ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಪ್ಲವನಾಮ ಸಂವತ್ಸರ ಭವಿಷ್ಯ: ಏ.13ರ 2021ರಿಂದ ಏ.1ರ 2022 ರವರೆಗೆ

Last Updated 12 ಏಪ್ರಿಲ್ 2021, 20:16 IST
ಅಕ್ಷರ ಗಾತ್ರ

ಮೇಷ: ದಶಮಭಾವದ ಶನಿ ಮಕರ ರಾಶಿಯಲ್ಲಿದ್ದಾನೆ. ಅಧಿಕಾರ ಪ್ರಾಪ್ತಿ, ಉನ್ನತ ಹುದ್ದೆಯಲ್ಲಿ ಅಧಿಪತಿಯಾಗುವ ಯೋಗವಿದೆ. ಸರ್ಕಾರಿ ನೌಕರಿಗೆ ಪ್ರಯತ್ನ ಮಾಡುವವರಿಗೆ ಅನುಕೂಲವಾಗಲಿದೆ. ಮನೆಯಲ್ಲಿ ಕಲಹಗಳು ಆಗುತ್ತವೆ. ಹಲ್ಲಿನ ತೊಂದರೆ, ಸರ್ಪ ಭಯ ಕಾಡಲಿದೆ. ವಿದ್ಯಾರ್ಥಿಗಳು ಓದಿನಲ್ಲಿ ಫಲ ಪಡೆಯುತ್ತಾರೆ. ಜಾಗ, ವಾಹನ ಖರೀದಿಗೆ ಯೋಗವಿಲ್ಲ. ಸರ್ಪಾರಾಧನೆ, ದುರ್ಗಾರಾಧನೆ, ಉದ್ದಿನಬೇಳೆ ದಾನ ಮಾಡಿದರೆ ಒಳಿತಾಗುತ್ತದೆ.

***

ವೃಷಭ: ಸಾಧಾರಣ ಗುರುಬಲವಿದೆ. ಶನಿ ಭಾಗ್ಯಸ್ಥಾನದಲ್ಲಿ ಇರುವುದರಿಂದ ಹಣದ ಹರಿವು ನಿಧಾನವಾಗಿರುತ್ತದೆ. ಕಾರ್ಯ ಕಲಾಪಗಳು ಮಂದಗತಿಯಲ್ಲಿ ಸಾಗುತ್ತವೆ. ಏಪ್ರಿಲ್‌ ಮತ್ತು ಮೇ ಬಳಿಕ ಹೊಸ ಮನೆ ನಿರ್ಮಾಣ, ವಾಹನ ಖರೀದಿಗೆ ಉತ್ತಮ ಸಮಯ. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಬಡ್ತಿ ಸಿಗಲಿದೆ. ಆಸ್ತಿ ವಿಷಯದಲ್ಲಿ ತೊಂದರೆಯಾಗಲಿದೆ. ವೈದ್ಯಕೀಯ ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ದಕ್ಷಿಣ ದೇಶಗಳ ತೀರ್ಥಯಾತ್ರೆ ಮಾಡಲು ಈ ವರ್ಷ ಸಕಾಲ. ಸ್ತ್ರೀ ದೇವರ ಆರಾಧನೆ, ದುರ್ಗಾ ಪಾರಾಯಣ, ಪವಮಾನ ಹೋಮ ಕಷ್ಟಗಳನ್ನು ದೂರ ಮಾಡುತ್ತದೆ.

***

ಮಿಥುನ: ಶರೀರದ ಕೆಳಭಾಗದ ಅಂಗಗಳಿಗೆ ಅನಾರೋಗ್ಯ ಕಾಡುವ ಭೀತಿಯಿರುತ್ತದೆ. ಚರ್ಮರೋಗ ಸಂಭವಿಸಬಹುದು. ಸಾಲದ ಬಾಧೆ ಕಾಡಲಿದ್ದು, ಮಕ್ಕಳ ವಿಚಾರದಲ್ಲಿ ಪೋಷಕರಿಗೆ ಚಿಂತೆ ಬಾಧಿಸಲಿದೆ. ಹಿರಿಯರು ಮನಸ್ಸು ವಿಚಲಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಜೂನ್‌, ಜುಲೈ ವೇಳೆಗೆ ಆಸ್ತಿ ವಿಷಯದಲ್ಲಿ ಸಮಸ್ಯೆಯಾಗಲಿದೆ. ಪರಿಹಾರಾರ್ಥ 23 ಸಾವಿರ ಶನಿಜಪ, ಎಣ್ಣೆ, ಕಂಬಳಿ ಹಾಗೂ ಧಾನ್ಯಗಳನ್ನು ದಾನ ಮಾಡಬೇಕು. ಅಶ್ಲೇಷ ಬಲಿ, ಸುಬ್ರಹ್ಮಣ್ಯ ದೇವರ ಪೂಜೆ, ಶನಿದೇವರ ಆರಾಧನೆ ಸೂಕ್ತ

***

ಕರ್ಕ: ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು, ಕೆಲಸಕ್ಕೆ ಆಲಸ್ಯತನ ಕಾಡುತ್ತದೆ. ಮನೆ ಹಾಗೂ ಕೆಲಸ ಮಾಡುವ ವಾತಾವರಣದಲ್ಲಿ ವಿರಸ ಉಂಟಾಗುತ್ತದೆ. ಸ್ತ್ರೀಯರಿಂದ ಪುರುಷರು ಅಪಮಾನಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಸರ್ಪ ಭಯ. ಮಾನಸಿಕ ಹಾಗೂ ದೈಹಿಕ ಬಾಧೆ ಇರುತ್ತದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಕಡಿಮೆಯಾಗುತ್ತದೆ. ಅಧಿಕಾರಿಗಳಿಗೆ ಬಡ್ತಿ ಕಠಿಣವಿದೆ. ಗುರುಚರಿತ್ರೆಯ ಪಾರಾಯಣ, ಜನ್ಮ ನಕ್ಷತ್ರದ ಆಧಾರದ ಮೇಲೆ ಶನಿದೇವರಿಗೆ ಅಭಿಷೇಕ ಮಾಡಿಸಿ.

***

ಸಿಂಹ: ಶನಿ ಮಹಾರಾಜ ಒಳ್ಳೆಯ ಫಲಗಳನ್ನು ನೀಡಲಿದ್ದಾನೆ. ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯದಿಂದ ನಡೆದುಕೊಂಡು ಹೋಗುವ ವಾತಾವರಣ ನಿರ್ಮಾಣವಾಗಲಿದೆ. ಜೂನ್‌ನಿಂದ ಎಲ್ಲ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಸಾಲದ ತಾಪತ್ರಯಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರೆ ನಿಮ್ಮ ಹಣ ನಿಮಗೆ ವಾಪಸ್‌ ಬರುತ್ತದೆ. ಸರ್ಕಾರಿ ನೌಕರಿ, ಬ್ಯಾಂಕ್‌, ಶೈಕ್ಷಣಿಕ ರಂಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಲಾಭ. ಏಪ್ರಿಲ್‌ ಹಾಗೂ ಮೇನಲ್ಲಿ ಆಸ್ತಿ ಖರೀದಿ ಸಾಧ್ಯತೆ. ರಾಜಕಾರಣಿಗಳಿಗೆ ಜನ ಬೆಂಬಲ ಸಿಗುತ್ತದೆ. ದುರ್ಗಾ ಸ್ತುತಿ, ಸುಬ್ರಹ್ಮಣ್ಯ ದೇವರ ಆರಾಧನೆ, ದಾನ ಮತ್ತು ಚಂಡಿ ಹೋಮ ಮಾಡಬೇಕು.

***

ಕನ್ಯಾ: ದ್ವಂದ್ವ ಹಾಗೂ ಚಂಚಲದ ಮನಸ್ಥಿತಿ ಇರಲಿದ್ದು, ಪಂಚಮದಲ್ಲಿ ಶನಿದೇವರ ಕಾಟ ಇರಲಿದೆ. ವರ್ಷಪೂರ್ತಿ ಚಿಂತೆಯಲ್ಲಿ ಕಳೆದುಹೋದೆನೆಲ್ಲ ಎನ್ನುವ ಮನಸ್ಥಿತಿ ಕಾಡುತ್ತದೆ. ದಾಂಪತ್ಯದ ಭಿನ್ನಾಭಿಪ್ರಾಯ ಕುಟುಂಬದ ಕಲಹಕ್ಕೆ ಕಾರಣವಾಗುತ್ತದೆ. ಗುರು ಕುಂಭ ರಾಶಿಯಲ್ಲಿ ಸಂಚಾರ ಮಾಡುವ ಕಾರಣ ಹಳೆಯ ಮನೆ ಹಾಗೂ ವಾಹನ ಖರೀದಿ ಸಾಧ್ಯತೆಯಿದೆ. ದುಶ್ಚಟಗಳನ್ನು ಬಿಡಲು ಸರಿಯಾದ ಸಮಯ. ಹೆಣ್ಣುಮಕ್ಕಳಿಗೆ ಗುರು ಬಲವಿದೆ. ಅವರು ಮಾಡುವ ಕೆಲಸದಲ್ಲಿ ಉನ್ನತಿ ಸಿಗಲಿದೆ. ಶನಿದೇವರ ಪೂಜೆ, ಆರಾಧನೆ ಮತ್ತು ವಸ್ತ್ರ ದಾನ ಮಾಡಬೇಕು.

***

ತುಲಾ: ಕುಟುಂಬದಲ್ಲಿ ಕಲಹ ಕಾಡುತ್ತದೆ. ಮುಖದ ರೋಗಗಳು ಬಾಧಿಸಲಿವೆ. ಮನಸ್ಸಿನ ಸುಖ ಕ್ಷೀಣಿಸುತ್ತದೆ. ಮಕ್ಕಳಿಗೆ ಮಂಗಳ ಕಾರ್ಯಕ್ಕೆ ನವೆಂಬರ್‌ ಬಳಿಕ ಉತ್ತಮ ಸಮಯ. ವಿದ್ಯಾರ್ಥಿಗಳಿಗೆ ಹಿನ್ನಡೆ ಕಾಣಲಿದ್ದು, ಮುಂದೆ ಬರಲು ಗುರುಸ್ಮರಣೆ ಮಾಡಬೇಕು. ಅಧಿಕಾರಿಗಳಿಗೆ ಅಷ್ಟೊಂದು ಜನಬಲವಿಲ್ಲ. ದ್ವೇಷಿಸುವ ಜನರೇ ಪ್ರೀತಿಯಿಂದ ಕಾಣುವಂತಾಗುತ್ತದೆ. ತುಲಾ ರಾಶಿಯವರು ಹೋಗುವ ಕ್ಷೇತ್ರಗಳಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಶನಿ ಜಪ, ಶನಿ ಶಾಂತಿ, ದುರ್ಗಾ ನಮಸ್ಕಾರ ಪೂಜೆ ಮಾಡಿ; ಕಂಬಳಿ, ಕಬ್ಬಿಣದ ವಸ್ತುಗಳನ್ನು ದಾನ ಮಾಡಬೇಕು.

***

ವೃಶ್ಚಿಕ: ಈ ರಾಶಿಯವರು ಸ್ಥಿರ ಮನಸ್ಥಿತಿ ಹೊಂದಿರುತ್ತಾರೆ. ಎಲ್ಲವನ್ನೂ ಗುಟ್ಟಾಗಿ ಇಟ್ಟುಕೊಳ್ಳಬೇಕು ಎಂದು ಬಯಸುತ್ತಾರೆ. ನ್ಯಾಯಾಲಯದ ವಿಚಾರಗಳಲ್ಲಿ ಮುಂದಕ್ಕೆ ಹೋಗಲು ಸರಿಯಾದ ಸಮಯವಲ್ಲ. ಮೂರನೇ ಶನಿ ಸಂಪತ್ತು ಕೊಟ್ಟರೂ ಗುರುಬಲವಿಲ್ಲದ ಕಾರಣ ಕೈಗೆ ಸಿಗುವುದಿಲ್ಲ. ಸಂಗೀತ, ಕಲೆ, ವಕೀಲ, ವೈದ್ಯ ಹಾಗೂ ವಿದ್ಯಾರ್ಥಿಗಳಿಗೆ ಸಾಧಾರಣ ಫಲಗಳಿವೆ. ಜೂನ್‌, ಜುಲೈನಲ್ಲಿ ಹಿರಿಯರಿಗೆ ಶಸ್ತ್ರಚಿಕಿತ್ಸೆ ಮಾಡಿಸುವ ಸಾಧ್ಯತೆಯಿದೆ. ನೌಕರಿಯಲ್ಲಿ ಸ್ಥಾನಪಲ್ಲಟ, ಸರ್ಕಾರಿ ನೌಕರರಿಗೆ ಭಯದ ವಾತಾವರಣ ಉಂಟಾಗಲಿದೆ. ಗುರುಚರಿತ್ರೆ ಪಾರಾಯಣ, ಗುರುಜಪ ಹಾಗೂ ಗುರು ಶಾಂತಿ ಮಾಡಬೇಕು.

***

ಧನು: ದ್ವಂದ್ವ ಸ್ವಭಾವ ಈ ರಾಶಿಯವರದ್ದು. ದೇಹಾರೋಗ್ಯ ಹದಗೆಡುವ ಸ್ಥಿತಿ ಇದೆ. ಆಹಾರ, ವಿಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಸಾಲದ ಬಾಧೆ ಕಾಡಲಿದೆ. ಗುರುಗ್ರಹ ಪೂಜೆ ಮಾಡಿದರೆ ವಿವಾಹಕ್ಕೆ ಉತ್ತಮ ಫಲ ಸಿಗುತ್ತದೆ. ವಾಹನ, ಭೂಮಿ ಖರೀದಿಗೆ ಮುಂದಾದರೆ ಮೋಸ ಹೋಗುವ ಸಾಧ್ಯತೆಯಿದೆ. ಏಪ್ರಿಲ್‌ ಹಾಗೂ ಮೇನಲ್ಲಿ ಮನೆಯಲ್ಲಿ ಒಳ್ಳೆಯ ಕಾರ್ಯಕ್ರಮ ನಡೆಯಲಿವೆ. ರೈತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಸಿಗುವುದಿಲ್ಲ. ಶನಿ ಜಪ, ರಾಹು ಜಪ, ಉದ್ದು, ಹುರುಳಿ ಮತ್ತು ಎಳ್ಳು ದಾನ ಮಾಡಬೇಕು.

***

ಮಕರ: ಪ್ರಾರಂಭದಲ್ಲಿ ಭಿನ್ನಾಭಿಪ್ರಾಯಗಳು, ಆರೋಗ್ಯ ಸಮಸ್ಯೆ ಕಾಡುತ್ತವೆ. ಜನ್ಮರಾಶಿಯಲ್ಲಿ ಶನಿ ಇರುವ ಕಾರಣ ದುಃಖ ಹೆಚ್ಚಿರುತ್ತದೆ. ಹಣ ವ್ಯರ್ಥವಾಗಿ ಖರ್ಚಾಗುತ್ತದೆ. ಮೂಲ ಜಾತಕದಲ್ಲಿ ಶನಿ ಬಲಿಷ್ಠವಾಗಿದ್ದರೆ ಮಾತ್ರ ದುಷ್ಪರಿಣಾಮಗಳು ಉತ್ತಮ ಪರಿಣಾಮಗಳಾಗಿ ಬದಲಾಗುತ್ತವೆ. ವಿದ್ಯಾರ್ಥಿಗಳಿಗೆ ಓದಿನತ್ತ ಆಸಕ್ತಿ ಕಡಿಮೆ ಇರುತ್ತದೆ. ಗುರುವಿನ ಅನುಗ್ರಹವಿದ್ದು, ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಕುಟುಂಬದಲ್ಲಿ ಅನಾರೋಗ್ಯಕರ ಪರಿಸ್ಥಿತಿ, ಉದ್ಯೋಗದಲ್ಲಿ ಸ್ಥಾನಪಲ್ಲಟವಾಗಲಿದೆ. ರಾಜಕೀಯದಲ್ಲಿ ಇರುವವರಿಗೆ ಮಂತ್ರಿಸ್ಥಾನ ಸಿಗುವ ಯೋಗವಿದೆ. ಶನಿ ಶಾಂತಿ, ಶನಿ ಜಪ, ಸ್ತೋತ್ರಗಳ ಪಠಣ, ಲಕ್ಷ್ಮಿ ನರಸಿಂಹದೇವರ ಧ್ಯಾನ ಮಾಡಬೇಕು.

***

ಕುಂಭ: ಸಾಡೇಸಾಥಿಯ ಪ್ರಾರಂಭ. ಜನ್ಮರಾಶಿಯಲ್ಲಿ ಶನಿ ಇರಲಿದ್ದು, ಸಾಲದ ಬಾಧೆ ಹೆಚ್ಚಾಗಲಿದೆ. ಕುಟುಂಬದಲ್ಲಿ ಮನಸ್ಥಾಪ ಉಂಟಾಗಿ ಅಶಾಂತಿ ಕಾಡುತ್ತದೆ. ಆಸ್ತಿ ವಿಷಯದಲ್ಲಿ‌ ಅಣ್ಣ–ತಮ್ಮಂದಿರ ಕಲಹವಾಗಲಿದೆ. ಶನಿದೇವರ ಆರಾಧನೆಯೊಂದೇ ಜೀವನ ಉತ್ತಮವಾಗಿಸುತ್ತದೆ. ವಕೀಲ, ವಿದ್ಯಾರ್ಥಿಗಳಿಗೆ ಶುಭಕರವಲ್ಲ. ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ವ್ಯಾಪಾರಿಗಳಿಗೆ ಲಾಭ ಸಿಗಲಿದೆ. ವೈದ್ಯರಿಗೆ, ಸಾರ್ವಜನಿಕರಿಂದ ತೊಂದರೆಯಾಗಲಿದೆ. ವಾಹನ ಹಾಗೂ ಸ್ಥಿರಾಸ್ತಿಗಳ ಖರೀದಿಗೆ ಯೋಗ್ಯ ಸಮಯವಲ್ಲ. ಕಂಬಳಿ ದಾನ, ಶನಿ ಜಪ, ಗಣಹೋಮ ಮಾಡಬೇಕು.

***

ಮೀನ: ಚರ್ಮರೋಗ ಕಾಡಲಿದೆ. ಸರ್ಕಾರಕ್ಕೆ ಮರಳಿ ಹಣ ಕೊಡುವ ಸ್ಥಿತಿ ಬರಬಹುದು. ಹಿರಿಯರ ಜೊತೆ ಜಗಳವಾಗುವ ಪರಿಸ್ಥಿತಿಯಿರಲಿದೆ. ಉಪನಯನಕ್ಕೆ ಗುರುಬಲವಿಲ್ಲ. ಶಿಕ್ಷಣದಲ್ಲಿ ಬದಲಾವಣೆ ಆಗುತ್ತದೆ. ಓದಬೇಕು ಎನ್ನುವ ಛಲ ಬೆಳೆಯುತ್ತದೆ. ವಕೀಲರಿಗೆ ಶುಭಪ್ರದವಾಗಲಿದೆ. ದೂರದಲ್ಲಿ ಉದ್ಯೋಗ ಸಿಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುರಿ ಸಾಧನೆಗೆ ಅವಕಾಶವಿದೆ. ದುರ್ಗಾ ಶಾಂತಿ, ಶನಿಶಾಂತಿ ಹೋಮ ಹಾಗೂ ಗುರುವಿನ ಆರಾಧನೆ ಮಾಡಬೇಕು.

***

ಹೀಗಿರಲಿದೆ ವರ್ಷ ಭವಿಷ್ಯ

ಪ್ಲವನಾಮ ಸಂವತ್ಸರದಲ್ಲಿ ರಾಜ, ಮಂತ್ರಿ, ಸೈನ್ಯ ಎಲ್ಲವೂ ಮಂಗಳನಾಗಿದ್ದಾನೆ. ಮೊದಲ ಆರು ತಿಂಗಳು ಶುಕ್ರ ಸಸ್ಯಾಧಿಪತಿಯಾಗಿದ್ದು, ಮೇಘಕ್ಕೆ ಮಂಗಳವೇ ಅಧಿಪತಿ. ಮೇಘಾಧಿಪತಿ ಕುಜವೂ ಆಗಿರುವುದರಿಂದ ಪಶುಪಕ್ಷಿಗಳ ಬೆಳವಣಿಗೆ ಸಮೃದ್ಧಿಯಾಗಲಿದೆ. ಮಳೆ ಜೋರಾಗಿ ಬಂದು ಬೆಳೆ ನಾಶವಾಗುವ ಭೀತಿಯಿದೆ. ಹೀಗಾಗಿ ಯಾವುದೇ ಧಾನ್ಯವಾದರೂ ಎಚ್ಚರಿಕೆ ವಹಿಸಿ, ಬೆಳೆ ಬಂದ ತಕ್ಷಣ ಕಟಾವು ಮಾಡಬೇಕು. ನಿರುದ್ಯೋಗ ಹಾಗೂ ಕಳ್ಳರ ಕಾಟ ಹೆಚ್ಚಾಗಲಿದೆ. ಧರ್ಮ ಮಾರ್ಗ ಬಿಟ್ಟು ಸಾಗುವುದಿಂದ ಅಪರಾಧಗಳು ಹೆಚ್ಚಾಗುತ್ತವೆ. ರೋಗ ವ್ಯಾಪಕವಾಗಿ ಹರಡುತ್ತದೆ.

ಮಂಗಳ ಕೋಪಿಷ್ಠವಾಗಿ ಭೂಮಿಯಿಂದ ದೂರವಿರುವ ಗ್ರಹ. ಆದ್ದರಿಂದ ರಾಜರ ನಡುವೆ ಹಾಗೂ ನೆರೆ ದೇಶಗಳ ಜೊತೆಗೆ ಯುದ್ಧವಾಗುವ ಭೀತಿಯಿದೆ. ಗುಜರಾತ್‌ ಹಾಗೂ ನಾಗಪುರ ಪ್ರದೇಶದಲ್ಲಿ ಹೆಚ್ಚು ಪ್ರಮಾದಗಳು ಕಂಡುಬರುತ್ತವೆ. ಆಪತ್ತು, ಸಂಪತ್ತು ಹಾಗೂ ವಿಪತ್ತೂಗಳು ಇವೆ. ಇವೆಲ್ಲದರ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಉತ್ತುಂಗಕ್ಕೆ ಏರಲಿದೆ. ದೇವಸ್ಥಾನಗಳಿಗೆ ಹೋಗುವುದಷ್ಟೇ ಮನುಷ್ಯ ಧರ್ಮವಲ್ಲ. ಕೆಳಗೆ ಬಿದ್ದ ವ್ಯಕ್ತಿಯನ್ನು ಕೈ ಹಿಡಿದು ಎತ್ತುವುದೇ ಶ್ರೇಷ್ಠ ಧರ್ಮ. ಇದು ಈಗ ಆಗಬೇಕಾದ ತುರ್ತು ಕೆಲಸ. ಯುಗದ ಆದಿಯೇ ಯುಗಾದಿ; ಬದಲಾವಣೆಗೆ ಸಕಾಲವೂ ಹೌದು. ಏನೇ ಕಷ್ಟಗಳು ಎದುರಾದರೂ ನವಗ್ರಹ ದೇವರು, ಸೂರ್ಯ, ಗುರು ಹಾಗೂ ಶುಕ್ರನ ಆರಾಧನೆಯಿಂದ ಒಳಿತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT