ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ-26: ಬ್ರಹ್ಮ-ವಿಷ್ಣು ಯುದ್ಧಕ್ಕೆ ತಲ್ಲಣಿಸಿದ ಜಗತ್ತು

ಅಕ್ಷರ ಗಾತ್ರ

ಪರಮೇಶ್ವರನನ್ನು ಏಕೆ ಲಿಂಗ ಮತ್ತು ಮೂರ್ತಿಗಳ ರೂಪದಲ್ಲಿ ಪೂಜಿಸಬೇಕೆಂಬ ಬಗ್ಗೆ ಸನತ್ಕುಮಾರನಿಗೆ ಮತ್ತಷ್ಟು ವಿವರ ನೀಡುತ್ತಾನೆ ನಂದಿಕೇಶ್ವರ; ಹಿಂದಿನ ಕಲ್ಪದಲ್ಲಿ ನಡೆದ ಕಥೆಯೊಂದನ್ನು ಹೇಳುತ್ತಾನೆ.

ಒಮ್ಮೆ ವಿಷ್ಣು ತನ್ನ ಪತ್ನಿ ಲಕ್ಷ್ಮಿಯೊಂದಿಗೆ ಶೇಷಶಯನದಲ್ಲಿದ್ದಾಗ ಅಕಸ್ಮಾತ್ತಾಗಿ ಬ್ರಹ್ಮದೇವ ಬರುತ್ತಾನೆ. ಆದರೆ ವಿಷ್ಣು ಎದ್ದು ಸ್ವಾಗತಿಸದೆ ಮಲಗಿಯೇ ಇರುತ್ತಾನೆ. ಇದರಿಂದ ಕೋಪಗೊಂಡ ಬ್ರಹ್ಮ ‘ನನ್ನನ್ನು ನೋಡಿದರೂ ಗರ್ವಿಷ್ಠನಾಗಿ ಮಲಗಿರುವೆಯಾ? ಪ್ರಾಯಶ್ಚಿತ್ತ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸುತ್ತಾನೆ. ಬ್ರಹ್ಮನ ಮಾತಿನಿಂದ ಕೋಪ ಬಂದರೂ ವಿಷ್ಣು ಹೊರಗೆ ತೋರಿಸಿಕೊಳ್ಳದೆ ಶೇಷಸರ್ಪದ ಮೇಲೆ ಮಲಗಿಕೊಂಡೇ ತನ್ನ ಮುಂದೆ ಇದ್ದ ಪೀಠ ತೋರಿಸಿ ಕುಳಿತುಕೊ ಎನ್ನುತ್ತಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಬ್ರಹ್ಮ ‘ಎಲೈ ವಿಷ್ಣು, ಕಾಲಮಹಿಮೆಯಿಂದ ನಿನಗೆ ತುಂಬಾ ಗರ್ವ ಬಂದಿದೆ. ನಾನು ಜಗತ್ತಿಗೆ ಪಿತಾಮಹ. ನಿನ್ನನ್ನು, ಈ ಜಗತ್ತನ್ನೂ ರಕ್ಷಿಸುವವನು ನಾನು. ಇದನ್ನೆಲ್ಲಾ ನೀನು ಮರೆತು, ನನ್ನನ್ನು ಅಗೌರವಿಸುತ್ತಿದ್ದೀಯಾ‘ ಎಂದು ಆಕ್ರೋಶಿಸುತ್ತಾನೆ.

‘ನನ್ನ ನಾಭಿಕಮಲದಿಂದ ಜನಿಸಿದ ಪುತ್ರ ನೀನು. ಜಗತ್ತೆಲ್ಲವೂ ನನ್ನಲ್ಲಿಯೇ ಇದೆ. ಹೀಗಿದ್ದರೂ ನನ್ನ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವೆಯಲ್ಲಾ?’ ಅಂತ ಪ್ರಶ್ನಿಸುತ್ತಾನೆ. ಇದಕ್ಕೆ ಬ್ರಹ್ಮ ‘ತಾನು ಜಗತ್ತಿನ ಸೃಷ್ಟಿಕರ್ತ, ನಾನೇ ಶ್ರೇಷ್ಠ’ ಅಂದರೆ, ವಿಷ್ಣು ತಾನು ಜಗತ್ತನ್ನು ರಕ್ಷಿಸುವವನು. ನಾನೇ ಶ್ರೇಷ್ಠ’ ಅಂತ ವಾದ ಮಾಡುತ್ತಾನೆ. ವಾದ ತಾರಕಕ್ಕೇರಿ ಯುದ್ಧಸನ್ನದ್ದರಾಗುತ್ತಾರೆ. ಬ್ರಹ್ಮ ಹಂಸವನ್ನೇರಿ, ವಿಷ್ಣು ಗರುಡವನ್ನೇರಿ ಯುದ್ಧ ಮಾಡತೊಡಗುತ್ತಾರೆ. ಇವರೊಂದಿಗೆ ಬ್ರಹ್ಮಗಣಗಳೂ ಮತ್ತು ವೈಷ್ಣವಗಣಗಳೂ ಪರಸ್ಪರ ಯುದ್ಧಕ್ಕಿಳಿಯುತ್ತಾರೆ. ಆಗ ಇಂದ್ರಾದಿ ದೇವತೆಗಳೆಲ್ಲರೂ ಬ್ರಹ್ಮ-ವಿಷ್ಣುವಿನ ಯುದ್ಧ ನೋಡಲು ವಿಮಾನ ಏರಿ ಬರುತ್ತಾರೆ. ಯುದ್ಧದಲ್ಲಿ ವಿಷ್ಣು ಕೋಪೋದ್ರಿಕ್ತನಾಗಿ, ಬ್ರಹ್ಮನ ಎದೆಗೆ ಸಹಿಸಲಸಾಧ್ಯವಾದ ಅಸಂಖ್ಯ ಬಾಣ, ಅನೇಕ ವಿಧದ ಅಸ್ತ್ರಗಳನ್ನು ಪ್ರಯೋಗಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಬ್ರಹ್ಮ ಸಹ ಸಹಿಸಲಸಾಧ್ಯವಾದಂಥ ಅನೇಕ ಬಗೆಯ ಬಾಣಗಳನ್ನೂ, ಅಗ್ನಿಯಂತೆ ಉರಿಯುತ್ತಲಿರುವ ಅಸ್ತ್ರಗಳನ್ನೂ, ವಿಷ್ಣುವಿನ ಎದೆ ಮೇಲೆ ಪ್ರಯೋಗಿಸುತ್ತಾನೆ.

ಬ್ರಹ್ಮನ ಬಿರುಸಿನ ಬಾಣದ ಹೊಡೆತಗಳಿಂದ ವಿಚಲಿತನಾದ ವಿಷ್ಣುವು ಮಾಹೇಶ್ವರಾಸ್ತ್ರವನ್ನು ಪ್ರಯೋಗಿಸುತ್ತಾನೆ. ಆಗ ಬ್ರಹ್ಮ ಸಹ ಕೋಪಗೊಂಡು, ಜಗತ್ತನ್ನೇ ಕಂಪಿಸುವಂತಹ ಘೋರವಾದ ಪಾಶುಪತವೆಂಬ ಅಸ್ತ್ರವನ್ನು ವಿಷ್ಣುವಿನ ಎದೆಗೆ ಪ್ರಯೋಗಿಸುತ್ತಾನೆ. ಆಗ ಮಾಹೇಶ್ವರಾಸ್ತ್ರ ಮತ್ತು ಪಾಶುಪತಾಸ್ತ್ರಗಳು ಸಹಿಸಲಸಾಧ್ಯವಾದ ಬೆಂಕಿ-ಬಿರುಗಾಳಿಗಳಾಗಿ ಆಕಾಶವನ್ನೆಲ್ಲಾ ವ್ಯಾಪಿಸಿದುವು. ಭಯಂಕರವಾಗಿ ಬ್ರಹ್ಮ-ನಾರಾಯಣರಿಬ್ಬರು ಪರಸ್ಪರ ಯುದ್ಧ ಮಾಡುತ್ತಿರುವುದನ್ನು ಕಂಡ ದೇವತೆಗಳೆಲ್ಲರೂ ಮುಂದೇನಾಗುವುದೋ ಅಂತ ಭಯಭೀತರಾದರು. ಜಗತ್ತನ್ನು ರಕ್ಷಿಸಬೇಕಾದ ಇಬ್ಬರೂ ಕೋಪಕ್ಕೆ ಬುದ್ಧಿ ಕೊಟ್ಟು ಕಾದಾಡುತ್ತಿರುವುದು ದೇವತೆಗಳಿಗೆ ಸರಿ ಕಾಣಲಿಲ್ಲ. ಇವರಿಬ್ಬರ ಕಾದಾಟದಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಇವರಿಬ್ಬರನ್ನು ತಡೆಯುವ ಶಕ್ತಿ ಬ್ರಹ್ಮಸ್ವರೂಪಿಯಾದ ಶಿವನ ಹೊರತು ಬೇರಾರಿಗೂ ಸಾಧ್ಯವಿಲ್ಲ ಅಂತ ಕೈಲಾಸಶಿಖರಕ್ಕೆ ಹೋಗುತ್ತಾರೆ.

ಪರಮೇಶ್ವರನ ವಾಸಸ್ಥಾನವಾದ ಆ ಕೈಲಾಸಶಿಖರದ ಶಿವನ ಮನೆಯನ್ನು ಪ್ರವೇಶಿಸಿದ ದೇವತೆಗಳು, ಓಂಕಾರಸ್ವರೂಪನಾದ ಶಿವನಿಗೆ ನಮಸ್ಕರಿಸುತ್ತಾರೆ. ಶಿವನು ಸಭಾಮಂಟಪದಲ್ಲಿದ್ದ ಮಣಿಮಯವಾದ ಆಸನದಲ್ಲಿ ಪಾರ್ವತಿಯೊಡನೆ ಕುಳಿತಿದ್ದರೆ, ಅವನ ಸುತ್ತಲೂ ಪ್ರಮಥಗಣಗಳು ನೆರೆದಿದ್ದರು. ವಿಶೇಷವಾದ ಜ್ಞಾನವುಳ್ಳ ಸ್ತ್ರೀಯರು ತುಂಬಾ ಭಕ್ತಿಯಿಂದ ಶಿವನಿಗೆ ಬೀಸಣಿಗೆಯಿಂದ ಗಾಳಿಯನ್ನು ಬೀಸುತ್ತಿದ್ದರೆ, ವೇದಪುರುಷರು ಸದಾ ಸ್ತುತಿಸುತ್ತಿದ್ದರು. ಈ ರೀತಿ ಶೋಭಿಸುತ್ತಿದ್ದ ಈಶ್ವನನ್ನು ನೋಡಿ ದೇವತೆಗಳು ದೂರದಲ್ಲಿಯೇ ನಮಸ್ಕರಿಸಿ ಭಕ್ತಿಯಿಂದ ನಿಂತಿದ್ದರು. ಗಣಗಳ ಮೂಲಕ ಇಂದ್ರ ಮತ್ತಿತರ ದೇವತೆಗಳನ್ನು ತನ್ನ ಸಮೀಪಕ್ಕೆ ಕರೆಸಿಕೊಂಡ ಮಹಾಶಿವ ಕುಶಲ ವಿಚಾರಿಸಿದ. ಆಗ ದೇವತೆಗಳು ವಿಷ್ಣು-ಬ್ರಹ್ಮರ ಯುದ್ಧಮಾಡುತ್ತಿರುವ ವಿಷಯ ತಿಳಿಸಿ, ಹೇಗಾದರೂ ಇವರಿಬ್ಬರ ಯುದ್ಧ ನಿಲ್ಲಿಸಿ ಜಗತ್ತನ್ನು ಕಾಪಾಡಬೇಕೆಂದು ಕೋರುತ್ತಾರೆ. ದೇವತೆಗಳ ಕೋರಿಕೆಯನ್ನು ಮನ್ನಿಸಿದ ಶಿವ, ತನ್ನ ಗಣಗಳೊಂದಿಗೆ ಯುದ್ಧಭೂಮಿಗೆ ಬರುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT