ಮಂಗಳವಾರ, ಅಕ್ಟೋಬರ್ 26, 2021
28 °C

ವಚನಾಮೃತ: ಕೈ ಕೆಸರಾದರೆ ಬಾಯಿ ಮೊಸರು

ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ Updated:

ಅಕ್ಷರ ಗಾತ್ರ : | |

Prajavani

ಜೀವನದಲ್ಲಿ ಯಶಸ್ಸಿನ ದಾರಿ ಹೂಗಳಿಂದ ಆವೃತವಾಗಿರುವುದಿಲ್ಲ. ಮಹತ್ತರವಾದುದನ್ನು ಸಾಧಿಸಬೇಕಿದ್ದರೆ ಮಹಾ ಪ್ರಯತ್ನ ಮೊದಲು, ನಂತರ ದೈವಾನುಗ್ರಹ ಬೇಕಾಗುತ್ತದೆ. ಬರಲಿರುವ ಕಷ್ಟಗಳನ್ನು ಊಹಿಸಿಯೇ ಅನೇಕರು ಕಾರ್ಯಾರಂಭದಿಂದ ವಿಮುಖರಾಗುತ್ತಾರೆ. ಅಂಥವರಿಂದ ಏನನ್ನೂ ಸಾಧಿಸಲಿಕ್ಕೆ ಆಗುವುದಿಲ್ಲ. ಮನುಷ್ಯರಲ್ಲಿ ಮೂರು ವಿಧ.  ಅಧಮರು ವಿಘ್ನಗಳ ಹೆದರಿಕೆಯಿಂದ ಕೆಲಸವನ್ನೇ ಪ್ರಾರಂಭಿಸುವುದಿಲ್ಲ. ಇನ್ನು ಕೆಲವರಿದ್ದಾರೆ ಕೆಲಸ ಪ್ರಾರಂಭಿಸುತ್ತಾರೆ. ಆದರೆ, ತೊಂದರೆಗಳು ಬಂದರೆ ಕೆಲಸವನ್ನು ಮಧ್ಯದಲ್ಲಿಯೇ ಕೈ ಬಿಡುತ್ತಾರೆ. ಇವರು ಮಧ್ಯಮರು. ಆದರೆ, ಉತ್ತಮರ ಸ್ವಭಾವವೇ ಬೇರೆ. ಹೇಗೆಂದರೆ, ಬಾರಿಬಾರಿಗೂ ವಿಘ್ನಗಳು ಬಂದೆರಗಿದರೂ ಸಹ ಉತ್ತಮರು ಕೈಗೊಂಡ ಕೆಲಸವನ್ನು ನಿಲ್ಲಿಸುವುದೇ ಇಲ್ಲ.

ಪರಮೇಶ್ವರನನ್ನೇ ಪತಿಯನ್ನಾಗಿ ಪಡೆಯಲು ಪಾರ್ವತಿ ಪಟ್ಟ ಶ್ರಮವೆಷ್ಟು? ಬೇಸಿಗೆಯಲ್ಲಿ ಸುತ್ತಲೂ ಬೆಂಕಿಯನ್ನು ಉರಿಸಿ, ಅದರ ಮಧ್ಯೆ ನಿಂತು ತಪಸ್ಸು ಮಾಡಿದಳು. ಚಳಿಗಾಲದಲ್ಲಿ ಬಂಡೆಗಳ ಮೇಲೆ ನಿಂತು ತಪಸ್ಸು ಮಾಡಿದಳು. ಮೊದ -ಮೊದಲು ಎಲೆಯನ್ನು ತಿಂದು ಬದುಕಿದಳು. ಕೊನೆಯಹಂತದಲ್ಲಿ ಎಲೆಯನ್ನೂ ತಿನ್ನದೇ ಸಂಪೂರ್ಣ ನಿರಾಹಾರಿಯಾಗಿ ತಪಸ್ಸು ಮಾಡಿದಳು. ಅಂದಿನಿಂದ ಅವಳು ಅಪರ್ಣಾ ಎಂದು ಕರೆಯಲ್ಪಟ್ಟಳು. ಪಾರ್ವತಿಯ ನಿಷ್ಠೆಗೆ ಮೆಚ್ಚಿ ಕೊನೆಗೆ ಈಶ್ವರನು ತನ್ನ ನಿಜರೂಪದಿಂದ ಅವಳೆದುರು ನಿಂತಾಗ, ಪಾರ್ವತಿಗೆ ಆದ ಆನಂದಕ್ಕೆ ಎಣೆಯುಂಟೇ?

ಕೈಗೊಂಡ ಕೆಲಸದಲ್ಲಿ ಇಚ್ಛಿತ ಫಲ ಸಿಕ್ಕಾಗ ಪೂರ್ವದಲ್ಲಿ ಅನುಭವಿಸಿದ ಕಷ್ಟಗಳೇ ಸುಖಕ್ಕೆ ಕಾರಣವಾಗುತ್ತವೆ. ಕೈಕೆಸರಾದರೆ ಮಾತ್ರ ಬಾಯಿಗೆ ಮೊಸರವಲ್ಲವೇ? ಕಷ್ಟಪಡದೆ ಬಂದ ಸುಖ ಬಹುಕಾಲ ನಿಲ್ಲಲಾರದು. ಅಷ್ಟೇ ಅಲ್ಲ, ಆ ಸುಖ ಅಷ್ಟೊಂದು ಅಪ್ಯಾಯಮಾನವಾಗಿ ಇರುವುದಿಲ್ಲ. ಇಂದಿನ ದಿನಗಳಲ್ಲಿ ಕೆಲಸ ಬೇಡ, ಸೌಲಭ್ಯ ಬೇಕು ಎನ್ನುವ ಮನೋವೃತ್ತಿ ಬೆಳೆಯುತ್ತಿದೆ. ಕೆಲಸ ಮಾಡದೇ ಫಲವನ್ನು ಪಡೆಯಲು ಹಾತೊರೆಯುತ್ತಾರೆ. ಅದಕ್ಕಾಗಿ ಅನೈತಿಕ ಮಾರ್ಗವನ್ನು ಹಿಡಿದು ಹಾಸ್ಯಾಸ್ಪದಕ್ಕೆ ಒಳಗಾಗಿ ಗೌರವವನ್ನು ಕಳೆದುಕೊಳ್ಳುತ್ತಾರೆ. ಹೀಗಲ್ಲದೆ ಪರಿಶ್ರಮದಿಂದ ಬಯಸಿದ ಫಲವನ್ನು ಪಡೆದ ಮನುಷ್ಯನಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳು ದೊರಕುವುದಲ್ಲದೆ ದೈವಾನುಗ್ರಹ ಪ್ರಾಪ್ತವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.