ಗುರುವಾರ , ಜೂನ್ 4, 2020
27 °C

ವಚನಾಮೃತ: ಮಾಡಿದೆನೆಂಬುದರ ಪರಿ

ಮಂಜುನಾಥ ಕೊಳ್ಳೇಗಾಲ Updated:

ಅಕ್ಷರ ಗಾತ್ರ : | |

Prajavani

ಶಿಲ್ಪಿಯೊಬ್ಬ, ಒಂದು ಶಿಲ್ಪವನ್ನು ಕೆತ್ತುತ್ತಿದ್ದನಂತೆ. ಸೊಗಸಾದ ಶಿಲ್ಪ, ದಿನಗಟ್ಟಲೆ ಕುಳಿತು ಮಾಡಿದ್ದು. ಎಲ್ಲಾ ಮಾಡಿ, ಕಣ್ಣಿನ ರೆಪ್ಪೆ ಬಿಡಿಸುತ್ತಿದ್ದಾಗ ಎಡಗಣ್ಣು ಕುಳಿ ಬಿತ್ತು. ಬೇಸರಗೊಂಡ ಶಿಲ್ಪಿ ತನ್ನ ಅಜಾಗರೂಕತೆಯನ್ನು ಹಳಿದುಕೊಳ್ಳುತ್ತಾ ಅದನ್ನು ಪಕ್ಕಕ್ಕಿಟ್ಟ, ಮತ್ತೊಂದು ಕಲ್ಲನ್ನು ತೆಗೆದುಕೊಂಡು ಕೆತ್ತತೊಡಗಿದ.

ಬಳಿಯಲ್ಲೇ ಕುಳಿತು ನೋಡುತ್ತಿದ್ದ ಮೊಮ್ಮಗ ಕೇಳಿದ ‘ಅಜ್ಜಯ್ಯಾ, ಇದನ್ನೇಕೆ ಬಿಸಾಡಿದೆ ಇಷ್ಟು ಸೊಗಸಾಗಿದೆ?’ ಅಜ್ಜಯ್ಯ ಬೇಸರಿಸಿದ, ‘ಎಷ್ಟು ಸೊಗಸಾಗಿದ್ದರೇನು ಮಗ? ಎಲ್ಲಾ ಮಾಡಿ ಕಣ್ಕೇಡಾಯಿತಲ್ಲ?’ ಮೊಮ್ಮಗ ತುಸು ನಿರುಕಿಸಿ ನೋಡಿದ. ಮೊಳದುದ್ದದ ಶಿಲ್ಪ, ತೀರ ಹತ್ತಿರದಿಂದ ಗಮನವಿಟ್ಟು ನೋಡಿದಲ್ಲದೇ ಕಣ್ಣಿನ ಕುಳಿ ಕಾಣುತ್ತಿರಲಿಲ್ಲ. ಮತ್ತೆ ಕೇಳಿದ ‘ಅಜ್ಜಯ್ಯಾ, ಇದು ಎಲ್ಲಿ ಕೂರಿಸುವುದಕ್ಕೆ’. ಅಜ್ಜಯ್ಯ ತೋರಿದ ’ಅಕಾ ಅಲ್ಲಿ, ಗೋಪುರದ ತುದಿಯಲ್ಲಿ, ಸ್ವಾಮಿಗೆ ಚಾಮರವಿಕ್ಕುವ ಬೊಂಬೆ ಅದು’. ಮೊಮ್ಮಗ ನಗುತ್ತಾ ಹೇಳಿದ ‘ಅಲ್ಲಜ್ಜಯ್ಯಾ, ಮೊಳದುದ್ದ ಗೊಂಬೆ, ಅಲ್ಲೆಲ್ಲೋ ಆಕಾಶದಲ್ಲಿ ಕೂರಿಸುವುದು, ಮಾರು ದೂರದಲ್ಲಿ ನಿಂತು ನೋಡಿದರೂ ಐಬು ಕಾಣೊಲ್ಲ. ಅಲ್ಲಿ ಹತ್ತಿ ಯಾರು ನೋಡ್ತಾರಜ್ಜಯ್ಯಾ? ಅದಕ್ಕೋಸ್ಕರ ಇಷ್ಟು ಚಂದದ ಶಿಲ್ಪ ಎಸೆಯುತ್ತೀಯಲ್ಲ?‘ ಕ್ಷಣಕಾಲ ಮೊಮ್ಮಗನನ್ನೇ ದಿಟ್ಟಿಸಿ ಹೇಳಿದ ಅಜ್ಜ ‘ಯಾರಿಗೆ ಕಾಣದಿದ್ದರೇನು ಮಗಾ, ಅಲ್ಲಿ ಕೂತು ಇವನ ಹತ್ರ ಗಾಳಿ ಬೀಸಿಸಿಕೊಳ್ತಾನಲ್ಲ, ಅವನಿಗೆ ಕಾಣೊಲ್ವಾ? ಅವನಿಗೆ ಕಾಣದಿದ್ದರೂ ಮಾಡಿದ ನನಗೆ ಕಾಣೊಲ್ವಾ?’ ಮೊಮ್ಮಗ ನಿರುತ್ತರ.

‘ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ’ ಎನ್ನುತ್ತದೆ ಅಣ್ಣನವರ ವಚನ. ಮಾಡಿದ್ದು ಕೂಡಲಸಂಗನಿಗೆ ಮೆಚ್ಚಾಗುವುದು ಈ ’ನಿಜ‘ಗುಣದಿಂದಲೇ ಅಲ್ಲವೇ?

ಈ ವಚನದಲ್ಲಿ ಬಸವಣ್ಣನವರು ಮಾಡುವುದರ ಬಗೆಗಷ್ಟೇ ಹೇಳುವುದಲ್ಲ, ನೀಡುವುದರ ಬಗೆಗೂ ಹೇಳುತ್ತಾರೆ - ನೀಡುವುದರಲ್ಲಿರಬೇಕಾದ ನಿಸ್ಫೃಹತೆಯನ್ನು ಕುರಿತು. ನಮ್ಮಲ್ಲೊಂದು ನಾಣ್ನುಡಿಯಿದೆ - ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು. ಕೊಟ್ಟರೆ, ಪಡೆದವನು ನೋಯಬಾರದು, ಅವನನ್ನು ಹೊಂದಿದವರಿಗೆ ತಿಳಿಯಬಾರದು, ಅವನ ‘ಅಭಿಮಾನ’ಕ್ಕೆ ದಕ್ಕೆಯಾಗಬಾರದು, ಅದಿರಲಿ, ತಾನು ಕೊಟ್ಟೆನೆನ್ನುವುದು ಮನದಲ್ಲಿ ಹೊಳೆಯಲೂ ಬಾರದಂತೆ! ‘ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ.’ ಶಿವನ ಡಂಗುರ ಏಡಿಸಿ ಕಾಡುವುದಂತೆ! ಆದರೆ ಕೊಡುವಾಗ ನಿಜಕ್ಕೂ ಈ ನಿರಭಿಮಾನ ಸಾಧ್ಯವೇ? ಸಾಧ್ಯವೆನ್ನುತ್ತಾರೆ ಅಣ್ಣನವರು. ತನ್ನದನ್ನು ಮತ್ತೊಬ್ಬನಿಗೆ ಕೊಡುತ್ತಿದ್ದೇನೆನ್ನುವ ಭಾವದಿಂದ ತಾನೆ ಆ ಅಭಿಮಾನ? ಬೇಡುವಾತ ಜಂಗಮನೆಂದುಕೊಂಡರೆ? ತನ್ನಲ್ಲಿರುವುದು ನಿಜದಲ್ಲಿ ಅವನದೇ ಎಂದರಿತರೆ? ಕೆರೆಯ ನೀರನ್ನು ಕೆರೆಗೇ ಚೆಲ್ಲಿದ ಅರಿವುಂಟಾದರೆ? ಆ ಹಮ್ಮು ಉಳಿದೀತೇ? ‘ಮಾಡಿದೆನೆನ್ನದಿರಾ ಲಿಂಗಕ್ಕೆ ಮಾಡಿದೆನೆನ್ನದಿರಾ ಜಂಗಮಕ್ಕೆ’ ಎನ್ನುತ್ತಾರೆ ಅಣ್ಣನವರು. ‘ಮಾಡಿದೆನೆಂಬುದು ಮನದಲಿಲ್ಲದಿದ್ದಡೆ ಬೇಡಿತ್ತನೀವ‘ನಂತೆ ಕೂಡಲಸಂಗಮದೇವ. ಕೂಡಲಸಂಗನನ್ನು ಒಲಿಸಲು ಇನ್ನೆಷ್ಟು ಪರಿಯೋ! 

ಆದರೂ, ‘ತನ್ನ ಬಣ್ಣಿಸುವುದೇ’ - ಅದಕ್ಕಿಂತ ಹೆಚ್ಚಾಗಿ ‘ಇದಿರ ಹಳಿಯುವುದೇ’ ಅಂತರಂಗ‘ಶುದ್ಧಿ’ಯ ಪ್ರಧಾನಲಕ್ಷಣವಾಗಿರುವ ಈ ಯುಗದಲ್ಲಿ, ಈ ಬಗೆಯ ಧರ್ಮಗುಪ್ತಿ ಸಲ್ಲದ ನಾಣ್ಯವೋ ಏನೋ! ಕೊನೆಯ ಪಕ್ಷ, ತಮ್ಮ ಹಳವಂಡದಿಂದಲೇ ನಿರ್ಗತಿಕನಾದವನಿಗೆ ತಿನ್ನಲೊಂದು ಬಾಳೆಯ ಹಣ್ಣನ್ನು ಕೊಡುವಾಗಲೂ ಅದನ್ನು ಕೊಡುತ್ತಾ ಹತ್ತು ಜನ ಫೋಟೋ ತೆಗೆಸಿಕೊಳ್ಳುವ ಅಸಹ್ಯದಿಂದಲಾದರೂ ಹೊರಬರುವುದು ಸಾಧ್ಯವಾದರೆ, ಜಗತ್ತು ಎಷ್ಟೋ ಸಹ್ಯವೆನಿಸಬಹುದೇನೋ. ಇಲ್ಲದಿದ್ದರೆ ತಿಳಿದೇ ಇದೆ:

‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ’ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.