ಭಾನುವಾರ, ಮೇ 16, 2021
22 °C

ವಚನಾಮೃತ| ಸಮುದ್ರವೇ ಉಕ್ಕೇರಿದರೆ ಕಟ್ಟೆ ಕಟ್ಟಲಾದೀತೆ?

ಪ್ರಜ್ಞಾ ಮತ್ತಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಬಸವಣ್ಣನವರ ನಿಕಟವರ್ತಿಯಾಗಿದ್ದ ಅಂಬಿಗರ ಚೌಡಯ್ಯ ಬಂಡಾಯ ಮಾರ್ಗದಲ್ಲಿ ಲೋಕನೀತಿಯನ್ನು ಅರುಹುವ ವಚನಗಳನ್ನು ರಚಿಸಿದ್ದಾನೆ. ಪ್ರಕೃತಿಪ್ರೇಮಿಯಾಗಿದ್ದ ಈತ ತಾತ್ವಿಕತೆಗಿಂತ ನೈತಿಕ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿದ್ದವನು: ನೇರ ಹಾಗೂ ನಿಷ್ಠುರವಾದಿಯಾಗಿದ್ದನೆಂದು ಕಂಡುಬರುತ್ತದೆ. ಸುಮಾರು 150 ವಚನಗಳನ್ನು ರಚಿಸಿದ್ದ ಈತ ಜನರ ನಡವಳಿಕೆಯನ್ನು ನೇರವಾಗಿ ಖಂಡಿಸುತ್ತಿದ್ದ. ಜೀವನದಲ್ಲಿ ಅತೀವ ಶೃದ್ಧೆಯುಳ್ಳ ಈತನು ಬರೀ ಲೌಕಿಕ ಚಿಂತೆಯಲ್ಲಿಯೇ ಜೀವನ ಸವೆಸುವವರ ಕುರಿತು ನೋವಿನ ದನಿಯೆತ್ತಿದ್ದಾನೆ:

ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ
ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ?
ಅರಿಯದವಂಗೆ ಅರಿಕೆಯ ಹೇಳಿದಡೆ ಅರಿವನಲ್ಲದೆ
ಅರಿದು ಮರೆದವಂಗೆ ಬೇರೊಂದೆಡೆಯ ಹೇಳಿಹೆನೆಂದಡೆ
ಕಡೆ ನಡು ಮೊದಲಿಲ್ಲವೆಂದನಂಬಿಗ ಚೌಡಯ್ಯ

ಯಾವುದಾದರೂ ಊರಿನಲ್ಲಿ ಕೆರೆ ಒಡೆದರೆ ಅದರ ದಂಡೆಗೆ ಕಟ್ಟು ಕಟ್ಟಿ ದುರಸ್ತಿ ಮಾಡಬಹುದು. ಆದರೆ ಸಮುದ್ರವೇ ಉಕ್ಕೇರಿದರೆ ಭಾರೀ ಅನಾಹುತವೇ ಸಂಭವಿಸುತ್ತದೆ. ಅದಕ್ಕೆ ಯಾವುದೇ ಕಟ್ಟು ಕಟ್ಟುವ ಮಟ್ಟದ ರಿಪೇರಿ ಕಾರ್ಯಗಳಿಂದ ಪ್ರಯೋಜನವಾಗುವುದಿಲ್ಲ. ವಿಷಯವೊಂದನ್ನು ತಿಳಿದುಕೊಳ್ಳದೇ ಇರುವಂತಹ ವ್ಯಕ್ತಿಗೆ ಆ ಕುರಿತಾದ ಮಾಹಿತಿ ನೀಡಿದರೆ ಆತ ತಿಳಿದುಕೊಳ್ಳುತ್ತಾನೆ. ಆದರೆ ಈಗಾಗಲೇ ವಿಚಾರವೊಂದನ್ನು ತಿಳಿದುಕೊಂಡವನು ತಿಳಿವಿನ ವಿಚಾರದಲ್ಲಿ ಸಮುದ್ರವಿದ್ದಂತೆ. ಆತನಿಗೆ ಮಾಹಿತಿಯ ಕೊರತೆಯೇ ಇಲ್ಲ. ಆದರೆ ಆಚರಣೆಯ ವಿಚಾರದಲ್ಲಿ ಆತ ಮರೆತವರಂತೆ ವರ್ತಿಸುತ್ತಿದ್ದಾನೆ.

ಇದನ್ನೂ ಓದಿ: ಶಾಂತಿ: ಮನಸ್ಸಿನ ಕಿಟಕಿ

ಅಂತಹ ವ್ಯಕ್ತಿಗೆ ನಾವೀಗ ತಿಳಿಸಿ ಹೇಳುವುದು ಸಾಧ್ಯವಿಲ್ಲ. ಹಾಗೊಮ್ಮೆ ನಾವು ಅಂತಹವರಿಗೆ ಉಪದೇಶಿಸಲು ಉದ್ಯುಕ್ತರಾದರೆ ಈ ಕೆಲಸಕ್ಕೆ ಆರಂಭ, ನಡುವೆ ಅಥವಾ ಕೊನೆ ಎಂಬ ಭೇದವೇ ಇರುವುದಿಲ್ಲ. ಅಂದರೆ ಅದೊಂದು ಮುಗಿಯದ ಕಥೆಯಾಗುತ್ತದೆ. ಏಕೆಂದರೆ ಈಗಾಗಲೇ ಜ್ಞಾನವನ್ನು ಪಡೆದುಕೊಂಡವನಿಗೆ ವಿಚಾರವೇನೆಂದು ಗೊತ್ತಿದೆ. ಆದರೆ ಅವನು ಶೃದ್ಧೆಯ ಕೊರತೆಯಿಂದಲೋ ಅಥವಾ ಆಚರಣೆಯ ಕುರಿತಾದ ಅಸಡ್ಡೆಯಿಂದಲೋ ಮುಖ ತಿರುಗಿಸಿದ್ದಾನೆ. ಅಂತಹವರ ಸಂಗತಿಯೆಂದರೆ ಉಕ್ಕಿ ಹರಿಯುವ ಸಮುದ್ರದ ಹಾಗೆ. ಸಾಮಾಜಿಕ ರೀತಿ-ನೀತಿಗಳ ವಿಚಾರದಲ್ಲಿ ಗೊತ್ತಿಲದೇ ಇರುವವನಿಗೆ ಜ್ಞಾನವನ್ನು ನೀಡುವುದು ಸುಲಭವೇ ಹೊರತು, ತಿಳಿದೂ ವರ್ತಿಸದಿರುವವನಿಗೆ ತಿಳಿಸುತ್ತೇನೆಂದು ಹೊರಟರೆ ಅದು ಅಸಾಧ್ಯವಾದ ಕೆಲಸವೆನ್ನುವುದು ಚೌಡಯ್ಯನ ಅಭಿಮತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.