ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಕುಂಠ ಏಕಾದಶಿ: ಅಧ್ಯಾತ್ಮ ಸಾಧನೆಯ ಪರ್ವಕಾಲ

Last Updated 1 ಜನವರಿ 2023, 19:46 IST
ಅಕ್ಷರ ಗಾತ್ರ

ಏಕಾದಶಿ ಎನ್ನುವ ಹೆಸರೇ ಸೂಚಿಸುವಂತೆ ಇದು ಮಾಸವೊಂದರ ಪಕ್ಷದಲ್ಲಿನ ಹನ್ನೊಂದನೆಯ ದಿನಕ್ಕಿರುವ ಹೆಸರು. ವರ್ಷದ ಹನ್ನೆರಡು ಮಾಸಗಳಲ್ಲಿ ಒಟ್ಟು ಇಪ್ಪತ್ನಾಲ್ಕು ಏಕಾದಶೀ ತಿಥಿಗಳು ಸಂಭವಿಸುತ್ತವೆ; ಅವುಗಳಲ್ಲಿ ಪುಷ್ಯಮಾಸದ ಶುಕ್ಲಪಕ್ಷದ ಏಕಾದಶೀ ತಿಥಿಯನ್ನು ವೈಕುಂಠ ಏಕಾದಶಿ ಎನ್ನಲಾಗುತ್ತದೆ, ಮತ್ತು ಅದಕ್ಕೆ ಹೆಚ್ಚಿನ ಮಹತ್ತು ಇದೆ. ಸೌರಮಾನದ ಪ್ರಕಾರವಾದರೆ ಇದು ಧನುರ್ಮಾಸದ ಏಕಾದಶೀ. ಈ ಏಕಾದಶಿಯನ್ನು ಪುತ್ರದಾ (ಮಗನನ್ನು ಕೊಡುವಂಥ), ಮೋಕ್ಷದಾ (ಮೋಕ್ಷವನ್ನು ಕೊಡುವಂಥ) ಏಕಾದಶೀ ಎಂದೂ ಪರಂಪರೆಯಲ್ಲಿ ಗುರುತಿಸಲಾಗುತ್ತದೆ.
ವೈಷ್ಣವ ಪರಂಪರೆಯಲ್ಲಂತೂ ವೈಕುಂಠ ಏಕಾದಶಿಗೆ ವರ್ಷದ ಎಲ್ಲ ಏಕಾದಶಿಗಳ
ನಡುವೆ ಅಗ್ರಸ್ಥಾನ. ಇದಲ್ಲದೆ ಈ ಏಕಾದಶಿಯನ್ನು ‘ತ್ರಿಕೋಟಿ’ ಅಥವಾ ‘ಮುಕ್ಕೋಟಿ ಏಕಾದಶಿ’ ಎಂದು ಕರೆಯುವುದುಂಟು.

ವಿಷ್ಣುವಿನ ಮಹಿಮೆ ಮತ್ತು ಲೋಕೋದ್ಧಾರ ಕವಾದ ಅನುಗ್ರಹಗಳ ಕುರಿತಾಗಿ ಭಾಗವತಾದಿ ಪುರಾಣಗಳಲ್ಲಿ ಮತ್ತು ಮಹಾಭಾರತದಲ್ಲಿ ಸಾಕಷ್ಟು ಚಿಂತನೆಗಳು ಸಿಗುತ್ತವೆ. ವೈಕುಂಠವೆನ್ನುವುದು ವಿಷ್ಣುವಿನ ಧಾಮ, ಅಲ್ಲಿ ಕುಂಠತೆಗೆ (ವಿಕಲತೆ, ಜಾಡ್ಯ, ಕೊರತೆ) ಅವಕಾಶವೇ ಇಲ್ಲ. ಹಾಗಾಗಿಯೇ ಅದು ವೈಕುಂಠ (ವಿಗತಾ ಕುಂಠತಾ ಯಸ್ಮಾತ್). ಅದೇನಿದ್ದರೂ ಪೂರ್ಣತೆ, ನೈರ್ಮಲ್ಯ, ಸಮೃದ್ಧಿ ಮತ್ತು ಆನಂದದ ಬೀಡು. ಆ ಧಾಮದ ಅಧಿಪತಿಯೇ ಶ್ರೀಹರಿ ವಿಷ್ಣು. ವೈಕುಂಠ ಏಕಾದಶಿಯಾದರೋ ಪಾಪಗಳನ್ನೆಲ್ಲ ಕಳೆಯುವ ಮೂಲಕ ಮಾನವಾತ್ಮಕ್ಕೆ ವಿಷ್ಣುವಿನ ಈ ಧಾಮವನ್ನು ಸೇರುವುದಕ್ಕೆ ನೆರವಾಗುವ ದಿವಸವೆನ್ನುವುದು ಪರಂಪರೆಯ ಶ್ರದ್ಧೆ. ನಾರಾಯಣನ ಪರಂಧಾಮವಾದ ವೈಕುಂಠವನ್ನು ಸೇರಬೇಕೆನ್ನುವುದು ಪ್ರತಿಯೊಂದು ಜೀವದ ಗುರಿ ಮತ್ತು ಬಯಕೆ. ಅಲ್ಲಿ ಸೇರಿದ ಬಳಿಕ ಪುನರ್ಜನ್ಮ
ವಾಗಲೀ, ಸಂಸಾರವಾಗಲೀ ಇರಲಾರದು. ಹಾಗಾಗಿ ವೈಕುಂಠದ ಹೆಸರಿನಲ್ಲಿಯೇ ಪ್ರಸಿದ್ಧವಾಗಿರುವ ಪೌಷಮಾಸದ ಶುಕ್ಲ ಏಕಾದಶಿಗೆ ಎಲ್ಲಿಲ್ಲದ ಮಹತ್ತು; ಮತ್ತಿದನ್ನು ‘ಮೋಕ್ಷದಾ’ ಎಂಬುದಾಗಿ ಕರೆದಿದ್ದೂ ಈ ಹಿನ್ನೆಲೆಯಲ್ಲಿಯೇ.

ಪರಮಕರುಣಾಮಯಿಯಾದ ಭಗವಾನ್ನಾರಾಯಣನು ಇಬ್ಬರು ಅಸುರರಿಗಾಗಿ ಈ ದಿನವೇ ತನ್ನ ವೈಕುಂಠದ ದ್ವಾರವನ್ನು ತೆರೆದನು. ಇದರ ಹಿನ್ನೆಲೆಯಲ್ಲಿ ವೈಕುಂಠ ಏಕಾದಶಿಯಂದು ಬಹುತೇಕ ವಿಷ್ಣುದೇವಾಲಯಗಳಲ್ಲಿ ವೈಕುಂಠದ್ವಾರವನ್ನು ನಿರ್ಮಿಸಲಾಗುತ್ತದೆ. ಈ ದಿನದಂದು ಭಕ್ತರು ದೇವರ ದರ್ಶನ ಮಾಡಿ ಈ ದ್ವಾರದ ಮೂಲಕ ಹಾಯ್ದುಬರುವ ಕ್ರಮ ರೂಢಿಯಲ್ಲಿದೆ. ಎಲ್ಲ ಏಕಾದಶಿಗಳಂದು ಉಪವಾಸವು ಪ್ರಶಸ್ತವಾಗಿದ್ದರೂ ವೈಕುಂಠ ಏಕಾದಶಿಯಂದು ನಡೆಸುವ ಉಪವಾಸವ್ರತವು ಇನ್ನುಳಿದ ಯಾವುದಕ್ಕೂ ಸಮನಾಗದು. ಉಪವಾಸ ಎನ್ನುವುದು ಆಹಾರ ಸ್ವೀಕರಿಸದಿರುವ ಪ್ರಕ್ರಿಯೆ ಮಾತ್ರವಲ್ಲ, ಬದಲಾಗಿ ದಿವ್ಯಕ್ಕೆ ಹತ್ತಿರವಾಗಿ (ಉಪ – ಸಮೀಪ, ವಾಸ – ಇರುವಿಕೆ) ಇರುವ ಒಂದು ಆಧ್ಯಾತ್ಮಿಕ ಆಚರಣೆಯಾಗಿದೆ. ನಿರಾಹಾರರಾಗಿ ಉಳಿದು ಭಗವಚ್ಚಿಂತನೆಯಲ್ಲಿ ಮನಸನ್ನು ದಿನವಿಡೀ ನೆಲೆಗೊಳಿಸುವುದು ಮನೋದೈಹಿಕ ಶುದ್ಧಿಯನ್ನು ಕೊಡುತ್ತದೆ.

ಇನ್ನು ತಿರುಪತಿಯ ವೇಂಕಟಾದ್ರಿಯನ್ನು ಕಲಿಯುಗದಲ್ಲಿ ಭೂಮಿಯ ಮೇಲೆ ಇರುವ ವೈಕುಂಠವೆಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ಪಾಪಗಳನ್ನೆಲ್ಲ ನಾಶಮಾಡುವ ವೆಂಕಟೇಶ್ವರನು ಸಾಕ್ಷಾತ್ತಾಗಿ ಅಲ್ಲಿ ನೆಲೆಸಿದ್ದಾನೆ. ಶ್ರೀಮನ್ನಾರಾಯಣನ ದಶಾವತಾರಗಳಿಗೆ ಒಂದೊಂದು ಕಥೆ ಇರುವಂತೆಯೇ ವೆಂಕಟೇಶ್ವರನಾಗಿ ಆತ ತಿರುಮಲೆಯಲ್ಲಿ ನಿಂತಿರುವುದಕ್ಕೂ ಕಥೆಗಳಿವೆ. ಕಾರಣಾಂತರಗಳಿಂದ ಭೂಮಿಗೆ ಬಂದು ನೆಲೆಸಿದ ಮಹಾಲಕ್ಷ್ಮೀಯನ್ನು ಅರಸುತ್ತ ಶ್ರೀಮನ್ನಾರಾಯಣನು ಭೂಮಿಗೆ ಬಂದು ಶೇಷಾಚಲದಲ್ಲಿ ನೆಲೆನಿಂತನೆಂದು ತಿಳಿಯುತ್ತದೆ. ಶ್ರೀನಿವಾಸ ಪದ್ಮಾವತೀ ಕಲ್ಯಾಣಕ್ಕಾಗಿ ಕುಬೇರನಲ್ಲಿ ಮಾಡಿದ ಸಾಲ ಮತ್ತು ಕಲಿ ಯುಗ ಮುಗಿಯುವುದರೊಳಗೆ ಅದನ್ನು ತೀರಿಸಬೇಕಾದ ಷರತ್ತು ಇತ್ಯಾದಿ ಕಥೆಗಳೂ ಪ್ರಸಿದ್ಧವಿವೆ. ಅದೇ ಕಾರಣಕ್ಕೆ ತಿರುಪತಿಯ ವೆಂಕಟೇಶ್ವರನಿಗೆ ಭಕ್ತಕೋಟಿಯಿಂದ ಸಂಪತ್ತಿನ ಹೊಳೆಯೇ ನಿರಂತರವಾಗಿ ಹರಿದುಬರುತ್ತದೆ. ಪ್ರಸ್ತುತ ತಿರುಪತಿಯಲ್ಲಿ ಮಾತ್ರವಲ್ಲದೆ ಜಗತ್ತಿನ ನಾನಾ ಭಾಗಗಳಲ್ಲಿ ವೇಂಕಟೇಶ್ವರನ ದೇವಾಲಯಗಳು ಸ್ಥಾಪಿತವಾಗಿವೆ, ಮತ್ತು ಅಲ್ಲೆಲ್ಲ ವೈಕುಂಠ ಏಕಾದಶೀ ದಿನದಂದು ವಿಶೇಷವಾದ ಪೂಜೆ ಹಾಗೂ ಭಕ್ತಸ್ತೋಮಕ್ಕೆ ಅನುಕೂಲವಾಗುವ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT