ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ನ್ಯಾಯದಿಂದ ಧನ ಸಂಪಾದಿಸಬೇಕು:

Last Updated 9 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ದೈನ್ಯವನ್ನಾಶ್ರಯಿಸದೆ ಅಂದರೆ, ಯಾಚನೆ ಮಾಡದೆ, ಹೆಚ್ಚು ಕ್ಲೇಶವನ್ನು ಪಡೆಯದೆ ಧನವನ್ನು ಸಂಪಾದಿಸಬೇಕು. ಪ್ರಯತ್ನಪೂರ್ವಕವಾಗಿ ಅತ್ಯಾಸೆಯಿಂದ ಹಣ ಸಂಪಾದಿಸಬಾರದು. ನ್ಯಾಯದಿಂದ ಸಂಪಾದಿಸಿದ ಧನವನ್ನು ಯೋಗ್ಯರಾದವರಿಗೆ ದಾನ ಮಾಡಿದರೆ ಬ್ರಹ್ಮಜ್ಞಾನವು ಸಿದ್ಧಿಸುವುದು. ಜ್ಞಾನಸಿದ್ಧಿಯಿಂದ ಮತ್ತು ಗುರುಗಳ ಅನುಗ್ರಹದಿಂದ ಸರ್ವರಿಗೂ ಮೋಕ್ಷ ಸಿದ್ಧಿಸುವುದು. ಮೋಕ್ಷದಿಂದ ಬ್ರಹ್ಮಸ್ವರೂಪವು ಸಿದ್ಧಿಸುವುದು. ಉತ್ಕೃಷ್ಟವಾದ ಬ್ರಹ್ಮಾನಂದವೂ ಲಭಿಸುವುದು. ಗೃಹಸ್ಥನಾದವನು ತನ್ನ ಶಕ್ತಿಗನುಸಾರವಾಗಿ ಧನಧಾನ್ಯಗಳನ್ನು ದಾನ ಮಾಡಬೇಕು. ಯಾವಾವ ಕಾಲದಲ್ಲಿ ಯಾವಾವ ವಸ್ತು, ಫಲ, ಧಾನ್ಯ ಮುಂತಾದುವುಗಳು ಸಿಗುವುವೋ ಅವೆಲ್ಲವನ್ನು ತನಗೆ ಬೇಕಾದಷ್ಟು ಇಟ್ಟುಕೊಂಡು, ಉಳಿದುದನ್ನು ಇಲ್ಲದವರಿಗೆ ಮತ್ತು ಜನಹಿತ ಬಯಸುವವರಿಗೆ ದಾನ ಮಾಡಬೇಕು. ಹಸಿವು-ಬಾಯಾರಿಕೆಗಳ ಶಾಂತ್ಯರ್ಥವಾಗಿ ಸರ್ವಪ್ರಾಣಿಗಳಿಗೂ ನೀರು ಮತ್ತು ಅನ್ನವನ್ನು ಕೊಡಬೇಕು. ಅನ್ನವು ನಾಲ್ಕು ವಿಧವಾಗಿರುವುದು. ಅವು ಕ್ಷೇತ್ರ, ಧಾನ್ಯ, ಆಮ (ಹಸಿಯ ಹಿಟ್ಟು) ಮತ್ತು ಅನ್ನಗಳೆಂದು ನಾಲ್ಕು ವಿಧ. ಅನ್ನವನ್ನು ದಾನವಾಗಿ ತೆಗೆದುಕೊಂಡವನು ಯಾವ ಕಾಲದವರೆಗೆ ಬದುಕಿರುವನೋ ಅಲ್ಲಿಯವರೆಗೆ ಅವನು ಮಾಡಿದ ಪುಣ್ಯದಲ್ಲಿ ಅರ್ಧವು ಅನ್ನದಾತ ಅಂದರೆ, ಬೆಳೆದ ರೈತನಿಗೆ ಲಭಿಸುವುದು. ಇದರಲ್ಲಿ ಸಂಶಯವಿಲ್ಲ.

ದಾನವನ್ನು ತೆಗೆದುಕೊಂಡವನು, ತೆಗೆದುಕೊಂಡ ದಾನದ ಶುದ್ಧಿಗಾಗಿ ತಾನು ಸಹ ದಾನ ಮಾಡಬೇಕು. ಇದಾಗದಿದ್ದರೆ ತಪಸ್ಸನ್ನು ಮಾಡಿಯಾದರೂ ಪಾಪವನ್ನು ಕಳೆದುಕೊಳ್ಳಬೇಕು. ಇಲ್ಲದಿದ್ದರೆ ಘೋರವಾದ ನರಕವು ಲಭಿಸುವುದು. ತಾನು ಗಳಿಸಿದ ಸಂಪತ್ತನ್ನು ಧರ್ಮ, ವೃದ್ಧಿ ಮತ್ತು ತನ್ನ ಜೀವನ ಅಂತ ಮೂರು ಭಾಗ ಮಾಡಿ ವಿನಿಯೋಗಿಸಬೇಕು. ನಿತ್ಯಕರ್ಮ, ನೈಮಿತ್ತಿಕ ಕರ್ಮ ಮತ್ತು ಕಾಮ್ಯಕರ್ಮಗಳನ್ನು ವಿಧಿವತ್ತಾಗಿ ಮಾಡಬೇಕು. ವೃದ್ಧಿಗಾಗಿಟ್ಟ ಧನದಿಂದ ಧನವನ್ನು ವೃದ್ಧಿಗೊಳಿಸಬೇಕು. ಭೋಗಕ್ಕಾಗಿ ಇಟ್ಟ ಧನದಿಂದ ಹಿತವೂ ಪರಿಮಿತವೂ ಪರಿಶುದ್ಧವೂ ಆದಂತಹ ವಸ್ತುವನ್ನು ಸೇವಿಸಬೇಕು. ವ್ಯವಸಾಯದಿಂದ ಲಭಿಸಿದ ದ್ರವ್ಯದಲ್ಲಿ ಹತ್ತನೆಯ ಒಂದಂಶವನ್ನು ಸೇವಿಸಬೇಕು. ವ್ಯವಸಾಯದಿಂದ ಲಭಿಸಿದ ದ್ರವ್ಯದಲ್ಲಿ ಹತ್ತನೆಯ ಒಂದಂಶವನ್ನು ಪಾಪಶುದ್ಧಿಗಾಗಿ ದಾನಮಾಡಬೇಕು. ಮಿಕ್ಕ ದ್ರವ್ಯದಿಂದ ಧರ್ಮ ಮುಂತಾದುವುಗಳನ್ನು ಮಾಡಬೇಕು.‌

ಬುದ್ಧಿವಂತನಾದ ವೈಶ್ಯನು ವ್ಯಾಪಾರದಿಂದ ಬಂದ ಲಾಭದಲ್ಲಿ ಆರನೆಯ ಒಂದಂಶವನ್ನು ದಾನಮಾಡಬೇಕು. ಜನಸಾಮಾನ್ಯನು ನ್ಯಾಯವಾಗಿ ದಾನವನ್ನು ತೆಗೆದುಕೊಂಡುದರಲ್ಲಿ ನಾಲ್ಕನೆಯ ಒಂದಂಶವನ್ನು ದಾನ ಮಾಡಬೇಕು. ಹಾಗೆಯೇ ಅಕಸ್ಮಾತ್ತು ಸಿಕ್ಕಿದ ಧನದಲ್ಲಿ ಅರ್ಧಭಾಗವನ್ನು ದಾನ ಮಾಡಬೇಕು. ದುರ್ದಾನವನ್ನು ತೆಗೆದುಕೊಂಡರೆ, ಅದರ ಲಾಭವನ್ನೆಲ್ಲವನ್ನೂ ಸಮುದ್ರದಲ್ಲೆಸೆಯಬೇಕು. ತನ್ನ ಭೋಗದ ಅಭಿವೃದ್ಧಿಗಾಗಿ ಕರೆದು ದಾನವನ್ನು ಕೊಡಬೇಕು. ದರಿದ್ರನಾದವನು ಕೇಳಿದ ವಸ್ತುವೆಲ್ಲವನ್ನೂ ತನ್ನ ಶಕ್ತಿಗೆ ಅನುಸಾರವಾಗಿ ಕೊಡಬೇಕು. ಹಾಗೆ ಕೊಡದಿದ್ದವನು ಜನ್ಮಾಂತರದಲ್ಲಿ ಸಾಲಗಾರನಾಗುವನು.

ತಿಳಿವಳಿಕೆಯುಳ್ಳವನು ಇನ್ನೊಬ್ಬರ ದೋಷವನ್ನು ಎತ್ತಿ ಆಡಬಾರದು. ಕೇಳಿದ ಮತ್ತು ನೋಡಿದಂತಹ ಇನ್ನೊಬ್ಬರ ದೋಷವನ್ನು ಸಹ ಹೇಳಬಾರದು. ಕೋಪವನ್ನುಂಟುಮಾಡುವಂತೆ ಮಾತನಾಡಬಾರದು. ಪ್ರಾತಃಕಾಲ ಸಂಧ್ಯಾಕಾಲಗಳಲ್ಲಿ ಅಗ್ನಿಕಾರ್ಯ, ಉಪಾಸನಗಳನ್ನು ಐಶ್ವರ್ಯಸಿದ್ಧಿಗಾಗಿ ಆಚರಿಸಬೇಕು. ಹಾಗೆಯೇ, ಅಶಕ್ತನಾದವನು ಒಂದು ಕಾಲದಲ್ಲಿಯಾದರೂ ಸೂರ್ಯ ಮತ್ತು ಅಗ್ನಿಗಳನ್ನು ವಿಧಿವತ್ತಾಗಿ ತೃಪ್ತಿಪಡಿಸಬೇಕು. ಅಕ್ಕಿ, ಧಾನ್ಯ, ತುಪ್ಪ, ಫಲ, ಗೆಡ್ಡೆಗೆಣಸು ಮುಂತಾದವುಗಳನ್ನು ಅಗ್ನಿಯ ಮೂಲಕ ಹವಿಸ್ಸಾಗಿ ಅರ್ಪಿಸಬೇಕು; ವಿಧಿವತ್ತಾಗಿ ಸ್ಥಾಲೀಪಾಕಕರ್ಮವನ್ನು ಮಾಡಬೇಕು.

ಎಲ್ಲಾ ಹವಿಸ್ಸುಗಳೂ ಸಿಕ್ಕದಿದ್ದರೆ ಪ್ರಧಾನ ಹೋಮವೊಂದನ್ನಾದರೂ ಮಾಡಬೇಕು. ಇದಕ್ಕೆ ನಿತ್ಯಕರ್ಮವೆಂದು ಹೆಸರು. ಇವುಗಳನ್ನು ನಿತ್ಯವೂ ಮಾಡಬೇಕೆಂದು; ಅಥವಾ ಸಂಧ್ಯಾಕಾಲದಲ್ಲಿ ಸೂರ್ಯವಂದನೆ ಜಪಗಳನ್ನಾದರೂ ಮಾಡಬೇಕು. ಈ ರೀತಿಯಾಗಿ ಆತ್ಮಸ್ವರೂಪವನ್ನ ಅಪೇಕ್ಷಿಸುವ ಮುಮುಕ್ಷುಗಳೂ, ಧನವನ್ನ ಅಪೇಕ್ಷಿಸುವ ಸಂಸಾರಿಗಳೂ ವಿಧಿವತ್ತಾಗಿ ನಿತ್ಯಕರ್ಮವನ್ನು ಮಾಡಬೇಕು. ಬ್ರಹ್ಮಯಜ್ಞ ಅಂದರೆ ವೇದಾಧ್ಯಯನವನ್ನೂ ದೇವಪೂಜೆಯನ್ನೂ ನಿತ್ಯವೂ ಮಾಡಬೇಕು. ನಿತ್ಯವೂ ಅಗ್ನಿಯನ್ನು ಪೂಜಿಸಬೇಕು. ಗುರುಪೂಜೆಯನ್ನು ಮಾಡಬೇಕು. ಇಂಥವರು ಸ್ವರ್ಗವನ್ನು ಪಡೆಯುವರು – ಎಂಬುದಾಗಿ ಸೂತಮುನಿಯು ಪ್ರಯಾಗದ ಋಷಿಮುನಿಗಳಿಗೆ ಹೇಳುವುದರೊಂದಿಗೆ, ಶಿವಪುರಾಣದ ಮೊದಲನೆಯ ಸಂಹಿತೆಯಾದ ವಿದ್ಯೇಶ್ವರ ಸಂಹಿತೆಯ ಹದಿಮೂರನೆ ಅಧ್ಯಾಯವು ಮುಕ್ತಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT