ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ | ಆಕಾರರಹಿತ ಶಿವ

ಅಕ್ಷರ ಗಾತ್ರ

ತಾರಕಾಸುರನ ವಧೆ ಮಾಡಿದ ಶಿವಕುಮಾರನನ್ನು ವಿಷ್ಣು ಮೊದಲಾದ ದೇವತೆಗಳು ಸಂತೋಷದಿಂದ ಭಕ್ತಿಯಿಂದ ಸ್ತುತಿಸಿದರು. ‘ಮಂಗಳರೂಪನಾದ ಕುಮಾರನೇ ನಿನಗೆ ನಮಸ್ಕಾರ. ಲೋಕಕ್ಕೆ ಮಂಗಳವನ್ನುಂಟುಮಾಡುವ, ವಿಶ್ವಬಂಧುವೂ ವಿಶ್ವಭಾವವೂ ಆದ ನಿನ್ನಿಂದ ತಾರಾಕಾಸುರ, ಬಾಣಾಸುರ, ಪ್ರಲಂಬಾಸುರರನ್ನು ಕೊಂದು ಲೋಕಕ್ಕೆ ಸುಖ ಉಂಟಾಗಿದೆ. ಪ್ರಪಂಚದ ಸೃಷ್ಟಿಕರ್ತನೂ, ಅದರ ರಕ್ಷಕನೂ ಅದನ್ನು ಸಂಹರಿಸುವವನೂ ಪವಿತ್ರರೂಪನಾದ ನೀನೆ. ಅಗ್ನಿಪುತ್ರನಾದ ನೀನು ನಮಗೆ ಪ್ರಸನ್ನನಾಗು. ಪ್ರಪಂಚಸ್ವರೂಪನೂ ದೀನಬಂಧುವೂ ಆದ ನೀನು ನಮ್ಮನ್ನು ಕಾಪಾಡು. ದೇವತೆಗಳನ್ನು ಯಾವಾಗಲೂ ಕಾಪಾಡುವುದು ನಿನಗೆ ಸೇರಿದುದು. ದೇವತೆಗಳ ಪ್ರಾಣರಕ್ಷಕನಾದ ನೀನು ಪ್ರಸನ್ನನಾಗು. ನೀನೇ ಪರಮೇಶ್ವರನು ಮತ್ತು ಸರ್ವ ವ್ಯಾಪಕನು’ ಎಂದು ಸ್ತೋತ್ರಮಾಡಿದರು.ಪ್ರಸನ್ನನಾದ ಕುಮಾರನು ಎಲ್ಲರಿಗೂ ವರಗಳನ್ನು ಕರುಣಿಸಿದನು.

ಮೊದಲಿಗೆ ತನ್ನನ್ನು ಸ್ತುತಿಸಿದ ಪರ್ವತಗಳಿಗೆ ಪ್ರಸನ್ನನಾಗಿ ವರವನ್ನು ಕೊಟ್ಟನು. ‘ನೀವೆಲ್ಲರೂ ತಪಸ್ವಿಗಳ ಪೂಜೆಗೆ ಅರ್ಹರಾಗಿರಿ. ಕರ್ಮಮಾಡುವವರೂ ಜ್ಞಾನಿಗಳೂ ನಿಮ್ಮನ್ನು ಸೇವಿಸುವರು. ನನ್ನ ಅನುಗ್ರಹದಿಂದ ಈಶ್ವರನ ವಿಶಿಷ್ಟರೂಪವಾದ ಲಿಂಗರೂಪಗಳನ್ನು ಹೊಂದಿ ಸುಖವಾಗಿರಿ. ನನ್ನ ತಾತನೂ ಪರ್ವತಶ್ರೇಷ್ಠನೂ ಆದ ಹಿಮವಂತನು ತಪಸ್ವಿಗಳಿಗೆ ಆಶ್ರಯಭೂತನಾಗಿ ಫಲದಾಯಕನಾಗಿರುವನು’ ಎಂದು ಆಶೀರ್ವಾದಿಸಿದ. ಹೀಗೆ ಎಲ್ಲರಿಗೂ ವರ ನೀಡಿದ ಕಾರ್ತಿಕೇಯನಿಗೆ ದೇವತೆಗಳು ಕೃತಜ್ಞತೆಗಳನ್ನು ಹೇಳಿದರು. ‘ಎಲೈ ಸ್ಕಂದನೇ, ತಾರಕಾಸುರನನ್ನು ಕೊಂದು ಎಲ್ಲರಿಗೂ ವರಗಳನ್ನು ಕರುಣಿಸಿರುವೆ. ನಾವೂ ಮತ್ತು ಚರಾಚರಗಳೆಲ್ಲವೂ ಸುಖವನ್ನು ಹೊಂದಿರುವೆವು. ಈಗ ನೀನು ಸಂತೋಷದಿಂದ ಕೈಲಾಸಪರ್ವಕ್ಕೆ ಹೋಗಿ, ನಿನ್ನ ಜನನೀಜನಕರಾದ ಪಾರ್ವತೀಪರಮೇಶ್ವರರನ್ನು ಸೇರುವುದು ಯೋಗ್ಯವಾದುದು. ಆದುದರಿಂದ ನೀನು ಅಲ್ಲಿಗೆ ಹೊರಡಲನುವಾಗು’ ಎಂದರು.

ವಿಷ್ಣು-ಬ್ರಹ್ಮ ಮೊದಲಾದ ದೇವತೆಗಳು ಶಿವಕುಮಾರನ ಅಪ್ಪಣೆಯಂತೆ ದೊಡ್ಡದೊಂದು ಉತ್ಸವವನ್ನು ಆಚರಿಸಿದರು. ಮಂಗಳವಾದ್ಯಗಳು ಮೊಳಗುತ್ತಿರಲು, ದೇವತೆಗಳು ವಿಜಯಶಬ್ದವನ್ನುಚ್ಚರಿಸುತ್ತಿರಲು, ಕುಮಾರನು ವಿಮಾನವನ್ನೇರಿ ಕೈಲಾಸಪರ್ವತಕ್ಕೆ ಹೊರಟನು. ಬ್ರಹ್ಮ-ವಿಷ್ಣುವೂ ಅಕ್ಕಪಕ್ಕಗಳಲ್ಲಿ ನಿಂತು ಸಂತೋಷದಿಂದ ಚಾಮರವನ್ನು ಬೀಸುತ್ತಿದ್ದರು. ಇಂದ್ರಾದಿ ದೇವತೆಗಳೆಲ್ಲರೂ ಆ ಕುಮಾರನ ಸೇವೆಯನ್ನು ಮಾಡುತ್ತಿದ್ದರು. ಎಲ್ಲರೂ ಕೈಲಾಸಪರ್ವತವನ್ನು ಸೇರಿದಾಗ ಮಂಗಳಧ್ವನಿ ಕೇಳಿಸಿತು. ಅಲ್ಲಿ ಪಾರ್ವತೀಪರಮೇಶ್ವರರು ಪ್ರತ್ಯಕ್ಷರಾದರು. ಬ್ರಹ್ಮ-ವಿಷ್ಣು ಮೊದಲಾದ ದೇವತೆಗಳು ಅವರನ್ನು ನೋಡಿ ನಮಸ್ಕರಿಸಿದರು. ಕುಮಾರನೂ ವಿಮಾನದಿಂದಿಳಿದು ವಿನೀತನಾಗಿ ಪಾರ್ವತೀಪರಮೇಶ್ವರರನ್ನು ನಮಸ್ಕರಿಸಿದ.

ಪ್ರಾಣಕ್ಕಿಂತಲೂ ಪ್ರೀತಿಕರನಾದ ಕುಮಾರನನ್ನು ನೋಡಿ ಪಾರ್ವತೀಪರಮೇಶ್ವರರು ಅತ್ಯಂತ ಸಂತೋಷಪಟ್ಟರು. ಮಹಾಪ್ರಭುವಾದ ಶಿವನು ಸ್ಕಂದನನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು ವಾತ್ಸಲ್ಯದಿಂದ ತಲೆಯನ್ನು ನೇವರಿಸಿ, ಮೈಯ್ಯನ್ನು ತಡವಿದನು. ಪಾರ್ವತಿಯೂ ತನ್ನ ತೊಡೆಯಮೇಲೆ ಕುಳ್ಳಿರಿಸಿಕೊಂಡು ಮಗನ ಶಿರವನ್ನಾಘ್ರಾಣಿಸಿದಳು. ನಂತರ ಶಿವದಂಪತಿ ಆನಂದದಿಂದ ಕುಮಾರನ ವಿಜಯೋತ್ಸವವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ದೇವತೆಗಳೂ ಮುನಿಗಳೂ ಶಿವನನ್ನೂ ಈ ರೀತಿ ಪ್ರಾರ್ಥಿಸಿದರು: ‘ಮಹೇಶ್ವರನೇ, ಸತ್ಪುರುಷರಿಗೆ ಮಂಗಳಪ್ರದನಾದ ನಿನ್ನನ್ನು ಪೂಜಿಸುವಾಗ ಆವಾಹನಾದಿಗಳನ್ನೂ ತಿಳಿಯದೆ ಮೂಢರಾಗಿದ್ದೇವೆ. ಗಂಗೆಯನ್ನು ತಲೆಯಲ್ಲಿ ಧರಿಸಿ ಶುದ್ಧನೂ, ಸತ್ತ್ವರಜಸ್ತಮೋ ಗುಣಾತ್ಮನೂ ಆದ ನೀನು ಶಿತಿಕಂಠನು, ರುದ್ರನಾಗಿರುವೆ. ರೂಪರಹಿತನೂ ನೀನೇ, ರೂಪವುಳ್ಳವನೂ ನೀನೇ. ಚಿತಾಭಸ್ಮಧಾರಿ ವಿಶ್ವರೂಪನಾದ ಶ್ರೀಕಂಠನು ನೀನೆ. ದೇವತೆಗಳಿಗೆ ಬ್ರಹ್ಮನು, ರುದ್ರರಿಗೆ ನೀಲಲೋಹಿತನು, ಪ್ರಾಣಿಗಳಿಗೆ ಪ್ರಾಣಸ್ವರೂಪನು ಆಗಿರುವೆ. ನಿನ್ನನ್ನು ಸಾಂಖ್ಯರು ಪುರುಷನೆಂದು ಕರೆಯುವರು. ನಿನ್ನ ಸಹಸ್ರಕೋಟಿ ರೂಪಗಳನ್ನು ಎಣಿಸುವುದರಲ್ಲಾಗಲೀ ಅಥವಾ ಅದರ ಕೊನೆಯನ್ನು ತಿಳಿಯುವುದರಲ್ಲಾಗಲೀ ಅಶಕ್ತರಾಗಿರುವೆವು. ನಿನ್ನ ಆರಾಧಿಸುವ ಮಾರ್ಗ ತಿಳಿಸು’ ಎಂದು ಪ್ರಾರ್ಥಿಸಿದರು.

ಆಗ ಶಿವನು ‘ವಿಷ್ಣು, ಬ್ರಹ್ಮ, ದೇವತೆಗಳಿರಾ, ಸತ್ಪುರುಷರನ್ನು ಕಾಪಾಡುತ್ತೇನೆ. ನಾನು ತ್ರಿಲೋಕಾಧಿಪತಿಯಾದ್ದರಿಂದ ದುಷ್ಟರನ್ನೆಲ್ಲಾ ಸಂಹರಿಸುತ್ತೇನೆ. ಜಗತ್ಕರ್ತೃವಾದುದರಿಂದ ಅದರ ರಕ್ಷಣೆ ಮಾಡುವೆ. ಒಟ್ಟಾರೆ, ಸೃಷ್ಟಿಯೇ ನಾನು. ವಿಕಾರರಹಿತನಾದ ನನ್ನನ್ನು ಆಕಾರದಲ್ಲಾಗಲಿ, ನಿರಾಕಾರದಲ್ಲಾಗಲಿ ಪೂಜಿಸಬಹುದು' ಎಂದು ತಿಳಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT