ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–16

Last Updated 1 ನವೆಂಬರ್ 2020, 19:30 IST
ಅಕ್ಷರ ಗಾತ್ರ

ನೆಲ್ಲು ನೆಲದಲ್ಲಿಯೇ ಅಳಿದು, ಹುಲ್ಲಿನ ಒಡಲಲ್ಲಿಯೆ ಜನಿಸಿ,
ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡಾ.
ತನ್ನೊಡಲಳಿದಲ್ಲಿ ನೆಲ್ಲೂ ಅಲ್ಲ, ಹುಲ್ಲೂ ಅಲ್ಲ!
ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ,
ಕುಂಭೇಶ್ವರಲಿಂಗದಲ್ಲಿ ಜಗನ್ನಾಥನನರಿಯಲಾಗಿ.

- ಹೊಡೆಹುಲ್ಲ ಬಂಕಣ್ಣ

ಜೀವವಿಕಾಸದ ಕ್ರಮದಲ್ಲಿ, ಜೀವಿಗಳ ವಂಶವಾಹಿ(ಜೀನ್ಸ್)ಗಳು ನಿರಂತರ ಚಲನೆಯ ಪ್ರಕ್ರಿಯೆಗೆ ಒಳಪಡುತ್ತಿರುತ್ತವೆ. ಈ ಪ್ರಯಾಣದಲ್ಲಿ ಅವು ತಮ್ಮ ಸ್ವರೂಪ ಬದಲಿಸುತ್ತ ಸಾಗಿ, ಬೇರೆ ಫಲ ಪಡೆಯುತ್ತವೆಯೇ ಹೊರತು, ಎಂದೂ ನಾಶವಾಗುವುದಿಲ್ಲ. ನಿಸರ್ಗದೊಂದಿಗಿನ ಸಂಬಂಧದ ಮೂಲಕ ಈ ವೈಜ್ಞಾನಿಕ ಸತ್ಯವನ್ನರಿತಿದ್ದ ಶರಣರು, ಅದನ್ನು ಅನುಭಾವ ಸಾಧನೆಯ ಕ್ರಮಕ್ಕೂ ಅನ್ವಯಿಸಿ, ಅದರಿಂದ ಬಂದ ಫಲಿತಗಳನ್ನು ತಮ್ಮ ವಚನಗಳ ಮೂಲಕ ಕಟ್ಟಿಕೊಟ್ಟರು. ಅಂತೆಯೇ ಶರಣರ ಕೆಲವು ವಚನಗಳು ಏಕಕಾಲಕ್ಕೆ ವಿಜ್ಞಾನ ಮತ್ತು ಅನುಭಾವ ಎರಡನ್ನೂ ಬೆಸೆಯುವ ಅನನ್ಯ ಕೊಂಡಿಗಳಂತೆ ಕಾಣುತ್ತವೆ. ಹುಲ್ಲು ಕೊಯ್ದು ಮಾರುವ ಕಾಯಕದ ಹೊಡೆಹುಲ್ಲ ಬಂಕಣ್ಣನ ಈ ವಚನದಲ್ಲಿ ಅಂಥ ವೈಜ್ಞಾನಿಕ ಮತ್ತು ಆನುಭಾವಿಕ ಸತ್ಯದ ದರ್ಶನವಿರುವುದು ಅಚ್ಚರಿ.

ಹೊಡೆಹುಲ್ಲ ಬಂಕಣ್ಣ ಇಲ್ಲಿ, ವಿಕಾಸದ ಪ್ರಕ್ರಿಯೆಗೆ ಒಳಪಟ್ಟ ಭತ್ತದ ಬೀಜದ ವಂಶವಾಹಿಯ ಪ್ರಯಾಣದ ಬಗ್ಗೆ ಓಂದು ನೈಜ ಚಿತ್ರಣ ಕೊಡುತ್ತಾನೆ. ಭೂಮಿಗೆ ಬಿದ್ದ ಭತ್ತ ಮೊಳಕೆ ಒಡೆಯುವಾಗ ತನ್ನ ಮೂಲಗುಣವನ್ನು ನೆಲದಲ್ಲಿಯೇ ಅಳಿದು, ಮೇಲೆ ಬೆಳೆಯುವ ಹುಲ್ಲಿನ ಒಡಲಲ್ಲಿ ಬೇರೆ ರೂಪ ಪಡೆದು ವಿಕಾಸ ಹೊಂದುತ್ತದೆ. ಈ ಹಂತದಲ್ಲಿ ನೆಲ್ಲು ಮತ್ತು ಹುಲ್ಲು ಎರಡೂ ಅಲ್ಲಿರುವುದಿಲ್ಲ. ಹೀಗೆ, ನಾಶದ ಒಡಲಲ್ಲೇ ಬದಲಾವಣೆ ಮತ್ತು ಬೆಳವಣಿಗೆಯ ಕ್ರಿಯೆ ನಡೆಯುವ ಈ ಜೀವವಿಕಾಸದ ಪಯಣವನ್ನೇ ‘ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡಾ!’ ಎಂಬ ಅಚ್ಚರಿಯೊಂದಿಗೆ ತೋರಿಸುತ್ತಾನೆ ಹೊಡೆಹುಲ್ಲ ಬಂಕಣ್ಣ.

ವಂಶವಾಹಿಯ ಈ ಚಲನೆ, ಒಂದು ನಿಗದಿತ ಘಟ್ಟ ತಲುಪಿ, ಭತ್ತದ ಹೊಡೆಯ ರೂಪದಲ್ಲಿ ಅಂತಿಮ ಫಲವನ್ನು ಪಡೆಯುತ್ತದೆ. ಈ ಒಟ್ಟು ಪ್ರಕ್ರಿಯೆಯ ಫಲವನ್ನೇ ‘ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ’ ಎನ್ನುತ್ತ, ಮತ್ತೆ ಅಚ್ಚರಿ ವ್ಯಕ್ತಪಡಿಸುತ್ತಾನೆ ಬಂಕಣ್ಣ. ಈ ಇಡೀ ವಿದ್ಯಮಾನವು ಜೀವವಿಕಾಸದ ನಿಯಮಕ್ಕೆ ಅನುಗುಣವಾಗಿಯೇ ನಡೆಯುವಂಥದ್ದು.

ಜೀವವಿಕಾಸದ ಇದೇ ಪ್ರಕ್ರಿಯೆ, ಅನುಭಾವ ಸಾಧನೆಯಲ್ಲೂ ನಡೆಯುತ್ತದೆಯೆಂಬುದನ್ನು ಬಂಕಣ್ಣನ ಈ ವಚನ ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಅನುಭಾವ ಸಾಧನೆಯಲ್ಲಿ ತೊಡಗುವ ವ್ಯಕ್ತಿಯು, ತನ್ನ ಮೂಲ ಗುಣ-ಸ್ವಭಾವಗಳನ್ನು ಅಳಿದುಕೊಂಡಾಗ, ಅಲ್ಲಿ ಹೊಸದಾದ ಗುಣ-ಸ್ವಭಾವಗಳ ಸೃಷ್ಟಿ ಸಾಧ್ಯ. ಭಕ್ತಿಸಾಧನೆಯ ಆ ಹಂತದಲ್ಲಿ ಮೂಲಗುಣಗಳ ವಾಸನೆ ಅಳಿದುಹೋಗುತ್ತದೆಯಷ್ಟೇ ಅಲ್ಲ; ಸಾಧನಾ ಮಾರ್ಗದಲ್ಲಿ ಮುಂದೆ ಹೊಸ ಹಾಗೂ ಪರಿವರ್ತಿತ ಗುಣ-ಸ್ವಭಾವ ಬೆಳೆಯುತ್ತವೆ. ಹೀಗೆ ಅವು ಬೆಳೆಬೆಳೆದು, ಅಂತಿಮ ಘಟ್ಟ ಮುಟ್ಟಿದಾಗ, ಅಂದರೆ ಭಕ್ತಿಯ ಸಾಧನೆ ಉನ್ನತ ಸ್ಥಿತಿ ತಲುಪಿದಾಗ, ಅಲ್ಲಿ ದೊರಕುವ ಆನಂದವೇ ಈ ಇಡೀ ಪ್ರಕ್ರಿಯೆಯೆ ಫಲ. ಯಾವ ಉಪಾಧಿಗಳೂ ಇಲ್ಲದ, ಕೇವಲ ಪರಿಪೂರ್ಣ ಆನಂದಾನುಭವದ ಈ ಫಲವನ್ನೇ, ‘ಆ ಹೊಡೆಯಲ್ಲಿ ಅಡಗಿತ್ತೆಂದರಿಯೆ’ ಎಂದು ಬಂಕಣ್ಣ ಹೇಳಿದ್ದು. ಇದು ಸಾಧ್ಯವಾಗುವುದು ಸಾಧಕನು ಅರಿವಿನ ಪಥದಲ್ಲಿ ಸಾಗಿದಾಗ ಮಾತ್ರ. ಇಂಥ ಅರಿವಿನ ಪಥವೇ ವಿಜ್ಞಾನ ಮತ್ತು ಸೃಷ್ಟಿವಿಕಾಸದ ಕ್ರಮಕ್ಕೆ ಸಮನಾದುದು.

ಹೀಗೆ, ಕಾಣದ ಹಾಗೆ ನಡೆಯುವ ಸೃಷ್ಟಿಯ ಜೀವವಿಕಾಸವನ್ನು, ಹಾಗೂ ಅರಿವಿನ ಬೆಳಕಲ್ಲಿ ನಡೆಯುವ ಅನುಭಾವದ ವಿಕಾಸವನ್ನು ಸಮೀಕರಿಸುತ್ತಾನೆ ಬಂಕಣ್ಣ. ಅವೆರಡರ ಅಂತಿಮ ಫಲ ‘ಹೊಡೆಯ’ ರೂಪದಲ್ಲೇ ಕಾಣುವಂಥದ್ದು. ಇದೆಲ್ಲವನ್ನೂ ವೈಜ್ಞಾನಿಕ ಸಿದ್ಧಾಂತಗಳಿಗೆ ಅನುಗುಣವಾಗಿಯೇ ತೋರಿಸುವ ಹೊಡೆಹುಲ್ಲ ಬಂಕಣ್ಣ ಒಬ್ಬ ವಿಜ್ಞಾನಾನುಭಾವಿಯಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT