ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಏರಿಳಿತಗಳೇ ಸೃಷ್ಟಿಯ ಚೈತನ್ಯ

ಅಕ್ಷರ ಗಾತ್ರ

ವಿಶ್ವಸೃಷ್ಟಿ ಕುರಿತು ಹಿಂದೂ ಶಾಸ್ತ್ರಗ್ರಂಥಗಳು ವೈಜ್ಞಾನಿಕವಾಗೇ ವಿವರಿಸಿವೆ. ಅವು ಮಾನವನ ಮನೋಚಾಂಚಲ್ಯಕ್ಕೂ ಭಾಷ್ಯ. ವ್ಯಾಸರು ಬರೆದ 18 ಮಹಾಪುರಾಣಗಳಲ್ಲಿ ಅತ್ಯಂತ ಶ್ರೇಷ್ಟವಾದ ಶಿವಮಹಾಪುರಾಣದ ಮೊದಲನೆ ಸಂಹಿತೆ ‘ವಿದ್ಯೇಶ್ವರ’ದ ಮೂರನೇ ಅಧ್ಯಾಯದಲ್ಲಿ ‘ಪರಬ್ರಹ್ಮ’ ವಸ್ತುವಿನ ಬಗ್ಗೆ ವಿಶ್ಲೇಷಣೆ ಇದೆ. ನಿರ್ಗುಣವಾದ ‘ಪರಬ್ರಹ್ಮ’ಸ್ವರೂಪವನ್ನು ಪ್ರಯಾಗ(ಮೂರು ನದಿಗಳ ಸಂಗಮ)ದ ಷಟ್ಕುಲೀನ (ತ್ರಿವೇಣಿ ಸಂಗಮದ ಆರು ದಡಗಳು) ಋಷಿಗಳಿಗೆ ಬ್ರಹ್ಮದೇವ ವಿವರಿಸುತ್ತಾನೆ. ಪರಬ್ರಹ್ಮನಲ್ಲಿ ಸತ್ವ–ರಜಸ್ಸು-ತಮೋಗುಣಗಳು ಸಮಾವಸ್ಥೆಯಲ್ಲಿದ್ದಾಗ ಸೃಷ್ಟಿ ಜಡವಾಗಿತ್ತು. ಯಾವಾಗ ನಿರ್ಗುಣಾತ್ಮಕವಾಗಿದ್ದ ಬ್ರಹ್ಮವಸ್ತುವಿನೊಳಗಿನ ಸತ್ವ-ರಜಸ್-ತಮ ಎಂಬ ಮೂರು ಗುಣಗಳು ಚಂಚಲವಾದವೋ, ಆಗ ವಿಶ್ವ ಸೃಷ್ಟಿಯಾಯಿತು ಎಂದು ತಿಳಿಸುತ್ತಾನೆ.

ಬ್ರಹ್ಮದೇವನ ಪ್ರಕಾರ ಪ್ರತಿಯೊಂದು ವಸ್ತುವಿನಲ್ಲಿಯೂ ಸತ್ವ-ರಜಸ್-ತಮ’ಎಂಬಗಳು ಇದ್ದೇ ಇರುತ್ತವೆ. ಇವು ಚಲನಶೀಲವಾದಾಗ ಜೀವಸೃಷ್ಟಿಯಾಗುತ್ತದೆ. ಇದನ್ನು ವಿಜ್ಞಾನ ಹೇಳುವ ಪ್ರೋಟಾನ್-ಎಲೆಕ್ಟ್ರಾನ್-ನ್ಯೂಟ್ರಾನ್ ಚಲನಶೀಲತೆಗೂ ಹೋಲಿಸಬಹುದು. ಹಾಗೇ ಒಳ್ಳೆಯದು-ಕೆಟ್ಟದ್ದು ಅನ್ನೋ ಮನುಷ್ಯನೊಳಗಿನ ಗುಣಾವಗುಣಗಳಿಗೂ ಉದಾಹರಿಸಬಹುದು. ಯಾವ ಮನುಷ್ಯನಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಒಂದೇ ಸಮನಾಗಿರುವುದಿಲ್ಲ. ವಿಷಯ-ವೈರುಧ್ಯಗಳು ಏರಿಳಿತವಾಗಿ ಮನುಷ್ಯರೊಳಗೆ ಘರ್ಷಣೆ ಆಗುತ್ತಿರುತ್ತದೆ. ಇದರಿಂದ ಕಾಲಕಾಲಕ್ಕೆ ರಾಮ-ರಾವಣರ ಉದಯ ಆಗುತ್ತಲೇ ಇರುತ್ತದೆ. ರಾಮಾಯಣ-ಮಹಾಭಾರತಗಳು ಪ್ರತಿ ಮನೆಯಲ್ಲು ನಡೆಯುತ್ತಲೇ ಇರುತ್ತವೆ.

ಸತ್ವ-ರಜಸ್-ತಮಗಳ ಸಂಚಲನದಿಂದ ಸೃಷ್ಟಿಯಾದ ವಿಶ್ವಕ್ಕೆ, ಭಗವಂತ ಕೊಟ್ಟ ನಿಯಮವಾದ ಸೃಷ್ಟಿ-ಸ್ಥಿತಿ-ಲಯಗಳು ಸಹ ಸಮನಾಗಿರುವುದಿಲ್ಲ. ವೈದ್ಯರ ಇಸಿಜಿ ಸೂಚಕಗೆರೆಗಳಲ್ಲೂ ಏರುಪೇರಿದ್ದರೆ ಜೀವ, ಸಮಗೆರೆ ಬಂದರೆ ನಿರ್ಜೀವ. ಅಂದರೆ, ಕ್ಷಣಕ್ಷಣಕ್ಕೂ ಬದಲಾಗುವ ಏರಿಳಿತವೇ ಸೃಷ್ಟಿಯ ಚೈತನ್ಯ. ಆ ಬದಲಾವಣೆಯ ಗುಣ ಕಳೆದುಕೊಂಡಾಗ ಸೃಷ್ಟಿ ನಿಸ್ತೇಜವಾಗುತ್ತೆ. ಅದಕ್ಕಾಗಿ ಭೂಮಿ ಸೂರ್ಯನ ಸುತ್ತುತ್ತ ಜೀವೋತ್ಸಾಹ ಪಡೆಯುತ್ತೆ. ಯಂತ್ರದ ಚಕ್ರ ತಿರುಗಿ ಶಕ್ತಿ ಉತ್ಪಾದಿಸುತ್ತೆ, ನಮ್ಮ ಜೀವನಚಕ್ರ ತಿರುಗುತ್ತಾ ಬದುಕಿಗೆ ಶಕ್ತಿ ತುಂಬಿಕೊಡುತ್ತೆ.

ಸದಾ ಬದಲಾಗುವ ಗುಣವೇ ಸೃಷ್ಟಿಯ ಚೈತನ್ಯ ಅಂದ ಮೇಲೆ ಮನುಷ್ಯರ ಕಷ್ಟ-ಸುಖದ ಏರಿಳಿತಗಳು ಸಹ ಜೀವನಚೈತನ್ಯದ ಲಕ್ಷಣ. ಕಷ್ಟಕ್ಕೆ ಅಂಜಿ ಕೇವಲ ಸುಖ ಬಯಸಿದರೆ ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ. ಸಾಧಿಸಬೇಕೆಂದು ಮುನ್ನುಗುವ ಛಲವೇ ಜೀವನದ ಬಲ. ಮನುಷ್ಯರ ವಿಭಿನ್ನ ಗುಣಗಳ ತಾಕಲಾಟ, ಥರಥರದ ಅವಾಂತರಗಳು, ತಹತಹದ ತುಡಿತಗಳು ಇದ್ದಾಗಲೇ ಅದೊಂದು ಬದುಕು ಅನ್ನಿಸಿಕೊಳ್ಳುವುದು. ಸಿಹಿ-ಕಹಿ, ಕಷ್ಟ-ಸುಖ ಎರಡೂ ಇದ್ದರೆ ಜೀವನ ರಸಮಯ. ಬರೀ ಸುಖ, ಬರೀ ದುಃಖ ಇದ್ದರೆ ಸ್ವಾರಸ್ಯ ಇರುವುದಿಲ್ಲ.

ನಮ್ಮ ಒಳಗೂ ಹೊರಗೂ ದಿಗಂತದಾಚೆಗೂ ಏರಿಳಿತಗಳೇ ಶಕ್ತಿಯ ಮೂಲ. ಕಷ್ಟ-ಸುಖಗಳೇ ನಮ್ಮ ಶಕ್ತಿ. ಅದು ಛಲದ ರೂಪದಲ್ಲಿರುತ್ತೆ. ಆ ಛಲವೇ ನಮ್ಮ ಬದುಕಿನ ಬಲ. ಕಷ್ಟ ಬಂದಷ್ಟು ಮನುಷ್ಯ ಗಟ್ಟಿಯಾಗುತ್ತಾನೆ. ಸುಮ್ಮನೆ ಕೂರುವುದು ಸುಖ, ನಡೆಯುವುದು ಕಷ್ಟ. ಆದರೆ, ಸುಮ್ಮನೆ ಕೂತರೆ ರೋಗ, ನಡೆದಾಡಿದರೆ ನಿರೋಗ. ಹೀಗಾಗಿ ಜೀವ-ಜೀವನದ ಏರಿಳಿತ ಎದುರಿಸಲು ನಮಗೆ ದೈವಿಕ ಶಕ್ತಿ ಬೇಕು. ಅದಕ್ಕಾಗಿ ನಿತ್ಯ ಧ್ಯಾನ-ಯೋಗಗಳನ್ನು ಮಾಡಬೇಕು.

ಜ್ಞಾನಿಯಾದವರು ಕಷ್ಟ ಬಂದಾಗ ಭಗವಂತನ ದೂರದೇ, ಸುಖ ಬಂದಾಗ ಮರೆಯದೇ, ಸಮಚಿತ್ತದಿಂದ ಭಗವಂತನನ್ನು ಆರಾಧಿಸಬೇಕು. ಗುರುಸಾನ್ನಿಧ್ಯದಲ್ಲಿ ಈಶ್ವರನ ಸ್ವರೂಪ ತಿಳಿದು, ಭಕ್ತಿಯಿಂದ ಕೀರ್ತನ ಮತ್ತು ಮನನ ಮಾಡಬೇಕು. ಆಗ ‘ಸಚ್ಚಿದಾನಂದ’ಸ್ವರೂಪನಾದ ಶಿವನ ದರ್ಶನವಾಗಿ ಶಿವಸಾಯುಜ್ಯ ಹೊಂದಬಹುದು ಎಂದು ವೇದವ್ಯಾಸರು ಶಿವಮಹಾಪುರಾಣದಲ್ಲಿ ಹೇಳಿದ್ದಾರೆ. ‘ಸಚ್ಚಿದಾನಂದ’ರೂಪಾತ್ಮಕವಾಗಿರುವ ಅಸದೃಶವಾದ ಪರಬ್ರಹ್ಮವಸ್ತು ಪರಮೇಶ್ವರನನ್ನು ಕಾಣಲು ಭಕ್ತಿಯನ್ನು ಮುಕ್ತಿಗೆ ಸಾಧನವಾಗಿ ಬಳಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT