ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–6

Last Updated 23 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಅಸಿ ಕೃಷಿ ಮಸಿ ಯಾಚಕ ವಾಣಿಜ್ಯತ್ವವ ಮಾಡುವುದು ಲೇಸು.
ಹುಸಿವೇಷವ ತೊಟ್ಟು ಅಸುವ ಹೊರೆವವನ
ಘಟ ಪಿಶಿತದ ತಿತ್ತಿಯಂತೆ
ಅಘಟಿತ, ಅವನನೊಲ್ಲ ಅರ್ಕೇಶ್ವರಲಿಂಗ.
ಮಧುವಯ್ಯ

ಕಾಯಕ ಎಂಬುದು, ಕಲ್ಯಾಣದ ಶರಣರು ಇಡೀ ವಿಶ್ವಕ್ಕೆ ಕೊಟ್ಟ ಬಹುದೊಡ್ಡ ಆರ್ಥಿಕ ತತ್ವ. ಮನುಷ್ಯರಷ್ಟೇ ಅಲ್ಲ; ದೇವರುಗಳೂ ದುಡಿಯಬೇಕೆಂಬ ಶ್ರಮನೀತಿಯನ್ನು ರೂಪಿಸಿದ್ದ ಅವರು, ಚಪ್ಪಲ್ಲು ಹೊಲಿಯುವುದರಿಂದ ಹಿಡಿದು ಪ್ರಧಾನಿಯ ವರೆಗಿನ ಎಲ್ಲ ಕೆಲಸಗಳನ್ನೂ ಕಾಯಕದ ವ್ಯಾಪ್ತಿಗೆ ತಂದರು. ಇಂಥ ತತ್ವಕ್ಕೆ ಬದ್ಧರಾಗಿದ್ದ ಶರಣರೆಲ್ಲ ತಮಗೆ ದಕ್ಕಿದ್ದ ಕಾಯಕಗಳನ್ನು ಕೈಕೊಂಡು, ಆ ಇಡೀ ಚಳವಳಿಯನ್ನು ಶ್ರಮಸಿದ್ಧಾಂತದ ಆಧಾರದಲ್ಲಿ ಸಂಘಟಿಸಿದರು ಮತ್ತು ಮುನ್ನಡೆಸಿದರು. ಇಂಥ ವಿನೂತನ ಕ್ರಮಕ್ಕೆ ಕೈಜೋಡಿಸಿದ ಶರಣರಲ್ಲಿ ಉಚ್ಚವರ್ಣೀಯರೂ ಇದ್ದರೆಂಬುದು ಸೋಜಿಗದ ಸತ್ಯ. ಅಂಥವರಲ್ಲಿ ಮಧುವಯ್ಯನೂ ಒಬ್ಬ. ಅಸ್ಪೃಶ್ಯ ಹರಳಯ್ಯನ ಮಗನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ, ಅಪೂರ್ವ ಕ್ರಾಂತಿ ಮಾಡಿದ ಬ್ರಾಹ್ಮಣನೇ ಈ ಮಧುವಯ್ಯ. ಪ್ರಸ್ತುತ ವಚನ ಆತನದು.


ಪ್ರತಿಯೊಬ್ಬನೂ ಕಾಯಕ ಮಾಡಲೇಬೇಕೆಂಬ ಅರ್ಥನೀತಿಯ ಶರಣರು, ಕಾಯಕದಲ್ಲಿ ಭೇದ-ಭಾವ ಎಣಿಸಲಿಲ್ಲ. ಗಾಂಧೀಜಿಯವರಾದಿಯಾಗಿ ಜಗತ್ತಿನ ಎಲ್ಲ ಅರ್ಥಸಾಸ್ತ್ರಜ್ಞರೂ ಒಪ್ಪಿದ ಮಾರ್ಗವಿದು. ಇಂಥ ಕಾಯಕವು ಶರೀರ ಶ್ರಮದ್ದಾಗಿರುವಂತೆ, ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಗಳಿಂದ ಕೂಡಿರಬೇಕೆಂಬುದೂ ಅವರ ಗಟ್ಟಿ ನಿಲುವಾಗಿತ್ತು. ಮೋಸ, ವಂಚನೆ ಮತ್ತು ಅಡ್ಡದಾರಿಗಳಿಗೆ ಅಲ್ಲಿ ಅವಕಾಶವೇ ಇರಲಿಲ್ಲ. ಶರಣರೆಲ್ಲರ ಕಾಯಕಸಂಬಂಧಿ ವಚನಗಳಲ್ಲೂ ಈ ನೀತಿಯೇ ಪ್ರತಿಬಿಂಬಿತವಾಗಿದ್ದು, ಮಧುವಯ್ಯನ ಪ್ರಸ್ತುತ ವಚನದ ಪ್ರಧಾನ ಧ್ವನಿಯೂ ಅದೇ ಆಗಿದೆ.

ಮಧುವಯ್ಯ ಇಲ್ಲಿ ಪ್ರಾತಿನಿಧಿಕವಾಗಿ ಕೆಲವೇ ಕಾಯಕಗಳನ್ನು ಪ್ರಸ್ತಾಪಿಸುತ್ತಾನೆ. ಆತ ಇಲ್ಲಿ ಹೇಳುವ ಅಸಿ ಎಂದರೆ ಖಡ್ಗ ವಿದ್ಯೆ, ರಕ್ಷಣಾ ಕಾಯಕ. ಕೃಷಿ ಎಂದರೆ ಒಕ್ಕಲುತನ. ಮಸಿ ಎಂದರೆ ಬರಹದ ಕಾಯಕ. ವಾಣಿಜ್ಯವೆಂದರೆ ವ್ಯಾಪಾರ. ಇಷ್ಟನ್ನು ಹೇಳುತ್ತ, ಆತ ಈ ಸಾಲಿನಲ್ಲಿ ಯಾಚಕ ವೃತ್ತಿಯನ್ನೂ ಸೇರಿಸಿರುವುದು ವಿಶೇಷ. ವಚನದ ಮುಂದಿನ ಭಾಗದಲ್ಲಿ ಹೇಳಹೊರಟ ಹುಸಿವೇಷದ ವಂಚಕರ ಕಳ್ಳವೃತ್ತಿಗಳಿಗಿಂತ ಭಿಕ್ಷುಕವೃತ್ತಿಯೇ ಶ್ರೇಷ್ಠವೆಂಬುದನ್ನು ದಾಖಲಿಸಲೆಂದೇ ಆತ ಅದನ್ನಿಲ್ಲಿ ಪ್ರಸ್ತಾಪಿಸಿರುವುದು. ಇಂಥ ಕಳ್ಳರ ಕೆಲಸ ಭಿಕ್ಷೆಗಿಂತಲೂ ಕಡೆ ಎಂಬ ಅರ್ಥವೇ ಇಲ್ಲಿದೆ.

ಪ್ರಸ್ತಾಪಿತ ಕಾಯಕಗಳೆಲ್ಲವೂ ಲೇಸು ಎನ್ನುವ ಮಧುವಯ್ಯನು, ಇದಕ್ಕೆ ವ್ಯತಿರಿಕ್ತವಾಗಿ, ಕಳ್ಳವೇಷ ಹಾಕಿ, ಮೋಸ, ವಂಚನೆಗಳ ಮೂಲಕ ಹೊಟ್ಟೆ ಹೊರೆಯುವ ವ್ಯಕ್ತಿಗಳನ್ನು ನೇರವಾಗಿ ಬಗೆದಿಡುತ್ತಾನೆ. ಅಂಥವರ ಶರೀರವು ತೂತುಬಿದ್ದ ಚರ್ಮದ ಚೀಲದ ಹಾಗೆ ಸದಾ ಸೋರುವಂಥದ್ದು ಎನ್ನುವ ಅವನ ಮಾತು ಆ ಜನರ ಮನಸ್ಸು ಎಷ್ಟು ಛಿದ್ರಗಳಿಂದ ಕೂಡಿರುತ್ತದೆಯೆಂಬುದನ್ನು ಹೇಳುತ್ತದೆ. ವೇಷಧಾರಿಗಳ ಆ ಮೋಸದ ಕೆಲಸವು ಅನೈತಿಕವಾಗುವ ಕಾರಣ, ಅಂಥ ವಂಚಕರ ನಡೆಯನ್ನು ಅರ್ಕೇಶ್ವರಲಿಂಗ ಕೂಡ ಒಪ್ಪಲಾರದೆಂದೂ ಸ್ಪಷ್ಟಪಡಿಸುತ್ತಾನೆ.

ವಂಚಕರು, ಮೋಸಗಾರರೇ ಮೆರೆಯುತ್ತಿದ್ದ ಕಾಲಘಟ್ಟದಲ್ಲಿ ಮಧುವಯ್ಯ ಈ ವಚನ ರಚಿಸಿದ್ದು ಅರ್ಥಪೂರ್ಣ. ನುಡಿ-ನಡೆಗಳಲ್ಲಿ ಸಮನ್ವಯ ಸಾಧಿಸಿದ್ದ ಶರಣರು, ಕಾಯಕವನ್ನು ತಮ್ಮ ಬದುಕಿನ ನಿತ್ಯ ನಡೆಯನ್ನಾಗಿ ಮಾಡಿಕೊಂಡಿದ್ದಷ್ಟೇ ಅಲ್ಲ, ಆ ಮೂಲಕ ರಿಕಾಮಿ ತಿನ್ನುವ ಜನರಿಗೆ ಯೋಗ್ಯ ಪಾಠ ಕಲಿಸಿದರು. ಅದಕ್ಕೆ ನಿದರ್ಶನ ಮಧುವಯ್ಯನ ಈ ವಚನ. ಇದನ್ನು ಇಂದಿನ ಭ್ರಷ್ಟರು, ಕಾಳಸಂತೆಕೋರು ಅರ್ಥೈಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT