ಭಾನುವಾರ, ಅಕ್ಟೋಬರ್ 25, 2020
28 °C

ವಾರ ಭವಿಷ್ಯ: 11-10-2020 ರಿಂದ 17-10-2020 ರವರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕಕ್ಕೆ 8197304680

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ವಿದ್ಯಾರ್ಥಿಗಳಿಗೆ ಸಾಧನೆಯ ಹಂತದಲ್ಲಿ ಉತ್ತಮ ಯಶಸ್ಸು ಇರುತ್ತದೆ. ಮಾತಿನಲ್ಲಿ ಕಠೋರತೆ ಬೇಡ. ಸಮಾಧಾನದಿಂದ ಮಾತನಾಡಿದಲ್ಲಿ ಬಂಧುಗಳು ಮತ್ತು ನೆರೆಹೊರೆಯವರು ಕೂಡ ನಿಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ನೀಡುವರು. ನಿಮ್ಮ ಆಲೋಚನೆಗೆ ತಕ್ಕಂತೆ ನಿಮ್ಮ ಸಂಗಾತಿಯು ಸಹಕರಿಸುವರು. ಸ್ಥಿರಾಸ್ತಿಯ ವಿಚಾರದಲ್ಲಿ ಶುಭವಾರ್ತೆ ಕೇಳಿಬರುತ್ತದೆ. ಹೆಣ್ಣುಮಕ್ಕಳ ಆಲಂಕಾರಿಕ ವಸ್ತುಗಳಿಗಾಗಿ ಧನವ್ಯಯ ಆಗುವುದು. ಕೃಷಿಯಲ್ಲಿ ನಿಮ್ಮ ನಿರೀಕ್ಷೆಯು ಸಂಪೂರ್ಣವಾಗುವುದಿಲ್ಲ. ಧನದ ಒಳಹರಿವು ಸಾಮಾನ್ಯವಾಗಿರುತ್ತದೆ. ವೃತ್ತಿಯಲ್ಲಿ ಯಾವುದೇ ರೀತಿಯ ಏರಿಳಿತಗಳು ಇರುವುದಿಲ್ಲ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ನಿಮ್ಮ ವೈಯಕ್ತಿಕ ವಿಚಾರಗಳನ್ನು ಬೇರೆಯವರಲ್ಲಿ ಹೇಳಿಕೊಳ್ಳದೆ ಕುಟುಂಬದೊಂದಿಗೆ ಕುಳಿತು ಚರ್ಚಿಸುವುದು ಬಹಳ ಉತ್ತಮ. ಯಂತ್ರಾಗಾರಗಳಲ್ಲಿ ಮತ್ತು ಅಗ್ನಿಶಾಮಕ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಎಚ್ಚರಿಕೆ ವಹಿಸಿ. ಆರ್ಥಿಕ ಸಂಕಷ್ಟಗಳು ಎದುರಾದರೂ ಸಂಪಾದನೆ ಹೆಚ್ಚಿಸಲು ಬದಲೀ ಮಾರ್ಗಗಳತ್ತ ಆಲೋಚಿಸುವಿರಿ. ವೈದ್ಯರಿಗೆ ಒತ್ತಡದ ನಡುವೆಯೂ ಸಂಪಾದನೆ ಸಹ ಹೆಚ್ಚುತ್ತದೆ. ವೃತ್ತಿಯಲ್ಲಿದ್ದ ಒತ್ತಡಗಳು ಕಡಿಮೆಯಾಗುವ ಎಲ್ಲಾ ಲಕ್ಷಣಗಳಿವೆ. ಸಂಗಾತಿಯು ನಡೆಸುವ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಬೇರೆಯವರನ್ನು ಅನವಶ್ಯಕವಾಗಿ ಹಚ್ಚಿಕೊಳ್ಳುವುದರಿಂದ ಆದಾಯಕ್ಕಿಂತ ನಷ್ಟವೇ ಹೆಚ್ಚು. ಅದರಲ್ಲೂ ಅಪರಿಚಿತರ ಬಗ್ಗೆ ಎಚ್ಚರಿಕೆ ಬಹಳ ಅಗತ್ಯ. ನಿಮ್ಮ ಕೆಲವು ನಿರೀಕ್ಷಿತ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಖಂಡಿತಾ ನಿರೀಕ್ಷಿಸಬಹುದು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಬಹುದು. ಕಣ್ಣಿನ ಸೋಂಕು ಬಂದಲ್ಲಿ ಅದಕ್ಕೆ ಚಿಕಿತ್ಸೆ ಅನಿವಾರ್ಯ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡ್ಡಿ, ಆತಂಕಗಳು ನಿವಾರಣೆಯಾಗುತ್ತವೆ. ಉನ್ನತ ವಿದ್ಯಾಭ್ಯಾಸ ಮಾಡಬೇಕೆನ್ನುತ್ತಿರುವವರಿಗೆ ಸೂಕ್ತ ಅವಕಾಶಗಳು ಅರಸಿ ಬರುತ್ತವೆ. ಹಣದ ಒಳಹರಿವು ಏರಲಿದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ )
ಮನೆಯಲ್ಲಿ ಸಂತೋಷದ ವಾತಾವರಣದಿಂದ ಆನಂದಗೊಳ್ಳುವಿರಿ. ಧನದ ಹರಿವು ತೃಪ್ತಿಕರವಾಗಿರಲಿದೆ. ಒಡಹುಟ್ಟಿದವರು ಮತ್ತು ಬಂಧು ಬಾಂಧವರೊಂದಿಗೆ ಸಂಬಂಧ ವೃದ್ಧಿಸುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ವಾರ. ಮಕ್ಕಳಿಗಾಗಿ ಧನವ್ಯಯ ಮಾಡಬೇಕಾಗುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಬರಬಹುದು. ಮಾತಿನ ಮಧ್ಯೆ ಬಂದ ಸಂಗಾತಿಯ ತೀಕ್ಷ್ಣ ಪ್ರತಿಕ್ರಿಯೆ ನಿಮ್ಮನ್ನು ಪೇಚಿಗೆ ಸಿಲುಕಿಸುತ್ತದೆ. ವೃತ್ತಿಯಲ್ಲಿ ನಿಮಗೆ ತೊಂದರೆ ಕೊಡುತ್ತಿದ್ದ ಅಧಿಕಾರಿಗೆ ಬೇರೆಡೆ ವರ್ಗವಾಗಿ ಮನಸ್ಸು ನಿರಾಳವಾಗುತ್ತದೆ. ವಿದೇಶಿ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದವರಿಗೆ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಹಿರಿಯ ಅಧಿಕಾರಿಗಳ ಸಹಾಯದಿಂದ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ. ಹೊಸ ಕೆಲಸ ಆರಂಭಿಸುವುದಕ್ಕೆ ಮುಂಚೆ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ದೂರದ ಜಾಗಕ್ಕೆ ವರ್ಗಾವಣೆ ಅಥವಾ ಇರುವ ಜಾಗದಲ್ಲಿ ಬೇರೆ ವಿಭಾಗಕ್ಕೆ ಹೊಗಲೇ ಬೇಕಾಗಬಹುದು. ನಿರೀಕ್ಷಿಸಿದ್ದ ಸರ್ಕಾರಿ ಸಾಲಗಳು ದೊರೆಯುತ್ತವೆ. ಸಮಾಜದ ಕೆಲಸವನ್ನು ಮಾಡುವಾಗ ನೀವಾಡುವ ಅತಿಯಾದ ಅಹಂಭಾವದ ಮಾತುಗಳು ಬೇರೆಯವರಿಗೆ ನೋವು ತರಬಹುದು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇದ್ದು ತೊಂದರೆಯೇನು ಇರುವುದಿಲ್ಲ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಅತಿಯಾದ ಆತ್ಮವಿಶ್ವಾಸ ಹೊಸ ಚೈತನ್ಯ ತುಂಬುತ್ತದೆ. ವ್ಯವಹಾರಗಳಲ್ಲಿ ಹೂಡಿದ್ದ ಹಣವು ಲಾಭವನ್ನು ಗಳಿಸುತ್ತದೆ. ನೀವಾಡುವ ಸಣ್ಣ ಮಾತು ಬಂಧುಗಳ ವಿರೋಧ ತರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಡಬೇಕಾದ ಅನಿವಾರ್ಯತೆ ಇದೆ. ಸಂಗಾತಿಯ ಸಂಪೂರ್ಣ ಸಹಕಾರ ನಿಮ್ಮ ಎಲ್ಲಾ ಕಾರ್ಯಗಳಲ್ಲೂ ಇರುತ್ತದೆ. ವಿದೇಶಿ ವ್ಯವಹಾರ ಮಾಡುವವರು ಕಾನೂನಿನ ತೊಡಕಿಗೆ ಸಿಗುವ ಸಾಧ್ಯತೆ ಇದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ವೃದ್ಧಿಸಲಿದೆ. ಕೃಷಿ ಬೆಳೆಗಳು ಉತ್ತಮವಾಗಿ ಫಲಿಸುತ್ತವೆ. ಹೊಸ ವಸ್ತ್ರಗಳನ್ನು ಕೊಳ್ಳುವ ಸಂದರ್ಭವಿದೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಗಮನ ಕೊಡುವಿರಿ. ಹಣದ ಒಳಹರಿವು ತೊಂದರೆ ಇಲ್ಲದೆ ಸಾಮಾನ್ಯವಾಗಿರುತ್ತದೆ. ಎಂತಹ ಸಂದರ್ಭದಲ್ಲೂ ತಾಳ್ಮೆಯಿಂದ ವರ್ತಿಸುವುದು ನಿಮಗೇ ಒಳ್ಳೆಯದು. ಇಲ್ಲವಾದಲ್ಲಿ ಸಿಗುವ ಸಹಕಾರಗಳು ನಿಲ್ಲಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ವಾರ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಸಹಾಯ ದೊರೆತು ಸಾಕಷ್ಟು ಅನುಕೂಲವಾಗುತ್ತದೆ. ಆಭರಣ ಮಾರಾಟಗಾರರು ವ್ಯವಹಾರ ವಿಸ್ತರಿಸಿ ಸ್ವಲ್ಪ ಲಾಭ ಪಡೆಯಬಹುದು. ಸಿದ್ಧ ಉಡುಪುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ ಇರುತ್ತದೆ. ಆಸ್ತಿ ಕೊಳ್ಳಲು ಇದು ಸಕಾಲವಲ್ಲ.

 
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಏಕೋ ಆತ್ಮವಿಶ್ವಾಸ ಕಡಿಮೆಯಾದಂತೆ ಅನಿಸುತ್ತದೆ. ಹಣದ ಹರಿವು ನಿರೀಕ್ಷಿತ ಮಟ್ಟಕ್ಕಿಂತ ತುಸು ಹೆಚ್ಚಿಗೆ ಇರುತ್ತದೆ. ನಿಮ್ಮ ಪಾಲಿನ ನ್ಯಾಯ ಪಡೆಯಲು ಅತ್ಯಂತ ಪರಾಕ್ರಮದಿಂದ ಹಾಗೂ ತಂತ್ರಗಾರಿಕೆ ಬಳಸಿ ಹೋರಾಡುವಿರಿ. ಕೃಷಿಕರಿಗೆ ಉತ್ತಮ ಬೆಳೆಯ ಸಾಧ್ಯತೆ ಇದೆ. ಮಕ್ಕಳ ವಿದ್ಯೆಗೆ ಮತ್ತು ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುವುದು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಲಾಭದ ಹಂಚಿಕೆ ಬಗ್ಗೆ ಭಿನ್ನಾಭಿಪ್ರಾಯಗಳು ತಲೆದೋರಬಹುದು, ಇದನ್ನು ಕುಳಿತು ಬಗೆಹರಿಸಿಕೊಳ್ಳುವುದು ಉತ್ತಮ. ಸಂಗಾತಿಯ ಆದಾಯದಲ್ಲಿ ಏರಿಕೆಯ ಪ್ರವೃತ್ತಿ ಕಾಣಬಹುದು.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಯಾವುದೇ ಕೆಲಸವಾದರೂ ಸಾಧಿಸುವೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕೃಷಿ ಕೆಲಸಗಳಲ್ಲಿ ಬಹಳ ಆಸಕ್ತಿ ತೋರುವಿರಿ. ಕೆಲವು ಮಕ್ಕಳು ನಿಮ್ಮಿಂದ ಉಪಾಯವಾಗಿ ಹಣ ವಸೂಲಿ ಮಾಡುವರು. ಮೂಳೆ ನೋವುಗಳು ಸ್ವಲ್ಪ ಬಾಧಿಸಬಹುದು. ಖರ್ಚು ಹೆಚ್ಚಾದಾಗ ಸಂಗಾತಿಯಿಂದ ಧನಸಹಾಯ ಪಡೆಯಬಹುದು. ಸಂಗಾತಿಯ ಆಲಂಕಾರಿಕ ವಸ್ತುಗಳಿಗಾಗಿ ಹಣ ಖರ್ಚಾಗುವುದು. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ನಿಂತಿದ್ದ ಕೆಲವು ಕೆಲಸಗಳು ಅಧಿಕಾರಿಗಳ ಸಹಾಯದಿಂದ ಮುಂದುವರೆಯುತ್ತವೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ನಿಮ್ಮ ಕೋಪ ಮತ್ತು ಹಟಮಾರಿತನ ಹತೋಟಿಯಲ್ಲಿಡಿರ. ಆಸ್ತಿ ಮಾರಾಟದಿಂದ ಹಣ ಗಳಿಸಬಹುದು. ಭೂವ್ಯವಹಾರ ಮಾಡುವ ಮಧ್ಯವರ್ತಿಗಳಿಗೆ ಕಮಿಷನ್ ಹಣ ಸಿಗುತ್ತದೆ. ಮಕ್ಕಳು ನಿಮ್ಮನ್ನು ಅರಿತು ನಡೆಯುತ್ತಾರೆ. ವೃತ್ತಿಯಲ್ಲಿ ಸ್ವಲ್ಪ ಅಭಿವೃದ್ಧಿ ಕಾಣಬಹುದು. ಅನಿರೀಕ್ಷಿತವಾಗಿ ಪ್ರೀತಿ ಪ್ರೇಮಗಳ ಸೆಳೆತಕ್ಕೆ ಒಳಗಾಗುವ ಸಾಧ್ಯತೆ ಇದೆ. ಆಭರಣ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭವು ಬರುವ ಸಾಧ್ಯತೆಯಿದೆ. ವ್ಯವಹಾರಗಳಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಸಹಾಯಗಳು ತಂದೆಯಿಂದ ದೊರೆಯುತ್ತದೆ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡ್ಡಿ-ಆತಂಕಗಳು ತನ್ನಿಂದ ತಾನೇ ನಿವಾರಣೆ ಆಗುತ್ತವೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಸಕಾಲದಲ್ಲಿ ಸರಿಯಾದ ಎಚ್ಚರಿಕೆ ತೆಗೆದುಕೊಂಡು ಮತ್ತು ಪರಿಣತರ ಸಲಹೆ ಪಡೆದು ವ್ಯವಹಾರವನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾಗುವಿರಿ. ಈ ಹಿಂದೆ ಉಳಿಸಿದ್ದ ಹಣವನ್ನು ಯೋಜಿತವಾಗಿ ಖರ್ಚುಮಾಡುವಿರಿ. ಸಂಗಾತಿಯ ಸಕಾಲಿಕ ನೆರವಿನಿಂದ ನಿಮಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ. ಬಂಧುಗಳು ಸಾಲ ಕೇಳಲು ನಿಮ್ಮ ಬಳಿ ಬರುವರು, ಎಚ್ಚರಿಕೆಯಿಂದ ವ್ಯವಹರಿಸಿ. ಕಬ್ಬಿಣ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಪೂರೈಸುವವರಿಗೆ ವ್ಯವಹಾರ ವೃದ್ಧಿಸಿ, ಆದಾಯ ಹೆಚ್ಚಲಿದೆ. ಉಪನ್ಯಾಸಕರಿಗೆ ಉತ್ತಮ ವೇದಿಕೆಗಳು ದೊರೆಯುವ ಸಂದರ್ಭವಿದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಅತಿಯಾದ ಕೋಪ ಒಳ್ಳೆಯದಲ್ಲ. ಬರಬೇಕಾಗಿದ್ದ ಹಣವನ್ನು ಒಳ್ಳೆಯ ಮಾತಿನಿಂದ ವಸೂಲು ಮಾಡುವುದು ಒಳ್ಳೆಯದು. ಒಡಹುಟ್ಟಿದವರೊಡನೆ ಸ್ವಲ್ಪ ಬಿನ್ನಾಭಿಪ್ರಾಯ ಮೂಡಬಹುದು. ಹೆಣ್ಣುಮಕ್ಕಳ ಅಭಿವೃದ್ಧಿಯು ಉತ್ತಮವಾಗಿರಲಿದೆ. ಆಭರಣ ಮತ್ತು ಆಲಂಕಾರಿಕ ವಸ್ತುಗಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ಸಂಗಾತಿಯಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತದೆ. ಮನೆ ಪಾಠ ಮಾಡುವವರಿಗೆ ಆದಾಯ ಸ್ವಲ್ಪ ಕಡಿಮೆ ಇರುತ್ತದೆ. ಕಾಲಿನ ನೋವು ನಿಮ್ಮನ್ನು ಬಾಧಿಸಬಹುದು. ಕೃಷಿ ಉತ್ಪನ್ನಗಳ ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.