ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ- 31: ಲಿಂಗಪ್ರತಿಷ್ಠಾಪನೆ ಶ್ರೇಷ್ಠ

ಅಕ್ಷರ ಗಾತ್ರ

ತಾವೇ ಶ್ರೇಷ್ಠರು, ಜಗತ್ತಿನ ಒಡೆಯರೆಂದು ಕಾದಾಡಿ ಜಗತ್ತನ್ನು ವಿನಾಶದ ಅಂಚಿಗೆ ತಳ್ಳುತ್ತಿದ್ದ ಬ್ರಹ್ಮ ಮತ್ತು ವಿಷ್ಣುವಿಗೆ ಮಹಾಶಿವ ಮತ್ತಷ್ಟು ತಿಳಿವಳಿಕೆ ನೀಡುತ್ತಾನೆ. ‘ಸಾಕಾರ ಮತ್ತು ನಿರಾಕಾರಗಳೆಂಬ ಎರಡು ಸ್ವರೂಪಗಳು ನನಗೊಬ್ಬನಿಗೆ ಮಾತ್ರ, ಇನ್ನಾರಿಗೂ ಇಲ್ಲ. ಆದಕಾರಣ ಈಶ್ವರತ್ವವು ನಿಮಗಾಗಲಿ, ಇತರ ದೇವತೆಗಳಿಗಾಗಲಿ ಇರುವುದಿಲ್ಲ. ಇದನ್ನು ತಿಳಿಯದೆ ನೀವು ನಾನೇ ಈಶ್ವರ – ಎಂಬ ದುರಹಂಕಾರದಿಂದ ವಿಜೃಂಭಿಸಿದಿರಿ. ಈ ನಿಮ್ಮ ಅಹಂಕಾರವನ್ನು ಹೋಗಲಾಡಿಸಲು ನಾನು ಈ ರಣಭೂಮಿಯಲ್ಲಿ ನಿರಾಕಾರವಾದ ಸ್ತಂಭರೂಪದಿಂದ ಆವಿರ್ಭವಿಸಿ ಬರಬೇಕಾಯಿತು. ಆದುದರಿಂದ ಅಹಂಕಾರವನ್ನು ತ್ಯಜಿಸಿ, ಶಿವನಾದ ನಾನೇ ಈಶ್ವರನೆಂದು ತಿಳಿಯಿರಿ. ಈಶ್ವರನಾದ ನನ್ನ ಅನುಗ್ರಹದಿಂದಲೇ ಲೋಕದಲ್ಲಿ ಸಕಲ ವಸ್ತುಗಳು ಪ್ರಕಾಶಿಸುತ್ತಿವೆ. ನನ್ನ ಅನುಗ್ರಹವಿಲ್ಲದೆ ಯಾವ ವಸ್ತುಗಳೂ ಇರಲಾರವು’ ಎಂದು ಪರಮೇಶ್ವರ ಸ್ಪಷ್ಟಪಡಿಸುತ್ತಾನೆ.

‘ಗುರು ಉಪದೇಶವು ನನ್ನ ಬ್ರಹ್ಮಸ್ವರೂಪವನ್ನು ವಿಶದಪಡಿ ಸುವುದು. ಗುರು ಉಪದೇಶವೇ ಪ್ರಮಾಣ. ಗುರುಮುಖದಿಂದಲೇ ಬ್ರಹ್ಮತತ್ವವನ್ನು ತಿಳಿಯಬೇಕು. ಬ್ರಹ್ಮತತ್ವವು ತುಂಬಾ ರಹಸ್ಯವಾದುದು. ಪ್ರೀತಿಯಿಂದ ನಿಮಗೆ ಹೇಳುವೆನು ಕೇಳಿ’ ಎಂದು ಪರಬ್ರಹ್ಮದ ಬಗ್ಗೆ ಶಿವ ವಿವರವಾಗಿ ತಿಳಿಸುತ್ತಾನೆ. ‘ನಾನೇ ಪರಬ್ರಹ್ಮ. ನಿರಾಕಾರವಾದ ಬ್ರಹ್ಮಸ್ವರೂಪ ಮತ್ತು ಸಾಕಾರವಾದ ಈಶ್ವರಸ್ವರೂಪ ಎರಡೂ ನಾನೇ ಆಗಿರುವೆ. ನಿರಾಕಾರವಾದ ದೊಡ್ಡ ಸ್ವರೂಪವುಳ್ಳವನಾದುದರಿಂದ ಮತ್ತು ಮನುಷ್ಯಾದಿ ಶರೀರಗಳಲ್ಲಿ ಜೀವರೂಪದಿಂದ ಆವಿರ್ಭವಿಸುವುದರಿಂದ ನಾನೇ ಬ್ರಹ್ಮ. ಮತ್ತು ಸರ್ವಮಯನಾಗಿ, ವ್ಯಾಪಕ ನಾಗಿರುವುದರಿಂದ ನಾನೇ ಆತ್ಮ. ಮಿಕ್ಕವರೆಲ್ಲರೂ ಅನಾತ್ಮರು, ಪರಮಾತ್ಮರಲ್ಲ. ಕೇವಲ ಜೀವರು ಅಷ್ಟೇ. ಇದರಲ್ಲಿ ಸಂಶಯ-ಸಂದೇಹ ತಳೆಯಬೇಡಿ. ಅನುಗ್ರಹ ಮೊದಲುಗೊಂಡು, ಸೃಷ್ಟಿಯ ಪರ್ಯಂತವಾದ ಐದು ಜಗತ್ ಕೆಲಸಗಳು ಈಶ್ವರನಾದ ನನ್ನಲ್ಲಿಯೇ ಇರುವುದು, ಇನ್ನಾರಿಗೂ ಇರುವುದಿಲ್ಲ’ ಎನ್ನುತ್ತಾನೆ ಮಹಾಶಿವ.

ತಾನೇ ಸೃಷ್ಟಿಯ ಒಡೆಯ ಎಂಬುದನ್ನು ಬ್ರಹ್ಮ-ವಿಷ್ಣು ಮತ್ತಿತರ ದೇವತೆಗಳಿಗೆ ಮನದಟ್ಟು ಮಾಡಿಸಲು ಮತ್ತಷ್ಟು ವಿವರ ನೀಡುತ್ತಾನೆ ಶಿವ. ‘ಮೊದಲು ನಾನೇ ಬ್ರಹ್ಮನೆಂಬುದನ್ನು ತಿಳಿಸಲು ನಿರಾಕಾರವಾದ ಲಿಂಗರೂಪದಿಂದ ಆವಿರ್ಭವಿಸಿದೆ. ಆಮೇಲೆ ಯಾರಿಗೂ ತಿಳಿಯದ ನನ್ನ ಈಶ್ವರಭಾವವನ್ನು ನಿಮಗೆ ತೋರಿಸಲು ಸಾಕಾರವಾದ ಈ ಈಶ್ವರಸ್ವರೂಪದಿಂದ ನಿಮ್ಮೆದುರಿಗೆ ಕಾಣಿಸುತ್ತಿರುವೆ. ಆದುದರಿಂದ ಸಾಕಾರವಾದ ಈಶ್ವರಸ್ವರೂಪವು ನನ್ನಲ್ಲಿಯೇ ಇರುವುದೆಂದು ಎಲ್ಲರೂ ತಿಳಿಯ ಬೇಕು. ನನ್ನ ಬ್ರಹ್ಮತ್ವವನ್ನು ಸೂಚಿಸುವ ಈ ನಿರಾಕಾರವಾದ ಸ್ತಂಭವು ಲಿಂಗಲಕ್ಷಣಗಳುಳ್ಳದ್ದಾಗಿರುತ್ತೆ. ಲಿಂಗವು ಸದಾ ನನ್ನ ಸ್ವರೂಪವಾಗಿರುತ್ತೆ. ಲಿಂಗಾಭಿಮಾನಿ ದೇವತೆಯಾದ ಈಶ್ವರನು ಎಂಬ ಅಭೇದ ದೃಷ್ಟಿಯಿಂದ ಈ ಮಹಾಲಿಂಗವನ್ನು ಪೂಜಿಸಬೇಕು’ ಎಂದು ತಿಳಿಸುತ್ತಾನೆ.

ಮತ್ತೆ ಮುಂದುವರೆದು, ‘ಲಿಂಗವನ್ನು ಎಲ್ಲಿ ಪ್ರತಿಷ್ಠಾಪಿಸಿದರೂ ಅಲ್ಲೆಲ್ಲಾ ನಾನೂ ಪ್ರತಿಷ್ಠಾಪಿತನಾಗಿರುವೆ. ಪಾರಮಾರ್ಥಿಕವಾಗಿ ವ್ಯಾಪಕ ನಾದ ನಾನು ಒಂದೆಡೆ ಇರುವವನಲ್ಲ. ಮಾಯಕವಾದ ಅಂತರ್ಯಾಮಿ ರೂಪದಿಂದಿರುವೆ. ಈಶ್ವರನು ವ್ಯಾಪಕನು, ಆಕಾಶದಂತೆ ಎಲ್ಲೆಡೆಯೂ ಇರುವವನು ಎಂದರ್ಥ. ಇಂಥವನು ಕೆಲವೆಡೆ ಮಾತ್ರ ಲಿಂಗಗಳಲ್ಲಿ ಇರುವುದು ಅಸಂಭವ. ಆದುದರಿಂದ ಮಾಯಿಕವಾದ ಅಂತರ್ಯಾಮಿ ರೂಪದಿಂದ ಶಿವನಿರುವನು ಎಂದು ತಿಳಿದುಕೊಳ್ಳ ಬೇಕು. ಒಂದು ಲಿಂಗವನ್ನು ಪ್ರತಿಷ್ಠಾಪನೆ ಮಾಡುವವರಿಗೆ ನನ್ನ ಶಿವಸಮಾನತೆ ಲಭಿಸು ವುದು. ಎರಡು ಲಿಂಗವನ್ನು ಪ್ರತಿಷ್ಠಾಪಿಸಿದವರು ನನ್ನೊಡನೆ ಐಕ್ಯವನ್ನೇ ಹೊಂದುವರು. ನಿರಾಕಾವಾದ ಬ್ರಹ್ಮಸ್ವರೂಪವಾದ ಲಿಂಗವನ್ನೇ ಪ್ರಧಾನವಾಗಿ ಪ್ರತಿಷ್ಠಾಪನೆ ಮಾಡಬೇಕು. ಲಿಂಗಪ್ರತಿಷ್ಠಾಪನೆಯೇ ಅತಿ ಶ್ರೇಯಸ್ಕರ, ಅದೇ ಪ್ರಧಾನವಾಗಿದೆ. ಆಕಾರಸ್ವರೂಪವಾದ ವಿಗ್ರಹಪ್ರತಿಷ್ಠೆ ಗೌಣವೆಂದೇನೂ ಅಲ್ಲಾ, ಆದರೆ ಅದು ಪ್ರಧಾನವಲ್ಲ. ಅಷ್ಟು ಉತ್ತಮವಾದುದೂ ಅಲ್ಲ. ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಕ್ಷೇತ್ರವು ಲಿಂಗವಿಲ್ಲದುದರಿಂದ ಅಷ್ಟೊಂದು ಶ್ರೇಷ್ಠವಾದ ಕ್ಷೇತ್ರವಾ ಗುವುದಿಲ್ಲ. ಲಿಂಗಪ್ರತಿಷ್ಠೆಯುಳ್ಳ ಕ್ಷೇತ್ರವೇ ಅತ್ಯಂತ ಶ್ರೇಷ್ಠವಾದುದು’ ಅಂತ ಶಿವ ತನ್ನನ್ನು ಆರಾಧಿಸಿದ ವಿಷ್ಣು-ಬ್ರಹ್ಮರಿಗೆ ತಿಳಿಸಿದ ಎಂಬಲ್ಲಿಗೆ ಶ್ರೀ ಶಿವಮಹಾಪುರಾಣದಲ್ಲಿ ಮೊದಲನೆಯ ಸಂಹಿತೆಯಾದ ವಿದ್ಯೇಶ್ವರಸಂಹಿತೆಯಲ್ಲಿ ಬರುವ ಒಂಬತ್ತನೆಯಅಧ್ಯಾಯ ಮುಗಿಯುತ್ತದೆ. .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT