ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ಏಕಾಂತದ ಸುಖ

Last Updated 15 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ನನ್ನ ಉಸಿರಿನ ಪರಿಚಯ, ನನ್ನಲ್ಲಿ ಹರಿವ ರಕ್ತದ ಓಟದ ಪರಿಚಯ ನನಗಾಗಬೇಕೆಂದರೆ ಅದು ಏಕಾಂತದಲ್ಲಿ ಮಾತ್ರ.

ಹುಟ್ಟಿದಾಗಿನಿಂದ ನಮ್ಮಂತೇ ಇರುವ ಮನುಷ್ಯರೊಂದಿಗೆ, ಪ್ರಾಣಿಗಳು ಪಕ್ಷಿಗಳು ಗಿಡಮರಗಳು, ಅಲ್ಲದೆ ಜಡವಸ್ತುಗಳ ಜೊತೆಯೂ, ಬೇಕಿದ್ದೋ ಬೇಕಿಲ್ಲದೆಯೋ ಸಂಬಂಧಗಳನ್ನು ಬಿದಿರಿನ ಬುಟ್ಟಿಯ ಹಾಗೆ ಹೆಣೆದುಕೊಂಡಿರುತ್ತೇವೆ. ಕೊಡು–ಕೊಳ್ಳುವಿಕೆಯ ನಿರಂತರ ಚಲನೆಯ ಬದುಕಿನಲ್ಲಿ ’ಸಂತೆಯಲೊಂದು ಮನೆಯ ಮಾಡಿ....‘ ಬಯಸುವ ಏಕಾಂತ ಕೈಗೆಟುಕುವುದೆ!

ಒಂದೊಂದು ಸಂಬಂಧಕ್ಕೆ ಒಂದೊಂದು ನಿರೀಕ್ಷೆ ಇದ್ದೀತು. ತಾಯಿಯಾಗಿ ಮಕ್ಕಳಿಗೆ ಹೆಂಡತಿಯಾಗಿ ಗಂಡನಿಗೆ ಸೊಸೆಯಾಗಿ ಮಗಳಾಗಿ. ನನ್ನನ್ನು ನಾನು ಆಯಾ ನಿರೀಕ್ಷೆಯ ಅಚ್ಚಿನಲ್ಲಿ ಹೊಯ್ದುಕೊಳ್ಳುತ್ತಾ ಸಾಗುತ್ತಿದ್ದೇನೆ. ಅದರಲ್ಲಿ ನನಗೇ ಸಂತೋಷವಿದೆ ಎಂದಾದರೆ ಸುಖ. ಆದರೆ ಯಾವುದೋ ಘರ್ಷಣೆಯನ್ನು ತಪ್ಪಿಸುವುದಕ್ಕೆಂದೋ ಅನಿವಾರ್ಯವೆಂದೋ ಅಪವಾದವಾಗಲಾರದ ಹಿಂಜರಿಕೆಯೋ ಆಗುವುದಾದರೆ ಮೂಗುಬ್ಬಸದಲ್ಲಿ ನಿತ್ಯಜೀವನ ನಿಂತನೀರಾದೀತು.

ಏಕಾಂತ; ನೆನಪುಗಳ ಮೆರವಣಿಗೆಯ ಕಾಲ. ಕವಿತೆಗಳು ಋತುಮಾನದ ಹಂಗಿಲ್ಲದೆ ಬಾಗಿಲು ತಟ್ಟಿ, ಕಲ್ಪನೆಗಳನ್ನೆಲ್ಲ ಅನಾವರಣಗೊಳಿಸಿ ಪದಗಳಲ್ಲಿ ಭಾವಗಳಾಗುವ ಕಾಲ. ಪ್ರಾರ್ಥನೆಯ ಕಾಲ. ಧ್ಯಾನದ ಕಾಲ. ಕನ್ನಡಿಯಲ್ಲಿ ವಿರಾಮವಾಗಿ ನೋಡಿಕೊಳ್ಳುವ ಕಾಲ. ಪ್ರತಿಬಿಂಬದಲ್ಲಿ ಗುರುತಿಸಿಕೊಳ್ಳುವ ಕಾಲ.

ಆ್ಯಂಟನ್ ಚೆಕಾಫ್‌ನ ‘ಪಣ’ ಎನ್ನುವ ಕಥೆಯಲ್ಲಿ ಬಡ್ಡಿ ವ್ಯಾಪಾರಿಯೊಬ್ಬ ವಕೀಲನೊಬ್ಬನಿಗೆ ಸವಾಲೆಸೆಯುತ್ತಾನೆ: 15 ವರ್ಷಗಳ ಕಾಲ ಏಕಾಂತದಲ್ಲಿರಬೇಕು. ಕೆಲವು ಶರತ್ತುಗಳಿಗೆ ಬದ್ಧನಾಗಿ ಏಕಾಂತವಾಸವನ್ನು ಪೂರೈಸಿದರೆ ವ್ಯಾಪಾರಿಯು ವಕೀಲನಿಗೆ 20 ಲಕ್ಷ ರೂ. ಕೊಡಬೇಕು ಎನ್ನುವುದು ಪಣ.

ಆ ಕಥೆಯಲ್ಲಿ ಮೊದಲ ವರ್ಷ ವಕೀಲ ಹೇಗೆ ಕಳೆದ, ಮುಂದಿನ ವರ್ಷಗಳನ್ನು ಹೇಗೆ ಕಳೆದ ಎನ್ನುವ ಸುದೀರ್ಘ ವಿವರಣೆಯಿದೆ. ವ್ಯಾಪಾರಿಯು ವಕೀಲನಿಗೆ ಓದಲು ನಿರಂತರವಾಗಿ ಪುಸ್ತಕಗಳನ್ನು ಒದಗಿಸುತ್ತಿರುತ್ತಾನೆ. 15 ವರ್ಷಗಳ ಕೊನೆಗೆ ವಕೀಲ ಬರೆದ ಪತ್ರ ಬಹಳ ಮಾರ್ಮಿಕವಾಗಿದೆ. ಅವನು ಪುಸ್ತಕಗಳ ಮೂಲಕ ಜಗತ್ತನ್ನು ತಿಳಿದುಕೊಂಡಿರುತ್ತಾನೆ. ಆದರೆ ಅವನು ಪುಸ್ತಕಗಳನ್ನೂ ತಿರಸ್ಕರಿಸುತ್ತಾನೆ; ಹಣವನ್ನೂ ತಿರಸ್ಕರಿಸುತ್ತಾನೆ; ಜಗತ್ತಿನ ಎಲ್ಲ ವಿವರಗಳನ್ನೂ ತಿರಸ್ಕರಿಸುತ್ತಾನೆ.

ಈ ಕಥೆಯನ್ನು ಹಲವು ರೀತಿಗಳಲ್ಲಿ ಅರ್ಥೈಸಿಕೊಳ್ಳಬಹುದು ಎನಿಸುತ್ತದೆ. ಏಕಾಂತದಲ್ಲಿ ಒದಗುವ ಆತ್ಮಾವಲೋಕ ಅದು ಆತ್ಮದರ್ಶನಕ್ಕೂ ಕಾರಣವಾಗಬಲ್ಲದು; ಅದು ಲೌಕಿಕ ಸಂಪತ್ತುಗಳ ಬಂಧನದಿಂದ ಮುಕ್ತವಾಗಿ ಆತ್ಮಶ್ರೀಯನ್ನು ದಕ್ಕಿಸಿಕೊಳ್ಳವ ತಪಸ್ಸು – ಎನ್ನುವುದನ್ನೂ ಅದು ಧ್ವನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT