ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಜಪತಪಗಳ ಪುಣ್ಯಫಲಗಳು

ಭಾಗ 40
Last Updated 8 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಈಗ ಸೂತಮುನಿಯು ಜಪತಪಗಳ ವಿವರ ನೀಡುತ್ತಾನೆ.

ತೀರ್ಥಪ್ರದೇಶದಿಂದ ದಕ್ಷಿಣ ಭಾಗದಲ್ಲಿರುವಂತಹ ಪ್ರಶಸ್ತ ವಾದ ಮಠ, ಮಂತ್ರಾಲಯ, ಇಲ್ಲವೇ ದೇವಾಲಯ, ಪರಿಶುದ್ಧವಾದ ಮನೆ
ಯಲ್ಲಿ ಕುಳಿತು, ಈಶ್ವರ, ಗೌರೀ, ಷಣ್ಮುಖ, ವಿಷ್ಣು, ಬ್ರಹ್ಮ, ಚಂದ್ರ, ಯಮ ದೇವತೆಗಳನ್ನು ನಮಸ್ಕರಿಸಬೇಕು. ಮೊದಲು ಓಂಕಾರವನ್ನುಚ್ಚರಿಸಿ ಸ್ಥಿರ ವಾದ ಮನಸ್ಸಿನಿಂದ ಗಾಯತ್ರೀಜಪವನ್ನು ಮಾಡಬೇಕು. ಜೀವನೂ ಬ್ರಹ್ಮನೂ ಭಿನ್ನರಲ್ಲ – ಎಂಬ ಅರ್ಥವುಳ್ಳ ಓಂಕಾರಾರ್ಥವನ್ನು ಅನು ಸಂಧಾನಮಾಡುತ್ತಾ, ಓಂಕಾರವನ್ನು ಜಪಿಸಬೇಕು. ಲೋಕಗಳನ್ನೂ ಸೃಷ್ಟಿಸುವಂತಹ ಬ್ರಹ್ಮ, ಅವುಗಳನ್ನು ಪಾಲಿಸುವಂತಹ ವಿಷ್ಣು, ಮತ್ತು ಪ್ರಳಯಕಾಲದಲ್ಲಿ ಆ ಲೋಕಗಳನ್ನೂ ಸಂಹರಿಸುವವನೂ, ಅಗ್ನಿಯಂತೆ ಪ್ರಕಾಶರೂಪನೂ ಆದಂತಹ ರುದ್ರನನ್ನು ಉಪಾಸಿಸಬೇಕು. ಜ್ಞಾನೇಂ ದ್ರಿಯ, ಕರ್ಮೇಂದ್ರಿಯಗಳು, ಮನಸ್ಸು, ಅದರ ವೃತ್ತಿಗಳು, ಭೋಗ ಮತ್ತು ಮುಕ್ತಿಗಳನ್ನುಂಟುಮಾಡುವಂತಹ ಧರ್ಮ ಮತ್ತ್ತು ಇವೆಲ್ಲವುಗಳನ್ನೂ ಪ್ರೇರೇಪಿಸುವಂತಹ ಬ್ರಹ್ಮವಸ್ತುವನ್ನು ಉಪಾಸಿಸುವೆವು – ಎಂದು ಧ್ಯಾನ ಮಾಡುತ್ತಾ ಜಪಿಸಬೇಕು. ಹೀಗೆ ಜಪಿಸಿದವನು ನಿಶ್ಚಯವಾಗಿಯೂ ಬ್ರಹ್ಮವಸ್ತುವನ್ನು ಪಡೆಯುವನು.

ಮೂಲಪ್ರಕೃತಿಯನ್ನು ಪ್ರಾರಂಭಿಸಿ, ಹನ್ನೆರಡನೆಯ ಅಂಶದ ಮೇಲ್ಭಾಗ ದಲ್ಲಿರುವಂತಹ ವಿದ್ಯೇಶ, ಬ್ರಹ್ಮ, ವಿಷ್ಣು, ಈಶ್ವರ, ಜೀವಾತ್ಮ, ಪರಮಾತ್ಮ ಇವರೆಲ್ಲರೂ ಬ್ರಹ್ಮಸ್ವರೂಪರೆಂದೂ ತಾನೂ ಬ್ರಹ್ಮಸ್ವರೂಪನೆಂದೂ ‘ಸೋಹಂ’ ಭಾವದಿಂದ ಅನುಸಂಧಾನಮಾಡುತ್ತಾ ಜಪಿಸಬೇಕು. ಆ ವಿದ್ಯೇಶ್ವರ ಮುಂತಾದವರನ್ನೇ ಶರೀರದ ಹೊರಪ್ರದೇಶದಲ್ಲಿಯೂ ಭಾವಿಸಬೇಕು. ಮಹತ್ವವನ್ನು ಪ್ರಾರಂಭಿಸಿ ಒಂದೊಂದು ಜಪದಿಂದ ಒಂದೊಂದು ಶರೀರವನ್ನ ಅತಿಕ್ರಮಿಸುತ್ತಾ ಸಾವಿರ ಶರೀರಗಳನ್ನು ಅತಿಕ್ರಮಿಸಿ ಕೊನೆಗೆ ಪರಬ್ರಹ್ಮವಸ್ತುವಿನಲ್ಲಿ ಜೀವಾತ್ಮವನ್ನು ಸೇರಿಸಬೇಕು. ಇದೇ ಜಪದ ತತ್ವ.

ಶರೀರಶುದ್ಧಿಗಾಗಿ ನೂರಿಪ್ಪತ್ತು ಗಾಯತ್ರೀಜಪ, ಎಂಟು ಗಾಯತ್ರೀಶಿರಸ್ಸಿನ ಜಪಗಳನ್ನು ಮಾಡಬೇಕು. ಸಹಸ್ರ ಗಾಯತ್ರೀಜಪವನ್ನು ನಿತ್ಯವೂ ಮಾಡಿದರೆ ಬ್ರಹ್ಮಲೋಕವು ಲಭಿಸುವುದು. ನೂರು ಜಪಗಳಿಂದ ಇಂದ್ರಪದವಿಯು ಲಭಿಸುವುದು. ಇದಕ್ಕಿಂತಲೂ ಕಡಿಮೆಯಾದ ಜಪದಿಂದ ತನ್ನ ಕುಲರಕ್ಷಣೆ ಆಗುತ್ತದೆ. ಆ ರೀತಿ ಜಪಿಸುವವನು ಮುಂಬರುವ ಜನ್ಮದಲ್ಲೂ ಉತ್ತಮ ನೆಲೆಯಲ್ಲಿ ಜನಿಸುವನು. ಹನ್ನೆರಡು ಲಕ್ಷ ಜಪ ಮಾಡದಿರುವುದನ್ನು ವೇದೋಕ್ತವಾದ ಕರ್ಮಗಳಿಗೆ ಸೇರಿಸಬಾರದು. ಎಪ್ಪತ್ತು ವರ್ಷಗಳವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ. ನಂತರ ಸನ್ಯಾಸವನ್ನು ತೆಗೆದುಕೊಳ್ಳಬೇಕು. ಸನ್ಯಾಸಿಯಾದವನು ದಿನವೂ ಪ್ರಾತಃಕಾಲ ಹನ್ನೆರಡು ಸಾವಿರ ಓಂಕಾರ ಜಪಗಳನ್ನು ಮಾಡಬೇಕು.

ಆದರೆ ನಿತ್ಯವೂ ಸರಿಯಾಗಿ ಜಪಗಳನ್ನು ಮಾಡದೆ ಒಂದು ತಿಂಗಳಿನಲ್ಲಿ ಒಂದೂವರೆ ಲಕ್ಷ ಜಪಗಳಿಗಿಂತಲೂ ಹೆಚ್ಚಾಗಿ ಜಪಗಳು ಉಳಿದುವಾದರೆ, ತಿರುಗಿ ಸನ್ಯಾಸವನ್ನು ಸ್ವೀಕರಿಸಬೇಕು. ಹೀಗೆ ಮಾಡಿದರೆ ಪಾಪನಿವೃತ್ತಿಯು ಆಗುವುದು. ಇಲ್ಲದಿದ್ದರೆ ಘೋರವಾದ ನರಕವು ಲಭಿಸುವುದು. ಆದುದರಿಂದ ಧರ್ಮ ಮತ್ತು ಅರ್ಥಗಳಲ್ಲಿ ಫಲೇಚ್ಛೆಯುಳ್ಳ ಗೃಹಸ್ಥನು ಮಾತ್ರ ಯತ್ನವನ್ನು ಮಾಡಬೇಕು; ವಿರಕ್ತನಾದ ಸನ್ಯಾಸಿಯು ಮಾಡಬಾರದು. ಧರ್ಮದಿಂದ ಅರ್ಥವೂ, ಅರ್ಥದಿಂದ ಭೋಗವೂ, ಭೋಗದಿಂದ ವೈರಾಗ್ಯವೂ ಜನಿಸುವುದು. ಧರ್ಮದಿಂದ ಸಂಪಾದಿಸಿದ ಅರ್ಥವನ್ನು ಅನುಭವಿಸುವುದರಿಂದ ವೈರಾಗ್ಯವು ಜನಿಸುವುದು.

ವಿಪರೀತವಾಗಿ ಅರ್ಥವನ್ನು ಭೋಗಿಸಿದರೆ ರಾಗವೇ ಉಂಟಾಗುವುದು, ವಿರಾಗ ಬರಲಾರದು. ಧರ್ಮವನ್ನು ಅರ್ಥದಿಂದ ಮತ್ತು ಶರೀರದಿಂದ ಮಾಡುವ ಎರಡು ಕ್ರಮವಿದೆ. ಅರ್ಥದಿಂದಾಗುವ ಧರ್ಮಕಾರ್ಯ ಯಾಗ-ಯಜ್ಞಾದಿಗಳು. ಶರೀರದಿಂದಾಗುವ ಧರ್ಮಕಾರ್ಯಗಳು ತೀರ್ಥ ಸ್ನಾನ ಇತ್ಯಾದಿಗಳು. ಫಲೇಚ್ಛೆಯಿಲ್ಲದೆ ತಪಸ್ಸನ್ನಾಚರಿಸಿದರೆ ಚಿತ್ತಶುದ್ಧಿ ಆಗುವುದು. ಅದರಿಂದ ಮುಂದೆ ಬ್ರಹ್ಮಜ್ಞಾನವುಂಟಾಗುವುದು. ಕೃತ ಮೊದಲಾದ ಯುಗಗಳಲ್ಲಿ ತಪಸ್ಸೇ ಹೆಚ್ಚಾಗಿತ್ತು ಮತ್ತು ಶ್ರೇಷ್ಠವಾಗಿಯೂ ಇತ್ತು. ಈ ಕಲಿಯುಗದಲ್ಲಿಯೇ ದ್ರವ್ಯದಿಂದಾಗುವ ಧರ್ಮವು ಹೆಚ್ಚಾಗಿವೆ. ಕೃತಯುಗದಲ್ಲಿ ಧ್ಯಾನದಿಂದಲೂ ತ್ರೇತಾಯುಗದಲ್ಲಿ ತಪಸ್ಸಿನಿಂದಲೂ ದ್ವಾಪರಯುಗದಲ್ಲಿ ಕರ್ಮದಿಂದಲೂ ಕಲಿಯುಗದಲ್ಲಿ ದೇವತಾವಿಗ್ರಹವನ್ನು ಪೂಜಿಸುವುದರಿಂದಲೂ ಜ್ಞಾನವುಂಟಾಗುವುದು.

ಅಧರ್ಮವು ಹಿಂಸಾರೂಪವಾದುದು. ಧರ್ಮವು ಸುಖರೂಪವಾದುದು. ಅಧರ್ಮದಿಂದ ದುಃಖವುಂಟಾಗುವುದು, ಧರ್ಮಾಚರಣೆಯಿಂದ ಸುಖವು ಲಭಿಸುವುದು. ದುರಾಚಾರದಿಂದ ದುಃಖವುಂಟಾಗುವುದು, ಸದಾಚಾರದಿಂದ ಸುಖವು ಲಭಿಸುವುದು. ಆದುದರಿಂದ ಭೋಗ ಮತ್ತು ಮೋಕ್ಷಗಳು ಸಿದ್ಧಿಸಬೇಕಾದರೆ ಒಳ್ಳೆಯ ಧರ್ಮವನ್ನೇ ಸಂಪಾದಿಸಬೇಕು. ಸಾವಿರ ಬಾರಿ ಚಾಂದ್ರಾಯಣವ್ರತವನ್ನು ಮಾಡಿದರೆ ಬ್ರಹ್ಮಲೋಕವು ಲಭಿಸುವುದು. ತೀರ್ಥಯಾತ್ರೆಯಿಂದುಂಟಾಗುವ ಸುಖಕ್ಕಿಂತಲೂ ಚಿರಸ್ಥಾಯಿಯಾದ ಸುಖವು ತಪಸ್ಸಿನಿಂದ ಲಭಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT