ಶುಕ್ರವಾರ, ಮೇ 27, 2022
25 °C

ವಚನಾಮೃತ: ತಿಳಿದಿದ್ದರೂ ತಪ್ಪು ಮಾಡಬಾರದು

ಡಾ.ಅಲ್ಲಮಪ್ರಭು ಸ್ವಾಮೀಜಿ Updated:

ಅಕ್ಷರ ಗಾತ್ರ : | |

Prajavani

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––––

ಪಾತಕ ಶತಕೋಟಿಯನೊರಸಲು

ಸಾಲದೆ ಒಂದು ಶಿವನ ನಾಮ?

ಸಾಲದೆ ಒಂದು ಹರನ ನಾಮ?

ಕೂಡಲಸಂಗಮದೇವಾ, ನಿಮ್ಮ ಉಂಡಿಗೆಯ ಪಶುವ ಮಾಡಿದೆಯಾಗಿ.

ನಮ್ಮ ಎಲ್ಲ ಪಾಪಗಳನ್ನು ಪರಿಹರಿಸುವ ಶಕ್ತಿಯು ಭಗವಂತನ ನಾಮಸ್ಮರಣೆಗಿದೆ. ಹಾಗೆಂದು ಪಾಪ ಕೃತ್ಯಗಳನ್ನು ಮಾಡಬಹುದು ಎಂದರ್ಥವಲ್ಲ. ತಿಳಿಯದೆ ಆಗುವ ತಪ್ಪುಗಳಿಗೆ ಪರಿಹಾರವಿದೆ. ತಿಳಿದಿದ್ದರೂ ಮಾಡುವ ತಪ್ಪುಗಳಿಗೆ ಪರಿಹಾರವಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ತಿಳಿದೋ, ತಿಳಿಯದೆಯೋ ತಪ್ಪುಗಳಾಗುವುದು ಸಹಜ. ಎಷ್ಟೋ ಜನ ಪ್ರಾಯಶ್ಚಿತ್ತ ಮಾಡಿಕೊಂಡು ತಮಗೆ ತಾವೆ ಶಿಕ್ಷೆಗಳನ್ನು ವಿಧಿಸಿಕೊಳ್ಳುವುದನ್ನು ನೋಡುತ್ತೇವೆ. ಅದರಿಂದ ದೈಹಿಕ ಮತ್ತು ಮಾನಸಿಕ ನೋವುಗಳಾಗುತ್ತವೆಯೇ ಹೊರತು ಯಾವುದೇ ರೀತಿಯ ನೆಮ್ಮದಿ ಸಿಗಲು ಸಾಧ್ಯವಿಲ್ಲ.

ಆದರೆ, ಇಲ್ಲಿ ಬಸವಣ್ಣನವರು ನಮ್ಮ ತಪ್ಪುಗಳಿಗೆ ಪರಿಹಾರವಿದೆ; ಹಾಗೆಯೇ ನೆಮ್ಮದಿಯೂ ಸಿಗುತ್ತದೆ ಎನ್ನುವುದು ಹೇಗೆ ಎಂಬುದನ್ನು ವಚನದ ಮೂಲಕ ತಿಳಿಸಿದ್ದಾರೆ. ನಿಷ್ಠೆ, ಶ್ರದ್ಧೆಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಮಾತ್ರ ಅದು ಸಾಧ್ಯವಿದೆ ಎಂದಿದ್ದಾರೆ. ಶಿವನಾಮಸ್ಮರಣೆಯಿಂದ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ. ಲಿಂಗಧಾರಿ ಸದಾಶುಚಿ ಎನ್ನುವಂತೆ, ಭಗವಂತನ ಒಲುಮೆಗೆ ನಾವು ಸದಾ ಕಾಲ ಪ್ರಾರ್ಥನೆ, ಧ್ಯಾನ, ತಪಸ್ಸು ಮಾಡುತ್ತಿರಬೇಕು. ಇಲ್ಲವಾದರೆ ಮನಸ್ಸು ಮಲಿನವಾಗಿ, ಕೆಟ್ಟ ಕೆಲಸಗಳಿಗೆ ಪ್ರೇರಣೆ ನೀಡುತ್ತದೆ. ಉಂಡಿಗೆಯ ಪಶು ಎಂದರೆ ಲಿಂಗಮುದ್ರಾಂಕಿತವಾದ ಪಶು. ಶಿವನನ್ನು ನಿಷ್ಠೆಯಿಂದ ಪ್ರಾರ್ಥಿಸುವ, ಶಿವನ ಆರಾಧಕನಾಗಿದ್ದೇನೆ. ಸತ್ಯ, ಶುದ್ಧ ಕಾಯಕ ಮಾಡಿ, ಅದರಿಂದ ಬಂದ ಫಲದಿಂದ ದಾಸೋಹ ಮಾಡಿ, ಶಿವನನ್ನು ಒಲಿಸಿಕೊಳ್ಳುವುದೆ ನಮ್ಮ ಪರಮ ಗುರಿಯಾಗಬೇಕು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು