ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ | ಗಣೇಶನ ಜನನ

ಅಕ್ಷರ ಗಾತ್ರ

ಇಲ್ಲಿಯವರೆಗೂ ನಾರದನು ತನ್ನ ತಂದೆ ಬ್ರಹ್ಮನಿಂದ ಶಿವಮಹಾಪುರಾಣದಲ್ಲಿ ಬರುವ ರುದ್ರಸಂಹಿತೆಯ ಕುಮಾರಖಂಡದ ಸುಬ್ರಹ್ಮಣ್ಯಚರಿತ್ರೆ ಕೇಳಿದ. ನಂತರ ಅದರಲ್ಲಿ ಬರುವ ಗಣಪತಿಚರಿತ್ರೆಯನ್ನೂ ಹೇಳು ಅಂತ ನಾರದ ತನ್ನ ತಂದೆ ಬ್ರಹ್ಮನನ್ನು ಕೋರಿದ.

ಮಹಾಮುನಿಯಾದ ನಾರದನ ಮಾತನ್ನು ಕೇಳಿ ಬ್ರಹ್ಮನು ಸಂತುಷ್ಟನಾಗಿ ಶಿವನನ್ನು ಧ್ಯಾನಿಸುತ್ತಾ ನಾರದನಿಗೆ ಹೇಳಿದ, ‘ಕಲ್ಪಭೇದವಾದಂತೆಲ್ಲಾ ಗಣಪತಿ ಉತ್ಪತ್ತಿಯೂ ಬೇರೆಯಾಗಿರುವುದು. ಶನಿಯ ದೃಷ್ಟಿಯಿಂದ ಗಣಪತಿಯ ತಲೆಯು ಕತ್ತರಿಸಿಹೋಯಿತು. ಆಗ ಆನೆಯ ತಲೆಯನ್ನು ಕೂಡಿಸಿದರು. ಈಗ ನಾನು ಶ್ವೇತವರಾಹಕಲ್ಪ ಕಾಲದ ಅನುಸಾರವಾಗಿ ಗಣಪತಿಯ ಉತ್ಪತ್ತಿಯನ್ನು ಹೇಳುವೆನು, ಕೇಳು’ ಅಂತ ಬ್ರಹ್ಮ ’ಗಣೇಶನಜನನ‘ದ ಕತೆ ಹೇಳತೊಡಗಿದ.

ಶಿವ-ಪಾರ್ವತಿಯರು ಮದುವೆಯಾದ ನಂತರ ಕೈಲಾಸದಲ್ಲಿ ವಾಸಿಸುತ್ತಿರುವಾಗ ಜಯಾ, ವಿಜಯಾ ಎಂಬ ಇಬ್ಬರು ಸಖಿಯರು ಪಾರ್ವತಿಗೆ ಕಿವಿಮಾತು ಹೇಳಿದರು. ‘ಶಿವನ ಪ್ರಮಥಗಣಗಳಾದ ನಂದಿ, ಭೃಂಗಿ ಎಲ್ಲರೂ ಶಿವ ಹೇಳಿದಂತೆ ಕೇಳುವವರು. ನಮ್ಮ ಸುತ್ತ ಅಸಂಖ್ಯಾತರಾದ ಪ್ರಮಥಗಣದವರಿದ್ದರೂ ಅವರೆಲ್ಲರೂ ದ್ವಾರಪಾಲಕರಾಗಿ ಶಂಕರನ ಆಜ್ಞೆಯನ್ನು ಪಾಲಿಸುತ್ತಿರುವರು. ಆದುದರಿಂದ ಪಾಪರಹಿತಳಾದ ಪಾರ್ವತಿಯೇ, ನಮ್ಮವನಾಗಿರುವ ಒಬ್ಬನನ್ನು ನೀನು ಸೃಷ್ಟಿಮಾಡು’ ಎಂದರು.

ಸಖಿಯರ ಸುಂದರವಾದ ಆ ಮಾತನ್ನು ಕೇಳಿ ಪಾರ್ವತಿ ಪುಳಕಿತಳಾದಳು. ಇದರ ಬಗ್ಗೆ ಆಳವಾಗಿ ಯೋಚಿಸುತ್ತಿದ್ದಳು. ಒಂದು ದಿನ ಪಾರ್ವತಿಯು ಅಭ್ಯಂಜನವನ್ನು ಮಾಡುತ್ತಿರುವಾಗ ಸದಾಶಿವನು ಪಾರ್ವತಿಯ ಮನೆಯ ಬಾಗಿಲನ್ನು ಕಾಯುತ್ತಿದ್ದ ನಂದಿಯನ್ನು ಬೆದರಿಸಿ ಒಳಗೆ ಬಂದನು. ಶಿವನ ಅತಿಕ್ರಮ ಪ್ರವೇಶದಿಂದ ಪಾರ್ವತಿಗೆ ತನ್ನ ಸಖಿಯರು ಹಿಂದೆ ಹೇಳಿದ ಮಾತು ತಕ್ಷಣ ಜ್ಞಾಪಕಕ್ಕೆ ಬಂತು. ಹೀಗೆ ಕೆಲಕಾಲ ಕಳೆದ ನಂತರ ಮಂಗಳಾಂಗಿಯಾದ ಪಾರ್ವತಿಯು ತನಗೆ ಒಬ್ಬ ಶುಭಕರನಾದ ಸೇವಕನು ಬೇಕು.

ಅವನು ನನ್ನ ಅಪ್ಪಣೆಯನ್ನು ಚಾಚೂ ತಪ್ಪದಂತೆ ಪಾಲಿಸಬೇಕು. ಅಂತಹ ನಂಬಿಕಸ್ತನ್ನು ಸೃಷ್ಟಿಸಬೇಕು ಎಂದು ಯೋಚಿಸಿ, ತನ್ನ ಮೈಯಿನ ಕೊಳೆಯಿಂದ ಒಬ್ಬನನ್ನು ಸೃಷ್ಟಿಮಾಡಿದಳು. ಅವನು ಸರ್ವಲಕ್ಷಣ ಸಂಪನ್ನನಾಗಿದ್ದನು. ಅವನ ಅಂಗಾಂಗಳೆಲ್ಲವೂ ನಿರ್ದೋಷವಾಗಿತ್ತು. ಸರ್ವಾಂಗಸುಂದರನಾದ ಅವನು ಮಹಾಬಲಶಾಲಿಯಾಗಿದ್ದನು. ಬಹಳ ತೇಜಸ್ವಿಯಾಗಿ ಕಂಗೊಳಿಸುತ್ತಿದ್ದನು. ಅವನಿಗೆ ಪಾರ್ವತಿಯು ನಾನಾ ವಿಧವಾದ ವಸ್ತ್ರಗಳನ್ನುಡಿಸಿ, ತುಂಬು ಹೃದಯದಿಂದ ಆಶೀರ್ವಾದ ಮಾಡಿದಳು.

’ನೀನು ನನ್ನ ಮಗನು. ನನಗೆ ಬೇರೆ ಮಕ್ಕಳಾರೂ ಇಲ್ಲ’ ಎಂದು ಪಾರ್ವತಿ ಹೇಳಿದಾಗ, ಆ ಬಾಲಕನು ಅವಳಿಗೆ ನಮಸ್ಕರಿಸಿ ಹೀಗೆಂದನು: ‘ನಿನಗಾಗಿ ನಾನು ಯಾವ ಕೆಲಸವನ್ನು ಬೇಕಾದರೂ ಮಾಡಲು ಸಿದ್ಧನಾಗಿರುವೆ. ಅಂತಹ ಕಾರ್ಯವಿದ್ದರೇ ತಿಳಿಸು ಅಮ್ಮ’. ಆಗ ಪಾರ್ವತಿಯು, ‘ಮಗುವೇ, ನನ್ನ ಮಾತನ್ನು ಕೇಳು. ನೀನು ನನ್ನ ಮಗನು ಹಾಗೂ ನನ್ನ ಕಡೆಯವನು. ನನ್ನ ಅಪ್ಪಣೆಯಿಲ್ಲದೆ ಮನೆಯೊಳಕ್ಕೆ ಯಾರನ್ನೂ ಬಿಡಬೇಡ. ಬಲಾತ್ಕಾರವಾಗಿ ಯಾರೇ ಬಂದರೂ ತಡೆದುಬಿಡು’ ಎಂದು ಒಂದು ಗಟ್ಟಿಯಾದ ಕೋಲನ್ನು ಕೊಟ್ಟು ತನ್ನ ಮನೆಯ ಬಾಗಿಲಿನಲ್ಲಿ ನಿಲ್ಲಿಸಿದಳು.

ಪಾರ್ವತಿಯೂ ಅಭ್ಯಂಜನ ಮಾಡಲು ಸಖಿಯರೊಡನೆ ಒಳಕ್ಕೆ ಹೋದಳು. ಇದೇ ಸಮಯಕ್ಕೆ ಈಶ್ವರ ಮನೆಗೆ ಬಂದಾಗ ಬಾಗಿಲ ಬಳಿ ಬಾಲಕನೊಬ್ಬ ನಿಂತಿರುವುದು ಕಂಡು ಆಶ್ಚರ್ಯಪಟ್ಟ. ಶಿವ ಒಳಹೋಗಲು ಪ್ರಯತ್ನಿಸಿದಾಗ ಬಾಲಗಣಪ ತಡೆದ. ತಾನು ಪಾರ್ವತಿಯ ಪತಿ ಶಿವ ಈ ಮನೆಯ ಒಡೆಯ ಎಂದರೂ ಒಳಗೆ ಬಿಡಲಿಲ್ಲ. ಬಲವಂತವಾಗಿ ಒಳಗೆ ಬರಲು ಪ್ರಯತ್ನಿಸಿದಾಗ ಗಣಪತಿ ಕೋಲಿನಿಂದ ಶಿವನನ್ನು ಹೊಡೆದೇಬಿಟ್ಟ. ಬಾಲಕನ ಉದ್ಧಟತನದಿಂದ ಕೋಪಗೊಂಡ ಶಿವ ತನ್ನ ಗಣಗಳನ್ನು ಕರೆದು ಇವನಾರು ವಿಚಾರಿಸಿ ಅಂತ ಹೇಳಿ, ಮನೆಯ ಹೊರಗಡೆಯೇ ಕಾದು ನಿಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT