ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಮಾರಗಣಗಳಿಗೂ ಮಣಿಯದ ಶಿವ

ಭಾಗ 137
ಅಕ್ಷರ ಗಾತ್ರ

ಶಿವನನ್ನು ಮೋಹಗೊಳಿಸಲು ಸಾಧ್ಯವಿಲ್ಲ ಎಂದ ಮನ್ಮಥನ ಮಾತನ್ನು ಕೇಳಿ ಬ್ರಹ್ಮ ಚಿಂತಾಕ್ರಾಂತನಾದ. ಅವನ ನಿಟ್ಟುಸಿರಿನಿಂದ ಅನೇಕ ರೂಪವುಳ್ಳ, ತುಂಬಾ ಬಲಶಾಲಿಗಳೂ, ಚಂಚಲವಾದ ನಾಲಿಗೆಯುಳ್ಳವರೂ, ತುಂಬಾ ಭಯಂಕರರೂ ಆದಂತಹ ಅನೇಕ ಗಣಗಳು ಜನಿಸಿದರು. ಆ ಗಣಗಳೆಲ್ಲರೂ ಪಟಹ ಮೊದಲಾದ ಅನೇಕ ಬಗೆಯ ವಾದ್ಯಗಳನ್ನು ದೊಡ್ಡ ಸದ್ದಿನೊಡನೆ ಬಾರಿಸಿದರು. ನಂತರ ಆ ಮಹಾಗಣಗಳು ಬ್ರಹ್ಮನ ಎದುರಿಗೆ ನಿಂತು ‘ಮಾರಯ ಎಂದರೆ ಕೊಲ್ಲು, ಛೇದಯ ಎಂದರೆ ಕತ್ತರಿಸು’ ಎಂಬುದಾಗಿ ಆರ್ಭಟಿಸಿದರು. ಗಣಗಳು ಹೀಗೆ ಕೂಗುತ್ತಿದ್ದಾಗ ಮನ್ಮಥ ಅವುಗಳಿಗೆ ಸುಮ್ಮನಿರುವಂತೆ ಸೂಚಿಸಿ, ‘ಈಗ ಜನಿಸಿರುವ ಈ ವೀರರೂ ಕ್ರೂರರೂ ಭಯಂಕರರೂ ಆದ ಗಣಗಳು ಯಾರು? ಇವರ ಕೆಲಸವೇನು? ಇವರು ಯಾವ ಸ್ಥಾನದಲ್ಲಿರಬೇಕಾದವರು? ಇವರ ಹೆಸರುಗಳೇನು?’ ಎಂದು ಬ್ರಹ್ಮನನ್ನು ಕೇಳಿದ.

‘ಎಲೈ ಮನ್ಮಥ! ಈ ಗಣಗಳು ಜನಿಸಿದೊಡನೆಯೇ ಮಾರಯ ಎಂದು ಪುನಃ ಪುನಃ ಹೇಳಿರುವುದರಿಂದ ಇವರಿಗೆ ಮಾರಗಣಗಳೆಂದು ಹೆಸರು. ಶಿವಾರ್ಚನೆಯನ್ನು ಮಾಡದೇ ಕೇವಲ ಕಾಮಸುಖದಲ್ಲಿಯೇ ಆಸಕ್ತರಾಗಿರುವಂತಹ ಜನಗಳಿಗೆ ಈ ಗಣಗಳು ಸದಾ ವಿಘ್ನವನ್ನುಂಟುಮಾಡುವುವು. ಈ ಗಣಗಳಿಗೆ ನಿನ್ನನ್ನು ಹಿಂಬಾಲಿಸುವುದೇ ಕರ್ತವ್ಯ. ನಿನ್ನೊಡನೆ ಬಂದು ನಿನಗೆ ಸಹಾಯಮಾಡುವರು. ಈ ಗಣಗಳು ಕಾಮಬಾಣಪೀಡಿತರಾದವರ ಮನಸ್ಸಿನಲ್ಲಿ ಭ್ರಾಂತಿಯನ್ನುಂಟುಮಾಡುವರು. ಜ್ಞಾನಿಗಳ ಜ್ಞಾನಮಾರ್ಗವನ್ನೂ ಹಾಳುಮಾಡುವರು’ ಎಂದ ಬ್ರಹ್ಮ.

ಬ್ರಹ್ಮ ಹೇಳಿದ ಮಾತುಗಳನ್ನು ಕೇಳಿದ ಮನ್ಮಥ ಸ್ವಲ್ಪ ಪ್ರಸನ್ನವಾದ ಮುಖವುಳ್ಳವನಾದ. ಆ ಗಣಗಳೂ ಬ್ರಹ್ಮನ ಮಾತುಗಳನ್ನು ಕೇಳಿ ಸಂತೋಷಗೊಂಡು, ಮನ್ಮಥನನ್ನು ಸುತ್ತುವರಿದು ಕುಳಿತರು. ನಂತರ ಬ್ರಹ್ಮ ‘ಎಲೈ ಮದನ, ಈ ಗಣಗಳ ಸಹಾಯದಿಂದ ನೀನು ಮತ್ತೆ ಶಂಕರನನ್ನು ಮೋಹಗೊಳಿಸಲು ಹೊರಡು. ಮನಸ್ಸಿಟ್ಟು ಈ ಮಾರಗಣಗಳೊಂದಿಗೆ ಪ್ರಯತ್ನ ಮಾಡು, ಶಂಕರನು ಪತ್ನಿಯನ್ನು ಪರಿಗ್ರಹಿಸುವಂತೆ ಮೋಹಗೊಳಿಸು’ ಎಂದು ಆದೇಶಿಸಿದ.

‘ತಂದೆಯಾದ ಓ ವಿಧಿ! ನಾನು ಈವರೆಗೆ ಶಿವನನ್ನು ಮೋಹಗೊಳಿಸಲು ಬಹಳ ಯತ್ನಗಳನ್ನು ಮಾಡಿರುವೆ. ಆದರೆ ಶಿವನು ಇದುವರೆವಿಗೂ ಸ್ವಲ್ಪವೂ ಮೋಹಗೊಳ್ಳಲಿಲ್ಲ. ಈಗಲೂ ಅವನನ್ನು ಮೋಹಗೊಳಿಸುವುದು ಅಸಾಧ್ಯ ಎಂಬುದನ್ನು ಬಲ್ಲೆ. ಆದರೆ ನಿನ್ನ ಮಾತಿನಲ್ಲಿ ಗೌರವವನ್ನಿಟ್ಟು, ಈ ಮಾರಗಣಗಳೊಂದಿಗೆ ಹೋಗುತ್ತಿದ್ದೇನೆ. ಆದರೆ, ಶಿವನನ್ನು ಮೋಹಗೊಳಿಸುವ ನನ್ನ ಪ್ರಯತ್ನದಲ್ಲಿ ಅವನ ಕೋಪಕ್ಕೆ ತುತ್ತಾಗಿ, ಎಲ್ಲಿ ನಾನು ಭಸ್ಮವಾಗುವೆನೋ – ಎಂಬ ಹೆದರಿಕೆಯೂ ಇದೆ’ ಎಂದು ಹೇಳಿದ ಮನ್ಮಥ, ಪತ್ನಿ ರತಿ, ವಸಂತ ಮತ್ತು ಮಾರಗಣಗಳೊಡನೆ ಅಳುಕುತ್ತಲೇ ಶಿವನಿರುವಲ್ಲಿಗೆ ಹೋದ. ಅಲ್ಲಿ ಶಿವನನ್ನು ಮೋಹಗೊಳಿಸಲು ಅನೇಕ ಯತ್ನಗಳನ್ನು ಮಾಡಿದ.

ವಸಂತ ಸಹ ತನ್ನ ಬುದ್ಧಿಯನ್ನು ಪ್ರಯೋಗಿಸಿ ಅನೇಕ ಉಪಾಯಗಳನ್ನು ಮಾಡಿದ. ಮಾರಗಣಗಳೂ ಅನೇಕ ಉಪಾಯಗಳನ್ನು ಮಾಡಿದವು. ಆದರೂ ಪರಮಾತ್ಮನಾದ ಶಿವನು ಸ್ವಲ್ಪವೂ ಮೋಹಗೊಳ್ಳಲಿಲ್ಲ. ಮತ್ತೆ ಸೋತ ಮನ್ಮಥ ತನ್ನ ಪರಿವಾರದೊಂದಿಗೆ ಬ್ರಹ್ಮನ ಬಳಿಗೆ ಬಂದ. ಬ್ರಹ್ಮನಿಗೂ ಮತ್ತೆ ಮನ್ಮಥ ಸೋತು ಬಂದುದನ್ನು ನೋಡಿ ದುಃಖವಾಯಿತು. ಬ್ರಹ್ಮನ ಗರ್ವವೂ ನಾಶವಾಯಿತು.

ಸೋತ ಹತಾಶೆಯಲ್ಲಿದ್ದ ಮನ್ಮಥ ಬ್ರಹ್ಮನಿಗೆ ನಮಸ್ಕರಿಸಿ, ‘ಶಿವನನ್ನು ಮೋಹಗೊಳಿಸಲು ಮೊದಲಿಗಿಂತಲೂ ಹೆಚ್ಚು ಪ್ರಯತ್ನ ಮಾಡಿದೆವು. ಆದರೆ ಸಮಾಧಿಸ್ಥಿತಿಯಲ್ಲಿ ಕುಳಿತ ಶಿವನಿಗೆ ಸ್ವಲ್ಪವೂ ಕಾಮವಿಕಾರವುಂಟಾಗಲಿಲ್ಲ. ಕರುಣಾಮೂರ್ತಿಯಾದ ಶಿವನು ನನ್ನನ್ನು ದಹಿಸಲೂ ಇಲ್ಲ. ಇದಕ್ಕೆ ನನ್ನ ಪೂರ್ವ ಪುಣ್ಯವೇ ಕಾರಣ. ಅಲ್ಲದೆ ಆ ಪ್ರಭುವಾದ ಶಿವನು ಕೋಪ ಮುಂತಾದ ವಿಕಾರಗಳಿಲ್ಲದವನು. ಶಿವನು ಪತ್ನಿಯನ್ನು ಸ್ವೀಕರಿಸಲೇ ಬೇಕೆಂದಿದ್ದರೆ ಈ ನಮ್ಮ ಗರ್ವವನ್ನೂ ಹಠವನ್ನೂ ಬಿಟ್ಟು ಬೇರೆ ಉಪಾಯವನ್ನು ಮಾಡುವುದು ಉತ್ತಮ’ ಎಂದು ಹೇಳಿ, ಮನ್ಮಥ ತನ್ನ ಪರಿವಾರದೊಡನೆ ಅಲ್ಲಿಂದ ತೆರಳಿದ ಎಂಬಲ್ಲಿಗೆ ಸತೀಖಂಡದಲ್ಲಿ ಒಂಬತ್ತನೆಯ ಅಧ್ಯಾಯವು ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT