ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ–18: ಗಣೇಶನಿಗೆ ಪ್ರಧಾನ ಪದವಿ

ಅಕ್ಷರ ಗಾತ್ರ

ಗಣಪತಿ ಬದುಕಿದ ಮೇಲೆ ಪಾರ್ವತಿ ತುಂಬ ಸಂತೋಷಪಟ್ಟಳು. ಪಾರ್ವತೀಪುತ್ರನಿಗೆ ಗಣನಾಯಕರಾದ ದೇವತೆಗಳೆಲ್ಲರೂ ಸೇನಾಧಿಪತ್ಯವನ್ನು ಅರ್ಪಿಸಿದರು. ಮಗ ಸೇನಾಧಿಪತಿಯಾದುದನ್ನು ನೋಡಿ ಪಾರ್ವತಿ ಸಂತೋಷದಿಂದ ಬಾಲಕನನ್ನು ಪ್ರೀತಿಯಿಂದ ಆಲಂಗಿಸಿದಳು. ಪ್ರೀತಿಯಿಂದ ನಾನಾವಿಧವಾದ ವಸ್ತ್ರಾಭರಣಗಳಿಂದ ಗಜಾನನ್ನು ಅಲಂಕರಿಸಿದಳು. ಅಣಿಮಾದಿಸಿದ್ಧಿಗಳೂ ಗಜಾನನನ್ನು ಪೂಜಿಸಿದರು. ಆಮೇಲೆ ದೇವಿಯು ಸರ್ವದುಃಖನಿವಾರಕವಾದ ತನ್ನ ಕೈಯಿಂದ ಮಗನನ್ನು ಸ್ಪರ್ಶಮಾಡಿದಳು. ಹಾಗೆಯೇ ಮಗನಿಗೆ ಅನೇಕ ವರಗಳನ್ನು ಅನುಗ್ರಹಿಸಿದಳು.

‘ಮಗು ಗಜಾನನೇ, ಸಮಸ್ತ ದೇವತೆಗಳೂ ತಮ್ಮ ಕಾರ್ಯಾರಂಭದಲ್ಲಿ ಮೊದಲು ನಿನ್ನನ್ನು ಪೂಜಿಸಲಿ. ನೀನು ಸರ್ವರಿಗೂ ದುಃಖನಾಶಕನಾಗಿರು. ನಿನ್ನ ಮುಖದಲ್ಲಿ ಈಗ ಚಂದ್ರವು (ಸಿಂದೂರವು) ಸ್ಪಷ್ಟವಾಗಿ ಕಂಡುಬರುತ್ತಿದೆ. ಆದ್ದರಿಂದ ಸಮಸ್ತ ಮಾನವರು ನಿನ್ನನ್ನು ಸಿಂದೂರದಿಂದಲೇ ಪೂಜಿಸುತ್ತಿರಲಿ. ಯಾರು ನಿನ್ನನ್ನು ಹೂವು, ಗಂಧ, ಚಂದನ, ರುಚಿಕರವಾದ ನೈವೇದ್ಯಾದಿಗಳು, ನೀರಾಜನ, ತಾಂಬೂಲ ಮುಂತಾದ ಪೂಜಾದ್ರವ್ಯಗಳಿಂದ ಅರ್ಚಿಸಿ, ನಮಸ್ಕಾರಾದಿಗಳಿಂದ ತೃಪ್ತಿಪಡಿಸುವರೋ ಅವರಿಗೆ ಸಕಲೇಷ್ಟಾರ್ಥಗಳೂ ಸಿದ್ಧಿಸಲಿ. ಸಮಸ್ತ ವಿಘ್ನಗಳೂ ಪರಿಹಾರವಾಗಲಿ’ ಎಂದು ಹರಸಿದಳು.

ಇದೇ ಸಮಯದಲ್ಲಿ ಇಂದ್ರಾದಿದೇವತೆಗಳು ಗಜಾನನ್ನು ಪರಮೇಶ್ವರನ ತೊಡೆಯ ಮೇಲೆ ಕೂರಿಸಿದರು. ಈಶ್ವರ ಪ್ರೀತಿಯಿಂದ ತನ್ನ ಕೈಯನ್ನು ಮಗನ ಶಿರದ ಮೇಲಿಟ್ಟು ಹರಸಿದ. ಆಗ ಗಣಪತಿಯು ಒಡನೆಯೇ ಎದ್ದು, ಶಿವಪಾರ್ವತಿಯರಿಗೂ ವಿಷ್ಣು ಮತ್ತು ಬ್ರಹ್ಮನಿಗೂ ವಂದಿಸಿದ. ನಂತರ ನಾರದ ಮತ್ತಿತರ ಮಹರ್ಷಿಗಳ ಕಡೆಗೆ ತಿರುಗಿ ತನ್ನ ಅಪರಾಧವನ್ನು ಕ್ಷಮಿಸಬೇಕೆಂದೂ ಕೋಪದ ಪರಿಣಾಮದಿಂದಾದ ಅನಾಹುತಗಳಿಗೆ ಕ್ಷಮಾಪಣೆ ಬೇಡಿದ. ಆಗ ಬ್ರಹ್ಮ, ವಿಷ್ಣು, ಮಹೇಶ್ವರರು ಅವನ ಭಕ್ತಿಗೆ ಮೆಚ್ಚಿ ಪ್ರೀತಿಯಿಂದ ಅನೇಕ ವರಗಳನ್ನು ಅನುಗ್ರಹಿಸಿದರು. ‘ನಾವು ಹೇಗೆ ಪೂಜೆಗೆ ಆದಿದೇವತೆಗಳೋ ಹಾಗೆಯೇ ಈತನು ಪ್ರಧಾನ ದೇವತೆಯಾಗಿರಲಿ. ವಿಘ್ನನಾಶಕನಾಗಿ ಭೂಲೋಕದಲ್ಲಿ ಪ್ರಸಿದ್ಧಿ ಪಡೆಯಲಿ. ಗಣಪತಿಗೆ ಪೂಜೆಯನ್ನು ಮಾಡದೆ ನಮ್ಮನ್ನು ಪೂಜಿಸಿದರೆ ನಮ್ಮನ್ನು ಪೂಜೆ ಮಾಡಿದಂತಾಗುವುದಿಲ್ಲ. ಯಾವ ದೇವತಾರಾಧನೆ ಮಾಡಬೇಕಾದರೂ ಮೊದಲು ಗಣಪನನ್ನು ಆರಾಧಿಸಬೇಕು. ಹಾಗೆ ಮಾಡದೇ ಹೋದರೆ ಅವರ ಇಷ್ಟಾರ್ಥಗಳು ಎಂದಿಗೂ ನೆರವೇರಲಾರವು’ ಎಂದು ವರಗಳನ್ನಿತ್ತರು.

ಶಂಕರನು ‘ಎಲೈ ಪಾರ್ವತೀಪುತ್ರನೇ, ನೀನು ವಿಘ್ನಗಳನ್ನು ನಾಶಮಾಡುವವನು ಎಂಬ ಕೀರ್ತಿಯು ಸರ್ವತ್ರ ವ್ಯಾಪಿಸಲಿ. ನಮ್ಮ ಪ್ರಮಥಗಣಗಳಿಗೆಲ್ಲಾ ನೀನೇ ಅಧ್ಯಕ್ಷನಾಗಿರು. ನೀನು ಭಾದ್ರಪದ ಬಹುಳ ಚತುರ್ಥಿಯ ಚಂದ್ರೋದಯ ಕಾಲದಲ್ಲಿ ಪಾರ್ವತಿಯ ಮನಸ್ಸಿನಿಂದ ಪ್ರಥಮ ಯಾಮದಲ್ಲಿ ಜನಿಸಿರುವೆ. ಆದ್ದರಿಂದ ಇಷ್ಟಾರ್ಥಸಿದ್ಧಿಯನ್ನು ಪಡೆಯಲಿಚ್ಛಿಸುವವರು ಗಣೇಶಚತುರ್ಥಿ ಮತ್ತು ಪ್ರತಿ ತಿಂಗಳ ಚೌತಿಯಂದು ವ್ರತವನ್ನು ಮಾಡಿದರೆ, ಸಂಸಾರದಲ್ಲಿ ಸುಖವನ್ನು ಪಡೆಯುವರು. ಅದರಲ್ಲೂ ಮಾರ್ಗಶಿರಮಾಸದ ಚತುರ್ಥಿಯು ಅತ್ಯಂತ ಶುಭಫಲಪ್ರದವಾದದ್ದು. ಆದಿನ ಪ್ರಾತಃಕಾಲ ಸ್ನಾನಮಾಡಿ ಸತ್ಕರ್ಮನಿಷ್ಠರಾದ ಬ್ರಾಹ್ಮಣರನ್ನು ಆಹ್ವಾನಿಸಿ ವ್ರತವನ್ನಾಚರಿಸಬೇಕು. ಆ ದಿನ ಹಗಲು ಗರಿಕೆಯ ಹುಲ್ಲಿನಿಂದ ಅರ್ಚನೆಮಾಡಿ ಉಪವಾಸ ಮಾಡಬೇಕು. ರಾತ್ರಿ ಮೊದಲನೇ ಯಾಮದಲ್ಲಿ ಸ್ನಾನಮಾಡಿ. ಲೋಹದಿಂದಾಗಲೀ ಹವಳದಿಂದಾಗಲೀ ಶ್ವೇತಾರ್ಕಮೂಲದಲ್ಲಿ ದೊರೆತ ಮರದಿಂದಾಗಲೀ ಮಣ್ಣಿನಿಂದಾಗಲೀ ಮಾಡಿದ ಪ್ರತಿಮೆಯನ್ನು ಆರಾಧಿಸಬೇಕು. ಆ ಪ್ರತಿಮೆಯನ್ನು ನಾನಾವಿಧವಾದ ಗಂಧಪುಷ್ಪಗಳಿಂದಲೂ ದ್ವಾದಶಾಂಗುಲಪರಿಮಿತವಾದ ಬೇರಿಲ್ಲದಿರುವ ದೂರ್ವಾಂಕುರಗಳಿಂದಲೂ ಅರ್ಚಿಸಬೇಕು. ಅರ್ಚನಾದ್ರವ್ಯಗಳು ನೂರೊಂದು. ಆದರೆ ಗಣಪತಿಗೆ ಅತ್ಯಂತ ಪ್ರಿಯವಾಗುವುದು ಇಪ್ಪತ್ತೊಂದು ಸಂಖ್ಯೆ. ಧೂಪ, ದೀಪ, ನೈವೇದ್ಯ, ತಾಂಬೂಲ, ಅರ್ಘ್ಯ ಮುಂತಾದವುಗಳಿಂದ ಗಣಪತಿಯನ್ನು ಪೂಜಿಸಿ, ಅಂತ್ಯದಲ್ಲಿ ಬಾಲಚಂದ್ರನನ್ನು ಪೂಜಿಸಬೇಕು. ಗಣೇಶನ ಪುಸ್ತಕ ಇರುವ ಮನೆ ಸದಾ ಶುಭಕಾರ್ಯಗಳಿಂದ ಶೋಭಿಸುತ್ತದೆ. ಇದನ್ನು ಭಕ್ತಿಯಿಂದ ಕೇಳಿದವರು ಶ್ರೀ ಗಣೇಶನ ಅನುಗ್ರಹದಿಂದ ಸಕಲ ಇಷ್ಟಾರ್ಥಗಳನ್ನೂ ಪಡೆಯುವರು‘ ಎಂದು ಶಿವ ಅನುಗ್ರಹಿಸಿದ. ಇದನ್ನು ಕೇಳಿ ಪಾರ್ವತಿ ಸಂತುಷ್ಟಳಾದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT