಂದ್ರೆಯವರು ಹೇಳುತ್ತಾರಲ್ಲ ‘ಮಾತು ಮಾತು ಮಥಿಸಿ ಬಂದ ನಾದದ ನವನೀತಾ’. ಈ ನವನೀತವೊಂದು ಸಿದ್ಧಿ, ಅದಕ್ಕಾಗಿ ಮಥನ, ಉಳಿದದ್ದು ಬರಿಮಾತಿನ ಹೋರಟೆ.

ಮಾತು ಅರ್ಥವಿಲ್ಲದೇ ಇರಲಾರದೇ? ಓಹೋ, ಏಕಿಲ್ಲ? ದಿನವೆಲ್ಲ ನಾವಾಡುವ ಬಹುಪಾಲು ಇಂಥವೇ. ಎದುರು ಸಿಕ್ಕವರಿಗೆ ದೇಶಾವರಿಯಾಗಿ ‘ಊಟವಾಯ್ತಾ’ ಎಂದು ಪ್ರಶ್ನೆಯೆಸೆದು ಮುಂದುವರೆಯುತ್ತೇವೆ. ಪ್ರಶ್ನೆಯ ಕಳಕಳಿಯಿಲ್ಲ, ಉತ್ತರದ ನಿರೀಕ್ಷೆಯಿಲ್ಲ. ಅವರ ಊಟದ ಚಿಂತೆ ಮೊದಲೇ ಇಲ್ಲ. ಉತ್ತರಿಸುವವರೂ ಅಷ್ಟೇ, ಸಮಯಾನುಸಾರ ಏನೋ ಒಂದು ಉತ್ತರ ಎಸೆದು ಮುಂದುವರೆಯುತ್ತಾರೆ. ಮಗುವೊಂದು, ಜೋರಾಗಿ ತನಗರ್ಥವಾಗದ ತೆಲುಗುಭಾಷೆಯಲ್ಲಿ ಮಾತಾಡುತ್ತಿದ್ದವರಿಬ್ಬರನ್ನು ತೋರಿಸಿ ತಂದೆಯನ್ನು ಕೇಳುತ್ತಿತ್ತು ‘ಇವರೇಕೆ ಕೇಳಿಸದ ಹಾಗೆ ಮಾತಾಡುತ್ತಾರೆ?’ ಇಲ್ಲಿ 'ಕೇಳು'ವಿಕೆಗೆ ಮಗು ಇಟ್ಟಿದ್ದ ಅರ್ಥ, 'ಅರ್ಥ'. ಮಗುವಿನ ಪಾಲಿಗೆ ಇದು ಅರ್ಥವಿಲ್ಲದ ಶಬ್ದಗಳ ಸಂತೆ.

ಮಾತಿಲ್ಲದ ಅರ್ಥವೋ? ಬೆಟ್ಟದಷ್ಟಿದೆ - ದಿನಬೆಳಗಾದರೆ ಬೆಳಗುವ ಸೂರ್ಯ, ಅರಳುವ ಹೂ, ಹಾಡುವ ಹಕ್ಕಿ, ಎರಗುವ ಸಾವು, ನಿದ್ದೆಯಲ್ಲೂ ಅಪ್ರಯತ್ನತಃ ಮಗುವಿನ ಮೈಬಳಸುವ ತಾಯಿ - ಇವು ಮಾತಿನ ಹಂಗಿಲ್ಲದವು, ಸ್ವಯಂ ಅರ್ಥವುಳ್ಳವು. ಎಷ್ಟೋ ಬಾರಿ, ಆಪ್ತರ ಸನ್ನಿಧಿಯ ತುಂಬು ಮೌನವೇ ಮಾತಿಗಿಂತ ಅರ್ಥಪೂರ್ಣವೆನ್ನಿಸಿಬಿಡುತ್ತದೆ - ’ಮಾತಿಲ್ಲಿ ಮೈಲಿಗೆ.’

ಇನ್ನು ಅರಿವು, ಹುಡುಕಿ ಕಂಡುಕೊಳ್ಳಬೇಕಾದ್ದು. ಜ್ಞಾನವಂತ ಗೂಬೆಯಂತೆ (the Wise Old Owl), ಬಾಯ್ಮುಚ್ಚಿ, ಮೌನದಲ್ಲಿ ಇತರ ನಾಲ್ಕೂ ಇಂದ್ರಿಯಗಳನ್ನು ತೆರೆದುಕೊಂಡು ಗ್ರಹಿಸುತ್ತಾ ಸಾಗಬೇಕಾದ ಈ ಅನ್ವೇಷಣೆಯ ದಾರಿಯಲ್ಲಂತೂ ಬೇಡದ ಮಾತು ಮೈಲಿಗೆಯೇ ಸರಿ. ಇಂಗ್ಲಿಷಿನಲ್ಲೊಂದು ಹೇಳಿಕೆಯಿದೆ: ‘Don't speak unless you can improve the silence by speaking’. ಮಾತು ಅರ್ಥಕ್ಕೆ ಅಡಚಾಗದಂತಿರಬೇಕು, ಅರ್ಥ, ಅರಿವಿಗೆ ದಾರಿ ತೋರುವಂತಿರಬೇಕು. ಬಸವಣ್ಣನವರು ಹೇಳುತ್ತಾರಲ್ಲ, ‘ನುಡಿದರೆ ಮಾಣಿಕದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು’. ಇಂತಹ ಮಾತುಗಳು ಅಪರೂಪಕ್ಕೆ ಮಿಂಚಿ, ಅರಿವನ್ನು ಮಿಂಚಿಸಿ ಮರೆಯಾಗುವಂಥವು, ಬೆಲೆಬಾಳುವ ಮುತ್ತಿನ ಹಾರದಂಥವು. ಉಳಿದಂತೆ ಅನ್ವೇಷಕನ ಕೈಹಿಡಿದು ಸಾಗುವ ಮೌನ ಬಂಗಾರವೇ ಸರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.