ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ನಾರದನಿಗೆ ಶಾಪಕೊಟ್ಟ ದಕ್ಷಬ್ರಹ್ಮ

ಭಾಗ –144
ಅಕ್ಷರ ಗಾತ್ರ

ಬ್ರಹ್ಮ ತನ್ನ ಮಕ್ಕಳಾದ ಹರ್ಯಶ್ವರರಿಗೆ ಸಂಸಾರಿಗಳಾಗಿ ಸೃಷ್ಟಿಕಾರ್ಯ ಮಾಡುವಂತೆ ಸೂಚಿಸಿದರೆ, ದಕ್ಷನ ಮಕ್ಕಳು ನಾರದನ ಮಾತಿನಿಂದ ವಿಚಲಿತರಾಗುತ್ತಾರೆ. ನಾರದನಿಂದ ಮೋಕ್ಷಮಾರ್ಗದತ್ತ ಹೊರಟ ಮಕ್ಕಳ ನೆನೆದು ದಕ್ಷಬ್ರಹ್ಮ ತನ್ನ ತಂದೆ ಬ್ರಹ್ಮದೇವನ ಬಳಿ ಬಂದು ದುಃಖ ವ್ಯಕ್ತಪಡಿಸುತ್ತಾನೆ. ಆಗ ಬ್ರಹ್ಮ ತನ್ನ ಪುತ್ರನಾದ ದಕ್ಷನಿಗೆ ಅದೃಷ್ಟವು ಬಲವಾದುದು, ಅದನ್ನು ಪಡೆಯಲು ಶಾಂತಿಯಿಂದಿರಬೇಕೆಂದು ಉಪದೇಶಿಸಿ ಸಮಾಧಾನಮಾಡುತ್ತಾನೆ.

ಇದರಿಂದ ಶಾಂತಚಿತ್ತನಾದ ದಕ್ಷಬ್ರಹ್ಮ ತನ್ನ ಆಶ್ರಮಕ್ಕೆ ಹಿಂದಿರುಗಿ, ಪತ್ನಿಯಾದ ಅಸಿಕ್ನಿಯಲ್ಲಿ ‘ಸಬಲಾಶ್ವರ’ ಎಂಬ ಹೆಸರುಳ್ಳ ಸಾವಿರ ಪುತ್ರರನ್ನು ಸೃಷ್ಟಿಸುತ್ತಾನೆ. ಜಿತೇಂದ್ರಿಯರಾದ ಆ ಸಬಲಾಶ್ವರೆಂಬ ದಕ್ಷಪುತ್ರರಿಗೂ ದಕ್ಷಬ್ರಹ್ಮ ಸೃಷ್ಟಿಕ್ರಿಯೆಯಲ್ಲಿ ತೊಡಗುವಂತೆ ಆಜ್ಞಾಪಿಸುತ್ತಾನೆ. ಆಗ ಸಬಲಾಶ್ವರರು ಪ್ರಜೆಗಳನ್ನು ಸೃಷ್ಟಿಸಲು, ತಮ್ಮ ಸಹೋದರರಾದ ಹರ್ಯಶ್ವರರು ಸಿದ್ಧಿಯನ್ನು ಹೊಂದಿದ ಆ ನಾರಾಯಣ ಸರಸ್ಸಿನ ಬಳಿಗೆ ಹೋಗುತ್ತಾರೆ. ಅಲ್ಲಿ ಅವರು ಪವಿತ್ರವಾದ ತೀರ್ಥಜಲವನ್ನು ಸ್ಪರ್ಶಮಾಡಿದೊಡನೆಯೇ ಪಾಪವನ್ನು ಕಳೆದುಕೊಂಡು ಪರಿಶುದ್ಧರಾಗುತ್ತಾರೆ.

ಪರಬ್ರಹ್ಮವಸ್ತುವನ್ನು ಜಪಿಸುತ್ತಾ ತಪಸ್ಸನ್ನ ಆಚರಿಸತೊಡಗುತ್ತಾರೆ. ಆಗ ನಾರದನಾದ ನೀನು, ಮತ್ತೆ ಅಲ್ಲಿಗೆ ಹೋಗಿ ಹಿಂದೆ ಹರ್ಯಶ್ವರರಿಗೆ ಹೇಳಿದಂತೆಯೇ ‘ಎಲೈ ದಕ್ಷಪುತ್ರರೇ, ಭೂಮಿಯಲ್ಲಿಯ ಸೃಷ್ಟಿಯನ್ನೇ ನೋಡದ ನೀವು, ಸೃಷ್ಟಿಗಾಗಿ ತಪಸ್ಸನ್ನಾಚರಿಸುತ್ತಲಿರುವಿರಿ’ ಎಂದು ಅವರಿಗೂ ಹೇಳಿದೆ. ನಿನ್ನ ಮಾತಿನ ತರ್ಕ ಒಪ್ಪಿದ ಸಬಲಾಶ್ವರರಿಗೂ ಅವರಣ್ಣಂದಿರಿಗೆ ಉಪದೇಶಿಸಿದಂತೆ ಮುಕ್ತಿಮಾರ್ಗವನ್ನು ಉಪದೇಶಿಸಿದೆ. ಆಗ ಸಬಲಾಶ್ವರರು ಸಹ ತಮ್ಮ ಅಣ್ಣಂದಿರಂತೆ ಮುಕ್ತಿಮಾರ್ಗವನ್ನ ಅನುಸರಿಸಿ ಸನ್ಯಾಸಿಗಳಾದರು ಎಂದು ತಿಳಿಸುತ್ತಾನೆ, ನಾರದನಿಗೆ ಬ್ರಹ್ಮ.

‘ಆ ಕಾಲದಲ್ಲಿಯೇ ದಕ್ಷಬ್ರಹ್ಮನು ಅನೇಕ ಅನಿಷ್ಟವಾದ ಉತ್ಪಾತಗಳನ್ನು ನೋಡಿದವನು. ಅವನಿಗೆ ಆಶ್ಚರ್ಯವೂ ದುಃಖವೂ ಉಂಟಾಯಿತು. ಹಿಂದಿನಂತೆ ಈಗಲೂ ನಾರದನಿಂದಲೇ ತನ್ನ ಪುತ್ರರು ನಾಶವಾದರೆಂದು ತಿಳಿದ ದಕ್ಷ ವ್ಯಗ್ರಗೊಂಡ. ಪುತ್ರಶೋಕದಿಂದ ವ್ಯಾಕುಲಗೊಂಡ. ಆಗ ದಕ್ಷನು ನಿನ್ನನ್ನು ದುಷ್ಟನೆಂದು ಭಾವಿಸಿ, ನಿನ್ನ ಮೇಲೆ ತುಂಬಾ ಕ್ರೋಧಗೊಂಡಿದ್ದ. ನೀನು ಅಕಸ್ಮಾತ್ತಾಗಿ ದಕ್ಷನ ಬಳಿಗೆ ಬಂದೆ. ದಕ್ಷಬ್ರಹ್ಮ ನಿನ್ನನ್ನು ನೋಡಿ ಕೋಪದಿಂದ ಸಿಡಿಮಿಗೊಂಡ. ’ಛೀ ಮೂಢ! ನಿನಗೆ ನಾಚಿಕೆಯೇ ಆಗುವುದಿಲ್ಲವೆ ಈ ರೀತಿ ಅಕಾರ್ಯವನ್ನು ಮಾಡುವುದಕ್ಕೆ? ಸಾಧುವೇಷವನ್ನು ಛದ್ಮವೇಷದಂತೆ ಧರಿಸಿರುವ ನೀನು, ಅಮಾಯಕರಾದ ನನ್ನ ಪುತ್ರರ ಜೀವನ ಹಾಳು ಮಾಡಿದೆ.

ತಿಳಿವಳಿಕೆಯಿಲ್ಲದಿರುವ ಮಕ್ಕಳಿಗೆ ಸನ್ಯಾಸಿಯ ಮಾರ್ಗವನ್ನ ಉಪದೇಶಿಸಿದ್ದು ನ್ಯಾಯವಾದುದಲ್ಲ. ದೇವಋಣ, ಪಿತೃಋಣ, ಋಷಿಋಣ – ಎಂಬ ಮೂರು ಋಣ ತೀರಿಸದವರಿಗೆ ಇಹಪರಗಳಲ್ಲಿ ಮುಕ್ತಿಯಿಲ್ಲವೆಂದು ತಿಳಿದಿಲ್ಲವಾ? ಆ ಋಣಗಳಿಂದ ಮುಕ್ತರಾಗದಿರುವ ನನ್ನ ಪುತ್ರರನ್ನು ಹಾಳು ಮಾಡಿದೆ. ನಿರ್ದಯನೂ ಮೂರ್ಖನೂ ಆದ ನೀನು, ಅವರು ಯೌವನದಲ್ಲಿದ್ದಾಗಲೇ ಮುಕ್ತಿಮಾರ್ಗವನ್ನು ಉಪದೇಶಿಸಿ ಅವರನ್ನು ಕೆಡಿಸಿದೆ.

ಮೂರು ಋಣಗಳನ್ನು ತೀರಿಸದೇ ತಂದೆ–ತಾಯಿಗಳನ್ನು ಬಿಟ್ಟು ಯಾವನು ಮುಕ್ತಿ ಹೊಂದಲು ಸನ್ಯಾಸಿಯಾಗುವನೋ ಅವನು ಅಧೋಗತಿಯನ್ನು ಹೊಂದುವನು. ತಿಳಿವಳಿಕೆಯಿಲ್ಲದ ನನ್ನ ಚಿಕ್ಕಮಕ್ಕಳ ಮನಸ್ಸನ್ನು ಕೆಡಿಸಿ, ನಿನ್ನ ಯಶಸ್ಸನ್ನು ಸಹ ಕೆಡಿಸಿಕೊಂಡಿರುವೆ. ಇಂತಹ ಪಾಪಿಯಾದ ನೀನು ವಿಷ್ಣುವಿನ ಗಣಗಳ ಮಧ್ಯದಲ್ಲಿರಲು ಯೋಗ್ಯನಲ್ಲ. ಎಲೈ ಮೂರ್ಖ! ಪುನಃ ಪುನಃ ನನಗೆ ಕೆಡುಕನ್ನು ಮಾಡಿರುವೆ. ಆದ ಕಾರಣ ನೀನು ಯಾವಾಗಲೂ ಮೂರು ಲೋಕಗಳನ್ನು ಸಂಚರಿಸುತ್ತಲೇ ಇರು. ಒಂದುಕ್ಷಣವೂ ನಿನ್ನ ಕಾಲುಗಳು ಒಂದೆಡೆಯಲ್ಲಿ ಸ್ಥಿರವಾಗಿ ನಿಲ್ಲದಿರಲಿ’ ಎಂದು ದಕ್ಷ ನಿನ್ನನ್ನು ಶಪಿಸಿದ. ಎಲೈ ನಾರದ! ಆಗ ನೀನು ಯಾವ ವಿಕಾರವೂ ಇಲ್ಲದೆ ಶಾಂತಿಯಿಂದ ದಕ್ಷನ ಶಾಪವನ್ನು ಪರಿಗ್ರಹಿಸಿದೆ. ಆಗ ನಿನ್ನ ನಡವಳಿಕೆ ನಿಜವಾದ ಬ್ರಹ್ಮನಿಷ್ಠನಾದ ಸಾಧುವಿನ ಲಕ್ಷಣವಾಗಿತ್ತು. ಸಾಧುವಾದವನು ಸಾವಧಾನದಿಂದ ಎಲ್ಲ ವಿಧವಾದ ತೊಂದರೆಗಳನ್ನೂ ಸಹನೆಯಿಂದ ಅನುಭವಿಸುವನು. ಅದರಂತೆ ನೀನು ನಡೆದುಕೊಂಡೆ’ ಎಂದು ಬ್ರಹ್ಮನು ನಾರದನಿಗೆ ಹೇಳುವಲ್ಲಿಗೆ ಸತೀಖಂಡದ ಹದಿಮೂರನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT