ಸೋಮವಾರ, ಮೇ 16, 2022
30 °C

ವಚನಾಮೃತ: ಸಂತೃಪ್ತ ಬದುಕು

ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ, ವಿಜಯಪುರ ಜಿಲ್ಲೆ Updated:

ಅಕ್ಷರ ಗಾತ್ರ : | |

Prajavani

‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಕವಿಗಳು ಹೇಳುತ್ತಾರೆ. ಮನುಷ್ಯನಿಗೆ ಇಂದು ಎಷ್ಟೇ ಸುಖ ಸಮೃದ್ಧಿ, ಸಿರಿ ಇದ್ದರೂ ಬದುಕಿನಲ್ಲಿ ಸಂತೃಪ್ತಿ ಇಲ್ಲದಾಗಿದೆ.

ಸಂತೃಪ್ತ ಎಂಬುದು ವ್ಯಕ್ತಿಯ ಜೀವನದಲ್ಲಿ ಒಡಮೂಡಬೇಕಾದ ಭಾವನೆ. ‘ಕಾಯಕವೆ ಕೈಲಾಸ’, ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದುಕೊಂಡು ದುಡಿದಷ್ಟು ಪಡೆದು ತೃಪ್ತಿಯಿಂದ ಜೀವನ ಸಾಗಿಸುವುದು ಜಾಣತನ.

ಆಸೆಯೇ ದುಃಖಕ್ಕೆ ಮೂಲವೆಂದು ತಿಳಿದರು ಆಸೆಬುರುಕ ಮಾನವ ಇತರರನ್ನು ನೋಡಿ ತಾನು ಅವರಂತೆ ಆಗಬೇಕು ಎಂದು ಇನ್ನಿಲ್ಲಿದ ಸಾಹಸ ಮಾಡಿ ಇರುವ ಸುಖ, ನೆಮ್ಮದಿಯನ್ನು ಬಲಿಕೊಡುತ್ತಾನೆ. ಪ್ರತಿಯೊಬ್ಬರೂ ತಮಗಿಂತಲೂ ಬೇರೆಯವರ ಸುಖವನ್ನು ಅಳೆಯುತ್ತಾರೆ.

ಒಬ್ಬ ಒಂಟಿ ಕಾಲಿನವನು ಎರಡು ಕಾಲಿರುವ ವ್ಯಕ್ತಿಯನ್ನು ನೋಡಿ ಅವನೆಷ್ಟು ಸುಖಿಯಾಗಿಲ್ಲವೇ ಎಂದು ತನ್ನ ದುಸ್ಥಿತಿಗೆ ದುಃಖ ಪಡುತ್ತಾನೆ. ಬಡವ ಶ್ರೀಮಂತನನ್ನು ನೋಡಿ ದುಃಖಿಸುತ್ತಾನೆ. ವಾಸ್ತವದಲ್ಲಿ ಎರಡು ಕಾಲಿರುವ ವ್ಯಕ್ತಿಗೆ ಮಧುಮೇಹ, ರಕ್ತದೊತ್ತಡದಂತಹ ಕಣ್ಣಿಗೆ ಕಾಣದ ತೊಂದರೆಗಳಿರುತ್ತವೆ. ಶ್ರೀಮಂತನಿಗೂ ಅನೇಕ ಚಿಂತೆಗಳಿರುತ್ತವೆ.

ಇಂತಹ ಕಣ್ಣಿಗೆ ಕಾಣದ ಸಮಸ್ಯೆಗಳನ್ನು ಮುನ್ನೋಟಕ್ಕೆ ಗುರುತಿಸಲಾಗದ ನಾವು ಈ ಜಗತ್ತಿನಲ್ಲಿ ನಾವೇ ನತದೃಷ್ಟರು ಎಂಬ ಚಿಂತೆಯಲ್ಲಿ ಬದುಕು ಸಾಗಿಸುತ್ತಿರುತ್ತೇವೆ.

ಸ್ವಾರ್ಥತೆಯಿಂದ ಸ್ವರ್ಗಸುಖಃವೆಂಬ ಬಿಸಿಲು ಕುದುರೆಯ ಬೆನ್ನಟ್ಟಿ ಇರುವ ಸುಖವನ್ನು ನಿರ್ಲಕ್ಷಿಸಿ ಅತೃಪ್ತಿಯ ಬಾಳು ಸಾಗಿಸುವುದಕ್ಕಿಂತ ನಮಗಿಂತಲೂ ಕಷ್ಟದಲ್ಲಿರುವವರನ್ನು ಕಂಡು ನಾವೇ ಸುಖಿಗಳು ಎನ್ನುವುದು ಸಂತೃಪ್ತಿಯ ಬದುಕಿಗೆ ಸಾಧನವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು