ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ- 29: ಬ್ರಹ್ಮನ ಐದನೇ ತಲೆ ಕತ್ತರಿಸಿದ ಭೈರವ

ಅಕ್ಷರ ಗಾತ್ರ

ವಿಷ್ಣುವಿನ ನಡವಳಿಕೆ ಮೆಚ್ಚಿ ವರವನ್ನು ಕೊಟ್ಟ ಮಹಾ ದೇವ, ನಂತರ ಬ್ರಹ್ಮನ ದರ್ಪವನ್ನು ಇಳಿಸಲು ತನ್ನ ಹುಬ್ಬುಗಳ ನಡುವಿನಿಂದ ಭೈರವನೆಂಬ ಅದ್ಭುತಾಕಾರವುಳ್ಳ ಪುರುಷನೊಬ್ಬನನ್ನು ಸೃಷ್ಟಿಸಿದ. ಸುಳ್ಳು ಹೇಳಿದ ಬ್ರಹ್ಮನ ತಲೆಗಳನ್ನು ಕತ್ತರಿಸಲು ಭೈರವನಿಗೆ ಸೂಚಿಸುತ್ತಾನೆ. ಭೈರವನು ಬ್ರಹ್ಮನ ಜುಟ್ಟನ್ನು ಎಡಗೈನಲ್ಲಿ ಹಿಡಿದುಕೊಂಡು, ಬಲಗೈನಿಂದ ಸುಳ್ಳನ್ನು ಹೇಳಿದ ಐದನೆಯ ಶಿರಸ್ಸನ್ನು ಕತ್ತರಿಸುತ್ತಾನೆ. ನಂತರ ಬ್ರಹ್ಮನ ಉಳಿದ ನಾಲ್ಕು ತಲೆಗಳನ್ನು ಕತ್ತರಿಸಲು ಭೈರವ ಕತ್ತಿಯನ್ನು ಎತ್ತಿದಾಗ ವಿಷ್ಣುವಿಗೆ ಬ್ರಹ್ಮನ ಮೇಲೆ ಕನಿಕರವಾಗುತ್ತದೆ. ಶಿವನ ಕಾಲು ಹಿಡಿದು, ಬ್ರಹ್ಮನ ತಪ್ಪನ್ನು ಮನ್ನಿಸಿ, ಅವನ ಉಳಿದ ನಾಲ್ಕು ತಲೆಗಳನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾನೆ.

‘ಬ್ರಹ್ಮನಿಗೆ ಜಗತ್ತಿನ ಒಡೆತನದ ಗುರುತಾಗಿ ಐದು ಮುಖಗ ಳನ್ನು ನೀನೇ ಅನುಗ್ರಹಿಸಿರುವೆ. ಅದಕ್ಕಾಗಿ ಯಾದರೂ ವಿಧಿಯ ತಪ್ಪನ್ನು ಮನ್ನಿಸು’ ಎಂದು ವಿಷ್ಣು ಪರಿಪರಿಯಾಗಿ ಬೇಡಿಕೊಂಡದ್ದರಿಂದ ಶಿವ ಶಾಂತನಾಗುತ್ತಾನೆ. ಬ್ರಹ್ಮನ ಮತ್ತೊಂದು ತಲೆಯನ್ನು ಕತ್ತರಿಸಲು ಕತ್ತಿ ಎತ್ತಿದ ಭೈರವನನ್ನು ತಡೆಯುತ್ತಾನೆ. ನಂತರ ಮಹಾ ದೇವ ಐದನೆಯ ಶಿರಸ್ಸನ್ನು ಕಳೆದುಕೊಂಡ ಬ್ರಹ್ಮನಿಗೆ, ‘ನೀನು ಜಗದೊಡೆಯನಾಗಬೇಕೆಂಬ ದುರಾಸೆಯಿಂದ ವಿಷ್ಣುವಿಗೆ ಮೋಸ ಮಾಡಿದೆ. ಕೇದಗೆಹೂವಿನಿಂದ ಸುಳ್ಳು ಹೇಳಿಸಿ ಅಧರ್ಮ ಉಂಟುಮಾಡಿದೆ. ಇದರಿಂದ ನಿನ್ನ ದೈವತ್ವ ನಶಿಸಿಹೋಯಿತು. ಆದಕಾರಣ ಲೋಕದಲ್ಲಿ ನಿನ್ನನ್ನು ಯಾರೂ ಪೂಜಿಸಲಾರರು. ನಿನಗೆ ಪ್ರತಿಷ್ಠೆ ಉತ್ಸವ ಮುಂತಾದವುಗಳೂ ನಡೆಯದಿರಲಿ’ ಎಂದು ಶಾಪ ಕೊಡುತ್ತಾನೆ.

ಆಗ ಬ್ರಹ್ಮ ತಾನು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಡುತ್ತಾ, ಶಿವನ ಶಾಪದಿಂದ ದುಃಖತಪ್ತನಾಗುತ್ತಾನೆ. ಒಂದು ಕ್ಷಣದ ದುರಹಂಕಾರಕ್ಕೆ ಎಂಥ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಅರಿವು ತನಗಾಯಿತು ಅಂತ ನೊಂದ ದನಿಯಲ್ಲಿ ಶಿವನ ಪಾದವಿಡಿದು ಕ್ಷಮೆ ಕೋರುತ್ತಾನೆ. ಅಲ್ಲದೆ, ಸುಳ್ಳು ಹೇಳಿದ ತನ್ನ ಐದನೆಯ ಶಿರಸ್ಸನ್ನು ಕತ್ತರಿಸಿದುದು ಒಳ್ಳೆಯದೇ ಆಯಿತು ಎನ್ನುತ್ತಾನೆ. ಆಗ ಮಹಾಶಿವ ‘ನಿನ್ನ ಗರ್ವಕ್ಕೆ ಪ್ರಾಯಶ್ಚಿತ್ತವಾಗಿ ಐದನೇ ತಲೆ ಹೋಗಿದೆ. ಉಳಿದ ನಾಲ್ಕು ತಲೆಗಳಿಂದ ಜಗತ್ತಿನ ನಾಲ್ಕು ದಿಕ್ಕುಗಳನ್ನು ನ್ಯಾಯಬದ್ಧವಾಗಿ ಕಾಯುವವನಾಗು. ರಾಜಭಯವಿಲ್ಲದಿದ್ದರೆ ಈ ಲೋಕವೆಲ್ಲವೂ ನಷ್ಟವಾಗುವುದು. ಸಮರ್ಥರಾದ ರಾಜರು ಆಳದಿದ್ದರೆ ಲೋಕವು ದುರ್ಮಾಗಕ್ಕೆ ಇಳಿದು ಹಾಳಾಗುತ್ತದೆ. ಆದಕಾರಣ, ನೀನು ಭೂಲೋಕದಲ್ಲಿ ಅಪರಾಧಿಗಳನ್ನು ಶಿಕ್ಷಿಸುತ್ತಾ ಲೋಕವನ್ನು ರಕ್ಷಿಸುವವನಾಗು. ನಿನ್ನ ತಪ್ಪಿನಿಂದ ಲೋಕದಲ್ಲಿ ನಿನಗೆ ನಿತ್ಯಪೂಜೆ ಸಲ್ಲದಿದ್ದರೂ, ಯಾವುದೇ ಪೂಜಾಕಾರ್ಯಕ್ಕೂ ನೀನೇ ಗುರುವಾಗಿರುತ್ತೀಯ. ಜಗತ್ತಿನ ನಿತ್ಯಕರ್ಮಗಳಲ್ಲಿ ನೀನೇ ಗುರುವಾಗಿರುತ್ತೀಯಾ. ನೀನಿಲ್ಲದ ಕರ್ಮವು ನಿಷ್ಫಲವಾಗುತ್ತೆ. ಪರಿಪೂರ್ಣವಾದ ಮತ್ತು ಯೋಗ್ಯವಾದ ರೀತಿಯಲ್ಲಿ ಮಾಡಲ್ಪಟ್ಟಿದ್ದರೂ, ನಿನ್ನ ಅನುಗ್ರಹ ಇಲ್ಲದೆ ಆ ಕರ್ಮಕ್ಕೆ ಫಲವಿರುವುದಿಲ್ಲ’ ಎಂದು ವರ ನೀಡಿದ.

ನಂತರ ಕೇದಗೆಗೆ ‘ಇಲ್ಲಿ ನಿಲ್ಲದೆ ದೂರ ಹೊರಟು ಹೋಗು. ಇನ್ನು ಮುಂದೆ ಪೂಜೆಗಳಲ್ಲಿ ನನಗೆ ನಿನ್ನ ಹೂವು ಬೇಕಾಗಿಲ್ಲ’ ಎನ್ನುತ್ತಾನೆ ಶಿವ. ಕೇದಗೆಹೂವು ಮಹಾದೇವನನ್ನು ಬೇಡಲು ಮುಂದಾದಾಗ ಅಲ್ಲಿದ್ದ ಎಲ್ಲಾ ದೇವತೆಗಳೂ ‘ಇಷ್ಟೆಲ್ಲಾ ರಾದ್ದಾಂತಕ್ಕೆ ನಿನ್ನ ಸುಳ್ಳೇ ಕಾರಣ’ ಅಂತ ಬೇಡಿಕೊಳ್ಳಲು ಅವಕಾಶ ಕೊಡದೆ, ಕೇದಗೆಯನ್ನು ಅಲ್ಲಿಂದ ಬಲವಂತವಾಗಿ ಹೊರದೂಡಲೆತ್ನಿಸುತ್ತಾರೆ.

ಆಗ ಕೇದಗೆಯು ‘ನಿನ್ನ ಶಾಪದಿಂದ ನನ್ನ ಜನ್ಮವೇ ವ್ಯರ್ಥವಾಯಿತು. ನನ್ನ ಜನ್ಮವನ್ನು ಸಾರ್ಥಕಗೊಳಿಸು. ನನ್ನ ತಪ್ಪನ್ನು ಮನ್ನಿಸು’ ಅಂತ ಗೋಳಾಡುತ್ತದೆ. ಆಗ ಶಿವ ಪ್ರಸನ್ನನಾಗಿ ‘ನನ್ನ ಶಾಪವನ್ನು ವ್ಯರ್ಥಮಾಡುವಂತಿಲ್ಲ. ಹೀಗಾಗಿ ನಿನ್ನನ್ನು ಧರಿಸುವುದು ನನಗೆ ಯೋಗ್ಯವಲ್ಲ. ಆದರೆ ನನ್ನ ಭಕ್ತರು ನಿನ್ನನ್ನು ಧರಿಸುವರು. ಇದರಿಂದ ನಿನ್ನ ಜನ್ಮವು ಸಫಲವಾಗುವುದು. ಹಾಗೇ, ನೀನು ಧ್ವಜದ ಆಕಾರದಿಂದ ನನ್ನ ಸೇವೆಗೂ ಉಪಯುಕ್ತವಾಗುವೆ‘ ಎಂದು ವರವಿತ್ತು ಸಮಾಧಾನಿಸಿದ ಎಂಬಲ್ಲಿಗೆ ಶ್ರೀ ಶಿವಮಹಾಪುರಾಣದ ವಿದ್ಯೇಶ್ವರಸಂಹಿತೆಯ ಎಂಟನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT