ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–19

Last Updated 22 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಈ ಪತ್ರೆಗೀ ಫಲ, ಈ ಪುಷ್ಪಕೀ ಫಲ,
ಈ ಪೂಜೆಗೀ ಫಲವೆಂಬ ಕೈಕೂಲಿಕಾರರೆಲ್ಲ ಕರ್ಮಿಗಳಯ್ಯಾ.
ಸ್ವರ್ಗನರಕಗಳನುಂಬ ಕರ್ಮಿಗಳಯ್ಯಾ.
ಒಡಲೊಡವೆ ಪಡೆದರ್ಥವ ಮೃಡದೇವ ಸೊಡ್ಡಳಂಗರ್ಪಿತವೆಂಬಾತ
ಬೆಡಗಿನ ಶಿವಪುತ್ರ, ಉಳಿದವರಂತಿರಲಿ.
-ಸೊಡ್ಡಳ ಬಾಚರಸ

ನಮ್ಮ ಪುರಾತನ ಭಕ್ತಿ ಪರಂಪರೆಯು ವ್ಯಾವಹಾರಿಕ ಲಾಭದ ಲೆಕ್ಕಾಚಾರ ಇಟ್ಟುಕೊಂಡೇ ದೇವರುಗಳ ಪೂಜೆ ಮಾಡುತ್ತ ಬಂದದ್ದು ಐತಿಹಾಸಿಕ ವಾಸ್ತವ. ಅಚ್ಚರಿಯೆಂದರೆ, ಇದು ಜನಸಾಮಾನ್ಯರ ಅಪೇಕ್ಷೆ ಮತ್ತು ನಿರ್ಧಾರವಾಗಿರಲಿಲ್ಲ; ಬದಲಾಗಿ ಜನಸಾಮಾನ್ಯರನ್ನು ಮೋಸಗೊಳಿಸಿ ತಾನು ಲಾಭ ಗಿಟ್ಟಿಸುವ ಪುರೋಹಿತಶಾಹಿಯ ತಂತ್ರವಾಗಿತ್ತು. ಅದಕ್ಕೆಂದೇ ಶರಣರು ಈ ಲಾಭಕೋರತನದ ಹಿಂದಿದ್ದ ಮೋಸದ ಕುತಂತ್ರವನ್ನು ಬಯಲು ಮಾಡಿ, ಅದೆಲ್ಲವೂ ಸುಳ್ಳೆಂದು ಸಾಬೀತು ಪಡಿಸಿದರು. ಹಾಗೆ ಮಾಡುತ್ತಲೇ ನಿಜವಾದ ಪೂಜೆ ಯಾವುದು? ಅದನ್ನು ಆಚರಿಸುವ ಕ್ರಮ ಯಾವುದು? ಎಂಬುದನ್ನು ಪ್ರಾಯೋಗಿಕ ಸಾಧ್ಯತೆಯ ಕ್ರಮದಲ್ಲಿ ತೋರಿಸಿದರು. ಸೊಡ್ಡಳ ಬಾಚರಸನ ಪ್ರಸ್ತುತ ವಚನದಲ್ಲಿರುವುದು ಈ ಎಲ್ಲ ವೃತ್ತಾಂತ.

ಒಂದೊಂದು ಪೂಜೆಗೆ ಇಂತಿಷ್ಟು ಬೆಲೆ ಎಂಬ ದರಪಟ್ಟಿ ಎಲ್ಲ ಭಕ್ತಿಕೇಂದ್ರಗಳಲ್ಲಿ ಈಗಲೂ ಇದೆ. ಒಂದರ್ಥದಲ್ಲಿ ಇದು ಭಕ್ತಿಯ ವ್ಯಾಪಾರ. ಆಯಾ ಪೂಜೆಯ ದರವನ್ನಾಧರಿಸಿ ದೊರೆಯುವ ಲಾಭದ ಮಟ್ಟವೂ ವ್ಯತ್ಯಾಸವಾಗುತ್ತದೆ ಎಂಬ ಅರ್ಥ ಇಲ್ಲಿರುವುದೂ ಸಹಜ. ಇದು ವರ್ತಮಾನದ ವಿದ್ಯಮಾನ ಮಾತ್ರವಲ್ಲ ಎಂಬುದನ್ನು ಸೊಡ್ಡಳ ಬಾಚರಸನ ಈ ವಚನದಿಂದ ಅರಿಯಬಹುದು. ಇಂಥ ಪತ್ರೆಯಿಂದ ಪೂಜೆ ಮಾಡಿದರೆ ಈ ಫಲ, ಇಂಥ ಹೂವಿನಿಂದ ಪೂಜಿಸಿದರೆ ಆ ಫಲ, ಇಂತಿಂಥ ಪೂಜೆಗೆ ಇಂತಿಂಥ ಫಲ ಎಂಬ ಪುರೋಹಿತಶಾಹಿಯ ಯಾದಿಯನ್ನು ಆತ ವಚನದ ಆರಂಭದಲ್ಲಿಯೇ ಕೊಟ್ಟುಬಿಡುತ್ತಾನೆ.

ಹೀಗೆ ಲೆಕ್ಕಾಚಾರದ ಕ್ರಮದಲ್ಲಿ ಪೂಜೆ ಮಾಡುವವರನ್ನು ಸೊಡ್ಡಳ ಬಾಚರಸ ಕೈಕೂಲಿ ಮಾಡುವವರಿಗೆ ಹೋಲಿಸುತ್ತಾನೆ ಇಲ್ಲಿ. ಕೂಲಿಕಾರರು ತಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸುವುದು ಸಹಜವೆ. ಅದೇ ರೀತಿ, ದೇವರನ್ನು ಪೂಜಿಸುವ ಈ ಭಕ್ತರೂ ಕೂಲಿಕಾರರಂತೆ ತಮ್ಮ ಭಕ್ತಿಯ ದರವನ್ನಾಧರಿಸಿ, ಸ್ವರ್ಗ-ನರಕಗಳ ಪ್ರಾಪ್ತಿಯ ಬಗ್ಗೆ ಲೆಕ್ಕಾಚಾರ ಹಾಕುವವರು ಎಂದು ಆತ ವ್ಯಂಗ್ಯಿಸುತ್ತಾನೆ. ಲಾಭದ ಲೆಕ್ಕಾಚಾರ ಇಟ್ಟುಕೊಂಡು, ಅದಕ್ಕನುಗುಣವಾದ ದರಪರಿಕರಗಳಿಂದ ಪೂಜೆ ಮಾಡುವ ಇಂಥ ಕರ್ಮಿಗಳ ಮನೋಸ್ಥಿತಿ ಹೇಗಿರುತ್ತದೆಯೆಂಬುದನ್ನು ತೋರಿಸಿಕೊಟ್ಟು, ಅಂಥದ್ದು ಭಕ್ತಿಯಲ್ಲ ಎನ್ನುತ್ತ, ನಿಜವಾದ ಭಕ್ತಿಯ ಕ್ರಮ, ರೀತಿ ಮತ್ತು ಉದ್ದೇಶ ಬೇರೆ ಬಗೆಯಲ್ಲಿಯೇ ಇರುತ್ತವೆಯೆಂದು ಆತ ವಿವರಿಸುತ್ತಾನೆ. ಇದೇ ವಚನದಲ್ಲಿರುವ ಮಹತ್ವದ ಅಂಶ.

ಸೊಡ್ಡಳ ಬಾಚರಸನ ಪ್ರಕಾರ ತನು, ಮನ, ಧನ, ತನ್ನ ಒಡವೆ ಮತ್ತು ಪಡೆದ ಅರ್ಥ ಎಲ್ಲವನ್ನೂ, ಮೃಡದೇವ ಸೊಡ್ಡಳನ ಸ್ವರೂಪವೇ ಆಗಿರುವ ಸಮಾಜಜೀವಿ ಮನುಷ್ಯರಿಗೇ ದಾಸೋಹಂ ಭಾವದಿಂದ ಅರ್ಪಿಸುವುದೇ ನಿಜವಾದ ಭಕ್ತಿ, ಅದೇ ನಿಜವಾದ ಪೂಜೆ. ಹಾಗೆ ನಿಸ್ವಾರ್ಥದಿಂದ ತನ್ನದೆಲ್ಲವನ್ನೂ ಅರ್ಪಿಸುವವ ಬರೀ ಭಕ್ತನಷ್ಟೇ ಅಲ್ಲ, ಆತ ಸಾಕ್ಷಾತ್ ದೇವರೇ ಎಂಬುದು ಸೊಡ್ಡಳನ ಅಭಿಮತ. ಹಡೆದೊಡವೆ ವಸ್ತುಗಳನ್ನೆಲ್ಲ ಸಮಾಜದ ಮೃಡಭಕ್ತರಿಗೆ ದಾಸೋಹಂ ಭಾವದಿಂದ ಅರ್ಪಿಸಬೇಕೆಂಬುದೇ ಶರಣಸಂಸ್ಕøತಿ. ಇಂಥ ಪೂಜೆ ಮಾಡಲು ಯಾವ ದರವೂ ಇಲ್ಲ; ಹಾಗೂ ಆ ದರದ ಆಧಾರದಿಂದ ದೊರಕುವ ಸ್ವರ್ಗ-ನರಕಗಳೂ ಇಲ್ಲ. ಇಲ್ಲಿ ದಾಸೋಹವೇ ನಿಜವಾದ ಪೂಜೆ, ಅದೇ ನಿಜವಾದ ಸ್ವರ್ಗ.

ಪರಂಪರಾಗತ ಭಕ್ತಿ-ಪೂಜೆಯ ಕ್ರಮ ಮತ್ತು ಉದ್ದೇಶಗಳಲ್ಲಿದ್ದ ಮೋಸದ ತಂತ್ರಗಳನ್ನು ಬಯಲಿಗೆಳೆದು, ನಿರಾಕರಿಸಿ, ಅಲ್ಲಿ ನಿತ್ಯನೂತನ ಹಾಗೂ ಚಲನಶೀಲ ಭಕ್ತಿಯ ಕ್ರಮ ಸೂಚಿಸಿದ್ದು ಸೊಡ್ಡಳ ಬಾಚರಸನ ಈ ವಚನದ ಬಹುದೊಡ್ಡ ಕ್ರಾಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT